ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಪರೀಕ್ಷೆ ಪದ್ಧತಿ ಕೈಬಿಟ್ಟರೆ ಶಿಕ್ಷಣ ಗುಣಮಟ್ಟ ಏರಿಕೆ

10 ಮತ್ತು 12ನೇ ತರಗತಿಗೆ ಅಂತಿಮ ಪರೀಕ್ಷೆಗಳನ್ನು ನಡೆಸುವುದು ಅನಿವಾರ್ಯವೇ?
Last Updated 28 ಮೇ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ಪರೀಕ್ಷಾ ಮಂಡಳಿಗಳಿಗೆ ಸಾಧ್ಯವಾಗಿಲ್ಲ. ಎಲ್ಲ ತರಗತಿಗಳಲ್ಲಿಯೂ ಪರೀಕ್ಷೆಗಳನ್ನು ಕೈಬಿಡಲು ಇದು ಸರಿಯಾದ ಸಮಯ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ ಮೌಲ್ಯಮಾಪನ ಸುಧಾರಣೆಗಳನ್ನು ಜಾರಿಗೆ ತರಲು ಇದು ಸಕಾಲ.

***

12ನೇ ತರಗತಿಯ ಪರೀಕ್ಷೆಗಳನ್ನು ನಡೆಸಲು ಬಯಸುತ್ತೇವೆ ಎಂದು ಬಹುತೇಕ ರಾಜ್ಯಗಳು ಕೇಂದ್ರದ ಶಿಕ್ಷಣ ಸಚಿವಾಲಯಕ್ಕೆ ಹೇಳಿರುವುದು ಪರೀಕ್ಷಾ ಕೇಂದ್ರಿತ ಭಾರತ ಸಮಾಜದ ಈ ವಾರದ ಪ್ರಮುಖ ಸುದ್ದಿ. ಈ ಪರೀಕ್ಷೆಗಳ ಉದ್ದೇಶ ಏನು, 10 ಅಥವಾ 12ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಕ್ಕೆ ನಾವು ಇಷ್ಟೊಂದು ಉತ್ಸುಕರಾಗಿರುವುದು ಏಕೆ ಎಂಬ ಪ್ರಶ್ನೆಗಳನ್ನು ಯಾರೊಬ್ಬರೂ ಕೇಳುತ್ತಿಲ್ಲ. ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಗಳ ನಿರರ್ಥಕತೆಯನ್ನು ಸಾಂಕ್ರಾಮಿಕವು ಬಯಲಿಗೆ ತಂದಿದೆ. ಹತ್ತನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಮತ್ತು ಅದರಿಂದಾಗಿ ಗಣನೀಯವಾದ ಯಾವ ಪರಿಣಾಮವೂ ಗೋಚರಿಸಿಲ್ಲ. 12ನೇ ತರಗತಿ ಪರೀಕ್ಷೆಗಳ ವಿಚಾರದಲ್ಲಿಯೂ ಇದುವೇ ನಿಜ. ಅಧಿಕಾರಶಾಹಿ, ಕೋಚಿಂಗ್‌ ಉದ್ಯಮ, ಪರೀಕ್ಷಾ ಸಿದ್ಧತೆಯ ಪುಸ್ತಕ ಪ್ರಕಟಿಸುವ ಪ್ರಕಾಶಕರು, ಹೆತ್ತವರ ನಿರೀಕ್ಷೆ ಮತ್ತು ಅಸುರಕ್ಷತೆಯನ್ನು ಬಳಸಿಕೊಂಡು ತ್ವರಿತವಾಗಿ ಹಣ ಮಾಡಲು ಬಯಸುವ ನಿರ್ಲಜ್ಜ ಉದ್ಯಮಿಗಳನ್ನು ಒಳಗೊಂಡ ಸ್ಥಾಪಿತ ಹಿತಾಸಕ್ತಿಗಳ ಹಿತಾಸಕ್ತಿಯನ್ನು ಮಾತ್ರ ಪರೀಕ್ಷೆಗಳು ಈಡೇರಿಸುತ್ತವೆ.

ಅಂತಿಮ ಪರೀಕ್ಷೆಗಳನ್ನು ನಡೆಸುವ ಪದ್ಧತಿಯನ್ನು ಭಾರತದಲ್ಲಿ ಟೀಕಿಸಲು ಆರಂಭಿಸಿ ಒಂದು ಶತಮಾನಕ್ಕೂ ಹೆಚ್ಚಿನ ಅವಧಿ ಸಂದಿದೆ.‘ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿಯು ಶಿಕ್ಷಣಕ್ಕೆ ಶಾಪವಾಗಿ ಪರಿಣಮಿಸಿದೆ’ ಎಂದು ಝಾಕಿರ್‌ ಹುಸೇನ್‌ ವರದಿಯು 80 ವರ್ಷಕ್ಕೂ ಹಿಂದೆಯೇ ಹೇಳಿತ್ತು. ಅದಕ್ಕೂ 25 ವರ್ಷ ಹಿಂದೆ, ಲಾರ್ಡ್‌ ಕರ್ಜನ್‌ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪರೀಕ್ಷೆಯ ಪ್ರಭಾವವು ಎಷ್ಟು ಅತಿಯಾಗಿದೆ ಎಂದರೆ, ಇಡೀ ಶಿಕ್ಷಣ ವ್ಯವಸ್ಥೆಯು ಪರೀಕ್ಷೆಗಾಗಿಯೇ ಸನ್ನದ್ಧವಾಗಿ ಇರುವಂತಿದೆ; ಆದರೆ, ಇದಕ್ಕೆ ವ್ಯತಿರಿಕ್ತವಾದ ಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆ ಇರಬೇಕಿತ್ತು ಎಂದು ಕರ್ಜನ್‌ ಹೇಳಿದ್ದರು. ಕಳೆದ ಒಂದೂಕಾಲು ಶತಮಾನದ ಅವಧಿಯಲ್ಲಿ ಇಂತಹ ಹಲವು ವರದಿಗಳು ಬಂದಿವೆ. ಹಾಗಿದ್ದರೂ ಒಂದು ಸಮಾಜವಾಗಿ ನಾವು ಪರೀಕ್ಷೆಯ ಗೀಳಿಗೆ ಒಳಗಾಗಿರುವುದು ದುರದೃಷ್ಟಕರ.

ಪರೀಕ್ಷಾ ಕೇಂದ್ರಿತ ಶಿಕ್ಷಣ ವ್ಯವಸ್ಥೆಯು, ಸಮಾಜ ಕಟ್ಟುವ ಕಾಯಕದಲ್ಲಿ ಕೊಡುಗೆ ನೀಡಲು ಸಾಧ್ಯವಾಗುವಂತೆ ನಮ್ಮ ಮಕ್ಕಳನ್ನು ಸಜ್ಜಾಗಿಸುವುದಿಲ್ಲ; ಸ್ವತಂತ್ರ ಚಿಂತಕರಾಗುವ ರೀತಿಯಲ್ಲಿ ಅವರು ಬೆಳೆಯಲು ಬೇಕಾದ ಆತ್ಮವಿಶ್ವಾಸ ನೀಡುತ್ತಿಲ್ಲ; ಅತ್ಯಂತ ಅಸ್ಥಿರವಾದ 21ನೇ ಶತಮಾನದತ್ತ ಸಾಗುವಾಗ ಇದು ಅತ್ಯಂತ ನಿರ್ಣಾಯಕವಾಗಿ ಬೇಕಾಗಿರುವ ಸಾಮರ್ಥ್ಯ. ಒಂದು ಸಮಾಜವಾಗಿ ನಾವು ಇದನ್ನು ಗ್ರಹಿಸಿಕೊಳ್ಳುವುದು ಬಹಳ ಮುಖ್ಯ. ಸಂಬಂಧಪಟ್ಟ ಎಲ್ಲರಲ್ಲಿಯೂ ಇರುವ ತಿಳಿವಳಿಕೆಯ ಕೊರತೆಯು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರಿತವಾಗಿಯೂ ಸಮಾಜವನ್ನು ಪರೀಕ್ಷಾ ಗೀಳಿನದ್ದಾಗಿಯೂ ಉಳಿಸಿದೆ. ಈಗ, ‘ಪರೀಕ್ಷೆಗಾಗಿ ಬೋಧನೆ’ ಮಾತ್ರ ನಮ್ಮ ಶಾಲೆಗಳಲ್ಲಿ ನಡೆಯುತ್ತಿದೆ. ಮಂಡಳಿಗಳು ನಡೆಸುವ ಪರೀಕ್ಷೆಗಳನ್ನು ಹೇಗೆ ವಿನ್ಯಾಸ ಮಾಡಲಾಗಿದೆ ಎಂದರೆ, 60 ಅಥವಾ 90 ನಿಮಿಷ ಅವಧಿಯ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳು ಉತ್ತೀರ್ಣ ಅಥವಾ ಅನುತ್ತೀರ್ಣ ಎಂಬ ಹಣೆಪಟ್ಟಿ ಕಟ್ಟುವುದಕ್ಕಷ್ಟೇ ಇದು ಸೀಮಿತ. ಶೈಕ್ಷಣಿಕವಾಗಿ ಉಪಯುಕ್ತವಾದ ಯಾವುದೇ ಅಂಶವನ್ನು ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ನೀಡುವುದಿಲ್ಲ. ಇದು ಅಸಂಗತ ಅನ್ನಿಸುವುದಿಲ್ಲವೇ? ಅದಕ್ಕಿಂತ ಹೆಚ್ಚಾಗಿ ತಮ್ಮ ಬಾಲ್ಯದ ಶೇ 90ಕ್ಕೂ ಹೆಚ್ಚಿನ ಅವಧಿಯನ್ನು ಶಾಲೆಯಲ್ಲಿ ಕಳೆಯುವ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ ಅಲ್ಲವೇ? ಪರ್ಯಾಯಗಳತ್ತ ಯೋಚನೆ ಮಾಡಲು ಇದು ಸಕಾಲ.

ಒಂದು ಕ್ಷಣ ತಡೆದು ನಿಂತು, ನಮ್ಮ ಮಂಡಳಿಗಳು ನಡೆಸುವ ಪರೀಕ್ಷೆಗಳ ಶೈಕ್ಷಣಿಕ ಉದ್ದೇಶ ಏನು ಎಂಬ ಬಗ್ಗೆ ಯೋಚಿಸೋಣ. ನಮ್ಮ ಮಕ್ಕಳಿಗೆ ಭಾಷಾ ಜ್ಞಾನ, ಗಣಿತ, ವೈಜ್ಞಾನಿಕ ವಿಧಾನ, ಮಾನವಿಕ ವಿಷಯಗಳು ಮತ್ತು ನಾಗರಿಕ ಮೌಲ್ಯಗಳ ಅರಿವು ನೀಡುವುದು ಶಾಲಾ ಶಿಕ್ಷಣದ ಉದ್ದೇಶ. ಅವರ ತಾರ್ಕಿಕ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರನ್ನಾಗಿಸುವುದು ಶಿಕ್ಷಣದ ಅಂತಿಮ ಉದ್ದೇಶ. ಮಂಡಳಿಯು ನಡೆಸುವ ಪರೀಕ್ಷಾ ವಿಧಾನದಲ್ಲಿ ಇವುಗಳಲ್ಲಿನ ಹೆಚ್ಚಿನ ಗುಣಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ; ಇವುಗಳನ್ನು ಶಾಲಾ ಶಿಕ್ಷಣದ ಅವಧಿಯಲ್ಲಿ ನಿರಂತರವಾಗಿ ವಿಶ್ಲೇಷಿಸಬೇಕೇ ವಿನಹ ಹತ್ತು ಅಥವಾ 12ನೇ ತರಗತಿಯ ಕೊನೆಯಲ್ಲಿ ಅಲ್ಲ. ಹಾಗೆ ನೋಡಿದರೆ, ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪರೀಕ್ಷೆಗೆ ಒಳಪಡಿಸಬಹುದಾದ ವಿಷಯಗಳೂ ಅಲ್ಲ ಇವು. ಶಿಕ್ಷಣ ಹಕ್ಕು ಕಾಯ್ದೆ 2009ಕ್ಕೆ ದೂರದೃಷ್ಟಿ ಇಲ್ಲದ ನಮ್ಮ ನೀತಿ ನಿರೂಪಕರು ತಿದ್ದುಪಡಿ ತರುವ ಮೊದಲು ಈ ಅಂಶಗಳು ಅದರಲ್ಲಿ ಇದ್ದವು.

ಮಕ್ಕಳನ್ನು ಉತ್ತೀರ್ಣಗೊಳಿಸಲು ಅಂತಿಮ ಪರೀಕ್ಷೆಯೆಂಬುದು ಇರಬಾರದು. ಬದಲಿಗೆ, ಎಂಟನೇ ತರಗತಿಯವರೆಗೆ ನಿರಂತರವಾದ ಮತ್ತು ಸಮಗ್ರವಾದ ಮೌಲ್ಯಮಾಪನ ನಡೆಯುತ್ತಿರಬೇಕು. ಶಾಲಾ ಅವಧಿಯ ಕೊನೆಗೂ ಇದೇ ಅನ್ವಯ ಆಗುತ್ತದೆ. ಮಕ್ಕಳು ನಿರ್ದಿಷ್ಟ ಸಾಮರ್ಥ್ಯಗಳನ್ನು ರೂಢಿಸಿಕೊಂಡಿದ್ದಾರೆಯೇ ಎಂಬುದನ್ನು ಪ್ರಮಾಣೀಕರಿಸುವ ಅಗತ್ಯ ಇದೆ. ಆದರೆ, ಶಾಲಾ ಶಿಕ್ಷಣ ಪಡೆದ ಮಕ್ಕಳು ಈ ಸಾಮರ್ಥ್ಯಗಳನ್ನು ರೂಢಿಸಿಕೊಂಡಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು 15 ವರ್ಷದ ಶಾಲಾ ಶಿಕ್ಷಣದ ಕೊನೆಯಲ್ಲಿ ಕಬ್ಬಿಣದ ಗೇಟುಗಳ ಒಳಗಿನ ಪರೀಕ್ಷಾ ಕೇಂದ್ರದಲ್ಲಿ 60 ಅಥವಾ 90 ನಿಮಿಷ ನಡೆಸುವ ಪರೀಕ್ಷೆ ಮಾತ್ರ ಮಾರ್ಗವೇ? ಖಂಡಿತಾ ಅಲ್ಲ. ಮಂಡಳಿಗಳು ನಡೆಸುವ ಪರೀಕ್ಷೆಯ ವಿಧಾನವನ್ನೇ ಮುಂದುವರಿಸಲು ಕಾರಣ ನಾವು ಸೋಮಾರಿಗಳಾಗಿರುವುದು ಮತ್ತು ಉತ್ತಮ ಪರ್ಯಾಯಗಳನ್ನು ಕಂಡುಕೊಳ್ಳಲು ನಮಗೆ ಸಾಧ್ಯವಾಗದೇ ಇರುವುದು.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ಪರೀಕ್ಷಾ ಮಂಡಳಿಗಳಿಗೆ ಸಾಧ್ಯವಾಗಿಲ್ಲ. ಎಲ್ಲ ತರಗತಿಗಳಲ್ಲಿಯೂ ಪರೀಕ್ಷೆಗಳನ್ನು ಕೈಬಿಡಲು ಇದು ಸರಿಯಾದ ಸಮಯ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ ಮೌಲ್ಯಮಾಪನ ಸುಧಾರಣೆಗಳನ್ನು ಜಾರಿಗೆ ತರಲು ಇದು ಸಕಾಲ. ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸು ಅನ್ವಯ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಸ್ಥಾಪಿಸಿದೆ. ಪರೀಕ್ಷಾ ಮಂಡಳಿಗಳ ಪರೀಕ್ಷೆಗಳಿಗೆ ಪರ್ಯಾಯವಾಗಿ ನಿಯಮಿತ ಮತ್ತು ಬೇಡಿಕೆಗೆ ಅನುಸಾರವಾದ ಮೌಲ್ಯಮಾಪನ ವ್ಯವಸ್ಥೆಯನ್ನು ಆರಂಭಿಸುವ ದಿಸೆಯಲ್ಲಿ ಎನ್‌ಟಿಎ ಕೆಲಸ ಶುರು ಮಾಡಬೇಕು.

ಹೃಷಿಕೇಶ್‌ ಬಿ.ಎಸ್‌.
ಹೃಷಿಕೇಶ್‌ ಬಿ.ಎಸ್‌.

ಲೇಖಕ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT