ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಡಿಕಲ್ ಮರ್ಮ

Last Updated 6 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ದೇವರ ದರ್ಶನ ಮುಗಿಸಿ, ಕೌಂಟರ್‌ನಲ್ಲಿ ತೀರ್ಥ, ಪ್ರಸಾದ ಕೊಳ್ಳುವಂತೆ, ಡಾಕ್ಟರ್ ಚೆಕಪ್ ಮುಗಿಸಿ ಶಂಕ್ರಿ, ಸುಮಿ ಮೆಡಿಕಲ್ ಸ್ಟೋರ್‌ಗೆ ಖರೀದಿಗೆ ಬಂದರು.

‘ಡಾಕ್ಟರ್‌ಗಳು ಬರೆಯುವ ಪ್ರಿಸ್ಕ್ರಿಪ್ಷನ್ ನಮಗೆ ಅರ್ಥವಾಗುವುದೇ ಇಲ್ಲ’ ಅಂದ ಶಂಕ್ರಿ.

‘ಹಾಗಂತ, ಕಾಪಿ ರೈಟಿಂಗ್ ಬರೆದು ಹ್ಯಾಂಡ್ ರೈಟಿಂಗ್ ಇಂಪ್ರೂವ್‌ ಮಾಡಿಕೊಳ್ಳಿ ಅಂತ ಡಾಕ್ಟ
ರ್ಸ್‌ಗೆ ಹೇಳಲಾಗುತ್ತೇನ್ರೀ?’ ಅಂದಳು ಸುಮಿ.

‘ಡಾಕ್ಟರ್‌ಗಳ ನಿಗೂಢ ಲಿಪಿ ಮೆಡಿಕಲ್ ಸ್ಟೋರ್‌ನವರಿಗಷ್ಟೇ ಅರ್ಥ ಆಗೋದು’.

‘ನಾವು ಡಾಕ್ಟರ್ ಪ್ರಿಸ್ಕ್ರಿಪ್ಷನ್ ಅರ್ಥ ಮಾಡಿಕೊಳ್ತೀವಿ, ನೀವು ಡಾಕ್ಟರನ್ನು ಅರ್ಥ ಮಾಡಿಕೊಳ್ಳಿ ಸಾಕು’ ಅಂದ ಮೆಡಿಕಲ್ ಸ್ಟೋರ್‌ನವ ಮೆಡಿಸಿನ್ ಕೊಟ್ಟ.

‘ಮೆಡಿಕಲ್ ಮರ್ಮ ಅರ್ಥ ಮಾಡಿಕೊಳ್ಳಲು ಎಕ್ಸ್‌ಟ್ರಾ ನಾಲೆಡ್ಜ್ ಬೇಕಾಗುತ್ತದೇನೋ. ನಮ್ಮ ಪಕ್ಕದ ಮನೆ ಸಾವಿತ್ರಮ್ಮನಿಗೆ ಕೋವಿಡ್ ಆಸ್ಪತ್ರೆಗಳ ವ್ಯವಹಾರವೇ ಅರ್ಥವಾಗಿಲ್ಲವಂತೆ’ ಅಂದಳು ಸುಮಿ.

‘ಆಕೆಗೆ ಜನರಲ್ ನಾಲೆಡ್ಜ್ ಕಮ್ಮಿ’.

‘ಕೊರೊನಾಗೆ ಇನ್ನೂ ಔಷಧಿ ಕಂಡುಹಿಡಿದಿಲ್ಲ, ಆದರೂ ಕೊರೊನಾ ಪಾಸಿಟಿವ್ ರೋಗಿಗಳನ್ನ ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಂಡು ಅದೇನು ಟ್ರೀಟ್‍ಮೆಂಟ್ ಕೊಡ್ತಾವೊ. ಅಲ್ಲಿ ಬ್ಯಾಂಡೇಜ್ ಕಟ್ಟುವುದಿಲ್ಲ, ಆಪರೇಷನ್ ಮಾಡುವುದಿಲ್ಲ, ಆದರೂ ಲಕ್ಷಗಟ್ಟಲೆ ಬಿಲ್ ಮಾಡ್ತಾರೆ, ಅರ್ಥವೇ ಆಗುತ್ತಿಲ್ಲ ಅಂತಾಳೆ’.

‘ಬಡವರಿಗೆ ಕೊರೊನಾ ವಕ್ಕರಿಸಿಕೊಂಡ್ರೆ ಗತಿ ಏನು? ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಖಾಸಗಿ ಆಸ್ಪತ್ರೆ ಸೇರಲು ದುಡ್ಡಿಲ್ಲ... ನನಗೂ ಅರ್ಥ ಆಗ್ತಿಲ್ಲ’ ಅಂದ ಶಂಕ್ರಿ.

‘ಅಲ್ಲಾರೀ, ಯಾವುದೇ ವ್ಯವಹಾರಕ್ಕೆ ಲಕ್ಷಲಕ್ಷ ಹಣ ಹಾಕಿದ್ರೆ ಪಾರ್ಟ್‌ನರ್‌ಶಿಪ್‌ ಕೊಡ್ತಾರೆ. ಲಕ್ಷಾಂತರ ರೂಪಾಯಿ ಬಿಲ್ ಕೊಟ್ಟು ಕೋವಿಡ್ ಆಸ್ಪತ್ರೆ ಹಾಸಿಗೆಯಲ್ಲಿ ಮಲಗುವ ಕೊರೊನಾ ಪೇಷೆಂಟ್‍ಗಳನ್ನ ಆಸ್ಪತ್ರೆಯ ಸ್ಲೀಪಿಂಗ್ ಪಾರ್ಟನರ್ ಅಂತ ಕನ್ಸಿಡರ್ ಮಾಡಬೇಕು ಅಲ್ಲವೇನ್ರೀ...?’ ಅಂದಳು ಸುಮಿ.ಶಂಕ್ರಿಗೆ ಮಾತು ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT