ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ದಾರಿ ರೂವಾರಿ

Last Updated 14 ಮಾರ್ಚ್ 2023, 21:58 IST
ಅಕ್ಷರ ಗಾತ್ರ

‘ಆನೆ ನಡೆದದ್ದೇ ದಾರಿ. ಆ ದಾರಿಯ ರೂವಾರಿ ಆನೆಯೋ ಮಾವುತನೋ?’ ಸುಮಿ ಕೇಳಿದಳು.

‘ಮಾವುತ ದಾರಿ ತೋರಿಸಿದ, ಆನೆ ನಡೆದು ದಾರಿ ಮಾಡಿತು. ಅವರಲ್ಲಿ ರೂವಾರಿಯ ರಗಳೆ ಇಲ್ಲ’ ಅಂದ ಶಂಕ್ರಿ.

‘ಹಾಗಲ್ಲಾರೀ, ಹೆದ್ದಾರಿ ರೂವಾರಿ ನಾವೇ ಅಂತ ಬಿಜೆಪಿಯವರು ಹೇಳ್ತಾರೆ. ಆದರೆ ಹಳೆ ದಾರಿಯನ್ನು ರಿಪೇರಿ ಮಾಡಿಸಿದ ಮಾತ್ರಕ್ಕೆ ರೂವಾರಿ ಆಗಲಾರರು, ದಾರಿ ಜನರ ಸ್ವತ್ತು, ದಾರಿ ರಿಪೇರಿಯ ದುಡ್ಡು ಜನರದ್ದು ಅಂತ ಕಾಂಗ್ರೆಸ್‍ನವರು ಹೇಳ್ತಿದ್ದಾರೆ’.

‘ಆದರೆ ದಾರಿ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ಜನರ ಬದುಕು ಹೆದ್ದಾರಿ ಯಿಂದಾಗಿ ದಾರಿ ತಪ್ಪಿದೆ. ಯಾರಿಗೋಸ್ಕರ ಹೆದ್ದಾರಿ ಮಾಡಿದಿರಿ ಅಂತ ಜೆಡಿಎಸ್‍ನವರು ಕೇಳ್ತಿದ್ದಾರೆ... ಎಲೆಕ್ಷನ್ ಟೈಮಿನಲ್ಲಿ ಇಂಥಾ ಕೇಳಾಟ, ಗೋಳಾಟಗಳು ಸಹಜ. ದಾರಿ ಜಗಳಕ್ಕೆ ಮದ್ದಿಲ್ಲ ಎಂದು ಮೋದಿಯವರು ಬಂದು ದಾರಿ ಉದ್ಘಾಟಿಸಿಬಿಟ್ಟರು’.

‘ಮೋದಿಯವರಿಗೆ ಮಂಡ್ಯದ ಬೆಲ್ಲ, ಧಾರವಾಡದ ಪೇಢಾ ಕೊಟ್ಟು ಬಿಜೆಪಿಯವರು ಅವರೊಂದಿಗೆ ಯುಗಾದಿ ಆಚರಿಸಿ ಸಂಭ್ರಮಿ ಸಿದರು. ಎಲೆಕ್ಷನ್ ಹಬ್ಬಕ್ಕೆ ಬೇವು ಕೊಡೊಲ್ಲ, ಬೆಲ್ಲವನ್ನೇ ಕೊಡ್ತೀವಿ ಅಂತ ಮೋದಿಯವರಿಗೆ ಮಾತು ಕೊಟ್ಟರಂತೆ’.

‘ಹೌದು, ಕ್ಯಾಲೆಂಡರ್ ಯುಗಾದಿವರೆಗೂ ಕಾಯುತ್ತಾ ಕುಳಿತರೆ ಎಲೆಕ್ಷನ್ ಕ್ಯಾಲೆಂಡರ್ ಪ್ರಕಟ ವಾಗಿಬಿಡುತ್ತದೆ ಅಂತ ಊರಿಗೆ ಮುಂಚೆ ಹಬ್ಬ ಆಚರಿಸಿಕೊಂಡರು’.

‘ಆರಂಭದಲ್ಲಿ ತಮ್ಮ ಭಾಷಣದಲ್ಲಿ ಒಂದೆ ರಡು ಕನ್ನಡ ವಾಕ್ಯ ಬಳಸುತ್ತಿದ್ದ ಮೋದಿಯವರು ಈಗೀಗ ಒಂದು ಪ್ಯಾರಾ ಬಳಸುವಷ್ಟು ಸುಧಾರಣೆ ಯಾಗಿದ್ದಾರೆ ಅಲ್ವೇನ್ರೀ?’

‘ಹೌದು, ಕನ್ನಡಿಗರು ಆನಂದಪಡುವ ವಿಚಾರ. ಕನ್ನಡ ಕಲಿತರೆ ಕನ್ನಡಿಗರ ಕಾಗುಣಿತ, ಕರ್ನಾಟಕದ ಗಣಿತವನ್ನು ಸುಲಭವಾಗಿ ತಿಳಿಯ ಬಹುದು ಎಂದು ಮೋದಿಯವರಿಗೂ ಗೊತ್ತಾಗಿ ರಬಹುದು’.

‘ನಮ್ಮ ಸಂಸದರು ನಾಲ್ಕು ವರ್ಷಗಳಿಂದ ಪಾರ್ಲಿಮೆಂಟಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದರೆ ಪ್ರಧಾನಿಯವರು ಈ ವೇಳೆಗೆ ಪೂರಾ ಭಾಷಣ ವನ್ನು ಕನ್ನಡದಲ್ಲೇ ಮಾಡುವಷ್ಟು ಪರಿಣತರಾಗುತ್ತಿದ್ದರೇನೋ...’ ಅಂದುಕೊಂಡಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT