ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸಿಂಗಲ್ ಹೆಂಡ್ತಿ ಚಾಲೆಂಜ್!

Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

‘ಹಲೋ... ಎಮ್ಮೆಲ್ಲೆ ಸಾಹೇಬ್ರಾ? ನಾನ್ಸಾ ಬ್ರೇಕಿಂಗ್ ನ್ಯೂಸ್ ಟೀವಿ ರಿಪೋಟ್ರು ತೆಪರೇಸಿ... ಸಿಂಗಲ್ ಹೆಂಡ್ತಿ ಚಾಲೆಂಜ್ ಬಗ್ಗೆ ಏನು ಹೇಳ್ತೀರಿ?’

‘ರೀ ನನಗಿರೋದು ಒಂದು ಮನೆ, ಒಬ್ಳೇ ಹೆಂಡ್ತಿ. ನಾನು ಏಕ ಪತ್ನಿ ವ್ರತಸ್ಥ ಕಣ್ರಿ...’

‘ಅಲ್ಲ ಸಾ, ಎಲ್ಲರ ಮನೆ ದೋಸೆನೂ ತೂತೇ ಅಂತಿದ್ರು... ತನಿಖೆಗೆ ನೀವು ರೆಡಿನಾ?’

‘ಏನ್ ತನಿಖೆ ಮಾಡ್ತಾರಪ್ಪ ಅವರು? ಇಲ್ಲದ್ದನ್ನ ಎಲ್ಲಿಂದ ತರ್ತಾರೆ? ಬೋಳು ತಲೆಗೆ ಗಂಟು ಹಾಕೋ ಕೆಲ್ಸ ಆಗುತ್ತೆ ಅಷ್ಟೆ...’

‘ಅಲ್ಲ ಎಲ್ರೂ ಅವರವರ ಆತ್ಮ ಮುಟ್ಟಿ ನೋಡ್ಕಂಡ್ರೆ ಗೊತ್ತಾಗುತ್ತಂತೆ?’

‘ನಿಮ್ ತಲೆ, ಕೆಲವರಿಗೆ ಆತ್ಮಾನೇ ಇರಲ್ಲಪ್ಪ, ಅವರಿಗೇನ್ ಮಾಡ್ತೀರಿ?’

‘ಮತ್ತೆ ನೀವು ಶೀಲವಂತರು, ಏಕ ಪತ್ನಿ ವ್ರತಸ್ಥರು ಅಂತ ಹೆಂಗೆ ಪ್ರೂವ್ ಮಾಡ್ತೀರಾ?’

‘ಹೆಂಗ್ ಮಾಡಬೇಕು? ದೇವರ ಮೇಲೆ ಆಣೆ ಇಡ್ಲಾ? ಒದ್ದೆ ಬಟ್ಟೇಲಿ ಬಂದು ಗಂಟೆ ಹೊಡೀಲಾ?’

‘ಅದೆಲ್ಲ ಮಾಮೂಲಿ ಸಾ, ಹಿಂದಿನ ಕಾಲದಲ್ಲಿ ಅಗ್ನಿ ಪರೀಕ್ಷೆ, ನಾಗಪರೀಕ್ಷೆ ಎಲ್ಲ ಮಾಡ್ತಿದ್ರಂತೆ...’

‘ಓ... ಅಂದ್ರೆ ನಾನೀಗ ಬೆಂಕಿ ಹಿಡ್ಕಾಬೇಕು, ಹುತ್ತಕ್ಕೆ ಕೈ ಹಾಕಿ ಹಾವು ಕಚ್ಚಲಿಲ್ಲ ಅಂತ ಪ್ರೂವ್ ಮಾಡ್ಬೇಕು ಅಲ್ವ? ನಿಮಗೆ ಮಾಡೋಕೆ ಕೆಲ್ಸ ಇಲ್ವ? ಇಡ್ರೀ ಫೋನು...’

ಎಮ್ಮೆಲ್ಲೆ ರೋಫ್‍ಗೆ ಬೆವರೊರೆಸಿಕೊಂಡ ತೆಪರೇಸಿ ಸೀದಾ ಮನೆಗೆ ಬಂದ. ಬಾಗಿಲಲ್ಲೇ ನಿಂತಿದ್ದ ಹೆಂಡ್ತಿ ಪಮ್ಮಿ ಕೇಳಿದಳು ‘ಏನ್ರಿ ಅದು ಸಿಂಗಲ್ ಹೆಂಡ್ತಿ ಚಾಲೆಂಜು?’

‘ಅಯ್ಯೋ ಸುಮ್ನಿರು ಮಾರಾಯ್ತಿ, ಅದ್ನೇ ಕೇಳಿ ಈಗಿನ್ನು ಬೈಸ್ಕಂಡ್ ಬಂದಿದೀನಿ’ ಎಂದ ತೆಪರೇಸಿ ಎಲ್ಲ ಡೀಟೇಲ್ಸ್ ಒಪ್ಪಿಸಿದ.

ಪಮ್ಮಿಗೆ ಆಶ್ಚರ್ಯ! ‘ಹೌದಾ? ಬೆಂಕಿ ಹಿಡ್ಕಂಡ್ರೆ ಏಕ ಪತ್ನಿ ವ್ರತಸ್ಥ ಅಂತ ಪ್ರೂವ್ ಆಗುತ್ತಾ? ಒಂದ್ನಿಮಿಷ ಇರಿ, ಕೆಂಪಗೆ ಕಬ್ಬಿಣ ಕಾಯಿಸ್ಕಂಡ್ ಬರ್ತೀನಿ...’

‘ಯಾರಿಗೆ? ಎಮ್ಮೆಲ್ಲೆ ಸಾಹೇಬ್ರಿಗಾ?’

‘ಅಲ್ಲ ನಿಮಗೆ... ಸಿಂಗಲ್ ಹೆಂಡ್ತಿ ಅಂತ ನೀವೂ ಪ್ರೂವ್ ಮಾಡಿ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT