ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಮನೆಮದ್ದೇ ವಾಸಿ!

Last Updated 28 ಜೂನ್ 2020, 19:30 IST
ಅಕ್ಷರ ಗಾತ್ರ

ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಎಲ್ಲೋ ಓದಿದ್ದು ಬೆಕ್ಕಣ್ಣನ ತಲೆವಳಗೆ ಕೂತುಬಿಟ್ಟಿತ್ತು. ‘ನಾನೂ ಇನ್‍ಮ್ಯಾಗೆ ದುಡೀತೀನಿ’ ಎನ್ನುತ್ತಿತ್ತು. ಕೊರೊನಾ ದಾಳಿಯಾಗಿದ್ದೇ ನಾಕು ದಿನ ತೆಪ್ಪಗಾಯಿತು. ಆಮೇಲೊಂದು ದಿನ, ‘ನೀ ಮಾಸ್ಕ್ ಹೊಲೆದುಕೊಡು, ನಾ ಮಾರತೀನಿ’ ಎಂದು ಗಂಟುಬಿದ್ದಿತು. ‘ಹೋಗಲೇ... ನನ್ನತ್ರ ಮಶಿನ್ ಎಲ್ಲೈತಿ’ ಎಂದು ಬೈದೆ.

ವಾರದ ನಂತರ ‘ಗೋಮೂತ್ರ ಕುಡಿದ್ರ ಕೊರೊನಾ ಓಡ್ಹೋಗ್ತದಂತ’ ಎನ್ನುತ್ತ ಹಳ್ಳಿಯಿಂದ ಗೋಮೂತ್ರ ತಂದು ಮಾರುವ ಯೋಜನೆ ಮಾಡಿತು. ಲಾಕ್‌ಡೌನಿನಲ್ಲಿ ಹೋಗಿಬರುವುದು ಕಷ್ಟವೆಂದು ಬಾಲಮುದುರಿ ಕೂತಿತು.

‘ಮನಿವಳಗೇ ಕುಂತು ಮಂದಿ ಖಿನ್ನರಾಗ್ಯಾರ, ನಾ ಆನ್‌ಲೈನ್‌ ಕೌನ್ಸೆಲಿಂಗ್ ಮಾಡ್ತೀನಿ’ ಎಂದು ನಾಕು ದಿನ ಲ್ಯಾಪ್‌ಟಾಪ್‌ ಬಿಟ್ಟು ಮೇಲೇಳಲಿಲ್ಲ. ನಂತರ ನಮ್ಮ ಬಡಾವಣೆಯ ಸುತ್ತಮುತ್ತಲೇ ಕೇಸುಗಳಿರುವುದನ್ನು ಕೇಳಿ ತಾನೇ ಖಿನ್ನಗೊಂಡು ಕೂತಿತು.

ಕಳೆದ ವಾರ ಸುದ್ದಿ ನೋಡುತ್ತಿದ್ದ ಬೆಕ್ಕಣ್ಣ ಖುಷಿಯಿಂದ ‘ಹೇ... ನೋಡಿಲ್ಲಿ, ನಮ್ಮ ಬಾಬಾ ರಾಮದೇವ್ರು ಸಂಜೀವಿನಿ ಪರ್ವತ ಹೊತ್ಕಂಡುಬಂದಾರ...’ ಎಂದು ಉದ್ಗರಿಸಿತು. ಸುದ್ದಿ ಜಾಲಾಡಿ ಓದಿ, ‘ನಾ ಈ ಔಷಧಿ ಡೀಲರ್‌ಶಿಪ್‌ ತಗಂತೀನಿ, ಕೊರೊನಾಪೀಡಿತರ ಸೇವಾ ಮಾಡ್ತೀನಿ’ ಎಂದು ಕುಣಿದಾಡಿತು. ಮತ್ತೆ ಎರಡೇ ದಿನಕ್ಕೆ ಮುಖ ಪೆಚ್ಚಾಗಿಸಿಕೊಂಡು, ‘ಬಾಬಾರು ಎಷ್ಟ್ ಒಳ್ಳೆ ಕೆಲಸ ಮಾಡಾಕೆ ಹತ್ತಿದ್ರು, ನಿಮ್ಮ ಸಂಶೋಧನೆ ಎಲ್ಲಾ ಸುಳ್ಳು ಅಂತ ಕೇಸ್ ಹಾಕ್ಯಾರಂತ. ನಮ್ ಬಾಬಾರು ಹೇಳಿದ್ದು ಈ ಎಲ್ಡ್ ಔಷಧಿ ಪುಷ್ಟಿವರ್ಧಕ, ಕೊರೊನಾ ನಿರೋಧಕ ಶಕ್ತಿ ಹೆಚ್ಚತೈತಿ ಅಂತ’ ಎಂದು ಬಾಬಾರನ್ನು ಸಮರ್ಥಿಸಿಕೊಂಡಿತು.

‘ನಿಮ್ಮ ಬಾಬಾರು ಅಷ್ಟ್ ರೊಕ್ಕಮಾಡ್ಯಾರ, ಹಂಗಾರೆ ಆ ಪುಷ್ಟಿವರ್ಧಕಗಳನ್ನ ವಲಸೆ ಕಾರ್ಮಿಕರಿಗೆ ಪುಕ್ಕಟ್ ಹಂಚಾಕ ಹೇಳಲೇ’ ನಾನು ನಕ್ಕೆ.

ಮರುಮಾತಿಲ್ಲದೇ ಅಡುಗೆ ಮನೆಗೆ ಬಂದ ಬೆಕ್ಕಣ್ಣ ನಾನು ಮಾಡುತ್ತಿದ್ದ ನೆಲ್ಲಿಕಾಯಿ- ನಿಂಬೇ ಹಣ್ಣಿನ ಲೇಹವನ್ನು ನೋಡಿದ್ದೇ, ‘ಏನೇ ಅಂದ್ರೂ ಮನೆಮದ್ದೇ ವಾಸಿ. ಜಾಸ್ತಿ ಮಾಡು, ನಾ ಮಾರಾಟ ಮಾಡತೀನಿ’ ಎಂದು ಹೊಸ ಯೋಜನೆ ಹಾಕತೊಡಗಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT