ಸೋಮವಾರ, ಡಿಸೆಂಬರ್ 16, 2019
25 °C

ಜಾಣನಿದ್ದೆಯವರು

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

‘ಮೂರು ತಿಂಗಳ ಮಟ್ಟಿಗೆ ನನಗೊಂದು ನೌಕರಿ ಸಿಕ್ಕದ, ಪಗಾರ ಎಷ್ಟ್ ಗೊತ್ತದೇನ್‍... ತಿಂಗಳಿಗಿ ಒಂದ್ ಲಕ್ಷ’ ಎಂದು ಬೆಕ್ಕಣ್ಣ ಕುಣಿಯುತ್ತ ಹೇಳಿತು. ‘ನೀ ಇಲಿ ಹಿಡಿಯೂದನ್ನೇ ಬಿಟ್ಟು ಮೂರೂ ಹೊತ್ತು ನಿದ್ದಿ ಮಾಡ್ತಿ. ನಿನಗ್ಯಾರ್ ಲಕ್ಷ ಪಗಾರದ ನೌಕರಿ ಕೊಡ್ತಾರಲೇ’ ನನಗೆ ಕುತೂಹಲ.

‘ನೋಡಿಲ್ಲಿ’ ಎಂದು ಹಾಸಿಗೆ, ಮಂಚ ತಯಾರಿಸುವ ಕಂಪನಿಯೊಂದರ ‘ಸ್ಲೀಪ್ ಇಂಟರ್ನ್‌ಶಿಪ್‌’ ಜಾಹೀರಾತು ತೋರಿಸಿತು. ‘ಬೆಂಗಳೂರಿನಾಗ ರಸ್ತೆನೇ ಇಲ್ಲ, ಬರೇ ಗುಂಡಿಗಳೇ ಅದಾವು; ನಲ್ಲಿ ನೀರೊಳಗ ಬ್ಯಾಕ್ಟೀರಿಯಾ ತುಂಬ್ಯಾವಂತ. ಮಹಾನಗರಪಾಲಿಕೆಯವರು, ಜಲಮಂಡಳಿಯವ್ರು ಆಫೀಸಿನಾಗ ನಿದ್ದಿ ಮಾಡಾಕಹತ್ಯಾರ. ನೆರೆ ಪರಿಹಾರ ಇನ್ನಾ ಎಷ್ಟೋ ಮಂದಿಗಿ ಸಿಕ್ಕಿಲ್ಲ. ಈರುಳ್ಳಿ ಬೆಳೆದವ್ರು, ತಗೋಳವ್ರು ಕಣ್ಣೀರು ಹಾಕ್ತಾರ, ಮಧ್ಯವರ್ತಿಗಳೇ ರೊಕ್ಕ ಗಂಟು ಮಾಡ್ತಾರ. ಹಿಂತಾವೆಲ್ಲ ಬಿಟ್ಟು ಅನರ್ಹರನ್ನ ಗೆಲ್ಲಿಸಿ ಅಂತ ಮ್ಯಾಗಿಂದ ಕೆಳಗಿನತನಕ ಹಾರಾಡ್ತಿದಾರ. ಗೆದ್ದ ಮ್ಯಾಗ ಹೆಂಗೂ ನಿದ್ದಿ ಮಾಡ್ತಾರ, ಈಗೇ ಎಲ್ಲಾರ‍್ನೂ ಕರ್ಕಂಡು ಹೋಗು’ ಎಂದೆ.

‘ಅವ್ರೆಲ್ಲ ಕುಂತು ಜಾಣನಿದ್ದಿ ಮಾಡ್ಕೋತ, ಕೋಟಿಗಟ್ಟಲೆ ಸಂಪಾದನೆ ಮಾಡ್ಯಾರ, ಲಕ್ಷ ಅವರಿಗೆ ಯಾವ ಲೆಕ್ಕ? ನಾನರ ಈ ಸ್ಲೀಪ್ ಇಂಟರ್ನ್‌ಶಿಪ್‌ಗೆ ಅರ್ಜಿ ಹಾಕಾಂವ. ನೀನೂ ಹಾಕ್ತೀಯೇನ್ ನೋಡು’ ಎಂದು ಇ–ಮೇಲ್ ಬರೆಯತೊಡಗಿತು. ‘ನಿರ್ಭಯಾ ಅತ್ಯಾಚಾರನೇ ಇನ್ನಾ ಮನಸ್ಸಿಂದ ದೂರಾಗವಲ್ದು, ಹೈದರಾಬಾದ್‍ನಾಗ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ, ಆಕಿನ್ನ ಸುಟ್ಟುಹಾಕ್ಯಾರ. ಇವೆಲ್ಲ ನಡಿಯೂಮುಂದ ನಿದ್ದಿ ಹ್ಯಾಂಗ ಬರ್ತದ. ಯಾವ ವಕೀಲ್ರೂ ಆ ನಾಕ್ ಆಪಾದಿತರ ಪರ ವಕೀಲಿಕಿ ಮಾಡೂದಿಲ್ಲ ಅಂದು ಛಲೋ ಮಾಡ್ಯಾರ’ ಎಂದೆ.

‘ನಾಕು ಜನರಲ್ಲಿ ಒಬ್ಬನನ್ನ ನೇಣಿಗೇರಿಸ್ರಿ, ಇನ್ನುಳಿದವ್ರು ‘ನಮ್ಮ ಮಂದಿ’ ಅಂತ ಅದ್ಯಾರೋ ಚಕ್ರವರ್ತಿಗಳು ಹೇಳ್ಯಾರೆ. ಇನ್ನಾ ಮೂವರ ಪರವಾಗಿ ವಕೀಲಿಕಿ ಮಾಡಾಕ ಆ ಚಕ್ರವರ್ತಿಗಳನ್ನೇ ಕಳಿಸಿದ್ರಾತು ಬಿಡು. ಆದ್ರ ಪಾಶವೀ ಕೃತ್ಯ ಅಂತ ಮಾತ್ರ ಹೇಳಬ್ಯಾಡ್ರಿ. ನಾವು ಪ್ರಾಣಿಗೋಳ್ ಸಹಿತ ನಿಮ್ಮಂಗ ಇಷ್ಟ್ ಬರ್ಬರ ಅತ್ಯಾಚಾರ ಮಾಡಂಗಿಲ್ಲ’ ಎಂದು ನನ್ನ ಮೂತಿಗೆ ತಿವಿಯಿತು!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು