ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಚರ್ಚೆ- 4| ಜಾತಿ ಗಣತಿ ಇಲ್ಲದ ಸಾಮಾಜಿಕ ನ್ಯಾಯ ಅವೈಜ್ಞಾನಿಕ

Last Updated 1 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಮೀಸಲಾತಿ ಚುನಾವಣೆಯ ಆಮಿಷವಾಗಿ ಅಸ್ತ್ರವಾಗಿ ಬಳಕೆಯಾಗುವುದು ಕೆಟ್ಟ ಬೆಳವಣಿಗೆ. ಜಾತಿ ಜನಗಣತಿಯ ನಿಜಸ್ವರೂಪ ಗೊತ್ತಿಲ್ಲದೆ ಜನರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಮತ್ತು ಜಾತಿಗಳನ್ನು ಚುನಾವಣಾ ದಾಳಗಳಾಗಿ ಬಳಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೇ ಮಾರಕವಾದ ನಡೆ. ಮೀಸಲಾತಿ ಅವಮಾನಿತನ ಹಸಿವಿನ ಹಕ್ಕು. ಅದು ಉಂಡವನ ಹುಳಿದೇಗಲ್ಲ, ವಂಚಿತರಾದವರ ಅಸಂಘಟಿತರಾದವರ ಪರಮಾವಕಾಶ

----

ಎಸ್‌.ಜಿ ಸಿದ್ದರಾಮಯ್ಯ

ಜಾತಿ ವ್ಯವಸ್ಥೆಯಲ್ಲಿ ಹಸಿವು, ಅವಮಾನ, ಅನಕ್ಷರತೆಯಿಂದ ನರಳುತ್ತಿದ್ದ ಅಸಂಘಟಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿಯು ಅನಿವಾರ್ಯವೂ ಅಗತ್ಯವೂ ಆದ ಸಾಮಾಜಿಕ ನ್ಯಾಯದ ಕ್ರಮವಾಗಿದೆ.ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಸಂವಿಧಾನದ 15, 16, 17 ಮತ್ತು 340ನೇ ವಿಧಿಯಲ್ಲಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಈ ಹೊಸ ಅವಕಾಶಗಳಿಗೆ ತೆರೆದುಕೊಳ್ಳತೊಡಗಿದ ಅಕ್ಷರವಂಚಿತ ಸಮುದಾಯಗಳಿಗೆ ಮೀಸಲಾತಿಯು ಭರವಸೆಯ ಬಾಗಿಲನ್ನು ತೆರೆಯಿತು. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ, ನಿಗದಿಗೊಳಿಸಿದ ಅವಧಿಯಲ್ಲಿ ಅದರ ಅನುಷ್ಠಾನ ಸಾಧ್ಯವಾಗದೆ ಹೋದದ್ದು ಪ್ರಜಾಪ್ರಭುತ್ವದ ದುರಂತ ವ್ಯಂಗ್ಯವೇ ಸರಿ.

ಎಸ್‌.ಜಿ ಸಿದ್ದರಾಮಯ್ಯ
ಎಸ್‌.ಜಿ ಸಿದ್ದರಾಮಯ್ಯ

ಮೀಸಲಾತಿ ಜಾರಿಗೆ ಬಂದಂದಿನಿಂದಲೂ ದಕ್ಷತೆ, ಗುಣಾತ್ಮಕತೆಯ ಪ್ರಶ್ನೆಗಳನ್ನು ಮುಂದೊಡ್ಡುತ್ತಾ ಅದರ ಫಲಾನುಭವಿಗಳನ್ನು ಹೀಗಳೆಯುತ್ತಾ ಬಂದ ಶ್ರೇಷ್ಠತೆಯ ವ್ಯಸನಮೂಲಿಗಳು ತಮ್ಮ ಹೊಟ್ಟೆಯುರಿಯನ್ನು ಕಾರುತ್ತಲೇ ಬಂದಿದ್ದರು. ಅದರ ಪರಿಣಾಮವೆಂಬಂತೆ ಶೇಕಡ 10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದವರಿಗೆ ಇತ್ತೀಚೆಗೆ ನೀಡಲಾಯಿತು.ಆದರೆ ಮೀಸಲಾತಿಗೆ ವಿರುದ್ಧ ನಡೆ ಇದಾಗಿದೆ.

ಆರ್ಥಿಕವಾಗಿ ಹಿಂದುಳಿದಿರುವಿಕೆಯು ಮೀಸಲಾತಿಯನ್ನು ನೀಡಲು ಮಾನದಂಡವಲ್ಲ. ಬದಲಾಗಿ ಮೀಸಲಾತಿ ಒಂದು ಮಾನವ ಹಕ್ಕು, ಸಮಾನತೆಯ ಸಾಧನೆ, ವಂಚಿತರಿಗೆ ಒಂದು ಪ್ರಾತಿನಿಧ್ಯ, ಎಲ್ಲ ರೀತಿಯ ಪಕ್ಷಪಾತ ಹಾಗೂ ಸಾಮಾಜಿಕ ಬಹಿಷ್ಕಾರಗಳ ವಿರುದ್ಧದ ಒಂದು ಸಾಧನ. ಹೀಗಿರುವಾಗ ಮೀಸಲಾತಿಯ ನೀತಿ ನಿಯಮಗಳನ್ನು ಉಲ್ಲಂಘಿಸಿದಂತೆ ಶೇಕಡ ನಾಲ್ಕರಷ್ಟಿರುವ ಸಂಖ್ಯಾವರ್ಗದವರಿಗೆ ಶೇಕಡ ಹತ್ತರಷ್ಟು ಪ್ರಮಾಣದ ಮೀಸಲಾತಿ ಘೋಷಿಸಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡಿದಂತಿದೆ. ಸಾಮಾಜಿಕ ನ್ಯಾಯದ ಮೂಲತತ್ವಕ್ಕೇ ವಿರುದ್ಧವಾದ ನಡೆ ಇದಾಗಿದೆ. ಮೀಸಲಾತಿಯ ಚರಿತ್ರೆಯಲ್ಲಿ ಯಾವ ಸದ್ದು–ಗದ್ದಲವೂ ಇಲ್ಲದೆ ಜಾರಿಗೆ ಬಂದ ಮೀಸಲಾತಿಯ ಏಕೈಕ ಉದಾಹರಣೆ ಇದಾಗಿದೆ.

ತಮ್ಮ ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯ ಅನುಪಾತ ಪ್ರಮಾಣವನ್ನು ಹೆಚ್ಚಿಸಿ ಎಂದು ಅರ್ಹ ಜಾತಿಗಳು ಅಧಿಕಾರಯುತವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿವೆ. ಅವುಗಳ ಕೂಗು, ಆಳುವ ವರ್ಗದ ಜಾಣಕಿವುಡಿಗೆ ಬಲಿಯಾಗಿವೆ. ಸಮಾಜದ ಮುಖ್ಯವಾಹಿನಿಗೇ ಬಾರದಿರುವ ಹಲವು ಅಲೆಮಾರಿ ಸಮುದಾಯಗಳು ಊರು–ಸೂರುಗಳಿಲ್ಲದೆ ಇಂದಿಗೂ ವಿಳಾಸವಿಲ್ಲದವಾಗಿಯೇ ಇವೆ. ಇವುಗಳ ಕುಲಶಾಸ್ತ್ರೀಯ ಅಧ್ಯಯನ ಸರಿಯಾಗಿ ನಡೆದಿಲ್ಲ. ಆದ್ದರಿಂದ ಬಹುನಾಮಿಗಳಾಗಿರುವ ಕೆಲವು ಅಲೆಮಾರಿ ಸಮುದಾಯಗಳನ್ನು ಯಾವ ವರ್ಗಕ್ಕೆ ಸೇರಿಸಬೇಕು ಎಂಬ ಗೊಂದಲವಿದೆ. ಈ ಸಮುದಾಯಗಳಿಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ನಾಮವಾಚಕ ಬಳಕೆಯಲ್ಲಿವೆ. ಒಂದೇ ಸಮುದಾಯ ಕೆಲವು ಕಡೆ ಎಸ್‌ಸಿಗೆ ಸೇರಿದ್ದರೆ, ಇನ್ನೊಂದು ಕಡೆ ಎಸ್‌ಟಿಗೆ ಸೇರ್ಪಡೆಯಾಗಿದೆ.

ಇಂಥ ಸಮುದಾಯಗಳ ಹಕ್ಕಿನ ಹೋರಾಟ ನಡೆದೇ ಇದೆ. ಇವು ಅಸಂಘಟಿತ ಮತ್ತು ಶಿಕ್ಷಣವಂಚಿತ ಸಮುದಾಯಗಳು. ಹೀಗಿರುವಾಗ ಉದ್ಯೋಗದ ಮಾತು ದೂರವೇ ಉಳಿಯಿತು. ಈಗಲೂ ಹಾದಿಬೀದಿಗಳಲ್ಲಿ, ರಸ್ತೆ ಬದಿಗಳಲ್ಲಿ ಕೋಲೆಬಸವ, ಗೂಡೆಮಾರಮ್ಮನನ್ನು ಹೊತ್ತು ಬಿಕ್ಷೆ ಬೇಡುವ ಈ ಕೆಲವು ಸಮುದಾಯಗಳಿಗೆ ಯಾವ ಮಠವೂ ಇಲ್ಲ, ಜಗದ್ಗುರುವೂ ಇಲ್ಲ. ಹೀಗಾಗಿ ಇವರು ಆಟಕ್ಕೂ ಇಲ್ಲದ, ಲೆಕ್ಕಕ್ಕೂ ಇಲ್ಲದ ಕಿರು ಸಮುದಾಯಗಳಾಗಿ ಉಳಿದಿವೆ. ಇವರ ಕೂಗು ಅರಣ್ಯರೋದನವಾಗಿದೆ.

ಇಂಥ ಕೆಲವು ಅಲೆಮಾರಿ ಸಮುದಾಯಗಳ ನಾಮಸಾದೃಶ್ಯದ ಮೇಲುಜಾತಿಗಳ ಒಳಪಂಗಡದವರು ಇವರ ಊಟದ ತಟ್ಟೆಗೆ ಕೈಹಾಕಿದಂತೆ, ಇರುವ ಅಲ್ಪಸ್ವಲ್ಪ ಮೀಸಲಾತಿಯನ್ನೂ ಲಪಟಾಯಿಸುತ್ತಿದ್ದಾರೆ. ಈ ವಂಚನೆಯ ಹಗಲು ದರೋಡೆಯನ್ನು ಆಡಳಿತವು ಜಾಣ ಕುರುಡಿನಲ್ಲಿ ಕಡೆಗಣಿಸಿದೆ.

ಇಷ್ಟೆಲ್ಲ ಅಧ್ವಾನಗಳು ಮೀಸಲಾತಿಯಿಂದ ವಂಚಿತರಾಗಿರುವ ಅರ್ಹರ ಅಂಗಳದ ಸಮಸ್ಯೆಗಳಾಗಿವೆ. ಸಮಸ್ಯೆಗಳು ಹೀಗಿರುವಾಗ ಶೇಕಡ ಹತ್ತರ ಮೀಸಲಾತಿ ಘೋಷಣೆಯಾದ ಮೇಲೆ ತಮ್ಮ ದನಿ ಎತ್ತರಿಸಿದಂತೆ ಬಲಿಷ್ಠ ಜಾತಿಗಳು ತಮ್ಮ ತಮ್ಮ ಜಾತಿಗಳ ಜಗದ್ಗುರುಗಳನ್ನು ಬೀದಿಗಿಳಿಸಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಸೇರಿಸಬೇಕೆಂಬ ಅಹವಾಲುಗಳನ್ನು ಕೂಗುತ್ತಿವೆ. ಈ ಕೂಗು ಎಷ್ಟು ಜೋರಾಗಿದೆಯೆಂದರೆ ಕೆಲವು ಮಠಾಧೀಶರು ತಮ್ಮ ಆಗ್ರಹಕ್ಕೆ ದಿನಗಳ ಗಡುವು ಕೊಡ ತೊಡಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಇದು ಮತ ಗಳಿಕೆಯ ಗೇಮ್‌ ಪ್ಲೇ ಆಗಿಯೂ ಬ್ಲಾಕ್‌ಮೇಲ್‌ ತಂತ್ರವಾಗಿಯೂ ಬೆಳೆಯುತ್ತದೆ. ಮತ್ತೂ ಮುಂದುವರಿದಂತೆ ಕೆಲವು ಮಠಗಳು ನೇರವಾಗಿ ಜಾತಿಯ ಮತಗಳನ್ನು ತಾವು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡಗೊಡಗಿವೆ. ಧಾರ್ಮಿಕ, ಸಾಂಸ್ಕೃತಿಕ ಮುಖವಾಣಿಯಾಗಬೇಕಾಗಿದ್ದ ಮಠಗಳು ಮಠಾಧೀಶರು ರಾಜಕೀಯ ಪುಡಾರಿಗಳಂತೆ ಮಾತನಾಡತೊಡಗಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ.

ಶೇ 10ರ ಮೀಸಲಾತಿಗಾಗಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತರುವುದಕ್ಕೆ ಮುಂಚೆ ಸರ್ಕಾರ ಯಾವುದೇ ಅಧ್ಯಯನವನ್ನೂ ನಡೆಸಲಿಲ್ಲ. ಮಾಹಿತಿಯನ್ನೂಸಂಗ್ರಹಿಸಲಿಲ್ಲ. ಸಂಸತ್ತಿನ ಎಲ್ಲ ಸಂಪ್ರದಾಯಗಳನ್ನು ಬದಿಗೊತ್ತಿ ಒಂದೇ ದಿನದಲ್ಲಿ ಲೋಕಸಭೆಯಲ್ಲಿ ಮತ್ತೆ ಮರುದಿವಸ ರಾಜ್ಯಸಭೆಯಲ್ಲಿ ತಿದ್ದುಪಡಿಗಾಗಿ ಅಂಗೀಕರಿಸಲಾಯಿತು. ಮೂರನೆಯ ದಿನವೇ ರಾಷ್ಟ್ರಪತಿಯವರು ತಿದ್ದುಪಡಿಗೆ ಅಂಕಿತವನ್ನೂ ಹಾಕಿದರು. ಬಹುಪಾಲು ವಿರೋಧ ಪಕ್ಷಗಳು ಚರ್ಚೆಯನ್ನೇ ನಡೆಸಲಿಲ್ಲ. ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಸೂಚಿಸುವಲ್ಲಿ ವಿಫಲವಾದವು. ಹೀಗಾಗಿ, ಒಟ್ಟಾರೆ ಈ ತಿದ್ದುಪಡಿ ಪ್ರಕ್ರಿಯೆ ಸಂಸದೀಯ ಪದ್ಧತಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರ ಬೆಳವಣಿಗೆಯಲ್ಲ.

1931ರಲ್ಲಿ ಆದ ಜಾತಿವಾರು ಜನಗಣತಿ ಬಿಟ್ಟರೆ ದೇಶದಲ್ಲಿ ಮತ್ತೆ ಜಾತಿ ಜನಗಣತಿ ನಡೆದಿಲ್ಲ. ಮೀಸಲಾತಿಗೆ ಸಂಬಂಧಿಸಿದ ವಿಚಾರದಲ್ಲಿ ನಿಖರವಾದ ಜಾತಿ ಜನಗಣತಿಯ ಬಗ್ಗೆನ್ಯಾಯಾಲಯವೂ ಹಲವು ಬಾರಿ ಪ್ರಶ್ನೆಗಳನ್ನು ಎತ್ತಿದೆ. ಕರ್ನಾಟಕದಲ್ಲಿ 2005ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಆಗಿನ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಕೆಲವು ಕೋಟಿ ರೂಪಾಯಿಯನ್ನು ಜಾತಿ ಜನಗಣತಿಗಾ ಮೀಸಲಿರಿಸಿದ್ದರು. ಆದರೆ, ಆ ಬಜೆಟ್‌ನ ಘೋಷಣೆ ಬದಲಾದ ಸರ್ಕಾರದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. 2013ರಲ್ಲಿ ಅವರೇ ಮುಖ್ಯಮಂತ್ರಿಯಾದಾಗ ಮರಳಿ ಅದು ಜೀವ ಪಡೆದುಕೊಂಡಿತು. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ ಅದು ಕಾರ್ಯೋನ್ಮುಖವಾಯಿತು. ಸಮಿತಿಯು 2018ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ವರದಿ ಸಲ್ಲಿಕೆಯಾಗಿ ಇಷ್ಟು ವರ್ಷಗಳಾದರೂ ಅದನ್ನು ಚರ್ಚೆಗೆ ಎತ್ತಿಕೊಳ್ಳುವ, ಅನುಷ್ಠಾನಕ್ಕೆ ಮುಂದಾಗುವ ಪ್ರಯತ್ನವನ್ನು ಯಾವುದೇ ಸರ್ಕಾರ ಮಾಡಿಲ್ಲ. ವರದಿ ಪ್ರಕಟಗೊಂಡರೆ ವಾಸ್ತವ ಸ್ಥಿತಿ ಏನೆಂಬುದು ಗೊತ್ತಾಗುತ್ತದೆ. ಅದರಿಂದಾಗಿ ಸಾಮಾಜಿಕ ನ್ಯಾಯದ ವಿತರಣೆಗೆ ಒಂದು ಸ್ಪಷ್ಟ, ನಿಖರ, ನಿರ್ದಿಷ್ಟ ಲೆಕ್ಕ ಸಿಕ್ಕಂತಾಗುತ್ತದೆ. ಅದನ್ನು ಬಿಟ್ಟು ಕಲ್ಪಿತ ಪ್ರಮಾಣದಲ್ಲಿ ಜಾತಿಗಳು ರಾಜಕೀಯ ಲಾಭ ಪಡೆಯುತ್ತಿರುವುದು, ಪಡೆಯಲು ಹೋರಾಟಕ್ಕಿಳಿದಿರುವುದು ನಿಜವಾದ ವಂಚಿತ ಸಮುದಾಯಗಳಿಗೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಎಸಗುವ ಘೋರ ಅಪರಾಧವಾಗುತ್ತದೆ.

ಸದ್ಯದ ಸ್ಥಿತಿಯಲ್ಲಿ ದೇಶದ ಉದ್ಯೋಗ ಸೃಷ್ಟಿಯಲ್ಲಿ ಶೇ 2ರಷ್ಟು ಸರ್ಕಾರಿ ಕ್ಷೇತ್ರ, ಉಳಿದ ಶೇ 98ರಷ್ಟು ಖಾಸಗಿ ಕ್ಷೇತ್ರದ್ದು. ಮೀಸಲಾತಿ ಸರ್ಕಾರಿ ಕ್ಷೇತ್ರದ ಕೇವಲ ಶೇ 2ರಷ್ಟು ಪ್ರಮಾಣಕ್ಕೆ ಮಾತ್ರ ಅನ್ವಯಿಸುತ್ತದೆ. ಮಿಕ್ಕ ಶೇ 98ರಷ್ಟರ ಖಾಸಗಿ ವಲಯಕ್ಕೆ ಇದು ಅನ್ವಯಿಸುವುದಿಲ್ಲ. ಸೇನೆ, ನ್ಯಾಯಾಲಯಗಳು, ರಾಜ್ಯಸಭೆ ವಿಧಾನ ಪರಿಷತ್ತು, ಮಂತ್ರಿ ಮಂಡಳ, ನಿಗಮಗಳು, ಪ್ರಾಧಿಕಾರಗಳು, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿಯೂ ಮೀಸಲಾತಿಅನ್ವಯಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಮಂಜೂರಾದ ಲಕ್ಷಗಟ್ಟಲೆ ಉದ್ಯೋಗಗಳು ಖಾಲಿ ಬಿದ್ದಿವೆ. ಗುತ್ತಿಗೆ ಪದ್ಧತಿ ಹಾಗೂ ಹೊರಗುತ್ತಿಗೆ ಪದ್ಧತಿಯನ್ನು ಜಾರಿಗೆ ತರುವುದರ ಮುಖೇನ ಇರುವ ಮೀಸಲಾತಿಯ ಉಲ್ಲಂಘನೆ ಆಗುತ್ತಿದೆ, ಮೀಸಲಾತಿಯನ್ನು ವಂಚಿಸಲಾಗುತ್ತಿದೆ.

ಪ್ರತಿವರ್ಷ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಸುಮಾರು 7 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇವುಗಳ ಪೈಕಿ ಶೇಕಡ ಐವತ್ತ‌ರಷ್ಟು ಅಂದರೆ 3 ಲಕ್ಷ 50 ಸಾವಿರ ಉದ್ಯೋಗಗಳು ಸಾಮಾನ್ಯ ವರ್ಗದ ಪಾಲಿಗೆ ಬರುತ್ತವೆ. ಈ 3 ಲಕ್ಷ 50 ಸಾವಿರದಲ್ಲಿ ಶೇಕಡ 10ರಷ್ಟು ಅಂದರೆ 35 ಸಾವಿರ ಉದ್ಯೋಗ ಅವಕಾಶಗಳು ಸವರ್ಣೀಯ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಲಭ್ಯವಾಗುತ್ತವೆ. ಇವುಗಳನ್ನು ಇಡೀ ದೇಶದ ಜನರಿಗೆ ನೀಡಲಾಗುತ್ತದೆ. ಆದರೆ ದೇಶದಲ್ಲಿ ಇಂದು ಸುಮಾರು 7 ಕೋಟಿ ನಿರುದ್ಯೋಗಿಗಳು ಇದ್ದಾರೆ. ಪ್ರತಿ ತಿಂಗಳು ಸುಮಾರು 13 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬೇಕು. ಆದರೆ ಕಳೆದ 3 ವರ್ಷಗಳಲ್ಲಿ 2 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಕಳೆದುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಶೇ 10ರಷ್ಟು ಮೀಸಲಾತಿ ಸವರ್ಣೀಯ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಸಮಸ್ಯೆಗೆ ಪರಿಹಾರವೆನ್ನಬಹುದೇ?

ಮೀಸಲಾತಿ ಚುನಾವಣೆಯ ಆಮಿಷವಾಗಿ ಅಸ್ತ್ರವಾಗಿ ಬಳಕೆಯಾಗುವುದು ಕೆಟ್ಟ ಬೆಳವಣಿಗೆ. ಜಾತಿ ಜನಗಣತಿಯ ನಿಜಸ್ವರೂಪ ಗೊತ್ತಿಲ್ಲದೆ ಜನರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಮತ್ತು ಜಾತಿಗಳನ್ನು ಚುನಾವಣಾ ದಾಳಗಳಾಗಿ ಬಳಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೇ ಮಾರಕವಾದ ನಡೆ. ಮೀಸಲಾತಿ ಅವಮಾನಿತನ ಹಸಿವಿನ ಹಕ್ಕು. ಅದು ಉಂಡವನ ಹುಳಿದೇಗಲ್ಲ, ವಂಚಿತರಾದವರ ಅಸಂಘಟಿತರಾದವರ ಪರಮಾವಕಾಶ. ಮೇಲರಿಮೆಯ ಬಲಿಷ್ಠರ ಠೇಂಕಾರವಲ್ಲ.ಖಾಸಗಿ ಉದ್ಯೋಗ ಸಂಸ್ಥೆಗಳಲ್ಲಿ ಮೀಸಲಾತಿ ನೀತಿಯನ್ನು ಜಾರಿಗೊಳಿಸದೆ ಕೇವಲ ಶೇಕಡ 2ರಷ್ಟು ಉದ್ಯೋಗಗಳಲ್ಲಿ ಮೀಸಲಾತಿ ಹಂಚಿಕೆಯ ಮೂಲಕ ಸಾಮಾಜಿಕ ನ್ಯಾಯದ ಕನಸು ಕಾಣುವುದು ಅತಾರ್ಕಿಕವೂ ಅವೈಜ್ಞಾನಿಕವೂ ಆದುದಾಗಿದೆ.

ಲೇಖಕ: ಸಾಹಿತಿ, ಚಿಂತಕ

-----

‘ಹಿಂದುಳಿದವರು ಮೀಸಲಾತಿ ಕೇಳುವುದರಲ್ಲಿ ತಪ್ಪೇನು?’

ಸಿ.ಪುಟ್ಟರಂಗಶೆಟ್ಟಿ
ಸಿ.ಪುಟ್ಟರಂಗಶೆಟ್ಟಿ

ಮೀಸಲಾತಿ ಪ್ರಮಾಣ ಶೇ 50ರಷ್ಟನ್ನು ಮೀರಬಾರದು ಎಂಬುದು ಕಾನೂನು. ಆದರೆ ಸರ್ಕಾರಗಳು ಈಗ ಮೀಸಲಾತಿ ಹೆಚ್ಚಳ ಮಾಡುತ್ತಿವೆ. ಎಸ್‌ಸಿ, ಎಸ್‌ಟಿ ಪಟ್ಟಿಗೆ ಜಾತಿಗಳನ್ನು ಸೇರಿಸಲಾಗುತ್ತಿದೆ. ನಮ್ಮ ಉಪ್ಪಾರ ಸಮುದಾಯ ಕೂಡ ಎಸ್‌ಟಿ ಪಟ್ಟಿಗೆ ಸೇರ್ಪಡೆಗಾಗಿ ಬೇಡಿಕೆ ಮುಂದಿಟ್ಟಿದೆ. ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದ್ದು, ಅದರ ವರದಿ ಬಂದು ಸರ್ಕಾರ ಅಂಗೀಕರಿಸಬೇಕಿದೆ. ಆ ಬಳಿಕ ಹೋರಾಟಕ್ಕೆ ಹೊಸ ದಿಕ್ಕು ಸಿಗಲಿದೆ.

ಸದ್ಯ, ಉಪ್ಪಾರ ಸೇರಿದಂತೆ ಹಲವು ಜಾತಿಗಳು ಪ್ರವರ್ಗ–1ರ ಅಡಿಯಲ್ಲಿ ಬರುತ್ತವೆ. ನಮ್ಮ ಸಮುದಾಯವನ್ನೇ ತೆಗೆದುಕೊಂಡರೆ, ಉಪ್ಪಾರರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತುಂಬಾಹಿಂದೆ ಉಳಿದಿದ್ದಾರೆ. ಡಿ. ದೇವರಾಜ ಅರಸು ಕಾಲದಲ್ಲೇ ಉಪ್ಪಾರರು ಎಸ್‌ಸಿ/ಎಸ್‌ಟಿ ಪಟ್ಟಿಗೆ ಸೇರ್ಪಡೆಯಾಗಬೇಕಿತ್ತು. ಆದರೆ, ಆಗಿರಲಿಲ್ಲ. ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರ ಪ್ರವರ್ಗ–1ಕ್ಕೆ ಸೇರ್ಪಡೆಗೊಳಿಸಿತು. ಈಗ ಪ್ರಬಲ ಜಾತಿಗಳೆಲ್ಲ ಮೀಸಲಾತಿ ಪಟ್ಟಿಯಲ್ಲಿ ಸ್ಥಾನಮಾನ ಕೇಳುತ್ತಿರುವಾಗ ಹಿಂದುಳಿದ ವರ್ಗಗಳು ಕೇಳುವುದರಲ್ಲಿ ತಪ್ಪಿದೆಯೇ? ಉಪ್ಪಾರ ಸೇರಿದಂತೆ ಇನ್ನಿತರ ಹಿಂದುಳಿದ ಜಾತಿಗಳನ್ನು ಎಸ್‌ಸಿ/ಎಸ್‌ಟಿ ಪಟ್ಟಿಗೆ ಸೇರ್ಪಡೆಗೊಳಿಸಲು ಸಾಧ್ಯವಾಗದಿದ್ದರೆ, ಪ್ರವರ್ಗ–1ರ ಮೀಸಲಾತಿ ಪ್ರಮಾಣವನ್ನೇ ಹೆಚ್ಚಳ ಮಾಡಬೇಕು. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ.

- ಸಿ.ಪುಟ್ಟರಂಗಶೆಟ್ಟಿ,ಶಾಸಕ, ಚಾಮರಾಜನಗರ

----

‘ಎಸ್‌ಟಿಗೆ ಸೇರಿಸುವ ಬೇಡಿಕೆಗೆ ಅರ್ಥವಿದೆ’

ಬಿ.ಸುಬ್ರಹ್ಮಣ್ಯ
ಬಿ.ಸುಬ್ರಹ್ಮಣ್ಯ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಳುತ್ತಿರುವ ನಮ್ಮ ಬೇಡಿಕೆಯಲ್ಲಿ ಅರ್ಥವಿದೆ. ಕಲಬುರಗಿ, ಯಾದಗಿರಿ ಮತ್ತು ಕೊಡುಗು ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ಎಸ್‌ಟಿ ಪಟ್ಟಿಯಲ್ಲಿದ್ದಾರೆ. ಅದನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂಬುದಷ್ಟೇ ನಮ್ಮ ಒತ್ತಾಯ. ಕುರುಬ ಸಮುದಾಯವನ್ನು ಇಬ್ಭಾಗ ಮಾಡಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಕುರುಬ ಸಮುದಾಯ ಎಸ್‌ಟಿ ಪಟ್ಟಿಗೆ ಸೇರುವುದರಿಂದ ಈಗಾಗಲೇ ಆ ಪಟ್ಟಿಯಲ್ಲಿರುವ ಬೇರೆ ಸಮುದಾಯಗಳಿಗೆ ಯಾವುದೇ ಅನ್ಯಾಯ ಆಗುವುದಿಲ್ಲ. ಪ್ರವರ್ಗ 2ಎ ಅಡಿಯಲ್ಲಿ ಶೇ 18ರಷ್ಟು ಮೀಸಲಾತಿ ಪಡೆಯುತ್ತಿದ್ದೇವೆ. ಅಷ್ಟೇ ಪ್ರಮಾಣದ ಮೀಸಲಾತಿಯನ್ನು ಎಸ್‌ಟಿಗೆ ವರ್ಗಾಯಿಸಿಕೊಡಬೇಕು ಎಂಬುದು ನಮ್ಮ ಬೇಡಿಕೆ. ಕಾಂತರಾಜು ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಸಮೀಕ್ಷೆ ಸರ್ಕಾರದ ಕೈನಲ್ಲೇ ಇದೆ. ಅದರ ಆಧಾರದಲ್ಲಿ ಜಾತಿಗಳ ವರ್ಗೀಕರಣ ಮಾಡಲು ಅವಕಾಶ ಇದೆ. ಇದರ ನಡುವೆ ಕುಲಶಾಸ್ತ್ರೀಯ ಅಧ್ಯಯನವನ್ನೂ ನಡೆಸಲಾಗುತ್ತಿದೆ. ಇವೆಲ್ಲವನ್ನೂ ಪಡೆದು ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು. ಬಜೆಟ್ ಅಧಿವೇಶನದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಯಲಿದೆ.

- ಬಿ.ಸುಬ್ರಹ್ಮಣ್ಯ,ಅಧ್ಯಕ್ಷ, ಕರ್ನಾಟಕ ಪ್ರದೇಶ ಕುರುಬರ ಸಂಘ

---

‘ಶೋಷಿತರಿಗೆ ಮಾಡುವ ದ್ರೋಹ’

ವಿಖ್ಯಾತಾನಂದ ಸ್ವಾಮೀಜಿ
ವಿಖ್ಯಾತಾನಂದ ಸ್ವಾಮೀಜಿ

ಮೀಸಲಾತಿ ಎನ್ನುವುದು ಶೋಷಿತರು ಮತ್ತು ಕಟ್ಟಕಡೆಯ ಜನರನ್ನು ಮೇಲೆತ್ತಲು ಹಾಗೂ ಸಮಾನತೆ ತರಲು ಪ್ರಮುಖ ಪಾತ್ರ ವಹಿಸುತ್ತಿದೆ. ನಾಗರಿಕ ಸಮಾಜಕ್ಕೆ ಇದೊಂದು ದೊಡ್ಡ ಕೊಡುಗೆ. ಮುಂದುವರಿದವರು ಕೆಳಗೆ ಬಂದು ಮೀಸಲಾತಿ ಕೇಳುವುದು ಸರಿಯಲ್ಲ. ಇದು ಶೋಷಿತರಿಗೆ ಕೊಡುವ ತೊಂದರೆಯಾಗಿದೆ. ಹಿಂದಿನಿಂದಲೂ ಅಸಮಾನತೆಯಲ್ಲಿ ಸಿಲುಕಿದ್ದವರನ್ನು ಮುಖ್ಯ ವೇದಿಕೆಗೆ ತರುವ ಪ್ರಯತ್ನವನ್ನು ಅಸಮರ್ಥಗೊಳಿಸಿದಂತೆ ಆಗಲಿದೆ. ಸಮಾನತೆಯ ಕಡೆಗಿನ ಹೆಜ್ಜೆಯನ್ನು ಅವ್ಯವಸ್ಥೆಗೊಳಿಸುವುದು ಶೋಷಿತರಿಗೆ ಮಾಡುವ ದ್ರೋಹ.

- ವಿಖ್ಯಾತಾನಂದ ಸ್ವಾಮೀಜಿ,ಆರ್ಯ ಈಡಿಗ ಮಹಾ ಸಂಸ್ಥಾನ, ಸೋಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT