ಶನಿವಾರ, ನವೆಂಬರ್ 23, 2019
17 °C

ಆರ್ಥಿಕ ಹಿಂಜರಿತ: ಲಘುವಾಗಿ ಪರಿಗಣಿಸುವ ಕಾಲ ಇದಲ್ಲ

Published:
Updated:
Prajavani

ರಾಜ್ಯದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಕೈಗಾರಿಕೆಗಳು ಮುಚ್ಚಿವೆಯೇ, ಉದ್ಯೋಗ ನಷ್ಟವಾಗಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇರುವ ವರದಿಯನ್ನು ತಿಂಗಳೊಳಗೆ ನೀಡಬೇಕೆಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ‘ಕರ್ನಾಟಕದ ಮಟ್ಟಿಗೆ ಆರ್ಥಿಕ ಹಿಂಜರಿತ ಅಷ್ಟು ‍ಪರಿಣಾಮ ಬೀರಿಲ್ಲ. ಆರ್ಥಿಕ ಹಿಂಜರಿತದ ಕುರಿತು ಮಾಧ್ಯಮಗಳಲ್ಲಿ ವರದಿ ಬಂದಿರುವ ಹಿನ್ನೆಲೆಯಲ್ಲಿ, ನಿಜಕ್ಕೂ ಸಮಸ್ಯೆಯಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ವರದಿ ಕೇಳಿದ್ದೇನೆ’ ಎಂದೂ ಅವರು ಹೇಳಿದ್ದಾರೆ. ಸಚಿವರ ಈ ಹೇಳಿಕೆಯು ‘ಪತ್ರಿಕಾ ವರದಿಗಳು ಖಚಿತ ಅಲ್ಲ; ಅಧಿಕಾರಿಗಳು ನೀಡುವ ವರದಿಗಳು ಹೆಚ್ಚು ಖಚಿತ’ ಎನ್ನುವ ಅರ್ಥ ನೀಡುವಂತಿದೆ. 

ರಾಜಕೀಯ ಅನುಕೂಲಕ್ಕಾಗಿ ಬೃಹತ್‌ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಖಾತೆಗಳಿವೆ. ಹಾಗೆ ನೋಡಿದರೆ ಇವೆರಡೂ ಒಂದಕ್ಕೊಂದು ಪೂರಕ. ಬೃಹತ್‌ ಕೈಗಾರಿಕೆಗಳಲ್ಲಿ ಉತ್ಪಾದನೆ ಕುಸಿತವಾದರೆ ಅದರ ಬಿಸಿ ನೇರವಾಗಿ ಸಣ್ಣ ಕೈಗಾರಿಕೆಗಳಿಗೆ ತಟ್ಟುತ್ತದೆ. ಸಣ್ಣ ಕೈಗಾರಿಕೆಗಳು ಉತ್ಪಾದನೆ ನಿಲ್ಲಿಸಿದರೆ, ಬೃಹತ್‌ ಕೈಗಾರಿಕೆಗಳೂ ತೊಂದರೆ ಅನುಭವಿಸುತ್ತವೆ. ಹಾಗೆಯೇ ಬರ ಅಥವಾ ನೆರೆಯಿಂದ ಕೃಷಿ ಉತ್ಪಾದನೆ ಕುಂಠಿತಗೊಂಡರೆ ಕೃಷಿ ಆಧಾರಿತ ಕಚ್ಚಾ ವಸ್ತುಗಳನ್ನು ನಂಬಿಕೊಂಡಿರುವ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಬೇಕಾಗುತ್ತದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ನಿಂತಿರುವ ಅರ್ಥವ್ಯವಸ್ಥೆ ನಮ್ಮದು. ಹಾಗಾಗಿ, ಆರ್ಥಿಕ ಹಿಂಜರಿತದ ಬಗ್ಗೆ ಲೋಕಾಭಿರಾಮದ ಪ್ರತಿಕ್ರಿಯೆ ಸಮಂಜಸವಲ್ಲ. ಇಡೀ ದೇಶದ ಆರ್ಥಿಕತೆಯೇ ಹಿಂಜರಿತ ಅನುಭವಿಸುತ್ತಿರುವಾಗ ನಮ್ಮ ರಾಜ್ಯ ಮಾತ್ರ ಅದರಿಂದ ಹೊರತಾಗಿ ಉಳಿಯುವುದು ಸಾಧ್ಯ ಇಲ್ಲ. ಕೇಂದ್ರ ಸರ್ಕಾರವು ನೋಟು ರದ್ದತಿಯ ತೀರ್ಮಾನ ತೆಗೆದುಕೊಂಡು ನಂತರ, ನಗದು ವಹಿವಾಟಿನ ಮೇಲೆಯೇ ನಡೆಯುತ್ತಿದ್ದ ಎಷ್ಟೋ ಸಣ್ಣ ಉದ್ದಿಮೆಗಳು ನೆಲಕಚ್ಚಿದ ವಿದ್ಯಮಾನಕ್ಕೆ ಕರ್ನಾಟಕವೂ ಹೊರತಲ್ಲ. ಹಾಗೆಯೇ ಜಿಎಸ್‌ಟಿ ಜಾರಿಗೊಂಡ ನಂತರ ಕರ್ನಾಟಕದ ಉದ್ದಿಮೆಗಳೂ ಹೊಡೆತ ತಿಂದಿವೆ.

ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಒಂದು ವರ್ಷದಿಂದಲೂ ತೀವ್ರ ಹಣಕಾಸು ಮುಗ್ಗಟ್ಟನ್ನು ಎದುರಿಸುತ್ತಿವೆ. ಬ್ಯಾಂಕ್‌ಗಳು ಸಾಲ ಪಾವತಿಯ ನಿಯಮಗಳನ್ನು ಕಠಿಣಗೊಳಿಸಿವೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ರೈಲ್ವೆ, ರಕ್ಷಣಾ ಇಲಾಖೆ ಮುಂತಾದ ವಲಯಗಳಿಂದ ಸಣ್ಣ ಕೈಗಾರಿಕೆಗಳಿಗೆ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಆಟೊಮೊಬೈಲ್ ಉದ್ಯಮದಲ್ಲಿ ದೇಶದಾದ್ಯಂತ ಕಾಣಿಸಿಕೊಂಡಿರುವ ಮಾರಾಟ ಕುಸಿತದ ನೇರ ಪರಿಣಾಮವು ಬೆಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದ ನಗರಗಳಲ್ಲಿ ಉದ್ಯೋಗ ಕಡಿತದ ರೂಪದಲ್ಲಿ ಕಾಣಿಸಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ಬರ ಮತ್ತು ಅದರ ಬೆನ್ನಲ್ಲೇ ಉಂಟಾದ ಭಾರಿ ನೆರೆಯಿಂದ ಕಬ್ಬು, ಜೋಳ, ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದಾಗಿ ಉತ್ಪಾದನೆ ಸಹಜವಾಗಿಯೇ ಕುಂಠಿತವಾಗಲಿದೆ. ಈ ಉತ್ಪನ್ನಗಳನ್ನೇ ಕಚ್ಚಾವಸ್ತುಗಳಾಗಿ ನಂಬಿಕೊಂಡಿರುವ ಸಣ್ಣ ಉದ್ಯಮಗಳಲ್ಲಿ ಆತಂಕ ಕವಿದಿದೆ. ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮವು ಬೇಡಿಕೆ ಕುಸಿತವನ್ನು ಎದುರಿಸುತ್ತಿದೆ.

ಸರ್ಕಾರವೇ ಮಂಡಿಸಿದ 2018–19ರ ಆರ್ಥಿಕ ಸಮೀಕ್ಷೆಯಲ್ಲಿ, ‘ಹಿಂದಿನ ಆರ್ಥಿಕ ಸಾಲಿನಲ್ಲಿ ಶೇಕಡ 10.4ರಷ್ಟಿದ್ದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವೃದ್ಧಿದರವು  ಶೇ 9.6ಕ್ಕೆ ಕುಸಿಯಲಿದೆ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇಷ್ಟೆಲ್ಲ ಸ್ಪಷ್ಟ ಸೂಚನೆಗಳಿರುವಾಗ ಸರ್ಕಾರ ಈ ವೇಳೆಗಾಗಲೇ ಆರ್ಥಿಕ ಚೇತರಿಕೆಗೆ ಒಂದಿಷ್ಟು ಕ್ರಮಗಳನ್ನು ಕೈಗೊಂಡಿರಬೇಕಿತ್ತು. ಅಧಿಕಾರಿಗಳಿಗೆ ಒಂದು ತಿಂಗಳಲ್ಲಿ ಹೊಸ ವರದಿಯನ್ನು ಸಿದ್ಧಪಡಿಸಲು ಸೂಚನೆ ನೀಡಿರುವುದೇನೊ ಸರಿ. ಆದರೆ, ಅದಕ್ಕಿಂತ ಹೆಚ್ಚಿನ ಆದ್ಯತೆಯ ಕೆಲಸವಾಗಿ ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳ ಪ್ರತಿನಿಧಿಗಳನ್ನು ಕರೆದು ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸುವ ಬಗ್ಗೆ ಪರ್ಯಾಲೋಚನೆ ನಡೆಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ, ಅದು ಜಾಣತನದ ಕ್ರಮ ಆಗುತ್ತಿತ್ತು. ಆತಂಕ ಮೂಡಿಸಿರುವ ಆರ್ಥಿಕ ಹಿಂಜರಿತದ ಹೊಡೆತವನ್ನು ನಿಭಾಯಿಸಲು ನಮ್ಮ ಬೃಹತ್‌ ಉದ್ಯಮಗಳೂ ಸನ್ನದ್ಧಗೊಳ್ಳಬೇಕಿದೆ. ಆರ್ಥಿಕ ಪರಿಸ್ಥಿತಿಯು ಲೋಕಾಭಿರಾಮವಾಗಿ ಮಾತನಾಡುವಷ್ಟು ಸರಳವಾಗಿಲ್ಲ. ರಾಜ್ಯ ಸರ್ಕಾರವು ಉದ್ಯಮ ವಲಯದ ಚೇತರಿಕೆಗೆ ಹಾಗೂ ಉದ್ಯೋಗ ಕಡಿತ ತಡೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.

ಪ್ರತಿಕ್ರಿಯಿಸಿ (+)