ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಾನಹಾನಿ

Last Updated 12 ಜುಲೈ 2021, 19:31 IST
ಅಕ್ಷರ ಗಾತ್ರ

‘ಸದಾನಂದ ಗೌಡ್ರು ತಮ್ಮ ಬಗ್ಗೆ ಮಾನಹಾನಿಕರ ವರದಿ ಪ್ರಕಟಿಸಬಾರದು ಅಂತ ಕೋರ್ಟಿಂದ ತಡೆ ತಂದ್ರೂವೆ ಮೋದಿ ಕಚ್ಚೆ ಕಟ್ಟದೇ ಗೌಡ್ರುಗೆ ನಾಮ ಹಾಕಿದ ಮ್ಯಾಲೆ ‘ಸದಾನಂದ ತಲೆದಂಡ’ ಅಂತ ಸುದ್ದಿ ಬಂದುತ್ತಲ್ಲ ಅದು ಮಾನಹಾನಿ ಅಲ್ಲುವರಾ?’ ಅಂತ ಕೇಳಿದೆ.

‘ಬುಡ್ಲಾ, ಪಾಪದ್ದು ನನಗೇನೂ ಬೇಜಾರಿಲ್ಲ ಅಂದದೆ. ಆದ್ರೂ ಈಗ ಮೋದಿ ಮ್ಯಾಲೆ ನ್ಯಾಯಾಂಗ ನಿಂದನೆ ಕೇಸು ಹಾಕಕೆ ಒಳ್ಳೆ ಟೈಮು ಕನೋ’ ಯಂಟಪ್ಪಣ್ಣ ಸಜೆಶನ್ ಕೊಟ್ಟಿತು.

‘ಅವೆಲ್ಲಾ ಆಗದಿರಾ ಕೆಲಸ ಸಾ. ಪೇಪರಲ್ಲಿ ನೋಡಿ, ಬರೀ ಮಾನಹಾನಿ ಸುದ್ದಿಗಳೇ ತುಂಬ್ಯವೆ!’ ಚಂದ್ರು ನೊಂದುಕಂಡ.

‘ಅದಿರ‍್ಲಿ ಇಲ್ಲಿ ನೋಡು! ಮಂಡ್ಯ, ರಾಮನಗರ, ಮೈಸೂರಲ್ಲಿ ಕೆಆರ್‌ಎಸ್ ಬಿರುಕು, ಅಕ್ರಮ ಗಣಿಗಾರಿಕೆ ಅಂತ ಅವರವರೇ ಮಾನಹಾನಿ ಮಾಡ್ಕತಾವ್ರೆ. ಅಕ್ರಮ ಗಣಿಗಾರಿಕೆ ನಿಂತು 10 ವರ್ಸಾದ್ರೂ ಗಣಿಧಣಿಗಳ ರಾಜಧನ ಬೇಬಿಬೆಟ್ಟಕ್ಕಿಂತಾ ದೊಡ್ಡದಾಗ್ಯದಂತೆ!’ ತುರೇಮಣೆ ಅಸಹನೆ ತೋರಿಸಿದರು.

‘ಕುಳಿಯಿಂದ ಬಾರೆವರ್ಗೂ ಗಮ್ಮನ್ನತಾ ಇರೋ ಗಣಿ ಕಪ್ಪದ ವಾಸನೆ ಇದಕ್ಕೆ ಕಾರಣ ಸಾ! ಡ್ಯಾಮಲ್ಲಿ ಅದುಗಿಕೊಂಡಿರೋ ಹೂಳು, ಬಿರುಕಿನ ಕಾರಣದಿಂದ ಡ್ಯಾಂ ಒಡದೋದ್ರೆ, ಬಡ ರೈತರ ಮಾರಣಹೋಮವಾಗ್ಯದೆ ಇದಕ್ಕೆ ಯಾರು ಕಾರಣ ಅಂತ 10-15 ವರ್ಸ ನ್ಯಾಯಾಂಗ ವಿಚಾರಣೆ ಮಾಡಿದ್ರಾತು!’ ಅಂದ ಚಂದ್ರು.

‘ಕುರಿತೇಟಾದ ಮಾತು ಏಳಿದೆ ಕನಾ ಮಗಾ! ಈ ದೇಸದೇಲಿ ಬೀದೀಗೆ ಬಿದ್ದ ನ್ಯಾಯ ಬಿರ್‍ರನೆ ಪೈಸಲಾದದೇ? ಇದೂ ಹಂಗೀಯೆ! ಹಾವು ಸಾಯಕುಲ್ಲ, ಕೋಲು ಮುರಿಯಕುಲ್ಲ’ ಯಂಟಪ್ಪಣ್ಣ ಉಸೂರಂತು.

‘ಯಂಟಪ್ಪಣ್ಣ, ಉಗೀರಿ ಮಕ್ಕೆ! ನಾವು ಬಾಗುವುದೇ ಬದುಕು ಅಂತ ಬಗ್ಗಿ ನಿಂತಿದೀವಿ. ರಾಜಕೀಯದೋವು ಬ್ರಿಟೀಷ್‍ನೋರು ಕಲಿಸಿದ ಕುಯುಕ್ತಿಯನ್ನ ಸೋಪಿನ ಥರಾ ನಮ್ಮ ಬ್ಯಾಕಿನ ಮ್ಯಾಲೆ ಉಜ್ಜಿ ಕೆಡಗುತಾವೆ!’ ಅಂತಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT