ಮಂಗಳವಾರ, ಏಪ್ರಿಲ್ 20, 2021
32 °C

ಚುರುಮುರಿ: ಟ್ವೀಟ್ ಸಿಕ್ತಾ?

ಸುಧೀಂದ್ರ Updated:

ಅಕ್ಷರ ಗಾತ್ರ : | |

Prajavani

ವಾಕಿಂಗ್‍ ಮುಗಿಸಿ ಹೊರಡುವಾಗ ಪ್ರಸಾದ್ ‘ಟ್ವೀಟ್ ಕಳ್ಸಿದ್ದೆ, ಬಂತಾ?’ ಅಂದ.

ಅವಸರದಲ್ಲಿದ್ದ ನಾನು ‘ನೋಡ್ಲಿಲ್ಲ, ಮನೆಯವರಿಗೆ ಥ್ಯಾಂಕ್ಸ್ ಹೇಳು’ ಎಂದೆ.

ಅಮೆರಿಕದಿಂದ ಮಗಳು- ಅಳಿಯ ಬರ್ತಾರೆ ಅಂದಿದ್ದ. ಅವ್ರಿಗೋಸ್ಕರ ಪ್ರಸಾದ್ ಹೆಂಡ್ತಿ ಸ್ವೀಟ್ ಮಾಡಿ ಮನೆಗೆ ಕಳಿಸಿರ‍ಬಹುದು. ಆದರೆ ಈ ವಿಷ್ಯ ನನ್ನ ಹೆಂಡ್ತಿ ಯಾಕೆ ಹೇಳ್ಲೇ ಇಲ್ಲ ಅಂದ್ಕೊಂಡು ಮನೆಯತ್ತ ಹೊರಟೆ.

ಒಳಗೆ ಬಂದವನೇ ‘ಎಲ್ಲಿ ಸ್ವೀಟು?’ ಎಂದೆ. ‘ಸಾಕು ರೊಮಾನ್ಸು. ವಾಕಿಂಗ್ ಮಾಡಿದ್ರೋ ಅಥ್ವಾ ವಾಕಿಂಗ್ ಮಾಡೋರನ್ನು ನೋಡ್ತಾ ನಿಂತ್ಕೊಂಡಿದ್ರೋ’ ಅಂತ ಹೆಂಡ್ತಿ ಕಾಫಿ ಕಪ್ ಕೈಗೆ ಕೊಟ್ಲು. ‘ಯಾವಾಗ ನೋಡಿದ್ರೂ ಸ್ವೀಟು, ಸ್ವೀಟು ಅಂತೀರಲ್ಲ, ಅದಕ್ಕೇ ಕಾಫಿಗೆ ಎರಡು ಸ್ಪೂನ್ ಸಕ್ರೆ ಹೆಚ್ಚಿಗೆ ಹಾಕಿದೀನಿ. ನೀವು ಹೀಗೆ ಸ್ವೀಟ್ ತಿಂತಾಯಿದ್ರೆ, ತೂಕ ಕಮ್ಮಿ ಮಾಡ್ಕೊಂಡಂಗೆ’ ಅಂತ ಒಳಗೆ ಹೋದ್ಲು.

ಉಪ್ಪಿಟ್ಟು ತಿನ್ನೋವಾಗ ಮೆಣಸಿನಕಾಯಿ ಬಾಯಿಗೇ ಸಿಕ್ತು. ‘ಖಾರಾ, ಒಂಚೂರು ಸ್ವೀಟಾದರೂ ಕೊಡೆ’ ಎಂದೆ. ‘ತಿನ್ಬೇಕಾದ್ರೆ ತಟ್ಟೆ ಮೇಲೆ ಗ್ನಾನ ಇರಬೇಕು’ ಅನ್ನೋ ಹಿತವಚನ ಕಿವಿಗೆ ಬಿತ್ತು.

ಲಂಚ್ ಅವರ್‌ನಲ್ಲಿ ಸಹೋದ್ಯೋಗಿ ನಟರಾಜ್, ‘ಪ್ರಸಾದ್ ಕಳ್ಸಿದ ಟ್ವೀಟು ಸಿಕ್ತಾ?’ ಅಂತ ಕೇಳಿದಾಗ ಕೆಫೆಟೇರಿಯಾದಲ್ಲಿ ವಿಪರೀತ ಗದ್ದಲವಿತ್ತು. ನನ್ನ ಕಾಲೇಜ್ ಕ್ಲಾಸ್ಮೇಟ್ ಪ್ರಸಾದ್ ಇವರಿಗೆ ಹೇಗೆ ಗೊತ್ತು, ನಮ್ಮನೇಗೆ ಅವ್ರು ಸ್ವೀಟು ಕಳ್ಸಿದ್ದು ಇವರಿಗ್ಯಾರು ಹೇಳಿದ್ರು ಅಂದ್ಕೊಂಡು ‘ಯಾವ ಸ್ವೀಟು?’ ಎಂದೆ.

‘ಸ್ವೀಟಲ್ರಿ, ಸೆಂಟ್ರಲ್ ಐ.ಟಿ. ಮಿನಿಸ್ಟ್ರು ಕಳ್ಸಿರೋ ಟ್ವೀಟು. ಸುಪ್ರೀಂ ಕೋರ್ಟ್ ಜಡ್ಜ್‌ಮೆಂಟ್ ಬಂದಿದೆ, ಟ್ವೀಟ್ ಕಳ್ಸೋದು ದೇಶದ್ರೋಹ ಅಲ್ಲ ಅಂತ ಇದುವರೆಗೂ ಕುಣಿದಾಡ್ತಿದ್ರಲ್ಲ. ಈಗ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಬರೆಯೋರ ಮೇಲೆ ಇನ್ಮುಂದೆ ಹದ್ದಿನ ಕಣ್ಣಿಡ್ತಾರಂತೆ’ ಅಂದ್ರು. ಇದು ಯಾರ ಬಾಯಿಗೆ ಬಿದ್ದ ಸ್ವೀಟು ಅಂತ ಗೊತ್ತಾಗಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.