ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲ್ ಪಟಾಕಿ!

Last Updated 24 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ದೀಪಾವಳಿಗೆ ಹೊಸ ರೀತಿಯ ಪಟಾಕಿಗಳೇ ಬೇಕೆಂದು ಹಟ ಹಿಡಿದ ಮಗನನ್ನು ಕರೆದುಕೊಂಡು ಅಂಗಡಿಗೆ ಹೋದೆ.

‘ನೋಡಪ್ಪ, ಇವನಿಗೆ ಹಳೆ ಕಾಲದ ಲಕ್ಷ್ಮಿಪಟಾಕಿ, ಸುರ್ ಸುರ್ ಬತ್ತಿ ಎಲ್ಲ ಬೇಡಂತೆ. ಹೊಸ ಪಟಾಕಿ ಏನಾದ್ರೂ ಬಂದಿದಾವಾ?’ ಎಂದು ಕೇಳಿದೆ.

‘ಬನ್ನಿ ಸಾರ್, ಹೊಸ ಪಟಾಕಿ ಬೇಕಾದಷ್ಟು ಬಂದಿದಾವೆ. ಇದು ನೋಡಿ ‘ತ್ರಿಬ್ಬಲ್ ಎ’ ಪಟಾಕಿ ಅಂತ. ಒಂದ್ಸಲ ಹಚ್ಚಿದ್ರೆ ಹದಿನೇಳು ಸಲ ಢಂ ಅನ್ನುತ್ತೆ’ ಅಂಗಡಿಯವ ತೋರಿಸಿದ.

‘ಹೌದಾ? ಈ ‘ತ್ರಿಬ್ಬಲ್ ಎ’ ಅಂದ್ರೇನು?’

‘ಅತೃಪ್ತರು, ಅನರ್ಹರು, ಅನಾಥರು ಅಂತ. ಇದು ಬೇಡ ಅಂದ್ರೆ ಇದು ನೋಡಿ ‘ನೀರ್ ಪಟಾಕಿ’ ಅಂತ. ಮಳೆ, ಪ್ರವಾಹದಲ್ಲೇ ಇದು ಸಿಡಿಯೋದು. ಪರಿಹಾರ ಬರೋವರೆಗೆ ನಿಲ್ಲಲ್ಲ’ ಅಂಗಡಿಯವ ತೋರಿಸಿದ.

‘ಇದು ಬೇಡಪ್ಪ, ಅಲ್ಲಿ ಮೂಲೇಲಿದೆಯಲ್ಲ... ಅದು ತೋರಿಸಿ’.

‘ಸರ್ ಅದು ‘ಸರ್ಜಿಕಲ್ ಸ್ಟ್ರೈಕ್’ ಪಟಾಕಿ ಅಂತ. ಎಲೆಕ್ಷನ್ ಟೈಮಲ್ಲಿ ಮಾತ್ರ ಸಿಡಿಯುತ್ತೆ. ದೀಪಾವಳಿಗೆಲ್ಲ ಬೇಡ ಅಂತ ಮೂಲೇಲಿಟ್ಟಿದೀನಿ...’

‘ಓ, ಹೌದಾ? ಮತ್ತೆ ಬೇರೆ ಯಾವುದಿದೆ?’

‘ಇದು ನೋಡಿ ‘ಕಟೀಲ್ ಪಟಾಕಿ, ಪಿಟೀಲ್ ಪಟಾಕಿ’ ಅಂತ. ಇದಕ್ಕೆ ಲೆಕ್ಕ ಪಕ್ಕ ಗೊತ್ತಿಲ್ಲ. ಯದ್ವಾ ತದ್ವಾ ಢಂ ಅಂದುಬಿಡುತ್ತೆ...’

‘ಅಯ್ಯಯ್ಯೋ... ಬೇಡಪ್ಪ, ಬೇರೆ ತೋರಿಸಿ...’

‘ಇದು ಮೊನ್ನೆ ಬಂದಿದೆ. ‘ಸಿ-ಪಟಾಕಿ, ಈ-ಪಟಾಕಿ’ ಅಂತ. ಇದಕ್ಕೆ ಬೆಂಕಿ ತಾಗಿಸೋದೇ ಬೇಡ. ಒಂದನ್ನೊಂದು ನೋಡಿದ್ರೆ ಸಾಕು ಢಂ ಢಮಾರ್ ಅಂತ ಸಿಡಿದು ಸುಟ್ಟೋಗುತ್ತೆ...’

‘ಹೌದಾ? ಸಿ ಮತ್ತೆ ಈ ಅಂದ್ರೇನು?’

‘ಸಿದ್ರಾಮಯ್ಯ, ಈಶ್ವರಪ್ಪ ಅಂತ. ಪಟಾಕಿಗೆ ಅವರ ಹೆಸರಿಟ್ಟಿದಾರೆ’.

‘ಒಳ್ಳೆ ಕತೆ, ಬೇರೆ ಲೇಟೆಸ್ಟ್ ಪಟಾಕಿ ಯಾವುದಾದ್ರೂ ಇದೆಯಾ?’

‘ಇದು ತಗೊಳ್ಳಿ, ಜಸ್ಟ್ ಬಂದಿದೆ. ‘ಬೇಲ್ ಪಟಾಕಿ’ ಅಂತ. ಡೆಲ್ಲೀಲಿ ಹಚ್ಚಿದ್ರೆ ಕನಕಪುರದಲ್ಲಿ ಢಂ ಅನ್ನುತ್ತೆ, ಕೊಡ್ಲಾ?’

‘ಅಯ್ಯೋ ಬೇಡಪ್ಪ, ಯಾವುದೂ ಬೇಡ, ಹಳೇ ಲಕ್ಷ್ಮಿಪಟಾಕಿನೇ ಕೊಡು ಸಾಕು’ ಬೆವರೊರೆಸಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT