ಬುಧವಾರ, ಜನವರಿ 20, 2021
29 °C

ಚುರುಮುರಿ: ದೆಹಲಿ ದೇವರು

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ರೀ, ದೆಹಲಿ ದೇವರ ದರ್ಶನ ತುಂಬಾ ಕಷ್ಟನಾ, ಹರಕೆ ಹೊತ್ತು ಹೋಗುವ ಎಷ್ಟೋ ಜನನಾಯಕ ಭಕ್ತರು ದರ್ಶನ ಸಿಗಲಿಲ್ಲ ಅಂತ ನಿರಾಶರಾಗಿ ವಾಪಸ್ ಬರ್ತಾರಲ್ಲ’ ಸುಮಿ ಕೇಳಿದಳು.

‘ಹೌದು, ದೆಹಲಿ ದೇವರು ತುಂಬಾ ಪವರ್‍ಫುಲ್, ಮೂಡ್ ಇದ್ರೆ ಮಾತ್ರ ಪೂಜೆ, ದರ್ಶನಕ್ಕೆ ಅವಕಾಶ ಕೊಡ್ತದೆ, ಇಲ್ಲಾಂದ್ರೆ, ಭಕ್ತರು ದೇವಸ್ಥಾನದ ಪ್ರದಕ್ಷಿಣೆ ಹಾಕಿ, ಬಾಗಿಲಲ್ಲೇ ಕೈ ಮುಗಿದು ಬರಬೇಕಷ್ಟೇ, ಫಲವೂ ಇಲ್ಲ, ಪ್ರಸಾದವೂ ಇಲ್ಲ...’ ಎಂದ ಶಂಕ್ರಿ.

‘ದೆಹಲಿ ದೇವರಿಗೆ ಭಕ್ತರು ಕಟ್ಟುನಿಟ್ಟಾಗಿ ನಡೆದುಕೊಳ್ಳಬೇಕೇನ್ರೀ?’

ಹೌದ್ಹೌದು, ನೇಮ-ನಿಷ್ಠೆ, ಪಥ್ಯೆ-ಪದ್ಧತಿ ಅನುಸರಿಸಿದರೆ ದೇವರು ವರ ಕೊಡುತ್ತೆ, ಇಲ್ಲಾಂದ್ರೆ ಶಾಪ ಕೊಟ್ಟುಬಿಡುತ್ತದೆ’ ಮಹಿಮೆ ಹೇಳಿದ ಶಂಕ್ರಿ.

‘ಕಾಯಿಲೆ-ಕಸಾಲೆ, ಕಷ್ಟ-ಕಾರ್ಪಣ್ಯ ಬಂದಾಗ ನಾವು ದೇವರಿಗೆ ಹರಕೆ ಮಾಡಿಕೊಳ್ತೀವಲ್ಲ ಹಾಗೇ ಜನನಾಯಕರೂ ಹರಕೆ ಮಾಡಿಕೊಳ್ತಾರಾ?’ ಕೇಳಿದಳು ಸುಮಿ.

‘ಜನನಾಯಕರಿಗೆ ನಮ್ಮ ಥರ ಕೆಮ್ಮು, ನೆಗಡಿ ಕಾಯಿಲೆ ಬರೋಲ್ಲ, ಅವರಿಗೆ ಕುರ್ಚಿ ಕಂಟಕ, ಸೀಟು ಸಂಕಟ, ಶತ್ರು ಬಾಧೆಯಂತಹವು ಕಾಡುತ್ತವೆ, ಅವುಗಳ ನಿವಾರಣೆಗೆ ದೆಹಲಿ ದೇವರಿಗೆ ಮೊರೆ ಹೋಗಬೇಕು. ಜೊತೆಗೆ, ಮಂತ್ರಿ ಲಿಸ್ಟ್, ಪದಾಧಿಕಾರಿ ಪೋಸ್ಟ್‌ಗೂ ದೇವರ ಅನುಮತಿ, ಆಶೀರ್ವಾದ ಕಡ್ಡಾಯ’.

‘ದೇವರು ದೂರದ ದೆಹಲಿಯಲ್ಲಿದೆ, ಹೋಗಿ-ಬರುವ ಭಕ್ತರಿಗೆ ಕಷ್ಟ ಆಗೊಲ್ವಾ?’

‘ಕಮಲ ಕುಲ, ಹಸ್ತ ಸಮುದಾಯದ ಮನೆದೇವರು ದೆಹಲಿಯಲ್ಲಿವೆ. ತೆನೆ ಪರಿವಾರದ ದೇವರು ಲೋಕಲ್‍ನಲ್ಲೇ ಇದೆ’.

‘ಅಲ್ಲಾರೀ, ಜನನಾಯಕರಿಗೆ ಮತದಾರರೇ ದೊಡ್ಡ ದೇವರಲ್ಲವಾ, ದೆಹಲಿ ದೇವರು ಯಾಕೆ?’

‘ಬೇಕು, ಮತದಾರ ಕೇವಲ ಉತ್ಸವಮೂರ್ತಿ, ಮೆರವಣಿಗೆ ಮಾಡಿ ಈಡುಗಾಯಿ ಹೊಡೆದರೆ ಸಾಕು ಒಲಿದು ಬಿಡುತ್ತದೆ. ಆದರೆ, ಭಕ್ತರಿಗೆ ಕುರ್ಚಿ-ಬೆಂಚು ಸಿಗಬೇಕಾದರೆ ದೆಹಲಿಯ ಕುಲದೇವರ ಕೃಪೆ ಬೇಕೇಬೇಕು...’ ಎಂದ ಶಂಕ್ರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು