ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಯೋಗಿ ಮಾದರಿ –ಕಠಿಣ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಅನಿವಾರ್ಯ: ರಾಜೀವ್

ಕರ್ನಾಟಕಕ್ಕೆ ‘ಯೋಗಿ ಮಾದರಿ’ಯ ಅಗತ್ಯ ಇದೆಯೇ?
Last Updated 6 ಆಗಸ್ಟ್ 2022, 0:53 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ಕೆಲವೇ ದಿನಗಳಲ್ಲಿ ಮೂರು ಕೊಲೆಗಳು ಸಂಭವಿಸಿವೆ. ಕರ್ನಾಟಕದಲ್ಲಿ ಇಂತಹ ಘಟನೆಗಳನ್ನು ಹತ್ತಿಕ್ಕಬೇಕಾದರೆ ಯೋಗಿ ಮಾದರಿಯ ಆಡಳಿತವನ್ನು ಜಾರಿಗೊಳಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ತೀಕ್ಷ್ಣವಾಗಿ ವ್ಯಕ್ತವಾಗುತ್ತಿದ್ದ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತೆ, ಅಗತ್ಯಬಿದ್ದರೆ ಯೋಗಿ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಲು ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನುಡಿದಿದ್ದಾರೆ.

ವಿಪಕ್ಷಗಳು ಆರೋಪಿಸುವಂತೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆಯೇ? ಯೋಗಿ ಮಾದರಿ ಇದಕ್ಕೆ ಪರ್ಯಾಯವಾಗಬಲ್ಲುದೇ? ಯೋಗಿ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಲು ಸಿದ್ಧ ಎನ್ನುತ್ತಿದ್ದಂತೆ ವಿಪಕ್ಷಗಳು ಬೇರೊಂದು ರಾಗವನ್ನು ಎತ್ತಿ ಆತಂಕವನ್ನು ವ್ಯಕ್ತಪಡಿಸುತ್ತಿರುವುದಾದರೂ ಏಕೆ?

ಒಂದು ರಾಜ್ಯ ಅಥವಾ ದೇಶದ ಒಟ್ಟಾರೆ ಅಭಿವೃದ್ಧಿಯನ್ನು ಭೌತಿಕ ಗುರಿಗಳ ಅನುಷ್ಠಾನದಿಂದ ಮಾತ್ರ ಅಳೆಯಲಾಗುವುದಿಲ್ಲ. ಆ ಭೌಗೋಳಿಕ ಪ್ರದೇಶದಲ್ಲಿ ನೆಲೆಸಿರುವ ಜನಸಮುದಾಯದ ಸಂತೃಪ್ತಿ ಕೋಷ್ಠಕದೊಂದಿಗೆ ಅವಲೋಕನ ಮಾಡಬೇಕಾಗುತ್ತದೆ. ಕರ್ನಾಟಕದ ಭೂಪ್ರದೇಶ 1.91 ಲಕ್ಷ ಚದರ ಕಿ.ಮೀ ಇದ್ದರೆ ಉತ್ತರ ಪ್ರದೇಶದ ಭೌಗೋಳಿಕ ಪ್ರದೇಶ 2.43 ಲಕ್ಷ ಚದರ ಕಿ.ಮೀನಷ್ಟಿದೆ.

ಕರ್ನಾಟಕದ ಜನಸಂಖ್ಯೆ 2011ರ ಜನಗಣತಿಯಂತೆ 6 ಕೋಟಿಯಷ್ಟಿದ್ದರೆ ಉತ್ತರ ಪ್ರದೇಶದ ಜನಸಂಖ್ಯೆ ಸುಮಾರು 19 ಕೋಟಿಯಷ್ಟಿದೆ. ಜನಪ್ರಿಯ ಯೋಜನೆಗಳು ಹಾಗೂ ಓಟ್‌ಬ್ಯಾಂಕ್‌ಗಾಗಿ ತುಷ್ಟೀಕರಣದ ರಾಜಕೀಯಕ್ಕೆ ಶರಣಾಗಿದ್ದರಿಂದ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಹೋಗಿತ್ತು. 2017ಕ್ಕೂ ಮುಂಚೆ ಇದ್ದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಆಡಳಿತದ ಶೈಲಿಯಿಂದಾಗಿ ಉತ್ತರ ಪ್ರದೇಶವು ಗೂಂಡಾರಾಜ್ಯ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿತ್ತು.

ತುಷ್ಟೀಕರಣದ ಪರಾಕಾಷ್ಠೆಯನ್ನು ತಲುಪುವ ರಾಜಕೀಯ ತೀರ್ಮಾನಗಳು ಕೆಲವು ವರ್ಗದವರಿಗೆ ವಿಪರೀತವಾದ ಸೌಲಭ್ಯವನ್ನು ನೀಡಿದ್ದರೆ, ಕೆಲವು ಸಮುದಾಯಗಳು ಅದರಿಂದ ಸ್ಪಷ್ಟವಾಗಿ ವಂಚನೆಗೊಳಗಾಗಿದ್ದವು. ಹೆಣ್ಣುಮಕ್ಕಳು ಸಂಜೆಯ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಸ್ವತಂತ್ರವಾಗಿ ತಿರುಗಾಡುವಂತಹ ಸುರಕ್ಷತೆ ಇದ್ದಿರಲಿಲ್ಲ.‌

ಕಾನೂನುಗಳು ಎಷ್ಟೇ ಪ್ರಬಲವಾಗಿದ್ದರೂ ಅನುಷ್ಠಾನಗೊಳಿಸುವ ಸಂಸ್ಥೆ ಹಾಗೂ ನೌಕರರಲ್ಲಿ ಬದ್ಧತೆ ಇರದಿದ್ದರೆ ಯಾವುದೇ ಮಹತ್ತರ ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಹಾಗೆಯೇ ಅನುಷ್ಠಾನಗೊಳಿಸುವ ಸಂಸ್ಥೆ ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ, ಕರ್ತವ್ಯ ಬದ್ಧತೆ ಇದ್ದಲ್ಲಿ ಅಸ್ತಿತ್ವದಲ್ಲಿರುವ ನಿಯಮಾವಳಿಗಳ ಚೌಕಟ್ಟಿನಲ್ಲಿಯೇ ಮಹತ್ತರ ಬದಲಾವಣೆಯನ್ನು ಸಾಧಿಸಬಹುದಾಗಿದೆ. 2017ರಲ್ಲಿ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಕಡಿಮೆ ಅವಧಿಯಲ್ಲಿಯೇ ಗೂಂಡಾ ರಾಜ್ಯವನ್ನು ಸುರಕ್ಷಿತ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ. ಅಸ್ತಿತ್ವದಲ್ಲಿದ್ದ ಕಾನೂನು ಹಾಗೂ ನಿಯಮಗಳ ಅಡಿಯಲ್ಲಿಯೇ ಇದು ಸಾಧ್ಯವಾಗಿದೆ.

ಮಾಫಿಯಾ ದೊರೆಗಳನ್ನು ಮಟ್ಟಹಾಕಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅಧಿಕಾರಿ ವರ್ಗವು ಯಾವುದೇ ಪೂರ್ವಗ್ರಹವಿಲ್ಲದೇ ನಿರ್ಭೀತಿಯಿಂದ ಕರ್ತವ್ಯವನ್ನು ನಿರ್ವಹಿಸುವಾಗ ಅಗತ್ಯವಾದಷ್ಟು ಬಲಪ್ರಯೋಗ ಮಾಡಲು ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ ಮುಕ್ತ ಅವಕಾಶ ನೀಡಿವೆ.‌

ಗೂಂಡಾಗಳನ್ನು ನಿಯಂತ್ರಿಸಲು ಅಧಿಕಾರಿಗಳನ್ನು ಜಾಗೃತಗೊಳಿಸಲಾಯಿತು. ಭಯಮುಕ್ತ ಕರ್ತವ್ಯ ನಿರ್ವಹಣೆಗೆ ಹಿಂದೇಟು ಹಾಕಿದ ಅಧಿಕಾರಿಗಳು ಇಲಾಖಾ ಶಿಸ್ತುಕ್ರಮಕ್ಕೂ ಒಳಗಾದರು. ನಿನ್ನೆ-ಮೊನ್ನೆಯವರೆಗೆ ಸಲಾಂ ಹೊಡೆಯುತ್ತಿದ್ದ ಪೊಲೀಸರು ಇದ್ದಕ್ಕಿದ್ದಂತೆ ಅಧಿಕಾರ ಚಲಾಯಿಸಲಾರಂಭಿಸಿದಾಗ ಇಲ್ಲಿಯವರೆಗೆ ಕೊಬ್ಬಿಹೋಗಿದ್ದ ರೌಡಿಗಳು ಕಸಿವಿಸಿಗೊಂಡರು. ಕೆಲ ರೌಡಿಗಳಂತೂ ಸರ್ಕಾರಿ ನೌಕರರ ಮೇಲೆ ಲಾಂಗು-ಮಚ್ಚುಗಳಿಂದ ಹಲ್ಲೆಗೆ ಮುಂದಾದರು.

ಸದುದ್ದೇಶದ ಕರ್ತವ್ಯ ನಿರ್ವಹಣೆಗೆ ಪ್ರತಿಭಟನೆ ಎದುರಾದಾಗ ಪೊಲೀಸರ ಬಳಿ ಇದ್ದ ಆಯುಧಗಳು ಸೊಂಟದ ಪೌಚ್‌ನಿಂದ ಅಂಗೈಗೆ ಸ್ಥಳಾಂತರಗೊಂಡವು. ಈವರೆಗೆ ಉತ್ತರ ಪ್ರದೇಶದಲ್ಲಿ ಪೊಲೀಸರು ಮತ್ತು ರೌಡಿಗಳ ನಡುವೆ 8,472 ಎನ್‌ಕೌಂಟರ್‌ಗಳು ಘಟಿಸಿವೆ. ಸುಮಾರು 3,302 ಜನ ಗಾಯಗೊಂಡಿದ್ದರೆ, ಪೊಲೀಸರು ತಮ್ಮ ಜೀವರಕ್ಷಣೆಗಾಗಿ 146 ಮಂದಿಯನ್ನು ಕೊಂದಿದ್ದಾರೆ. ಇಂತಹ ಎನ್‌ಕೌಂಟರ್‌ಗಳಲ್ಲಿ 1,057 ಮಂದಿ ಪೊಲೀಸರು ಗಾಯಗೊಂಡಿದ್ದರೆ 13 ಜನ ನೌಕರರು ಸಹ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾರ್ವಜನಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ 18,225 ರೌಡಿಗಳನ್ನು ಐದೂವರೆ ವರ್ಷಗಳಲ್ಲಿ ಬಂಧಿಸಲಾಗಿದೆ. ಕೆಲವು ರೌಡಿಗಳಂತೂ ಜೀವಭಯದಿಂದ ತಾವೇ ನ್ಯಾಯಾಲಯದ ಮುಂದೆ ಶರಣಾದ ಉದಾಹರಣೆಗಳಿವೆ.

ಮುಷ್ಕರ ಅಥವಾ ಪ್ರತಿಭಟನೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ನಷ್ಟವನ್ನುಂಟುಮಾಡಿದರೆ ಆ ನಷ್ಟವನ್ನು ಕೃತ್ಯವೆಸಗಿದ ವ್ಯಕ್ತಿಯಿಂದಲೇ ವಸೂಲಿ ಮಾಡಬೇಕು ಎಂಬ ಕಾನೂನು ಜಾರಿಯಲ್ಲಿದೆ. ಈ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಂಡಿದ್ದು ಉತ್ತರಪ್ರದೇಶದಲ್ಲಿ ಮಾತ್ರ. ಯಾವುದೇ ಅಪರಾಧಿ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅಥವಾ ಒತ್ತುವರಿ ಮಾಡಿದ್ದರೆ ಅಥವಾ ಸಮಾಜಘಾತುಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದರೆ ಅಂತಹ ಕ್ರಿಮಿನಲ್‍ಗಳ ಮೇಲೆ ವಿಶೇಷ ನಿಗಾ ವಹಿಸಿ ಕಾನೂನಿನ ಮೂಲಕವೇ ಕ್ರಮ ಕೈಗೊಳ್ಳುವುದು ಹಾಗೂ ಒತ್ತುವರಿಯನ್ನು ತೆರವುಗೊಳಿಸುವುದು ಯೋಗಿ ಆಡಳಿತದ ಒಂದು ವಿಧಾನವಾಗಿದೆ. ಆದ್ದರಿಂದಲೇ ಯೋಗಿಯನ್ನು ಉತ್ತರ ಪ್ರದೇಶದಲ್ಲಿ ‘ಬುಲ್ಡೋಜರ್ ಬಾಬಾ’ ಎಂದು ಕರೆಯುತ್ತಾರೆ.

ತನ್ನ ರಾಜ್ಯದಲ್ಲಿ ವಾಸಿಸುವವರೆಲ್ಲರೂ ಈ ನೆಲದ ಕಾನೂನನ್ನು ಗೌರವಿಸಬೇಕು. ಹಾಗಾಗಿ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಪ್ರತಿನಿತ್ಯ ಹಾಡಬೇಕು ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಯಿತು. ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವ ವಿಡಿಯೊವನ್ನು ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಬೇಕು ಎಂಬ ಸುತ್ತೋಲೆ ಹೊರಡಿಸಲಾಗಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ವಿದೇಶಿ ಹೂಡಿಕೆಯ ಪ್ರಮಾಣ ಹೆಚ್ಚಿದೆ. ಮುಖ್ಯಮಂತ್ರಿಯಾಗಿ ಎಲ್ಲಾ ಇಲಾಖೆಗಳ ಆಡಳಿತಾತ್ಮಕ ಪ್ರಗತಿ ಪರಿಶೀಲನೆಯನ್ನು ಸ್ವತಃ ಯೋಗಿ ಆದಿತ್ಯನಾಥ ಅವರೇ ನಿರ್ವಹಿಸುತ್ತಿರುವುದರಿಂದ ಭ್ರಷ್ಟಾಚಾರ ಇಳಿಮುಖವಾಗಿದೆ.

ಗೋಹತ್ಯೆ ನಿಷೇಧವನ್ನು ಜಾರಿಗೆ ತಂದಿದ್ದಲ್ಲದೆ ಗೋವುಗಳ ಕಳ್ಳಸಾಗಾಣಿಕೆಗೆ ಸಂಬಂಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಕ್ರಮ ಕಸಾಯಿಖಾನೆಗಳಿಗೆ ಶಾಶ್ವತವಾಗಿ ಬೀಗ ಜಡಿಯಲಾಗಿದೆ. ಜನಸಂಖ್ಯೆ ನಿಯಂತ್ರಣ ನಿಯಮ ಪಾಲಿಸುವವರಿಗಷ್ಟೇ ಸರ್ಕಾರದ ಸೌಲಭ್ಯಗಳು ದೊರೆಯಲಿವೆ ಎಂಬ ಅತ್ಯಂತ ಗಂಭೀರತೀರ್ಮಾನವನ್ನು ಜಾರಿಗೊಳಿಸಲಾಗುತ್ತಿದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದರ ಮೂಲಕ ಪ್ರತಿಪಾದಿಸಿದ ಸಿದ್ಧಾಂತಗಳನ್ನು ಅವಕಾಶ ಸಿಕ್ಕಾಗ ಅನುಷ್ಠಾನಗೊಳಿಸುವ ಬದ್ಧತೆ ಯೋಗಿ ಅವರಿಂದ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಸರ್ಕಾರ ಮತ್ತು ಆಡಳಿತದ ಮನಸ್ಥಿತಿಯನ್ನು ಏಕಾಭಿಮುಖವಾಗಿ ಕೊಂಡೊಯ್ಯುವತ್ತ ಬೊಮ್ಮಾಯಿಯವರ ಪ್ರಯತ್ನ ಸಾಗಿದೆ. ಕರ್ನಾಟಕದಲ್ಲಿ ಈವರೆಗೆ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಆಡಳಿತ ನಡೆಸಿದ ಎರಡು ಅವಧಿಯಲ್ಲಿಯೂ ಸಣ್ಣ ಪ್ರಮಾಣದ ಕಿಚಡಿ ರೂಪದ ಮೈತ್ರಿ ಮನಸ್ಥಿತಿಯ ಸರ್ಕಾರವೇ ಅಸ್ತಿತ್ವಕ್ಕೆ ಬಂದಿದ್ದರಿಂದ ಕರ್ನಾಟಕದ ಅಧಿಕಾರಿಗಳ ಮನಸ್ಥಿತಿ ಹೊಸ ಆಯಾಮಕ್ಕೆ ಸಿದ್ಧಗೊಂಡಂತೆ ಕಾಣುವುದಿಲ್ಲ.

ಕನ್ನಡಿಗರು ಬಯಸುವ ಚುರುಕಿನ ಕಾರ್ಯನಿರ್ವಹಣೆಗೆ ಅಧಿಕಾರಿಗಳ ಮನಸ್ಥಿತಿಯನ್ನು ಸಿದ್ಧಗೊಳಿಸಬೇಕಾಗಿದೆ. ರಾಜಕೀಯ ಹಸ್ತಕ್ಷೇಪ ಹೊರತಾದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಅಧಿಕಾರಿಗಳಿಗೂ ಮುಕ್ತ ಸ್ವಾತಂತ್ರ್ಯವನ್ನು ನೀಡಬೇಕಾಗುತ್ತದೆ. ಮುಕ್ತ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರಿ ವರ್ಗವನ್ನುನಿಯಂತ್ರಿಸುವ ಶಿಸ್ತುಕ್ರಮದ ಅಂಕುಶ ಮತ್ತಷ್ಟು ಮೊನಚುಗೊಳ್ಳಬೇಕಾಗಿದೆ.

ಪಿ. ರಾಜೀವ್‌
ಪಿ. ರಾಜೀವ್‌

ಅಸ್ತಿತ್ವದಲ್ಲಿರುವ ಕಾನೂನುಗಳ ಸಮಯೋಚಿತ ಬಳಕೆ, ನ್ಯಾಯಾಲಯಗಳ ತೀರ್ಪುಗಳು, ಸಾರ್ವಜನಿಕರ ಮನಸ್ಥಿತಿ ಹಾಗೂ ಮಾಧ್ಯಮಗಳ ದೃಷ್ಟಿಕೋನ ಸಮನ್ವಯಗೊಳ್ಳಬೇಕಿದೆ. ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರಿಗೆ ಅವಶ್ಯಕವಾದ ಸಾಮಾಜಿಕ ಸುರಕ್ಷತೆಯನ್ನು ಒದಗಿಸಬೇಕು; ಕಾನೂನನ್ನು ಕೈಗೆತ್ತಿಕೊಳ್ಳುವವರು, ಸಾಮಾಜಿಕ ಶಾಂತಿಯನ್ನು ಕದಡುವವರು ಭಯಪಡುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ. ಸಮಾಜಘಾತುಕರನ್ನು ಕಾನೂನಿನ ಕುಣಿಕೆಗೆ ಒಳಪಡಿಸಬೇಕಿದೆ. ಇವೆಲ್ಲವುಗಳನ್ನು ಗಮನದಲ್ಲಿ ಇರಿಸಿಕೊಂಡೇ ಬೊಮ್ಮಾಯಿ ಅವರು, ಅಗತ್ಯಬಿದ್ದರೆ ಯೋಗಿ ಮಾದರಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ ಎಂಬುದಾಗಿ ವ್ಯಾಖ್ಯಾನಿಸಬಹುದು.

ಲೇಖಕ: ಕುಡಚಿ ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT