ಸೋಮವಾರ, ಮಾರ್ಚ್ 30, 2020
19 °C
‘ಉಗ್ರವಾದವನ್ನು ಸಾರಾಸಗಟಾಗಿ ಖಂಡಿಸಬೇಕು’

ಉಗ್ರವಾದಿಗಳೊಂದಿಗೆ ಉಗ್ರ ವಿಚಾರವಾದಿಗಳನ್ನೂ ಖಂಡಿಸಬೇಕು: ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರವಾದದ ದುರಂತವೆಂದರೆ, ಎಡಕ್ಕಿರಲಿ, ಬಲಕ್ಕಿರಲಿ, ಅದು ಸಮಾಜಕ್ಕೆ ಹಾನಿಯನ್ನಂತೂ ಉಂಟು ಮಾಡುತ್ತಿರುತ್ತದೆ. ಒಂದು, ಮೌಢ್ಯದ ಪರಮಾವಧಿಯಾದರೆ, ಮತ್ತೊಂದು, ಅಹಂಕಾರದ ಪರಮಾವಧಿ. ಒಂದು, ಭಕ್ತಿಯ ಅತಿರೇಕವಾದರೆ, ಮತ್ತೊಂದು, ಅನುಮಾನದ ಅತಿರೇಕ. ತಮಾಷೆಯ ಸಂಗತಿಯೆಂದರೆ, ಲೆನಿನ್ ಹೇಳಿದ ಹಾಗೆ ಎರಡೂ ಪರಸ್ಪರರನ್ನು ಪೋಷಿಸುತ್ತ, ಪರಸ್ಪರರಿಂದ ಪೋಷಣೆ ಪಡೆಯುತ್ತ ಹುಲುಸಾಗಿ ಬೆಳೆಯುತ್ತ ಹೋಗುತ್ತವೆ. ಅರಿವಿನಿಂದ ಕೂಡಿದ ಭಕ್ತ ಹಾಗೂ ಅರಿವಿನಿಂದ ಕೂಡಿದ ಜ್ಞಾನಿ ಇಬ್ಬರನ್ನೂ ಹಿನ್ನೆಲೆಗೆ ತಳ್ಳಿ, ಈ ಅತಿರೇಕವು ಅಟ್ಟಹಾಸ ಮೆರೆಯುತ್ತಿರುತ್ತದೆ.

ಉಗ್ರವಾದವನ್ನು ಸಾರಾಸಗಟಾಗಿ ಖಂಡಿಸಬೇಕು. ಬಿಡಿ ಬಿಡಿಯಾಗಿ ಅಲ್ಲ. ಧಾರ್ಮಿಕ ಉಗ್ರವಾದಿಗಳನ್ನು ಖಂಡಿಸಿದಷ್ಟೇ ಬಲವಾಗಿ ನಾವು ಉಗ್ರ ವಿಚಾರವಾದಿಗಳನ್ನೂ ಖಂಡಿಸಬೇಕು. ಅನುಮಾನವೇ ಬೇಡ. ಉಗ್ರವಾದಿ ಕೀಟಲೆಯ ಇತ್ತೀಚಿನ ಉದಾಹರಣೆ ಎಡದಿಂದ ಬಂದಿದೆ. ‘ವಿವೇಕಾನಂದರು ಹಾಗೂ ಬಸವಣ್ಣನವರ ಕೊಲೆಯಾಯಿತು, ಅವರದ್ದು ಸಹಜ ಸಾವಲ್ಲ’ ಎಂದು ಉಗ್ರವಿಚಾರವಾದಿ ಭಗವಾನ್ ಅವರು ಅಪ್ಪಣೆ ಕೊಡಿಸಿದ್ದಾರೆ. ಭಗವಾನರ ಹೇಳಿಕೆಯನ್ನು ಓದಿ ನಕ್ಕು, ತಳ್ಳಿಹಾಕಿಬಿಡಬಹುದಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಹಾಗೆ ಮಾಡಲಾಗದು.

ಬಸವಣ್ಣನವರು ಕೂಡಲ ಸಂಗಮವಲ್ಲಿ ಲೀನರಾದ ಅಲೌಕಿಕ ಸಂಗತಿಯನ್ನು ಕೆಲವರು ಲೌಕಿಕ ದೃಷ್ಟಿಕೋನ ದಿಂದ ನೋಡಿ, ಬಸವಣ್ಣನವರದ್ದು ಆತ್ಮಹತ್ಯೆ ಎಂದದ್ದಿದೆ. ಒಂದೊಮ್ಮೆ ಅಲೌಕಿಕ ಸಂಗತಿಯೊಂದನ್ನು ಲೌಕಿಕವಾಗಿ ಚಿತ್ರಿಸಲು ಹೊರಟರೆ, ಹಾಗೆ ಚಿತ್ರಿಸುವವನಿಗೆ, ತಾನೇಕೆ ಹಾಗೆ ಮಾಡುತ್ತಿದ್ದೇನೆ ಎಂಬ ಅರಿವಿರಬೇಕಾಗುತ್ತದೆ. ಶ್ರದ್ಧೆಯಿರಬೇಕಾಗುತ್ತದೆ. ತಾನು ಚಿತ್ರಿಸುತ್ತಿರುವ ಸಂಗತಿಯ ಬಗ್ಗೆ ಗೌರವ ಇರಬೇಕಾಗು ತ್ತದೆ. ಹಾಗಲ್ಲದೆ ಅಲೌಕಿಕ ಸಂಗತಿಗಳನ್ನೆಲ್ಲ ಲೌಕಿಕ ಸಣ್ಣತನದಿಂದ ನೋಡುವುದು, ಹೆಚ್ಚೆಂದರೆ ಚೇಷ್ಟೆಯಾದೀತು. ದುಬಾರಿ ಚೇಷ್ಟೆ.

ಭಗವಾನರು ಅನಗತ್ಯ ಚೇಷ್ಟೆ ಮಾಡಿರುವುದು ವಿವೇಕಾನಂದರ ಬಗ್ಗೆ. ವಿವೇಕಾನಂದರ ಕೊಲೆಯಾಯಿತೆಂದು ಭಗವಾನರಿಗೆ ಎಲ್ಲಿ ಹೊಳೆಯಿತೋ ಏಕೆ ಹೊಳೆಯಿತೋ ನಾಕಾಣೆ. ವಿವೇಕಾನಂದರ ಮರಣವು ಅಲೌಕಿಕ ಘಟನೆಯೂ ಅಲ್ಲ, ಅದೊಂದು ಮಾನವೀಯ ದುರಂತ. ಮೂತ್ರ ಜನಕಾಂಗದ ತೀವ್ರತರವಾದ ಕಾಯಿಲೆಯಿಂದ ನರಳುತ್ತಿದ್ದರು ವಿವೇಕಾನಂದರು. ಆಗಿನ್ನೂ ಅವರಿಗೆ ಮೂವತ್ತೊಂಬತ್ತು ವರ್ಷ ವಯಸ್ಸು. ನೀರು ಕುಡಿಯುವುದನ್ನು ಸಹ ನಿಲ್ಲಿಸಿದ್ದರು ಅವರು. ಈಗಿರುವಂತೆ ಆಗ ಡಯಾಲಿಸಿಸ್ ಸೌಲಭ್ಯ ಇರಲಿಲ್ಲ, ಗುಟುಕು ಹಾಲು, ತುತ್ತು ಆಹಾರದಲ್ಲಿ ಜೀವ ಹಿಡಿದಿದ್ದರು. ಮಾರಣಾಂತಿಕ ನೋವು ಅವರನ್ನು ಕಾಡಿಸುತ್ತಿತ್ತು. ಸಾವು ಸಮೀಪಿಸಿದೆ ಎಂದು ಅವರಿಗೂ ತಿಳಿದಿತ್ತು, ಲೋಕಕ್ಕೂ ತಿಳಿದಿತ್ತು. ಆದರೇನಂತೆ! ಇದಾವುದನ್ನೂ ಲೆಕ್ಕಿಸದೆ ದುಡಿದಿದ್ದರು ಆ ಮಹಾನುಭಾವ!

ಅವರು ಮರಣ ಹೊಂದಿದ ದಿನದ ಕ್ಷಣ ಕ್ಷಣದ ವಿವರಗಳು ಚರಿತ್ರೆಯ ಪುಟದಲ್ಲಿ ಲಭ್ಯವಿವೆ. ಅವರು ಕಲ್ಕತ್ತೆಯಲ್ಲಿ ಆಶ್ರಮದಲ್ಲಿದ್ದರು. ಅವರು ಕಡೆಯ ಬಾರಿ ಮಲಗಿದ ಚಾಪೆಯಿಂದ ಹಿಡಿದು, ಅವರ ಕೊನೆಯ ಭಂಗಿ, ಬಾಯಿಂದ ಹೊರಬಿದ್ದ ಕೊಂಚ ರಕ್ತ... ಎಲ್ಲವೂ ದಾಖಲಾಗಿದೆ. ವಿವೇಕಾನಂದರು ಕೊಲೆಯಾದದ್ದು ನಿಜ ಎನ್ನುವುದಾದರೆ, ಕೊಲೆಗಾರ ಕಾಲಪುರುಷನೇ ಸರಿ.

ಇದೆಲ್ಲ ಅತ್ತತ ಆಗಿರಲಿ, ಇಂದು ಈ ವಿಷಯ ಮೇಲೆತ್ತಿ ಹಿಡಿಯುವ ಅಗತ್ಯವಾದರೂ ಏನು? ಯಾವ ಪರಮ ಸತ್ಯವನ್ನು ಕಾಣಿಸುತ್ತಿದ್ದೀರಿ ಈ ಸಂಗತಿಯ ಮೂಲಕ? ಎಡ ಉಗ್ರವಾದಿಗಳು ದ್ರೋಹ ಬಗೆಯುತ್ತಿರುವುದು ಎಡಪಂಥಕ್ಕೇ ಸರಿ. ಉಗ್ರ ವಿಚಾರವಾದಿಗಳು ದ್ರೋಹ ಬಗೆಯುತ್ತಿರುವುದು ವಿಚಾರವಾದಕ್ಕೇ ಸರಿ. ಬೇಡದಿರುವ ಸಂಗತಿಗಳನ್ನೆಲ್ಲ, ಕೋಳಿಗಳು ಕಾಲಿನಿಂದ ತಿಪ್ಪೆ ಕೆದಕುವಂತೆ ಕೆದಕಿ, ಮೇಲೆತ್ತಿ ಚೆಲ್ಲುವುದು ವಿಚಾರವಾದ ಹೇಗಾದೀತು?

ವಿವೇಕಾನಂದರೇ ಮಹಾನ್ ವಿಚಾರವಾದಿ. ವಿಚಾರ ವಾದ ಕಲಿಯಲಿಕ್ಕೆ ಅವರಿಗಿಂತ ದೊಡ್ಡ ಗುರು ಇನ್ನೊಬ್ಬರಿರಲಿಕ್ಕೆ ಸಾಧ್ಯವಿಲ್ಲ. ಸೌಮ್ಯವಾಗಿ ವಿಚಾರ ಮಾಡುವುದನ್ನು ಎಲ್ಲರೂ ಕಲಿಯೋಣ. ಈಗಾಗಲೇ ದೇಶ ಸಾಕಷ್ಟು ಗಾಸಿಗೊಂಡಿದೆ. ಇದನ್ನು ಹಾಗೂ ಇದರಲ್ಲಿ ಬದುಕುತ್ತಿರುವ ಬಡಪಾಯಿ ಮನುಜರನ್ನು ಉಗ್ರವಾಗಿ ಹಿಂಸಿಸುವುದು ಬೇಡ ನಾವು.
ಪ್ರಸನ್ನ, ಹೆಗ್ಗೋಡು
***

ಸ್ಪಷ್ಟತೆ ಅಗತ್ಯ
ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿಚಾರಣೆ ನಡೆಸಿದಾಗ, ‘ರಾಜ್ಯದ ಇನ್ನೂ ಕೆಲವರ ಹತ್ಯೆಗೆ ಸಂಚು ರೂಪಿಸಲಾಗಿತ್ತು, ಅವರಲ್ಲಿ ಕೆ.ಎಸ್‌. ಭಗವಾನ್ ಸಹ ಒಬ್ಬರು’ ಎಂಬುದು ತಿಳಿದುಬಂದಿದೆ.

ಭಗವಾನ್‌ ಅವರ ಯಾವ ಹೇಳಿಕೆಯು ಆರೋಪಿ ಗಳನ್ನು ಕೆರಳಿಸಿತ್ತು ಎಂಬ ಬಗ್ಗೆ ತನಿಖೆ ಆಗಬೇಕು. ಪ್ರಗತಿಪರ ಚಿಂತಕರ ಭಾಷಣ– ಬರಹಗಳಲ್ಲಿ ಸಂವಿಧಾನ ವಿರೋಧಿ ಮಾತುಗಳೇನಾದರೂ ಬಂದಿವೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಚಿಂತಕರು ಹದ್ದು ಮೀರಿ ಮಾತನಾಡಿದ್ದಾರೆಯೇ ಎಂಬ ಬಗ್ಗೆಯೂ ಚರ್ಚೆಗಳಾಗಬೇಕು.

ಭಗವಾನ್ ಅವರು ಇತ್ತೀಚೆಗೆ ‘ಬಸವಣ್ಣ ಮತ್ತು ವಿವೇಕಾನಂದರನ್ನು ಕೊಲೆ ಮಾಡಾಲಾಗಿತ್ತು’ ಎಂಬ ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರ ವಿರುದ್ಧ ಏನು ಬೇಕಾದರೂ ಮಾತನಾಡಬಹುದೇ ಎಂಬುದು ಸ್ಪಷ್ಟವಾಗಬೇಕಾಗಿದೆ. ಇಂಥ ವಿಚಾರಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚಿಂತಕರಿಗೆ ಭದ್ರತೆ ಒದಗಿಸುವ ಸಲುವಾಗಿಯೇ ತೆರಿಗೆದಾರರ ಕೋಟಿ ಕೋಟಿ ಹಣವನ್ನು ವ್ಯಯಿಸಬೇಕಾಗಬಹುದು.
ಸತ್ಯಬೋಧ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)