ಬುಧವಾರ, ಮೇ 18, 2022
27 °C

ಬಂಡವಾಳ ಹೂಡಿಕೆ:ಅಸ್ಪಷ್ಟ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರ ಆಯೋಜಿಸಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ (ಜಿಮ್) ದ್ವಿತೀಯ ಸಮಾವೇಶವು ತನ್ನ ಮೂಲ ಉದ್ದೇಶ ಸಾಧನೆಯಲ್ಲಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.ಒಟ್ಟು  730 ಹೂಡಿಕೆ ಒಪ್ಪಂದ, ರೂ 6 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆಗೆ ವ್ಯತಿರಿಕ್ತವಾಗಿ ರೂ 7.6 ಲಕ್ಷ ಕೋಟಿ ಹೂಡಿಕೆ  ಭರವಸೆ ಮತ್ತು 15 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿರುವುದು ಸಮಾವೇಶದ ಯಶಸ್ಸಿಗೆ ಕನ್ನಡಿ ಹಿಡಿಯುತ್ತವೆ.

 

ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಸಮಾವೇಶದಲ್ಲಿ ಘಟಾನುಘಟಿ ಉದ್ಯಮಿಗಳು ಕಾಣಿಸದೇ ಹೋದದ್ದು ನಿರಾಶಾದಾಯಕ ಬೆಳವಣಿಗೆ ಎಂದೇ ಹೇಳಬೇಕಾಗುತ್ತದೆ.

 

ದೇಶದ ಎಲ್ಲ ದೊಡ್ಡ ಉದ್ಯಮಿಗಳ ಪಾಲ್ಗೊಳ್ಳುವಿಕೆಗೆ ಇನ್ನಷ್ಟು ಶ್ರಮಿಸುವ ಅಗತ್ಯವಿತ್ತು. ಭಾಗವಹಿಸಿದ ಕೆಲವು ಉದ್ಯಮಿಗಳಂತು ತಮ್ಮ ಉದ್ಯಮವನ್ನು ವಿಸ್ತರಿಸುವ ಉದ್ದೇಶದಿಂದ ಪಾಲ್ಗೊಂಡಿರುವುದು ಸ್ಪಷ್ಟ.

 

ಅದರಲ್ಲಿ ಉದ್ಯೋಗಸೃಷ್ಟಿಯ ಚಿತ್ರಣ ಅಸ್ಪಷ್ಟ. ಸಾಮಾನ್ಯವಾಗಿ ಎಲ್ಲ ಉದ್ಯಮಿಗಳು ಅಪಾರಪ್ರಮಾಣದ ಭೂಮಿಗಾಗಿ ಬೇಡಿಕೆ ಮಂಡಿಸುತ್ತಿರುವುದು ಸಂಶಯಕ್ಕೆ ಎಡೆಮಾಡುತ್ತದೆ.

 

ಕಳೆದ ಸಲದ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮ ಸ್ಥಾಪಿಸುವ ಸಲುವಾಗಿ ಭೂಮಿ ಪಡೆದವರು ಅಲ್ಲಿ ಏನು ಮಾಡಿದ್ದಾರೆ? ಎಷ್ಟು ಜನಕ್ಕೆ ಉದ್ಯೋಗಾವಕಾಶಗಳು ಲಭ್ಯವಾಗಿವೆ ಎನ್ನುವುದನ್ನು ಸರ್ಕಾರ ಬಹಿರಂಗ ಪಡಿಸಬೇಕು. ಉದ್ದೇಶ ಈಡೇರಿಸದ ಉದ್ಯಮಿಗಳಿಂದ ಭೂಮಿ ವಾಪಸು ಪಡೆಯುವ ಕೆಲಸವನ್ನೂ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.  ವಿದ್ಯುತ್ ಉತ್ಪಾದನೆ ರಂಗದಲ್ಲಿ ಅತಿ ಹೆಚ್ಚು ಪ್ರಮಾಣದ ಹೂಡಿಕೆಗೆ  ಈ ಸಮಾವೇಶದಲ್ಲಿ ತುಡಿತ ಕಂಡುಬಂದಿರುವಾಗ ಅದೇ ಇಲಾಖೆಗೆ ಸೇರಿದ ಸಚಿವೆ ಶೋಭಾಕರಂದ್ಲಾಜೆ  ನಾಪತ್ತೆಯಾಗ್ದ್ದಿದರು. ಇಂತಹ ಬೇಜವಾಬ್ದಾರಿತನವನ್ನು ಜನತೆ ಕ್ಷಮಿಸಲಾರರು.ಇಂತಹ ದೊಡ್ಡ ಸಮಾವೇಶದಲ್ಲೂ ರಾಜಕೀಯ ಕಾಣಿಸಿಕೊಂಡಿರುವುದು ನಾಚಿಕೆಗೇಡಿನ ವರ್ತನೆ. ಇಡೀ ಸಮಾವೇಶವನ್ನು ಎರಡೂ ದಿನ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಬ್ಬರೇ ಸಂಭಾಳಿಸಿದ್ದಾರೆ. ಇದು ರಾಜ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಸಮಾವೇಶ ಎನ್ನುವುದು ಗೈರುಹಾಜರಾದ ಸಚಿವರಿಗೆ ತಿಳಿಯಬೇಕಿತ್ತು.ಸಮಾವೇಶದ ಯಶಸ್ಸಿಗೆ ಸಚಿವ ಸಂಪುಟದ ಸದಸ್ಯರೆಲ್ಲ ಟೊಂಕಕಟ್ಟಿ ನಿಲ್ಲಬೇಕಾಗಿತ್ತು.  ರಾಜ್ಯದಲ್ಲಿ `ಏಕ ಗವಾಕ್ಷಿ~ ವ್ಯವಸ್ಥೆಯೇ ಇಲ್ಲ ಎಂದು ಉದ್ಯಮಿಗಳು ತಮ್ಮ ಅಸಮಾಧಾನ ತೋಡಿಕೊಂಡಿರುವುದು ಆಡಳಿತ ಯಂತ್ರದ ಕಾರ್ಯವೈಖರಿಗೆ ಸಾಕ್ಷಿಯಾಗುತ್ತದೆ.

 

ಇನ್ನಾದರೂ ಸರ್ಕಾರ ಲೋಪ ಸರಿಪಡಿಸಿಕೊಂಡು  `ಉದ್ಯಮಿ ಸ್ನೇಹಿ~ ಧೋರಣೆ ಅಳವಡಿಸಿಕೊಂಡರೆ ಮಾತ್ರ ಯೋಜನೆಗಳು ತ್ವರಿತವಾಗಿ ಕಾರ್ಯರೂಪಕ್ಕೆ ಬಂದಾವು.  ಯೋಜನೆಗಳಿಗೆ ಕ್ಷಿಪ್ರವಾಗಿ ಅನುಮತಿ ನೀಡಲು ವಿವಿಧ ಇಲಾಖೆಗಳು  ಸಮನ್ವಯತೆಯಿಂದ  ಕಾರ್ಯನಿರ್ವಹಿಸಬೇಕಾಗಿದೆ.

 

ಉದ್ಯಮಗಳ ಸ್ಥಾಪನೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಲು ಸ್ವಾಯತ್ತ ಮೂಲ ಸೌಕರ್ಯ ಮಂಡಳಿ ಸ್ಥಾಪಿಸುವ ಸರ್ಕಾರದ ಆಲೋಚನೆಯೂ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕಾಗಿದೆ. ಮೊದಲ ಸಮಾವೇಶದ ಸಂದರ್ಭದಲ್ಲಿಯೂ ಇದೇ ಬಗೆಯ ಬಣ್ಣದ ಮಾತುಗಳನ್ನಾಡಲಾಗಿತ್ತು ಎನ್ನುವುದು ಸರ್ಕಾರಕ್ಕೆ ಪಾಠವಾಗಬೇಕು.  ರಾಜ್ಯದ ಕೈಗಾರಿಕಾ ಚಿತ್ರಣ ಬದಲಿಸುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ಒಗ್ಗಟ್ಟಿನಿಂದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರೆ ನಿರೀಕ್ಷಿಸಿದ ಬದಲಾವಣೆ ಸಾಧ್ಯವಾದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.