ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸ್ನಾನವಿನಾ ವಿಚ್ಛೇದನ!

Published : 20 ಸೆಪ್ಟೆಂಬರ್ 2024, 22:46 IST
Last Updated : 20 ಸೆಪ್ಟೆಂಬರ್ 2024, 22:46 IST
ಫಾಲೋ ಮಾಡಿ
Comments

‘ರೀ ಪೇಪರ್ ಓದುದ್ರಾ? ಲಕ್ನೋದಲ್ಲಿ ಒಬ್ಬಳು ಗಂಡ ಸ್ನಾನ ಮಾಡಲ್ಲ ಅಂತ ಡೈವೋರ್ಸ್ ಕೇಳಿದಾಳಂತೆ’ ಅಂದ್ರು ಪದ್ದಮ್ಮ ಪೇಪರ್ ಹಿಡ್ಕೊಂಡು. ‘ಅಯ್ಯೋ ದೇವರೇ, ಹೌದೇನೇ? ಇದು ತೀರಾ ಅನ್ಯಾಯ’ ಎಂದ ಪರ್ಮೇಶಿ.

‘ಏನು ನಿಮ್ಮ ಮಾತಿನ ಅರ್ಥ? ತಿಂಗಳುಗಟ್ಟಲೆ ಸ್ನಾನ ಮಾಡದೆ ಗಬ್ಬು ನಾರೋನ್ ಜೊತೆ ಸಂಸಾರ ಮಾಡ್ಬೇಕು ಅಂತನಾ?’

‘ಪ್ರಾಣನಾಥ ಅಂತ ಹೇಳಲ್ವಾ? ಹೇಗೋ ಅಡ್ಜಸ್ಟ್ ಮಾಡ್ಕೊಂಡ್ ಹೋಗ್ಬೇಕಪ್ಪ’.

‘ಸಾಕು ಸುಮ್ನಿರ‍್ರೀ, ಸ್ನಾನ ಮಾಡಿರೋ ಜ್ಞಾನತೀರ್ಥದಲಿ ನಾನು ನೀನೆಂಬ ಅಹಂಕಾರವ ಬಿಟ್ಟು ಅಂತ ದಾಸರೇ ಹೇಳಿಲ್ವಾ?’

‘ಲೇಯ್, ಸ್ನಾನ ಮಾಡದೋರ ಬಗ್ಗೆ ಅಷ್ಟು ಹಗುರವಾಗಿ ಮಾತಾಡ್ಬೇಡ. ಈ ತರ ಸ್ನಾನ ಮಾಡದೋರ ದೊಡ್ಡ ಪರಂಪರೇನೆ ಇದೆ. ಇಂಗ್ಲೆಂಡಿನ ಸಾಮ್ರಾಟ ಆರನೇ ಹೆನ್ರಿ, ಯುರೋಪಿನ ಸಂತ ಪೀಟರ್, ಫ್ರಾನ್ಸಿನ ದೊರೆ ಲೂಯಿ ಇವರೆಲ್ಲಾ ಜೀವಮಾನದಲ್ಲಿ ಒಮ್ಮೆಯೂ ಸ್ನಾನ ಮಾಡಿರಲಿಲ್ಲವಂತೆ! ಇನ್ನು ಸ್ನಾನವನ್ನೇ ಮಾಡದ ಆರ್ಕಿಮಿಡೀಸ್ ಸ್ನಾನದ ತೊಟ್ಟಿಗೆ ಇಳಿದ ಕೂಡಲೇ ಸಂಶೋಧನೆಯ ಫಲ ಸಿಕ್ಕಿ, ಅರ್ಧಕ್ಕೇ ಯುರೇಕಾ ಅಂತ ಓಡಿ ಬಂದಿದ್ದ’.

‘ಹೌದಾ, ಗಂಡಸರ ಬುದ್ಧಿನೇ ಅಷ್ಟು ಬಿಡಿ. ಹಾಸ್ಟೆಲ್‍ನಲ್ಲಿದ್ದಾಗ ನಿಮ್ದೂ ಅದೇ ಗತಿಯಂತೆ. ಊರಿಗೆ ಒಗೆಯಕ್ಕೆ ಬಟ್ಟೆ ತಂದಾಗ ಮಾಸ್ಕ್ ಹಾಕ್ಕಂಡು ಬಟ್ಟೆ ಒಗೀತಿದ್ರಂತೆ ಅತ್ತೆ’.

‘ಏಯ್, ಗಂಡಸರಷ್ಟೇ ಈ ಕೆಟಗರಿ ಅಂದ್ಕೊಬೇಡ. ಸ್ನಾನನೇ ಮಾಡದಿರೋ ಹೆಂಗಸರೂ ಇದಾರೆ. ಅದ್ರಲ್ಲೂ ಅಪ್ರತಿಮ ಸುಂದರಿ ಸ್ಪೇನಿನ ಮಹಾರಾಣಿ ಇಸಬೆಲ್ಲಾ, ಮತ್ತೆ ಯುರೋಪಿನ ಬ್ಯೂಟಿ ಮಾರ್ಗರೆಟ್ ಇವರೆಲ್ಲಾ ಸ್ನಾನನೇ ಮಾಡ್ತಿರ್ಲಿಲ್ಲ’.

‘ನೀವು ಏನೇ ಪುರಾಣ ಊದುದ್ರೂ ಆಕೆ ಮಾಡಿರೋದೇ ಸರಿ’.

‘ಅದ್ಹೇಗೇ ಸರಿಯಾಗುತ್ತೆ? ಬೇಸಿಗೇಲಿ ನೀರು ಇಲ್ಲ ಅಂತ ಹೋದ ವರ್ಷ ಗಾಡಿ ತೊಳುದ್ರೂ ದಂಡ ಹಾಕಿದ್ರು. ಮುಂದೆ ಒಂದಿನ ಸ್ನಾನ ಮಾಡುದ್ರೂ ದಂಡ ಹಾಕಬಹುದು. ಸ್ನಾನ ಮಾಡದಿರೋದೇ ಸರ್ಕಾರಿ ಪಾಲಿಸಿ ಆಗೋದ್ರೆ ಕೋರ್ಟ್ ನಿಮಗೆ ಡೈವೋರ್ಸ್ ಹೇಗ್ ಕೊಡುತ್ತೆ?’ ಪರ್ಮೇಶಿ ಕಣ್ಣು ಮಿಟುಕಿಸಿ ನಕ್ಕ. ಪದ್ದಮ್ಮ ಪೆಚ್ಚಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT