ಸೋಮವಾರ, ಅಕ್ಟೋಬರ್ 25, 2021
25 °C

ಪರಭಾಷೆ ಪದ ಬಳಕೆಗೆ ಮಡಿವಂತಿಕೆ ಬೇಡ: ಸಂವಾದದಲ್ಲಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲದಮರ (ಪ್ರಜಾವಾಣಿ ಕ್ಲಬ್‌ ಹೌಸ್‌): ‘ಬೇರೆ ಭಾಷೆಯ ಪದಗಳನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಕನ್ನಡವನ್ನು ಮತ್ತಷ್ಟು ಸಮೃದ್ಧಗೊಳಿಸುವ ಕೆಲಸವಾಗಬೇಕು. ಪರಭಾಷೆಯ ಬಳಕೆ ವಿರುದ್ಧ ಆವೇಶ ಬೇಡ; ಸಮಾವೇಶ ಬೇಕು’

ಇಂತಹ ಒಕ್ಕೊರಲಿನ ಅಭಿಪ್ರಾಯಕ್ಕೆ ‘ಪ್ರಜಾವಾಣಿ’ ಕ್ಲಬ್‌ ಹೌಸ್‌ನ ‘ಆಲದಮರ’ ವೇದಿಕೆಯಾಯಿತು. ‘ಕಂಗ್ಲಿಷ್‌, ಇಂಗ್ಲಿಷ್‌ ಮತ್ತು ಕನ್ನಡ’ ಕುರಿತು ನಡೆದ ಚರ್ಚೆಯಲ್ಲಿ ನೂರಾರು ಕೇಳುಗರು ಭಾಗಿಯಾದರು. ಕನ್ನಡ ಭಾಷೆಯ ಬೆಳವಣಿಗೆಗೆ ಕಂಗ್ಲಿಷ್‌ ಅನಿವಾರ್ಯವಾಗಿದೆ. ಪರಭಾಷೆಗಳಿಂದ ಪದಗಳನ್ನು ಎರವಲು ಪಡೆಯುವಾಗ ಬಳಕೆಗೆ ಮಡಿವಂತಿಕೆ ಬೇಡ ಎನ್ನುವ ಅಭಿಪ್ರಾಯ ಪಡಿಮೂಡಿತು.

ಹಾಸ್ಯ ಲೇಖಕ ಎಂ.ಎಸ್‌. ನರಸಿಂಹಮೂರ್ತಿ ಮಾತನಾಡಿ, ‘ಪರಭಾಷೆಯ ಶಬ್ದಗಳನ್ನು ಯಥಾವತ್ತಾಗಿ ಬಳಸಿಕೊಳ್ಳಬೇಕು. ಅವುಗಳ ಅನುವಾದಕ್ಕೆ ಮುಂದಾದರೆ ಜನರು ಸ್ವೀಕರಿಸುವುದು ಕಡಿಮೆ. ವಿಶ್ವದ ಹಲವು ಭಾಷೆಯ ಪದಗಳನ್ನು ಆರ್ಕ್‌ಫರ್ಡ್‌ ಪದಕೋಶ ಯಥಾವತ್ತಾಗಿ ಸ್ವೀಕರಿಸಿದೆ. ಹಾಗಾಗಿಯೇ, ಅದರಲ್ಲಿ 1.45 ಲಕ್ಷ ಪದಗಳು ಸೇರ್ಪಡೆಯಾಗಿವೆ. ಇತ್ತೀಚೆಗೆ ಭಾರತೀಯರ ಗುಲಾಬ್‌ ಜಾಮೂನು, ಚಮಚಾ ಪದ ಕೂಡ ಸೇರ್ಪಡೆಯಾಗಿವೆ. ಅಂತಹ ಬೆಳವಣಿಗೆ ಕನ್ನಡ ಪದಕೋಶದಲ್ಲಿಯೂ ಆಗಬೇಕು’ ಎಂದು ಪ್ರತಿಪಾದಿಸಿದರು.

ಇದಕ್ಕೆ ಚುಟುಕು ಕವಿ ಎಚ್‌. ಡುಂಡಿರಾಜ್‌ ಕೂಡ ಧ್ವನಿಗೂಡಿಸಿದರು. ‘ಕನ್ನಡದಲ್ಲಿ ಇಂಗ್ಲಿಷ್‌ ಹಿತಮಿತವಾಗಿದ್ದರೆ ತೊಂದರೆಯಿಲ್ಲ. ಕ್ರಿಯಾಪದವನ್ನು ಕನ್ನಡದಲ್ಲಿ ಬಳಸಿ ಉಳಿದದ್ದನ್ನು ಇಂಗ್ಲಿಷ್‌ನಲ್ಲಿ ಬಳಸುವ ಪ್ರವೃತ್ತಿ ಕನ್ನಡಕ್ಕೆ ಅಪಾಯಕಾರಿ. ಕನ್ನಡ ಕಲಿಕೆ, ಬಳಕೆಗೆ ಕೀಳರಿಮೆ ಸಲ್ಲದು. ಮಕ್ಕಳಿಗೆ ಕನ್ನಡ ಕಲಿಕೆಯಲ್ಲಿ ಹಿಂದಡಿ ಇಡಬಾರದು’ ಎಂದು ಸಲಹೆ ನೀಡಿದರು.

ಹಾಸ್ಯ ಭಾಷಣಕಾರ ರಿಚರ್ಡ್‌ ಲೂಯಿಸ್‌ ಕಂಗ್ಲಿಷ್‌ ಪದ ಬಳಕೆಯು ನಗಿಸುವುದಕ್ಕೆ ಹೇಗೆ ಪೂರಕವಾಗಿದೆ ಎಂಬುದನ್ನು ಹಾಸ್ಯ ಚಟಾಕಿಗಳ ಮೂಲಕ ಪ್ರಸ್ತುತಪಡಿಸಿದರು. ‘ಪರಭಾಷಿಕರಿಗೆ ಕನ್ನಡ ಕಲಿಯುವ ಆಸಕ್ತಿ ಇರುತ್ತದೆ. ಅದಕ್ಕೆ ನಾವು ನೀರೆರದು ಪೋಷಿಸಬೇಕು. ಅವರನ್ನು ಅಪಹಾಸ್ಯ ಮಾಡಬಾರದು. ಇದು ಕನ್ನಡದ ಬೆಳವಣಿಗೆಗೂ ಮಾರಕ’ ಎಂದು ಅಭಿಪ್ರಾಯಪಟ್ಟರು.

‘ಕಂಗ್ಲಿಷ್‌ ಬಳಕೆ ಕನ್ನಡದ ಬೆಳವಣಿಗೆಗೆ ಪೂರಕವಾಗಿಯೇ ಇದೆ. ಅಡ್ಡಿಯಾಗುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದ ಶಾಯರಿ ಕವಿ ಅಸಾದುಲ್ಲಾ ಬೇಗ್‌, ಶಾಯಿರಿಗಳ ಮೂಲಕ ಕೇಳುಗರನ್ನು ರಂಜಿಸಿದರು.

ನಗೆ ಭಾಷಣಕಾರ, ಶಿಕ್ಷಕರಾದ ಮನು ಹಂದಾಡಿ, ‘ಪ್ರಸ್ತುತ ಪರಭಾಷೆಯ ಹಲವು ಪದಗಳು ದಿನಬಳಕೆಯ ಪದಗಳಾಗಿವೆ. ಅವುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ವ್ಯಾವಹಾರಿಕ ಬಳಕೆಗೆ ಮುಂದಾದಾಗ ಗೊಂದಲ ತಲೆದೋರುತ್ತದೆ. ಬೇಕರಿ, ಬ್ರೆಡ್‌, ಟ್ರ್ಯಾಕ್ಟರ್‌ ಮುಂತಾದ ಪದಗಳು ಕನ್ನಡದೊಂದಿಗೆ ಬೆರೆತುಹೋಗಿವೆ. ಅವುಗಳನ್ನು ಯಥಾವತ್ತಾಗಿಯೇ ಬಳಸಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು