ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಕಾರ್ಯಸಾಧ್ಯವೇ? ಆತುರ ಪ್ರಯೋಗಕ್ಕೇ ಮಾರಕ

ಹೊಸ ಶಿಕ್ಷಣ ನೀತಿ 2020ರಲ್ಲಿನ ಕೆಲವು ಸದಾಶಯದ ಅಂಶಗಳಲ್ಲಿ ಭಾರತೀಯ ಭಾಷೆಗಳ ಬಗೆಗಿನ ಕಾಳಜಿಯೂ ಒಂದು. ಇದರ ಭಾಗವಾಗಿ, ಉನ್ನತ ಶಿಕ್ಷಣದಲ್ಲಿ ಮತ್ತಷ್ಟು ಪದವಿ ಕಾರ್ಯಕ್ರಮಗಳನ್ನು ಭಾರತೀಯ ಭಾಷೆಗಳಲ್ಲಿ ನಡೆಸುವ ಯೋಜನೆಯೂ ಇದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ 8 ಭಾಷೆಗಳಲ್ಲಿ ಎಂಜಿನಿಯರಿಂಗ್ ಪದವಿಯನ್ನು ನಡೆಸಲು ಎಐಸಿಟಿಐ ಅನುಮತಿ ನೀಡಿದೆ. ಈಗ ಅದಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರವು ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಈ ವರ್ಷದಿಂದಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ತಯಾರಿ ಆರಂಭಿಸಿದೆ.
ಆಗಲೇ ಪಠ್ಯಪುಸ್ತಕಗಳನ್ನು/ಪಠ್ಯಕ್ರಮವನ್ನು ಕನ್ನಡದಲ್ಲಿ ‘ಟ್ರಾನ್ಸ್‌ಫಾರ್ಮ್’ ಮಾಡಿದ್ದೇವೆ ಎಂದೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಹೇಳಿಕೆ ನೀಡಿದ್ದಾರೆ. ಇದನ್ನು ಮೊದಲಿಗೆ ಸ್ವಾಗತಿಸಬೇಕು. ಏಕೆಂದರೆ ಎಲ್ಲಾ ಶಿಕ್ಷಣವನ್ನೂ
ಕನ್ನಡದಲ್ಲಿ ನೀಡಬೇಕೆಂದು ಕನ್ನಡ ಚಿಂತಕರು, ಪ್ರೇಮಿಗಳು ಕಳೆದ ಒಂದು ಶತಮಾನದಿಂದ ಆಶಿಸಿದ್ದಾರೆ. ಶಿಕ್ಷಣ ತಜ್ಞರೂ ಕಲಿಯುವವರ ಭಾಷೆಯಲ್ಲಿಯೇ ಕಲಿಕೆಯೂ ಇದ್ದರೆ ಉತ್ತಮವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ ಈ ಕನ್ನಡ ಮಾಧ್ಯಮದ ಎಂಜಿನಿಯರಿಂಗ್ ತರಗತಿಗಳು ಸ್ವಾಗತಾರ್ಹ ಮತ್ತು ಒಂದು ಶತಮಾನದಿಂದ ಕನಸಾಗಿದ್ದ ಒಂದು ಅಂಶ ಈಡೇರುವ ಸಂದರ್ಭವೂ ಆಗಿದೆ. ಈ ಕಾರಣಗಳಿಗಾಗಿಯೇ ಈ ಪ್ರಯೋಗ, ಪ್ರಯೋಗವಾಗಿಯೇ
ಉಳಿಯದಿರಬೇಕಾದರೆ, ಅದರ ಜಾರಿಗೊಳಿಸುವಿಕೆಯನ್ನು ಬಹಳ ಎಚ್ಚರದಿಂದ, ಪೂರ್ವತಯಾರಿಯಿಂದ ಮತ್ತು ಎಲ್ಲರ ಆಕ್ಷೇಪ, ಅನುಮಾನಗಳನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲಿಸಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುವುದರ ಮೂಲಕ ಜಾರಿಗೊಳಿಸಬೇಕು. ಅನಗತ್ಯ ಆತುರವಾಗಲಿ, ನಾವೇ ಮೊದಲು ಮಾಡಿದ್ದು ಎಂಬ ಬಿರುದು ಪಡೆಯುವುದಕ್ಕಾಗಲಿ ಇದನ್ನು ಮಾಡಿದರೆ ಇದು ಯಶಸ್ವಿಯಾಗದೆ ಈ ಬ್ಯಾಚಿನ ವಿದ್ಯಾರ್ಥಿಗಳು ಪ್ರಯೋಗದ ಬಲಿಪಶುಗಳಾಗಬಹುದು ಎಂಬ ಎಚ್ಚರ ಅಗತ್ಯವಿದೆ.
ಈಗಾಗಲೇ ಈ ಕುರಿತ ಕೆಲವು ಪ್ರಶ್ನೆಗಳು ಎದ್ದಿವೆ. ಮೊದಲನೆಯದು, ಕನ್ನಡದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರದ ಕೆಲಸದ ಅವಕಾಶ ಕುರಿತಾದದ್ದು– ಇದು ಬಹಳ ದೊಡ್ಡ ಪ್ರಶ್ನೆ. ಪ್ರತಿಭಾವಂತರಾಗಿದ್ದೂ ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತನಾಡುವುದಕ್ಕೆ ಕಷ್ಟವಾಗುತ್ತದೆ ಅನ್ನುವ ಕಾರಣಕ್ಕೇ ಕೆಲಸ ಸಿಗದೇ ಇರುವಾಗ, ಪೂರ್ತಿಯಾಗಿ ಕನ್ನಡದಲ್ಲಿ ಕಲಿತ ಕಾರಣಕ್ಕೆ ಕೆಲಸ ಸಿಗದೇ ಹೋದರೆ ಈ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುವ ಸಾಧ್ಯತೆ ಇದೆ. ಇದಕ್ಕೆ ಪರಿಹಾರವಾಗಿ ಸರ್ಕಾರಿ ಉದ್ಯೋಗದಲ್ಲಿ ಇವರಿಗೆ ಮೀಸಲಾತಿ ನೀಡಬೇಕು ಎನ್ನುವ ಬೇಡಿಕೆ ಬಂದಿದೆ. ಆದರೆ ಸರ್ಕಾರಿ ಉದ್ಯೋಗಗಳು ಕಡಿಮೆಯಾಗುತ್ತಿರುವಾಗ, ಇರುವ ಉದ್ಯೋಗಗಳೂ ಹೊರಗುತ್ತಿಗೆಯ ಆಧಾರದಲ್ಲಿ ನಿರ್ವಹಿಸಲ್ಪಡುತ್ತಿರುವ ಸಂದರ್ಭದಲ್ಲಿ ಇದು ಎಷ್ಟರಮಟ್ಟಿಗೆ ಈ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ನನಗೆ ಸಂಶಯವಿದೆ. ಖಾಸಗಿ ರಂಗದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿರುವ ಕಾರಣದಿಂದ ಅದರಲ್ಲಿ ಮತ್ತು ಸ್ವಯಂ-ಉದ್ಯಮದಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸುವ ಬಗೆಯನ್ನು ವಿಷದವಾಗಿ ಚರ್ಚೆ ಮಾಡುವ ಅಗತ್ಯವಿದೆ.
ಮತ್ತೊಂದು ಮುಖ್ಯಪ್ರಶ್ನೆ ಕನ್ನಡದಲ್ಲಿ ಪಠ್ಯಕ್ರಮವನ್ನು ರೂಪಿಸುವ ವಿಧಾನವನ್ನು ಕುರಿತು. ಈ ಹಿಂದೆ ಈ ರೀತಿಯ ಪ್ರಯೋಗಗಳು ಆದಾಗ ರೂಪಿಸಿದ ಪರಿಭಾಷೆಗಳು ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಯೇ ಸುಲಭ ಎನ್ನುವಂತಿದ್ದವು. ಉದಾ. ವರ್ಟಿಬ್ರೇಟ್ಸ್ ಮತ್ತು ಇನ್ವರ್ಟಿಬ್ರೇಟ್ಸ್ ಎನ್ನುವುದನ್ನು ಕಶೇರುಕ ಮತ್ತು ಅಕಶೇರುಕ ಎಂದು ಭಾಷಾಂತರಿಸಿದ್ದು. ಒಂದು ಜ್ಞಾನಶಾಖೆಗೆ ಸೂಕ್ತ ಪರಿಭಾಷೆಯನ್ನು ರೂಪಿಸುವಾಗ ಹಲವಾರು ಅಂಶಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕಾಗುತ್ತದೆ. ಆತುರ ಸಲ್ಲದು, ಇದಕ್ಕೆ ವಿಷಯ ತಜ್ಞರ, ಶಿಕ್ಷಣ ತಜ್ಞರ, ಭಾಷಾ ತಜ್ಞರ ಮತ್ತು ಭಾಷಾಂತರ ತಜ್ಞರ ತಂಡ ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ.
ಈ ಯೋಜನೆ ಕನ್ನಡಮಾಧ್ಯಮದಲ್ಲಿ ಓದಿದ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎನ್ನುವ ವಾದವನ್ನು ಮುಂದಿಡಲಾಗುತ್ತಿದೆ. ಎಂಜಿನಿಯರಿಂಗ್ ಪದವಿ ಪಡೆಯಲು ಪಿ.ಯು.ಸಿ. (ಪ್ಲಸ್ ಟೂ) ಪಾಸಾಗಿರಬೇಕು. ಅದನ್ನು ಇಂಗ್ಲಿಷ್‌ನಲ್ಲಿ ಪಾಸು ಮಾಡಿರುತ್ತಾರೆ, ಇಲ್ಲಾ ಅದನ್ನು ಪಾಸುಮಾಡಲು ಸಾಧ್ಯವಾಗದೇ ಅಲ್ಲೇ ಉಳಿದಿರುತ್ತಾರೆ. ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನದ ವಿಷಯಗಳನ್ನು ಬೋಧಿಸಿ, ನಂತರ ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿ, ಎಂಜಿನಿಯರಿಂಗ್ ಪದವಿಯಲ್ಲಿ ಕನ್ನಡ ಮಾಧ್ಯಮದ ಬಗೆಗೆ ಯೋಚಿಸಬಹುದಾಗಿತ್ತು. ಈಗ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹತ್ತನೇ ತರಗತಿಯವರಿಗೆ ಕನ್ನಡದಲ್ಲಿ ಕಲಿತು, ಪಿಯುಸಿಯಲ್ಲಿ ವಿಜ್ಞಾನವನ್ನು ಇಂಗ್ಲಿಷ್‌ನಲ್ಲಿ ಕಲಿತು, ಸಿ.ಇ.ಟಿ.ಯನ್ನು ಇಂಗ್ಲಿಷ್‌ನಲ್ಲಿ ಬರೆದು ಪಾಸುಮಾಡಿ, ಕನ್ನಡ ಮಾಧ್ಯಮದ ಎಂಜಿನಿಯರಿಂಗ್ ಪದವಿಗೆ ಬರುತ್ತಾರೆ ಎನ್ನುವುದು ಗೊಂದಲಮಯವಾಗಿ ಕಾಣುತ್ತದೆ. ಕನ್ನಡದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಒಗ್ಗಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಇದು ಮತ್ತೆ ಗೊಂದಲಕ್ಕೆ ಕೆಡವಬಹುದು. ಮೊದಲಿಗೆ ಪಿಯುಸಿ ಮತ್ತು ಸಿ.ಇ.ಟಿ.ಯನ್ನು ಕನ್ನಡದಲ್ಲಿ ನಡೆಸುವ ಯೋಚನೆ ಮಾಡಬೇಕಾಗಿತ್ತು. ಅದರ ಮೂಲಕ ಹಾದುಬಂದವರಿಗೆ ಎಂಜಿನಿಯರಿಂಗ್ ಪದವಿಯನ್ನು ಕನ್ನಡದಲ್ಲಿ ಬೋಧಿಸಬಹುದಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ವಿಷಯ, ಸಂಗತಿಗಳನ್ನು ಕುರಿತು ಸಂಶೋಧನೆ, ಆವಿಷ್ಕಾರಗಳು ಸತತವಾಗಿ ನಡೆಯುತ್ತಿರುತ್ತವೆ. ಇವುಗಳನ್ನು ಕನ್ನಡಕ್ಕೆ ತರುವ ಕೆಲಸ ಸತತವಾಗಿ ನಡೆಯಬೇಕಾಗುತ್ತದೆ. ಅದಕ್ಕೆ, ತನ್ನ ಆರಂಭದಿಂದ 1956ರವರೆಗೆ ಎಲ್ಲಾ ಶಿಕ್ಷಣವನ್ನು ದೇಶೀಭಾಷೆಯಲ್ಲಿ ನೀಡಿದ್ದ ಉಸ್ಮಾನಿಯ ವಿಶ್ವವಿದ್ಯಾಲಯದ ಉದಾಹರಣೆ ನೋಡಬಹುದು. ಇಲ್ಲಿ ನಾಲ್ಕು ದಶಕಗಳ ಕಾಲ ಎಂಜಿನಿಯಂರಿಗ್, ವೈದ್ಯಕೀಯ ಆದಿಯಾಗಿ ಎಲ್ಲವನ್ನೂ ಉರ್ದುವಿನಲ್ಲಿ ಕಲಿಸಲಾಗುತ್ತಿತ್ತು. ಇದಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಭಾಷಾಂತರದ ಒಂದು ಸಂಸ್ಥೆಯನ್ನೇ ರೂಪಿಸಲಾಗಿತ್ತು. ಆ ರೀತಿಯಾಗಿ ವಿಷಯ ತಜ್ಞರೂ, ಭಾಷಾಂತರಕಾರರೂ ಆದ ಒಂದು ಪಡೆಯನ್ನು ಪ್ರತಿ ಜ್ಞಾನಶಾಖೆಯಲ್ಲಿ ರೂಪಿಸದೇ ಹೋದರೆ, ಇದು ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಬೇಕಾದ ಪ್ರಯೋಗವಾಗಬಹುದು.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಇಂದು ಶಿಕ್ಷಣ ತಜ್ಞರು ದ್ವಿಭಾಷಿಕ ಮತ್ತು ಬಹುಭಾಷಿಕ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಮುದ್ರಣ ಕೇಂದ್ರಿತ ಶಿಕ್ಷಣದಿಂದ ಡಿಜಿಟಲ್ ಕೇಂದ್ರಿತ ಶಿಕ್ಷಣದ ಕಡೆಗೆ ನಾವು ಹೊರಳುತ್ತಿರುವುದರಿಂದ ಇದು ಸುಲಭಸಾಧ್ಯವೂ ಹೌದು. ಮೊದಲಿಗೆ ಪ್ರಯೋಗ ರೂಪದಲ್ಲಿ ಸ್ವ-ಇಚ್ಛೆಯಿಂದ ಮುಂದೆ ಬಂದವರಿಗೆ ಇಂಗ್ಲಿಷ್ ಮತ್ತು ಕನ್ನಡ
ದ್ವಿಭಾಷಿಕ ಮಾಧ್ಯಮದ ಶಿಕ್ಷಣವನ್ನು ನೀಡಿ ನಂತರ ನಿಧಾನಕ್ಕೆ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕನ್ನಡ ಮಾಧ್ಯಮಕ್ಕೆ ಹೊರಳುವ ಅವಕಾಶವನ್ನೂ ಪರಿಶೋಧಿಸಿದರೆ ಒಳಿತು.
ಒಟ್ಟಿನಲ್ಲಿ ಇದು ಸ್ವಾಗತಾರ್ಹವಾದ ಹೆಜ್ಜೆಯಾದರೂ, ಅತಿ ಆತ್ಮವಿಶ್ವಾಸದಿಂದ ಎದೆತಟ್ಟಿಕೊಳ್ಳುವ, ಬೆನ್ನು ತಟ್ಟುವ ಸಂದರ್ಭವಲ್ಲ; ಬದಲಿಗೆ ಬಹುಎಚ್ಚರದಿಂದ ಮೈಯೆಲ್ಲಾ ಕಣ್ಣಾಗಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮತ್ತು ಅದರೊಂದಿಗೆ ಕನ್ನಡದ ಭವಿಷ್ಯವನ್ನೂ ರೂಪಿಸುವ ಕೆಲಸ. ಏಕೆಂದರೆ ಅತಿಯಾದ ಆತ್ಮವಿಶ್ವಾಸದ ಬಲಿಪಶುಗಳಾಗುವವರು ವಿದ್ಯಾರ್ಥಿಗಳು, ಅವರಿಗೆ
ಅನ್ಯಾಯ ಆಗಬಾರದು; ಅವರ ಕೆಲಸ/ಅವಕಾಶಗಳಿಗೆ, ಜೀವನಕ್ಕೆ ನಾಳೆ ತೊಂದರೆಯಾಗಬಾರದು.
ಲೇಖಕ: ಪ್ರಾಧ್ಯಾಪಕ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದರಾಬಾದ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.