ಕಮಲವ್ವ, ತೆನೆಯಕ್ಕ ಲೋಕಾಭಿರಾಮ ಮಾತಾಡುತ್ತ ಕೂತಿದ್ದರು. ಅದೇ ದಾರೀಲಿ ಬಂದ ಕೈಯಪ್ಪ ‘ಓ... ಏನ್ ತೆನೆಯಕ್ಕ, ಆಪರೇಷನ್ ಮಾಡಾಕೆ ಸಿಂಗಪುರ್‌ಗೆ ಹೋಗಿದ್ಯೆಂತಲ್ಲ, ಯಾವಾಗ್ ಬಂದೆ?’ ಎಂದು ಕಾಲೆಳೆದ.
‘ನಾ ಎಲ್ಲಿಗಾದ್ರೂ ಹೋಗ್ತೀನಿ, ನಿಂಗ್ಯಾಕೆ?’ ತೆನೆಯಕ್ಕಗೆ ಸಿಟ್ಟು ಬಂತು.
‘ಅಲ್ಲ, ನಮ್ಮ ವಿರುದ್ಧ ಏನೋ ಸಂಚು ಗಿಂಚು ನಡೆಸಿದೀರಿ ಅಂತಿದ್ರಪ, ಅದ್ಕೆ ಕೇಳಿದೆ’.
‘ನಿಮ್ ಅಧ್ಯಕ್ಷರಿಗೆ ಧಮ್ ಇದ್ರೆ, ತಾಕತ್ ಇದ್ರೆ ಅದನ್ನ ಪ್ರೂವ್ ಮಾಡಾಕೆ ಹೇಳು...’ ಕಮಲವ್ವನೂ ರಾಂಗಾದಳು.
‘ಬೆಂಕಿ ಇಲ್ದೆ ಹೊಗಿ ಆಡಲ್ಲಂತೆ, ಹೋಗ್ಲಿ ಬಿಡಿ, ನೀವಿಬ್ರೂ ಅದೇನೋ ಕೂಡಿಕೆ ಸಂಸಾರ ಮಾಡ್ಕಂತೀರಂತೆ?’ ಕೈಯಪ್ಪ ನಕ್ಕ.
‘ಅದು ನಮ್ಮಿಷ್ಟ, ಬೆಂಕಿ ಹುಟ್ಕಂಡಿರಾದು ನಿಮ್ಮಲ್ಲಿ, ನಮ್ಮಲ್ಲಲ್ಲ...’ ತೆನೆಯಕ್ಕ ತಿರುಗೇಟು ನೀಡಿದಳು.
‘ನಮ್ಮಲ್ಲಾ? ಏನ್ ಬೆಂಕಿ?’
‘ಅದೇ... ಸಿಎಂನ ಕೆಳಗಿಳಿಸೋದು, ಏರ್ಸೋದು, ಲೆಟರ್ ಬಾಂಬ್‌ಗಳು... ಇವೆಲ್ಲ ಅಲ್ವಾ?’
‘ನಿಮ್ತೆಲಿ, ಮನಿ ಅಂದ್ಮೇಲೆ ಕಸ ಬೀಳ್ತಾನೇ ಇರ್ತತಿ, ನಾವು ಹೊಡೀತಾನೇ ಇರ್ಬೇಕು. ಅಷ್ಟಕ್ಕೇ ನೀವು ಜೆ.ಎಚ್. ಪಟೇಲರು ಹೇಳ್ತಿದ್ದ ಹೋರಿ ಬೀಜದ ಕನಸು ಕಂಡ್ರೆ ಹೆಂಗೆ?’
‘ಆತು, ಮುಂದೇನಾಗುತ್ತೆ ನೋಡ್ತಿರಿ ಬ್ರದರ್, ನಾವೇನು ಕೈ ಕಟ್ಕಂಡು ಕುಂತಿಲ್ಲ’.
‘ಅದಿರ್ಲಿ, ನೀವಿಬ್ರೂ ವಿಲೀನ ಮಾಡ್ಕಂತೀರೋ ಹೊಂದಾಣಿಕೆ ಮಾಡ್ಕಂತೀರೋ? ನೀವಿಬ್ರೂ ಒಂದಾದ್ರೆ ಕಮಲವ್ವ ತೆನೆ ಹೊತ್ಕಂತಾಳೋ, ತೆನೆಯಕ್ಕ ಕಮಲ ಮುಡ್ಕಂತಾಳೋ?’
‘ನಾವು ಏನರೆ ಮಾಡ್ಕಂತೀವಿ ನಿಂಗ್ಯಾಕೆ?’
‘ಅಲ್ಲ, ನಿಮ್ ಸಂಸಾರದಲ್ಲಿ ಮನಿ ಯಜಮಾನಿ ಯಾರಾಗ್ತೀರಿ ಅಂತ...’
‘ಯಾಕೆ?’
‘ನಮ್ ಗೃಹಲಕ್ಷ್ಮಿ ಯೋಜನೇದು ಎರಡು ಸಾವುರ ದುಡ್ಡು ಯಾರಿಗೆ ಹಾಕ್ಬೇಕು ಅಂತ ಅಷ್ಟೆ...’ ಕೈಯಪ್ಪ ಕಿಸಕ್ಕೆಂದ.
ಕಮಲವ್ವ, ತೆನೆಯಕ್ಕ ಮುಖಮುಖ ನೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.