ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಂದಿರ ಗುಟ್ಟು

Last Updated 8 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಗಂಡಸರು ಮಾಸ್ಕ್ ಧರಿಸಿ, ಚೀಲ ಹಿಡಿದು ದಿನಸಿ ಅಂಗಡಿ ಎದುರು ಅಂತರ ಕಾಪಾಡಿಕೊಂಡು ಸಾಲುಗಟ್ಟಿದ್ದರು. ‘ಯಾಕೆ ಸಾರ್, ನಿಮ್ಮ ಸೊಂಟ ಹಿಡುಕೊಂಡಿದ್ದೀರಿ?’ ಒಬ್ಬರನ್ನು ಕೇಳಿದೆ.

‘ಮೆಡಿಕಲ್ ಸ್ಟೋರಿಗೆ ಹೋಗುತ್ತಿದ್ದಾಗ ಪೊಲೀಸರು ಬಾರಿಸಿಬಿಟ್ಟರು’ ಮುಲುಕಾಡಿದರು.

‘ಬರೆ ಬರುವಂತೆ ನಿಮ್ಮ ಕಾಲ ಮೇಲೆ ಬಾರಿಸಿದ್ದಾರೆ ಪೊಲೀಸರು, ಛೇ...’ ಇನ್ನೊಬ್ಬರಿಗೆ ಕೇಳಿದೆ. ಆತ ಗಾಬರಿಯಾಗಿ, ಮೇಲಕ್ಕೆ ಕಟ್ಟಿದ್ದ ಪಂಚೆಯನ್ನು ಕೆಳಕ್ಕೆ ಬಿಟ್ಟು ಮುಚ್ಚಿಕೊಂಡು, ‘ಹೆಹ್ಹೆಹ್ಹೆ... ಮೊನ್ನೆ ಫ್ರೆಂಡ್ ಮನೆಗೆ ಹೋಗಿಬರುವಾಗ ಪೊಲೀಸರು ಓಡಿಸಿಕೊಂಡು ಬಂದು ಹೊಡೆದರು’ ಎಂದು ಹೇಳಿ, ಸಾಮಾನು ಖರೀದಿಸಿ, ನಿಲ್ಲದೆ ಹೊರಟರು.

‘ಪಾಪ...! ಯಾಕೆ ಪೊಲೀಸರು ಗಂಡಸರನ್ನೇ ಹುಡುಕಿ ಲಾಠಿ ಬೀಸಿದ್ದಾರೆ?’ ಅಂಗಡಿಯವನನ್ನು ಕೇಳಿದೆ. ‘ಲಾಠಿ ಏಟು ಅಲ್ಲ ಸಾರ್, ಸೌಟು, ಲಟ್ಟಣಿಗೆ ಏಟು. ಮುಖ-ಮೂತಿಯೂ ಊದಿಕೊಂಡಿದೆ, ಮಾಸ್ಕ್ ಹಾಕಿದ್ದರಿಂದ ನಿಮಗೆ ಕಾಣಿಸಿಲ್ಲ’ ಅಂದ.

‘ಪೊಲೀಸರು ಲಾಠಿ ಬಿಟ್ಟು ಸೌಟು, ಲಟ್ಟಣಿಗೆ ಹಿಡಿದು ಡ್ಯೂಟಿ ಮಾಡ್ತಾರಾ?’

‘ಶಿಲ್ಪಾ ಶೆಟ್ಟಿ ಕಸ ಗುಡಿಸಿದ್ದು, ಕತ್ರಿನಾ ಕೈಫ್ ಪಾತ್ರೆ ತೊಳೆದದ್ದು, ದೀಪಿಕಾ ಪಡುಕೋಣೆ ಅಡುಗೆ ಮಾಡುವಾಗ ಗಂಡ ತರಕಾರಿ ಹೆಚ್ಚಿಕೊಟ್ಟಿದ್ದು, ವಿರಾಟ್ ಕೊಹ್ಲಿಗೆ ಅನುಷ್ಕಾ ಹೇರ್ ಕಟಿಂಗ್ ಮಾಡಿದ್ದು, ಹೆಂಡ್ತಿಗೆ ಕೊಹ್ಲಿ ತಲೆ ಬಾಚಿದ್ದು, ರಾಧಿಕಾ ಪಂಡಿತ್ ಮನೆಕೆಲಸ ಮಾಡುವಾಗ ಯಶ್ ಮಕ್ಕಳನ್ನು ಆಟ ಆಡಿಸುವುದನ್ನು ಟಿ.ವಿ.ಯಲ್ಲಿ ತೋರಿಸಿದ್ರು, ನೀವು ನೋಡಲಿಲ್ವಾ?’

‘ನೋಡಿದೆ, ಸೆಲೆಬ್ರಿಟಿ ದಂಪತಿ ಕೊರೊನಾ ರಜೆಯಲ್ಲಿ ಒಬ್ಬರಿಗೊಬ್ಬರು ಹೆಲ್ಪ್ ಮಾಡಿಕೊಂಡಿದ್ದಾರೆ, ಆದರ್ಶ ದಂಪತಿ ಅವರು’.

‘ಹೌದಲ್ವಾ? ಅಂಥಾ ಸೆಲೆಬ್ರಿಟಿ ಗಂಡಂದಿರೇ ಹೆಂಡ್ತಿಯರಿಗೆ ಸಹಾಯ ಮಾಡುವಾಗ, ಈ ಗಂಡಂದಿರು ಮನೆಯಲ್ಲಿ ಬರೀ ಉಂಡುಕೊಂ ಡಿದ್ದರೆ ಯಾವ ಹೆಂಡ್ತಿ ತಾನೇ ಸಹಿಸಿಕೊಳ್ತಾಳೆ. ಸೌಟು, ಲಟ್ಟಣಿಗೆ ತಗೊಂಡು ಬ್ಯಾಟಿಂಗ್ ಆಡಿದ್ದಾರೆ. ಪೊಲೀಸರ ಲಾಠಿ ಏಟು ಅಂತ ಹೇಳಿಕೊಂಡು ಈ ಗಂಡಂದಿರು ಮರ್ಯಾದೆ ಕಾಪಾಡಿಕೊಳ್ತಿದ್ದಾರೆ ಅಷ್ಟೆ...’ ಎಂದು ಅಂಗಡಿಯವನು ನಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT