ಸೋಮವಾರ, ಆಗಸ್ಟ್ 19, 2019
24 °C

ಉನ್ನಾವ್‌ ಸಂತ್ರಸ್ತೆಗೆ ನ್ಯಾಯ ಸಿಗಲಿ ಪ್ರಭಾವಿಗಳ ‘ಆಟ’ ನಡೆಯದಿರಲಿ

Published:
Updated:
Prajavani

ಪ್ರವಾಹದ ವಿರುದ್ಧದ ಈಜು ಎನ್ನುವುದು ಸ್ಪಷ್ಟವಾಗಿ ಗೊತ್ತಿದ್ದರೂ ರಾಜಕೀಯವಾಗಿ ಪ್ರಭಾವಿಯಾದ, ಹಣ ಮತ್ತು ತೋಳ್ಬಲದಿಂದ ಬಲಾಢ್ಯನಾದ ಆರೋಪಿಯ ವಿರುದ್ಧ ಧ್ವನಿ ಎತ್ತಿದ್ದ ಉನ್ನಾವ್‌ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯು ಸಂಚರಿಸುತ್ತಿದ್ದ ಕಾರಿಗೆ ಟ್ರಕ್‌ ಗುದ್ದಿಸಿದ ಪರಿಣಾಮವಾಗಿ, ಆಕೆ ಗಂಭೀರವಾಗಿ ಗಾಯಗೊಂಡು ಸಾವು– ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಆ ಅಮಾಯಕ ಯುವತಿ ಅನುಭವಿಸಿದ ಯಾತನೆ ಎಂತಹದ್ದು ಎಂಬುದನ್ನು ನಾವೊಂದು ಕ್ಷಣ ಅವಳ ಸ್ಥಾನದಲ್ಲಿಯೇ ನಿಂತು ಯೋಚಿಸಬೇಕು. ತನ್ನ ಮೇಲೆ ನಡೆದ ಅತ್ಯಾಚಾರದಂತಹ ಕೃತ್ಯವು ಯಾವುದೇ ಮಹಿಳೆಗೆ ಬದುಕಿನುದ್ದಕ್ಕೂ ನರಕಯಾತನೆಯಾಗಿ ಕಾಡುವಂಥದ್ದು. ಅಂತಹ ಸನ್ನಿವೇಶದಲ್ಲಿ ತನ್ನ ಮೇಲೆ ಬಲಾತ್ಕಾರ ಮಾಡಿದ ವ್ಯಕ್ತಿಯ ವಿರುದ್ಧ ಆಕೆ ದೂರು ನೀಡಿದರೆ ಉತ್ತರಪ್ರದೇಶದ ಪೊಲೀಸರು ವರ್ಷಗಟ್ಟಲೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಏಕೆಂದರೆ, ಅವಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಹೊತ್ತಿರುವುದು ನಾಲ್ಕನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಕುಲದೀಪ್‌ ಸಿಂಗ್‌ ಸೆಂಗರ್‌ ಎಂಬ ಪ್ರಭಾವಿ ರಾಜಕಾರಣಿ. ಸುಳ್ಳು ಮೊಕದ್ದಮೆಗಳ ಆಧಾರದ ಮೇಲೆ ಪೊಲೀಸರು ಸಂತ್ರಸ್ತೆಯ ತಂದೆಯನ್ನೇ ಬಂಧಿಸಿದರು. ಪೊಲೀಸ್‌ ಕಸ್ಟಡಿಯಲ್ಲಿ ಇರುವಾಗಲೇ ಅವರು ಸಾವನ್ನಪ್ಪಿದರು. ಆರೋಪಿಯ ಸಹೋದರ ನೀಡಿದ ದೂರಿನ ಮೇಲೆ ಸಂತ್ರಸ್ತೆಯ ಚಿಕ್ಕಪ್ಪನನ್ನೂ ಬಂಧಿಸಲಾಯಿತು. ಕೊನೆಗೆ, ಚಿಕ್ಕಪ್ಪನ ಭೇಟಿಗಾಗಿ ರಾಯಬರೇಲಿಗೆ ಇಬ್ಬರು ಚಿಕ್ಕಮ್ಮಂದಿರು ಹಾಗೂ ವಕೀಲನ ಜತೆ ಹೋಗುವಾಗ ನಂಬರ್‌ ಪ್ಲೇಟ್‌ ಮರೆಮಾಚಿದ್ದ ಲಾರಿಯೊಂದು ಬಂದು ಅವರಿದ್ದ ಕಾರಿಗೆ ಗುದ್ದಿತು. ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದ ಆ ಯುವತಿಯ ಇಬ್ಬರೂ ಚಿಕ್ಕಮ್ಮಂದಿರು ಅಪಘಾತದಲ್ಲಿ ಅಸುನೀಗಿದರು. ಆಕೆಯ ವಕೀಲ ಕೂಡ ಗಂಭೀರವಾಗಿ ಗಾಯಗೊಂಡರು. ಕಾನೂನು–ಸುವ್ಯವಸ್ಥೆ ಪಾಲನೆ ಬಗ್ಗೆ ಹಲವು ಗಂಭೀರ ಪ್ರಶ್ನೆಗಳಿರುವ  ಉತ್ತರಪ್ರದೇಶದಂತಹ ರಾಜ್ಯದಲ್ಲಿ ನಡೆದಿರುವ ಈ ಘಟನೆಗಳು ಕೇವಲ ಕಾಕತಾಳೀಯ ಎಂಬುದನ್ನು ಹೇಗೆ ನಂಬುವುದು?

ಆರೋಪಿ ಸೆಂಗರ್‌ ಏನೋ ಈಗ ಜೈಲು ಪಾಲಾಗಿರಬಹುದು. ಆದರೆ, ಸರ್ಕಾರ ಹಾಗೂ ಬಿಜೆಪಿಯಲ್ಲಿ ಅವರ ಪ್ರಭಾವ ಹೇಗಿದೆ ಎಂದರೆ, ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಸಂಸದರೊಬ್ಬರು ಜೈಲಿಗೆ ಹೋಗಿ ಅವರಿಗೆ ಕೃತಜ್ಞತೆ ಅರ್ಪಿಸಿ ಬಂದರು! 2018ರ ಏಪ್ರಿಲ್‌ನಲ್ಲೇ ಸೆಂಗರ್‌ ಅವರನ್ನು ಅಮಾನತು ಮಾಡಲಾಗಿತ್ತು ಎಂದು ಕಾರು ‘ಅಪಘಾತ’ದ ಸುದ್ದಿ ಬಂದ ಬಳಿಕ ಬಿಜೆಪಿ ಹೇಳಿತ್ತು. ಆದರೆ, ಪಕ್ಷದ ಈ ‍ಹೇಳಿಕೆಯನ್ನು ಸಮರ್ಥಿಸುವಂತಹ ಯಾವ ದಾಖಲೆಯೂ ಇಲ್ಲ. ಮಾಧ್ಯಮಗಳು ಉನ್ನಾವ್‌ ಪ್ರಕರಣದ ಮೇಲೆ ಬೆಳಕು ಚೆಲ್ಲಲು ಆರಂಭಿಸಿದ ಮೇಲೆ ಮುಜುಗರಕ್ಕೆ ಒಳಗಾದ ಬಿಜೆಪಿ ಕೊನೆಗೂ ಸೆಂಗರ್‌ ಅವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ಪ್ರಕಟಿಸಿತು. ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಸಂತ್ರಸ್ತೆಯು ಕಳೆದ ತಿಂಗಳೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಅಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಳು. ಉತ್ತರಪ್ರದೇಶದ ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಆರೋಪಿಯ ಬೆಂಬಲಕ್ಕೆ ನಿಂತಿರುವ ಸಂದೇಹವನ್ನು ಮೂಡಿಸುತ್ತಿವೆ ಇದುವರೆಗಿನ ಘಟನಾವಳಿಗಳು. ಇಡೀ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಷ್ಟೇ ಇಲ್ಲ, ಅದಕ್ಕಿಂತ ಹೆಚ್ಚಾಗಿ, ಸಹಜ ನ್ಯಾಯ ಮತ್ತು ಮಾನವೀಯತೆಯ ಪ್ರಶ್ನೆಯೂ ಅಡಗಿದೆ. ದೌರ್ಜನ್ಯದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಇತ್ತೀಚೆಗೆ ‘ಬಾಲಿಕಾ ಜಾಗೃತಿ ಸುರಕ್ಷಾ ಅಭಿಯಾನ’ದಲ್ಲಿ ಕರೆಯಿತ್ತಾಗ, ‘ಧ್ವನಿ ಎತ್ತಿದರೆ ಉನ್ನಾವ್‌ ಪ್ರಕರಣದ ಸಂತ್ರಸ್ತೆಗೆ ಆದ ಗತಿ ನಮಗೂ ಆಗುತ್ತದೆಯೇ’ ಎಂದು ವಿದ್ಯಾರ್ಥಿನಿಯರು ಮರುಪ್ರಶ್ನೆ ಹಾಕಿರುವುದು ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತಿರುವುದರ ದ್ಯೋತಕ. ಪೋಕ್ಸೊ ಕಾಯ್ದೆಗೆ ಇತ್ತೀಚೆಗೆ ಮಾಡಿರುವ ತಿದ್ದುಪಡಿ ಪ್ರಕಾರ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಮರಣದಂಡನೆ ಕಾದಿದೆ. ಹೀಗಿರುವಾಗ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನೇ ಹತಾಶೆಗೆ, ಸಾವಿನ ದವಡೆಗೆ ನೂಕುವುದು ಎಂತಹ ವಿಪರ್ಯಾಸ. ಪ್ರಕರಣದಲ್ಲಿ ಈಗ ಸುಪ್ರೀಂ ಕೋರ್ಟ್‌ನ ಮಧ್ಯ ಪ್ರವೇಶವಾಗಿದೆ. ಸಂತ್ರಸ್ತೆಗೆ ತಕ್ಷಣ ₹ 25 ಲಕ್ಷ ಪರಿಹಾರ ನೀಡಬೇಕು, ಕಾರು ಅಪಘಾತ ಪ್ರಕರಣದ ತನಿಖೆಯನ್ನು ಏಳು ದಿನಗಳಲ್ಲಿ ಮುಗಿಸಬೇಕು, ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು 45 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂಬ ನಿರ್ದೇಶನವನ್ನೂ ನೀಡಿದೆ. ಅಲ್ಲದೆ, ಪ್ರಕರಣಗಳ ವಿಚಾರಣೆಯನ್ನು ಉತ್ತರಪ್ರದೇಶದ ನ್ಯಾಯಾಲಯದಿಂದ ದೆಹಲಿಯ ನ್ಯಾಯಾಲಯಕ್ಕೆ ವರ್ಗಾಯಿಸುವಂತೆಯೂ ಕೋರ್ಟ್‌ ಸೂಚಿಸಿದೆ. ನ್ಯಾಯಕ್ಕಾಗಿ ಆಕೆ ಇದುವರೆಗೆ ನಡೆಸಿರುವ ನೋವಿನ, ಆದರೆ ಛಲ ಬಿಡದ ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳುವ ಹೊಣೆ ಕೋರ್ಟ್‌ ಮೇಲಿದೆ.

Post Comments (+)