ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸ್ವಯಂ ತಿದ್ದುಪಡಿ!

Published : 23 ಆಗಸ್ಟ್ 2024, 23:33 IST
Last Updated : 23 ಆಗಸ್ಟ್ 2024, 23:33 IST
ಫಾಲೋ ಮಾಡಿ
Comments

‘ಜಗಳವೇ ನಿಮ್ಮನೆ ದೇವರು ಅನಿಸುತ್ತೆ’ ಬೆಳಿಗ್ಗೆಯಿಂದಲೇ ಬಯ್ಯುತ್ತಿದ್ದ ಹೆಂಡತಿಗೆ ಅಸಮಾಧಾನದಿಂದಲೇ ಹೇಳಿದೆ.‌

‘ಹೌದೌದು, ನೀವು ಮಾಡೋ ಕಿತಾಪತಿಗಳನ್ನ ಪ್ರಶ್ನಿಸಿದ್ರೆ ನಾನು ಜಗಳಗಂಟಿ ಆಗಿಬಿಡ್ತೀನಲ್ಲ’.

‘ನಾನ್ಯಾವಾಗ ಹಾಗಂದೆ? ನಿನಗೆ ನೀನೇ, ನಿನ್ನ ಬಗ್ಗೆ ಸತ್ಯವನ್ನ ಹೇಳಿಕೊಳ್ತಿರ್ತೀಯ’ ನಸುನಕ್ಕೆ.

‘ಬಾಯ್ಮುಚ್ರಿ ಸಾಕು, ನನ್ನ ತಂಗಿಗೆ ಫೋನ್ ಮಾಡಿ, ನೀನು ಬೆಂಗಳೂರಿಗೆ ಬಾ, ಇಲ್ಲೇ ಇದ್ದು ಓದುವಂತೆ ಅಂತ ಕರೆದಿದೀರಂತೆ’.

‘ಅದರಲ್ಲಿ ತಪ್ಪೇನಿದೆ? ನಾದಿನಿ ಮನೆಗೆ ಬರೋದು ಒಂಥರಾ ಲ್ಯಾಟರಲ್ ಎಂಟ್ರಿ ಇದ್ದಂಗೆ. ಅಲ್ಲಿ ದೊಡ್ಡವರು, ಇಲ್ಲಿ ಚಿಕ್ಕವರು ಅಷ್ಟೇ ವ್ಯತ್ಯಾಸ. ಇದು ಹೇಗಂದ್ರೆ, ಒಳಗೆ ಬರೋರಿಗೂ ಸುಲಭ, ಕರೆಸಿಕೊಂಡೋರಿಗೂ ಖುಷಿ’.

‘ಹಾಗಿದ್ದರೆ ನನ್ನ ತಮ್ಮನಿಗೆ ಯಾಕೆ ಬರಬೇಡ ಅಂತ ಹೇಳಿದಿರಿ?! ಅವನೂ ಇಲ್ಲೇ ಇದ್ದು  ಓದ್ಕೊತಿದ್ನಲ್ವ?’

‘ಅವನನ್ನ ಇಲ್ಲಿಗೆ ಕರೆಸಿಕೊಂಡ್ರೆ ನನ್ನ ವಿರುದ್ಧದ ಪ್ರಾಸಿಕ್ಯೂಷನ್‌ಗೆ ನಾನೇ ಅನುಮತಿ ಕೊಟ್ಟುಕೊಂಡಂಗೆ’.

‘ಏನು, ಎಲ್ಲದಕ್ಕೂ ಒಂದೊಂದು ಲಿಂಕ್ ಇಟ್ಕೊಂಡು ಮಾತಾಡ್ತಿದೀರಿ. ನನಗೂ ಎಲ್ಲ ಅರ್ಥ ಆಗುತ್ತೆ, ನಾನೂ ಪೇಪರ್ ಓದ್ತಿನಿ. ಟಾಂಗ್ ಕೊಡೋಕೆ ನನಗೂ ಬರುತ್ತೆ. ಅದಿರಲಿ, ಹಲವರ ಭೂಮಿ ಕೆಲವರ ಹತ್ತಿರ ಸೇರ್ತಿರೋ ಹಾಗೆ, ತಗೊಂಡಿರೋ ನಾಲ್ಕೂ ಸೈಟ್‌ಗಳನ್ನ ನಿಮ್ಮ ಹೆಸರಿಗೇ ಮಾಡ್ಕೊಂಡಿದೀರಲ್ಲ, ಏನ್ ಸಮಾಚಾರ?’

‘ಎಲ್ಲವೂ ನನ್ನ ಹೆಸರಲ್ಲೇ ಇದ್ದರೆ ಸಾಲ ತಗೊಳೋದು ಸುಲಭ ಆಗುತ್ತಮ್ಮ. ಎಲ್ಲದರಲ್ಲೂ ತಪ್ಪು ಹುಡುಕಬೇಡ ನೀನು. ಅಷ್ಟಕ್ಕೂ, ನಿಮ್ಮ ಹೆಸರಿಗೇ ಮಾಡಿಕೊಳ್ಳಿ ಅಂತ ಮೊದಲು ಹೇಳಿದವಳು ನೀನೇ ತಾನೆ?’

‘ಹೌದು, ಆಗ ಹೇಳಿ ತಪ್ಪು ಮಾಡಿದೆ’.

‘ಅಂದ್ರೆ?’

‘ಆಗ ಮಾಡಿದ ತಪ್ಪನ್ನು ಈಗ ನಾನೇ ಸರಿ ಮಾಡ್ತೀನಿ ಅಂತ ಅರ್ಥ’.

‘ಹೇಗೆ?’

‘ಡಾಕ್ಯುಮೆಂಟ್‌ನಲ್ಲಿ ನಿಮ್ಮ ಹೆಸರು ಇದ್ದಲ್ಲೆಲ್ಲ ವೈಟ್ನರ್ ಹಚ್ಚಿ ನನ್ನ ಹೆಸರು ಬರ್ಕೊತೀನಿ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT