ಗುರುವಾರ , ಡಿಸೆಂಬರ್ 5, 2019
22 °C

ಮಾಸ್‌ ಸಿನಿಮಾ...ನೋಡಿ ಆನಂದಿಸಿ!

Published:
Updated:
Prajavani

ಸರ್ಕಾರದ ಶತದಿನೋತ್ಸವದ ಸಂದರ್ಭದಲ್ಲಿ ವರದಿಗಾರ ಶಂಕ್ರಿ ಜನನಾಯಕರ ಪ್ರತಿಕ್ರಿಯೆ ಕೇಳಿದ.

‘ಕನ್ನಡ ಸಿನಿಮಾಗಳು ನೂರು ದಿನ ಪೂರೈಸುವುದೇ ಕಷ್ಟವಾಗಿರುವಾಗ ನಮ್ಮ ಸರ್ಕಾರ ಶತದಿನ ಆಚರಿಸುತ್ತಿರುವುದು ಸಾಧನೆಯೇ. ಇದು ನಮ್ಮ ತಂಡದ ಹೋರಾಟ, ಪರಿಶ್ರಮದ ಫಲ’ ಎಂದು ಶಂಕ್ರಿಗೆ ಈಶ್ವರಣ್ಣ ಸ್ವೀಟ್ ಕೊಟ್ಟರು.

‘ನನ್ನ ಸರ್ವೀಸಿನಲ್ಲಿ ನಾನು ಸಾಕಷ್ಟು ಸಿನಿಮಾ ನೋಡಿದ್ದೇನೆ. ಈ ಸಿನಿಮಾದ ನಿರ್ದೇಶನ ಬಿಗಿಯಿಲ್ಲ. ಪಾತ್ರಗಳನ್ನು ಸರಿಯಾಗಿ ದುಡಿಸಿಕೊಂಡಿಲ್ಲ, ಕಥೆ, ಚಿತ್ರಕಥೆ ಸರಿಯಿಲ್ಲ. ಮರ್ಯಾದಸ್ಥರು ಮುಜುಗರಪಡುವಂಥ ಸಂಭಾಷಣೆ. ಸಿನಿಮಾ ಜನಪ್ರಿಯವಾಗಿಲ್ಲ’ ದೊಡ್ಡಗೌಡರು ಟವೆಲ್ ಒದರಿದರು.

‘ಇದೂ ಒಂದು ಸಿನಿಮಾನೇನ್ರಿ, ನನ್ನ ಸಿನಿಮಾ ಐದು ವರ್ಷ ಹೌಸ್‌ಫುಲ್ ಓಡಿತ್ತು. ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಬಿಜೆಪಿ ಸಿನಿಮಾದಲ್ಲಿ ನೆರೆ ಕಣ್ಣೀರು, ಕುರ್ಚಿ ಫೈಟ್ ಬಿಟ್ಟರೆ ಇನ್ನೇನಿಲ್ಲ. ಸಿನಿಮಾ ಅಟ್ಟರ್ ಫೇಲ್’ ಸಿದ್ದಣ್ಣ ಸಿಡುಕಿದರು.

‘ನೋಡಿ ಬ್ರದರ್, ಪಾರ್ಟ್‌ನರ್‌ಶಿಪ್‌ನಲ್ಲಿ ಸಿನಿಮಾ ಮಾಡಿದ ಅನುಭವ ನನಗೂ ಇದೆ. ನಾವು ಕಳಪೆ ಸಿನಿಮಾ ಮಾಡಿರಲಿಲ್ಲ. ನೆರೆ ರಾಜ್ಯದ ಸಿನಿಮಾಗಳು ಐದು ವರ್ಷ ಪೂರೈಸುತ್ತವೆ. ದಿನ, ತಿಂಗಳ ಲೆಕ್ಕದಲ್ಲೇ ನಮ್ಮ ಸಿನಿಮಾಗಳ ಸಕ್ಸಸ್ ಗುರುತಿಸುವ ಸ್ಥಿತಿ ಬಂದಿರುವುದು ದುರಂತ’ ಎಂದರು ಕುಮಾರಣ್ಣ.

‘ಅವಾರ್ಡ್ ಪಡೆಯುವಷ್ಟು ಉತ್ತಮ ಸಿನಿಮಾ ಅಲ್ಲದಿದ್ದರೂ ನಮ್ಮದು ಮಾಸ್ ಸಿನಿಮಾ, ಜನ ಮೆಚ್ಚಿದ್ದಾರೆ. ಲೋಪ ದೋಷಗಳನ್ನು ಗುರುತಿಸಿದ್ದೇವೆ. ಡಿಸೆಂಬರ್‌ನಲ್ಲಿ ನಡೆಯುವ ರೀ-ಶೂಟ್‌ ನಂತರ ಕೆಲವು ಪಾತ್ರಗಳು, ಸನ್ನಿವೇಶಗಳನ್ನು ಬದಲಾಯಿಸಿ ಪರಿಣಾಮಕಾರಿಯಾದ ಸಿನಿಮಾ ಮಾಡ್ತೀವಿ. ಆಮೇಲೆ ತೆರೆ ಮೇಲೆ ನೋಡಿ ಆನಂದಿಸಿ. ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯಗಳು’ ಅಂದರು ಯಡಿಯೂರಣ್ಣ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು