ಗುರುವಾರ , ಜುಲೈ 29, 2021
24 °C
ಅಂಧಕಾರ ಕವಿದ ಮನಃಸ್ಥಿತಿಯನ್ನು ದಿಟ್ಟವಾಗಿ ಎದುರಿಸಲು, ಆಲ್ಬರ್ಟ್‌ ಕಮುವಿನಂತಹ ಲೇಖಕರ ಪುಸ್ತಕಗಳು ನಮ್ಮ ನೆರವಿಗೆ ಬರುತ್ತವೆ

ಸಾಯಲು ಕಾರಣವುಂಟು, ಆದರೆ...?

ಪ್ರೊ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

ಬೆಳ್ಳಿಪರದೆಯ ಮೇಲೆ ಸೌಂದರ್ಯವರ್ಧಕಗಳ ಪ್ರಭಾವದಿಂದ ಭವ್ಯವಾಗಿ ಕಾಣುವ ನಟ–ನಟಿಯರು ನಮ್ಮ ಯೌವನವನ್ನು ನಿರೂಪಿಸಿದಂತಹ ‘ದೇವತೆ’ಗಳು. ನಮ್ಮ ಬದುಕಿನ ಕನಸುಗಳನ್ನು ಬಿತ್ತಿದಂತಹ ಮತ್ತು ನಮ್ಮ ಭವಿಷ್ಯದ ರೂವಾರಿಗಳಾದ ಈ ದೇವತೆಗಳ ನಿಜಜೀವನ ಹೇಗಿರಬಹುದು ಎಂಬ ಪ್ರಶ್ನೆ ನಮ್ಮ ಕಲ್ಪನೆಯನ್ನು ಸದಾ ಆವರಿಸಿರುತ್ತದೆ. ಮಧ್ಯಮ ವರ್ಗದವರ ಕಣ್ಣಿಗೆ ಸಿನಿತಾರೆಯರು ಕಾಣಿಸುವುದು ಪುಷ್ಪಕವಿಮಾನದ ಮೇಲೆ ತೇಲುತ್ತಿರುವಂತೆಯೇ ಹೊರತು, ಅವರಿಗೂ ನಮಗಿರುವಂತೆ ದುಃಖ– ದುಮ್ಮಾನಗಳಿವೆ ಎಂಬುದು ನಮ್ಮ ಅರಿವಿಗೇ ಬರುವುದಿಲ್ಲ. ಹಾಗೆಯೇ, ಅವರ ನೆನಪು ನಮ್ಮ ಸ್ಮೃತಿ ಪಟಲದಲ್ಲಿ ಉಳಿಯುವುದು ಅವರು ನಿರ್ವಹಿಸಿದ ಪಾತ್ರಗಳ ಮೂಲಕ ಮಾತ್ರ.

ಸೋಜಿಗವೆಂದರೆ, ನಮಗೆ ಬದುಕು ಬಹಳ ಕಹಿಯಾಗಿ ಕಾಣಿಸುವುದು ನಮ್ಮ ಬದುಕಿನ ಕಷ್ಟಕಾರ್ಪಣ್ಯಗಳ ಕಾರಣದಿಂದಾಗಿ ಅಲ್ಲ. ಬದಲಾಗಿ, ನಾವು ಆರಾಧಿಸುವ ಹೀರೊಗಳ ಬದುಕಿನಲ್ಲಿ ಏರುಪೇರಾದಾಗ! ಈ ವರ್ಷ ಕಂಡ ದುರಂತಗಳಲ್ಲಿ ಕೊರೊನಾ ವೈರಾಣು ತಂದೊಡ್ಡಿರುವ ಸಂಕಷ್ಟ ಒಂದಾದರೆ, ಕೆಲವು ನಟರ ಹಠಾತ್ ಸಾವುಗಳು ಮತ್ತೊಂದು ಬಗೆಯವು. ಕೆಲವು ಸಾವುಗಳು ಕಾಯಿಲೆಯಿಂದಾದರೆ, ಆತ್ಮಹತ್ಯೆಯಿಂದ ಕೂಡ ಒಂದು ಸಾವು ಸಂಭವಿಸಿದೆ. ಸಾಮಾಜಿಕ ಜಾಲತಾಣವೆಲ್ಲ ಇತ್ತೀಚೆಗೆ ಸುಶಾಂತ್ ಸಿಂಗ್ ರಜಪೂತ್‌ ಅವರಿಗೆ ಅರ್ಪಿಸಿದ ಶ್ರದ್ಧಾಂಜಲಿಗಳಿಂದ ತುಂಬಿಹೋಯಿತು. ಈ ನಟ ವಿದ್ಯಾವಂತ, ಅನುಕೂಲಸ್ಥ ಕುಟುಂಬದವ ಮತ್ತು ಭವಿಷ್ಯದಲ್ಲಿ ಮೇರುನಟನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದವ. ಹೀಗಿದ್ದರೂ ಆತ್ಮಹತ್ಯೆಗೆ ಶರಣಾಗಿದ್ದೇಕೆ?

ಈ ಯುವನಟನ ಆತ್ಮಹತ್ಯೆಗೆ ಕಾರಣ ಹುಡುಕು ವುದು ಕಷ್ಟ. ಆದರೆ ಬದುಕಿನಲ್ಲಿ ಮೇಲ್ನೋಟಕ್ಕೆ ಅಷ್ಟೇನೂ ವೈಫಲ್ಯಗಳನ್ನು ಕಂಡಿರದಂಥ ಯುವಕರು, ಹಲವಾರು ಕಾರಣಗಳಿಂದ ಅಂತರಾಳದಲ್ಲಿ ತೀವ್ರವಾದ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾದ ಅನೇಕ ನಿದರ್ಶನಗಳಿವೆ. ಈ ದಿಸೆಯಲ್ಲಿ, ಆತ್ಮಹತ್ಯೆಯನ್ನು ತಾತ್ವಿಕ ಆಯಾಮದಿಂದ ಅವಲೋಕಿಸಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಯುರೋಪಿನ ಸಾಹಿತಿ ಆಲ್ಬರ್ಟ್ ಕಮುವಿನ ಪ್ರಮುಖ ಕೃತಿಗಳಲ್ಲೊಂದಾದ ‘ಮಿಥ್‌ ಆಫ್ ಸಿಸಿಫಸ್’ ನಮ್ಮ ಪ್ರಶ್ನೆಗಳಿಗೆ ಇಂದಿಗೂ ಪ್ರಸ್ತುತ ಎನಿಸುವ ಉತ್ತರಗಳನ್ನು ಕೊಡುತ್ತದೆ.

ಈ ಪುಸ್ತಕವು ಆತ್ಮಹತ್ಯೆಯನ್ನು ಒಂದು ತಾತ್ವಿಕ ಸಮಸ್ಯೆ ಎಂದು ಶುರುವಿನಲ್ಲಿಯೇ ಪ್ರತಿಪಾದಿಸುತ್ತದೆ. ಕಮುವಿನ ಪ್ರಕಾರ, ನಮ್ಮನ್ನು ಅತಿಯಾಗಿ ಕಾಡುವುದು, ಈ ಜಗತ್ತು ಅರ್ಥಹೀನವಾಗಿದೆ ಎಂಬ ಭಾವನೆ. ಬದುಕು ಅರ್ಥಹೀನವಿರಬಹುದು ಅಥವಾ ಬದುಕಿನ ಅರ್ಥ ನಮಗೆ ನಿಲುಕದಿರಬಹುದು. ಒಟ್ಟಿನಲ್ಲಿ ಬದುಕಿನ ಅರ್ಥದ ಹುಡುಕಾಟ ನಮ್ಮೆಲ್ಲರ ಜೀವನಗಳ ಪ್ರಮುಖ ಉದ್ದೇಶ.

ಆತ್ಮಹತ್ಯೆಯನ್ನು ಅರ್ಥೈಸುವ ತನ್ನ ಪ್ರಯತ್ನಕ್ಕೆ ಕಮು, ಗ್ರೀಕ್ ಪುರಾಣ ಕಥೆಗಳಲ್ಲಿ ಕಂಡುಬರುವ ಸಿಸಿಫಸ್‌ನನ್ನು ಉಲ್ಲೇಖಿಸುತ್ತಾನೆ.

ದೇವರಿಂದ ಶಾಪಗ್ರಸ್ತನಾದ ಸಿಸಿಫಸ್ ಬಂಡೆಯೊಂದನ್ನು ಬೆಟ್ಟವೊಂದರ ತುದಿಗೆ ಉರುಳಿಸಿಕೊಂಡು ಹೋಗುವ ಕೆಲಸ ಮಾಡಬೇಕಿರುತ್ತದೆ. ಆದರೆ, ಆ ಕೆಲಸಕ್ಕೆ ಕೊನೆಯಾಗಲೀ ಅರ್ಥವಾಗಲೀ ಇರುವುದಿಲ್ಲ. ಏಕೆಂದರೆ ಆ ಬಂಡೆ ಪ್ರತೀ ಬಾರಿ ತುದಿ ತಲುಪಿದಾಗಲೂ ಮತ್ತೆ ಉರುಳಿ ಮೊದಲಿದ್ದ ಜಾಗಕ್ಕೆ ಬಂದು ತಟಸ್ಥವಾಗುತ್ತದೆ. ಸಿಸಿಫಸ್ ಈ ಕೆಲಸವನ್ನು ಬೇಸರವಿಲ್ಲದೆ ನಿರಂತರವಾಗಿ ಮಾಡುತ್ತಾನೆ ಎನ್ನುವ ಕಮು, ಅವನ ಕತೆಯನ್ನು ನಮ್ಮ ಆಧುನಿಕ ಜಗತ್ತಿನ ಜೀವನವನ್ನು ಅರ್ಥೈಸಲು ರೂಪಕವನ್ನಾಗಿ ಬಳಸುತ್ತಾನೆ.

ತನ್ನ ಕೆಲಸ ಅತ್ಯಂತ ಕೀಳಾದುದು ಮತ್ತು ಅವಮಾನಕರವಾದದ್ದು ಎಂಬ ಅರಿವಿದ್ದರೂ ಸಿಸಿಫಸ್ ನೋವನ್ನು ಎದುರಿಸುತ್ತಾನೆಯೇ ವಿನಾ ಅದಕ್ಕೆ ಶರಣಾಗಿ ಪಲಾಯನ ಮಾಡುವುದಿಲ್ಲ. ಸಿಸಿಫಸ್ ಆನಂದವಾಗಿದ್ದಾನೆ, ಏಕೆಂದರೆ ಅವನ ಗಮನ ಬರೀ ಅವನ ಕೆಲಸದ ಮೇಲಿರುತ್ತದೆ, ಅದಕ್ಕೊಂದು ಅರ್ಥವನ್ನು ಕಲ್ಪಿಸುವುದರಲ್ಲಿ ಅಲ್ಲ. ಇದನ್ನು ಕಮು ‘ದಿಟ್ಟತನ’ ಎನ್ನುತ್ತಾನೆ. ನಾನೊಬ್ಬ ಪರಕೀಯ ಮತ್ತು ನನ್ನ ಬದುಕೇ ನನ್ನನ್ನು ತಿರಸ್ಕರಿಸಿದೆ ಎನ್ನುವ ಖಿನ್ನತೆ ಕಾಡತೊಡಗಿದಾಗ, ಆತ್ಮಹತ್ಯೆಯೇ ಇರುವ ಏಕೈಕ ಆಯ್ಕೆ ಎಂದು ಅನ್ನಿಸಿದರೂ ಮನುಷ್ಯನ ನಿಜವಾದ ಪ್ರಯತ್ನ ಇರುವುದು ‘ಇರುವುದರಲ್ಲಿ’ಯೇ ವಿನಾ ‘ಹೋಗುವುದರಲ್ಲಿ’ ಅಲ್ಲ ಎನ್ನುತ್ತಾನೆ ಕಮು.

ಆತ ಹೇಳುವಂತೆ, ನಮ್ಮ ಯೋಜನೆಗಳಿಗೆ ತಕ್ಕಂತೆ ನಮಗೆ ಫಲಿತಾಂಶಗಳು ದೊರೆಯದೇ ಹೋದಾಗ ನಿರಾಶೆ, ದುಃಖ ಮತ್ತು ಹತಾಶೆ ಒಟ್ಟಿಗೆ ನಮ್ಮನ್ನು ಆಕ್ರಮಿಸುತ್ತವೆ. ನಾವು ಈ ಪರಿಸ್ಥಿತಿಯಲ್ಲಿ, ನಮ್ಮವರು ಎಂಬುವರು ಕಾಣದಷ್ಟು ಕುರುಡಾಗಿರುತ್ತೇವೆ. ಆತ್ಮಹತ್ಯೆಯೊಂದೇ ಪರಿಹಾರ ಎನಿಸುತ್ತದೆ.

ಇಂತಹ ಪರಿಸ್ಥಿತಿಗಳನ್ನು ಎದುರಿಸಲು ನಮಗೆ ಕಮುವಿನಂತಹ ಲೇಖಕರ ಪುಸ್ತಕಗಳು ನೆರವಿಗೆ ಬರುತ್ತವೆ. ನಮ್ಮ ಬದುಕಿನ ಅರ್ಥಹೀನತೆಯ ನ್ನಾಗಲೀ ಅಥವಾ ವೈಫಲ್ಯವನ್ನಾಗಲೀ ಉತ್ಪ್ರೇಕ್ಷಿತವಾಗಿ ನೋಡದೆ ದಿಟ್ಟತನದಿಂದ ‘ಇರುವುದನ್ನು’ ನಮ್ಮ ಆದ್ಯತೆ ಮಾಡಿಕೊಳ್ಳಬೇಕು. ‘ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು’ ಎಂಬ ಡಿವಿಜಿ ಅವರ ಪದಗಳು ನಮ್ಮ ನೆನಪಲ್ಲಿ ಇರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು