ಶನಿವಾರ, ಅಕ್ಟೋಬರ್ 1, 2022
20 °C

ಚುರುಮುರಿ | ವೈರಲ್ ಫೀವರ್!

ಸಿ.ಎನ್.ರಾಜು Updated:

ಅಕ್ಷರ ಗಾತ್ರ : | |

Prajavani

ಮೊನ್ನೆ ತುಟಿ ಮೀರಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ‘ವೈರಲ್’ ಆದ ಪರಿಣಾಮ ಜನನಾಯಕರು ‘ವೈರಲ್’ ಫೀವರ್‌ನಿಂದ ಬಳಲುತ್ತಿದ್ದರು. ಆಗಿನಿಂದ ನಾಯಕರು ಟಿ.ವಿ. ಚಾನೆಲ್‌ಗಳಿಗೆ ಮುಖ ತೋರಿಸಿಲ್ಲ, ಪತ್ರಿಕೆಗಳ ಪುಟ ತೆರೆದಿಲ್ಲ.

ನಾಯಕರ ಈ ಸಂಕಷ್ಟ ಸ್ಥಿತಿಯಲ್ಲಿ ಬಂಧುಬಳಗ, ಹಿತೈಷಿಗಳು ಸಾಂತ್ವನ, ಹಿತವಚನ ಹೇಳಲು ಬಂದರು.

‘ಕ್ರೈಮು, ಕ್ರಾಂತಿ, ಕಿಡಿಗೇಡಿ ಕೃತ್ಯಗಳು ಹೆಚ್ಚಾಗಿ ಸಾಮಾಜಿಕ ವಾತಾವರಣ ಕಲುಷಿತಗೊಂಡಿದೆ. ಕಾಲು ಎಳೆಯೋರು, ಕೈ ಕೊಡೋರು ವೈರಲ್ ಫೀವರ್ ಅಂಟಿಸಿಬಿಡುತ್ತಾರೆ ಎಂಬ ಎಚ್ಚರಿಕೆ ಇರಬೇಕಲ್ವೇ?...’ ಬಂಧುಗಳು ಹುಸಿಗದರಿ ಕೇಳಿದರು.

‘ವೈರಲ್ ಫೀವರ್ ಅಂಟಿಸಿದ ಸೋಂಕಿತನ ಪತ್ತೆಗೆ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದೇನೆ...’ ಎಂದರು ನಾಯಕರು.

‘ಕಳೆದ ವಾರ ಎದುರಾಳಿ ಪಕ್ಷದ ನಾಯಕರ ಜೊತೆ ಸೇರಿಕೊಂಡು ಸ್ವಪಕ್ಷದ ನಾಯಕರನ್ನು ಗೇಲಿ ಮಾಡಿ ವೈರಲ್ ಫೀವರ್ ಅಂಟಿಸಿಕೊಂಡಿದ್ರಿ, ಅದು ವಾಸಿಯಾಗುವ ಮೊದಲೇ ಮತ್ತೊಮ್ಮೆ ವೈರಸ್ ವೈರಿಗೆ ಬಲಿಯಾಗಿದ್ದೀರಿ. ಹೀಗಾದರೆ ಮುಂದಿನ ಬದುಕು, ಭವಿಷ್ಯ ಕಷ್ಟವಾಗುತ್ತದೆ...’ ಹಿರಿಯ ಹಿತೈಷಿ ಬುದ್ಧಿ ಹೇಳಿದರು.

‘ವೈರಲ್ ಫೀವರ್ ನಂಟು ಕೆಡಿಸುವ ಅಂಟು ರೋಗ. ರಾಜಕಾರಣಿಗಳು, ಅಧಿಕಾರಿಗಳಂತಹ ಅಧಿಕಾರಸ್ಥರಿಗೆ ಬಹು ಬೇಗ ಅಂಟಿಬಿಡುತ್ತದೆ. ಪರಿಣಾಮಕಾರಿ ಮದ್ದು ಇಲ್ಲದ ಈ ರೋಗ ಅಂಟಿಸಿಕೊಂಡು ನರಳುವ ಬದಲು ರೋಗ ಬಾರದಂತೆ ನೋಡಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ’ ಎಂದರು ಹಿತೈಷಿಗಳು. ನಾಯಕರು ನೊಂದು ನರಳಿದರು.

‘ವೈರಲ್ ಫೀವರ್‌ನಿಂದ ಮಾನಹರಣ, ಮುಖಭಂಗ, ಶಾಂತಿಭಂಗ, ಕುರ್ಚಿ ಕಂಟಕ ದಂತಹ ಬಾಧೆಗಳು ಕಾಡುತ್ತವೆ. ಈ ರೋಗ ಚುನಾವಣೆಯ ಟಿಕೆಟ್ ಮೇಲೂ ದುಷ್ಪರಿಣಾಮ ಬೀರುವ ಅಪಾಯವಿದೆ. ಮೈಮೇಲೆ ಎಚ್ಚರ, ನಾಲಿಗೆ ಮೇಲೆ ಕಟ್ಟೆಚ್ಚರ ವಹಿಸದಿದ್ದರೆ ವೈರಲ್ ಫೀವರ್ ಪದೇಪದೇ ಅಂಟಿಕೊಳ್ಳುತ್ತದೆ, ಹುಷಾರ್!...’ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು