ಸೋಮವಾರ, ಮಾರ್ಚ್ 30, 2020
19 °C

ಬಸ್‍ಪಾಸ್‌: ಯಾರಿಗೆ ಮತ್ತು ಏಕೆ?

ಡಾ. ರಾಜೇಂದ್ರ ಬುರಡಿಕಟ್ಟಿ ಶಿವಮೊಗ್ಗ Updated:

ಅಕ್ಷರ ಗಾತ್ರ : | |

ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉಚಿತ ಬಸ್‍ಪಾಸ್ ಕೊಡುವ ವಿಚಾರವನ್ನು ವಿವಾದಕ್ಕೆಳೆಯಲಾಗುತ್ತಿದೆ. ಕೆಲವರು ಇದನ್ನು, ‘ಮಕ್ಕಳಲ್ಲಿ ಭೇದ- ಭಾವ ಮೂಡಿಸುವ ಕಾರ್ಯ’ ಎಂದೂ ಇನ್ನು ಕೆಲವರು, ‘ಮಕ್ಕಳ ಮನಸ್ಸಿನಲ್ಲಿ ಪ್ರತ್ಯೇಕತೆಯ ವಿಷಬೀಜವನ್ನು ಬಿತ್ತುವ ಕ್ರಮ’ ಎಂದೂ ಕೆರಳಿಸುವ, ಭಾವನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ‘ಈ ಸೌಲಭ್ಯವನ್ನು ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳಿಗೂ ವಿಸ್ತರಿಸಬೇಕು’ ಎಂದು ವಾದಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ.

ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಎಲ್ಲ ಮಕ್ಕಳೂ ಶ್ರೀಮಂತರೇ ಎಂಬ ಪ್ರಶ್ನೆಯೂ ಹೆಚ್ಚು ಘನತೆಯಿಂದ ಕೂಡಿಲ್ಲ. ಅಲ್ಲಿಗೆ ಹೋಗುತ್ತಿರುವ ಮಕ್ಕಳ ಎಲ್ಲ ಪಾಲಕರೂ ಶ್ರೀಮಂತರಲ್ಲದಿರಬಹುದು, ಆದರೆ ಬಹಳಷ್ಟು ಜನ ಬಡವರಲ್ಲ ಎಂಬುದಂತೂ ಸತ್ಯ. ಅವರಲ್ಲಿ ಕೆಲವರು ಬಡವರಾಗಿದ್ದರೂ ಬಡವರೆಂದು ತೋರಿಸಿಕೊಳ್ಳಲು ಇಷ್ಟಪಡದ ‘ಕಲ್ಪಿತ ಅನುಕೂಲಸ್ಥರು’. ಅವರೆಲ್ಲ ತಮ್ಮ ಮನೆಯ ಹತ್ತಿರ ಸರ್ಕಾರಿ ಶಾಲೆ ಇಲ್ಲದ ಕಾರಣಕ್ಕೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿಲ್ಲ ಎಂಬುದನ್ನು ಗಮನಿಸಬೇಕು. ಮನೆಯ ಹತ್ತಿರ ಸರ್ಕಾರಿ ಶಾಲೆಗಳಿದ್ದರೂ ಅವುಗಳ ಬಗ್ಗೆ ಅಸಡ್ಡೆ ತೋರಿ, ದೂರದ ಖಾಸಗಿ ಶಾಲೆಗಳಿಗೆ ಕಳಿಸುತ್ತಿರುವವರು. ಇಂಥವರು ಶಿಕ್ಷಣವನ್ನು ಅಗತ್ಯ ಎಂದು ಪರಿಗಣಿಸಿಲ್ಲ. ಬದಲಿಗೆ ಪ್ರತಿಷ್ಠೆ ಮಾಡಿಕೊಂಡಿದ್ದಾರೆ.

ಲಕ್ಷಗಟ್ಟಲೆ ಡೊನೇಷನ್‌ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಆಗುತ್ತದೆ, ಸರ್ಕಾರಿ ಬಸ್‍ಗಳಲ್ಲಿ ಟಿಕೆಟ್ ಪಡೆದು ಪ್ರಯಾಣಿಸಲು ಆಗುವುದಿಲ್ಲ ಅಂದರೆ ಏನರ್ಥ? ಖಾಸಗಿ ಶಾಲೆಗಳು ಡೊನೇಷನ್‌ ಏರಿಸಿದರೂ ಇವರು, ಕೆಲವರು ಹೇಳಿರುವಂತೆ ‘ಹೊಟ್ಟೆ–ಬಟ್ಟೆ ಕಟ್ಟಿ’ಯಾದರೂ ತಮ್ಮ ಮಕ್ಕಳನ್ನು ಅಲ್ಲಿಯೇ ಓದಿಸಲು ಇಚ್ಛಿಸುತ್ತಾರೆಯೇ ಹೊರತು ಸರ್ಕಾರಿ ಶಾಲೆಗೆ ತಂದು ಸೇರಿಸುವುದಿಲ್ಲ. ಇವರೆಲ್ಲ ತಮ್ಮ ಮಕ್ಕಳನ್ನು ಮನೆಯ ಹತ್ತಿರದ ಸರ್ಕಾರಿ ಶಾಲೆಗಳಿಗೆ ಕಳಿಸಿದರೆ ಅವರ ಮಕ್ಕಳೂ ಇತರ ಮಕ್ಕಳೊಡನೆ ಬೆರೆತು ಕಲಿಯುವ ಮೂಲಕ ‘ಕೂಡಿಬಾಳುವ’ ಕಲೆಯನ್ನು ಕಲಿಯುತ್ತಾರೆ. ಇವರೆಲ್ಲರ ಪಾಲ್ಗೊಳ್ಳುವಿಕೆಯಿಂದ ಸರ್ಕಾರಿ ಶಾಲೆಗಳು ತಮ್ಮಲ್ಲಿದ್ದಿರಬಹುದಾದ ಕುಂದು–ಕೊರತೆಗಳನ್ನು ನೀಗಿಸಿಕೊಂಡು ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಅದನ್ನು ಮಾಡಲು ಇವರ‍್ಯಾರೂ ತಯಾರಿಲ್ಲ. ಇಂಥವರ ಬಗ್ಗೆ ಸರ್ಕಾರ ಏಕೆ ಕರುಣೆ ತೋರಬೇಕು?

ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗಿಂತ ಭಿನ್ನವಾಗಿ, ಶ್ರೇಷ್ಠ ಮಟ್ಟದಲ್ಲಿ ಓದಬೇಕೆಂಬ ಭ್ರಮೆಯಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲಾ ಮಕ್ಕಳಿಂದ ದೂರ ಮಾಡಿ ಓದಿಸುವ ಕ್ರಮವು ಮಕ್ಕಳಲ್ಲಿ ಪ್ರತ್ಯೇಕತೆಯನ್ನು ಹುಟ್ಟುಹಾಕುತ್ತದೆಯೇ ಹೊರತು, ಸರ್ಕಾರವು ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಸೌಲಭ್ಯಗಳಿಂದಲ್ಲ. ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಈಗಾಗಲೇ ತುಂಬಿಸಲಾಗಿರುವ ಕೀಳರಿಮೆಯನ್ನು ತೊಡೆದುಹಾಕಲು ಸರ್ಕಾರದ ಇಂಥ ಉತ್ತೇಜಕ ಕ್ರಮಗಳಿಂದ ಸಹಾಯ ಮಾಡಿದಂತಾಗುತ್ತದೆ. ಸರ್ಕಾರಗಳು ಸೌಲಭ್ಯವನ್ನು ಕೊಡುವಾಗ ಸಮಾನತೆಯನ್ನು ತರುವ ಕಡೆ ಗಮನಕೊಡಬೇಕಾಗುತ್ತದೆ. ಉಚಿತ ಬಸ್‌ ಪಾಸ್‌ ಕ್ರಮ ಅದಕ್ಕೆ ಪೂರಕವಾದದ್ದಾಗಿದೆ. ಖಾಸಗಿ ಶಾಲೆಯ ಮಕ್ಕಳೂ ಸೇರಿದಂತೆ ಎಲ್ಲರಿಗೂ ಸೌಲಭ್ಯ ಕೊಡುವುದು ಎಂದರೆ ಈಗಾಗಲೇ ಇರುವ ಅಸಮಾನತೆಯನ್ನು ಹಾಗೇ ಉಳಿಸಿಕೊಳ್ಳುವ ಕ್ರಮವಾಗುತ್ತದೆ. ಸಮಸಮಾಜ ನಿರ್ಮಾಣ ಮಾಡುವ ದಿಕ್ಕಿನ ವಿರುದ್ಧ ನಡೆಯಾಗುತ್ತದೆ. ಆದ್ದರಿಂದ ಅದನ್ನು ಮಾಡುವುದು ಸರಿಯಾದ ಕ್ರಮವಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)