ಸೋಮವಾರ, ಜೂನ್ 14, 2021
25 °C

ಸಂಪಾದಕೀಯ: ಜನಸಾಮಾನ್ಯರಿಗೆ ಲಾಠಿ ಏಟು ಪೊಲೀಸ್ ದೌರ್ಜನ್ಯ ನಿಲ್ಲಿಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಸೋಮವಾರದಿಂದ ಆರಂಭವಾಗಿರುವ ಲಾಕ್‌ಡೌನ್‌ನ ಮಾರ್ಗಸೂಚಿ ಪಾಲನೆಯ ನೆಪದಲ್ಲಿ ಪೊಲೀಸರು ಜನಸಾಮಾನ್ಯರ ಮೇಲೆ ಬಲಪ್ರಯೋಗ ನಡೆಸಿದ್ದಾರೆ. ಪೊಲೀಸರು ಪಾಳೆಯ ಪಟ್ಟಿನ ಪ್ರತಿನಿಧಿಗಳಂತೆ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಟೊ ಚಾಲಕರ ಮೇಲೆ, ದಿನಸಿ ತರಲು ಕಿರಾಣಿ ಅಂಗಡಿಗಳಿಗೆ ಹೊರಟ ಜನರ ಮೇಲೆ, ಔಷಧಿ ತರಲು ಬಂದ ರೋಗಿಗಳ ಸಂಬಂಧಿಕರ ಮೇಲೆ ಪೊಲೀಸರು ಅಮಾನವೀಯವಾಗಿ ಲಾಠಿ ಬೀಸಿದ ಕುರಿತು ವರದಿಯಾಗಿದೆ.

ಮೊದಲ ದಿನವೇ ಭೀತಿ ಹುಟ್ಟಿಸಿದರೆ ಉಳಿದ 13 ದಿನ ಜನ ಮನೆಯಿಂದ ಆಚೆ ಬರುವುದಿಲ್ಲ ಎಂಬ ಆಲೋಚನೆಯೂ ಅವರ ದುರ್ವರ್ತನೆಗೆ ಕಾರಣವಾಗಿರಬಹುದು. ‘ವಾಹನದಲ್ಲಿ ಓಡಾಡುವಂತಿಲ್ಲ’ ಎಂಬ ನಿಯಮವನ್ನೇ ನೆಪ ಮಾಡಿಕೊಂಡು ಈ ರೀತಿ ದಬ್ಬಾಳಿಕೆಯನ್ನು ಪ್ರದರ್ಶಿಸಲಾಗಿದೆ. ಅಮಾಯಕರ ಮೇಲೆ ಲಾಠಿ ಬೀಸಲು ಆದೇಶ ನೀಡಿದ್ದು ಯಾರು? ಆದೇಶಕ್ಕೆ ಕಾರಣ ಏನು? ಮನಬಂದಂತೆ ಲಾಠಿ ಬೀಸಲು ನಮ್ಮಲ್ಲೇನು ಪೊಲೀಸ್‌ ರಾಜ್ಯಭಾರವಿಲ್ಲ. ವಾಸ್ತವವಾಗಿ, ಸರ್ಕಾರ ರೂಪಿಸಿದ ಮಾರ್ಗಸೂಚಿ ನಿಯಮದಲ್ಲೇ ದೋಷವಿದೆ.

ಕಿಲೊಮೀಟರ್‌ಗಟ್ಟಲೆ ದೂರದಲ್ಲಿರುವ ಆಸ್ಪತ್ರೆಗಳಿಗೆ, ನೀರು ಶುದ್ಧೀಕರಣ ಘಟಕಗಳಿಗೆ ವಾಹನವಿಲ್ಲದೆ ನಡೆದುಕೊಂಡೇ ಹೋಗಿಬರುವುದು ಹೇಗೆ ಸಾಧ್ಯ? ಈ ಮಾತು ನಗರಗಳಿಗೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ಅನ್ವಯಿಸುತ್ತದೆ. ಶುದ್ಧೀಕರಣ ಘಟಕಗಳಿಂದ ಬಹುದೂರದಲ್ಲಿರುವ ಮನೆಗಳಿಗೆ 20 ಲೀಟರ್‌ನ ಭಾರದ ನೀರಿನ ಕ್ಯಾನುಗಳನ್ನು ತಲೆಯ ಮೇಲೆ ಹೊತ್ತುಕೊಂಡೇ ತರಬೇಕೆ? ನಿಯಮಗಳನ್ನು ರೂಪಿಸುವವರು ದಂತಗೋಪುರ ಗಳಲ್ಲಿ ಕುಳಿತು ಯೋಚಿಸದೆ ಜನಸಾಮಾನ್ಯರು ನಿತ್ಯ ಅನುಭವಿಸುವ ಕಷ್ಟ–ನಷ್ಟಗಳ ದೃಷ್ಟಿಕೋನ ದಿಂದಲೂ ಯೋಚಿಸಿದ್ದರೆ ಹೀಗಾಗುತ್ತಿರಲಿಲ್ಲ.

ನಿಯಮಗಳಿಂದ ಜನರಿಗಾಗುವ ಸಮಸ್ಯೆಗಳ ಕುರಿತೂ ಅಧಿಕಾರಿಗಳಿಗೆ ಮುಂಗಾಣ್ಕೆ ಬೇಕಿತ್ತು. ‘ವಾಹನದಲ್ಲಿ ಓಡಾಡಲೇಬಾರದು’ ಎಂಬಂತಹ ನಿಯಮಗಳನ್ನು ಮರುಪರಿಶೀಲನೆ ನಡೆಸುವುದು ಅಗತ್ಯ. ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬರಬೇಕು ಎನ್ನುವುದರಲ್ಲಿ ಎರಡನೆಯ ಮಾತೇ ಇಲ್ಲ. ಆದರೆ, ಅದಕ್ಕಾಗಿ ರೂಪಿಸುವ ನಿಯಮಗಳು, ಅನಿವಾರ್ಯವಾಗಿ ಹೊರಹೋಗಬೇಕಾದವರಿಗೆ ಸಂಕೋಲೆ ಆಗಬಾರದು. ಪೊಲೀಸರಿಂದ ಅವರು ಲಾಠಿ ಏಟು ತಿನ್ನುವಂತೆಯೂ ಆಗಬಾರದು. ಒಂದುವೇಳೆ ಯಾರಾದರೂ ಸುಖಾಸುಮ್ಮನೆ ಹೊರ ಬಂದಿದ್ದರೆ ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೇ ವಿನಾ ದೌರ್ಜನ್ಯ ಎಸಗುವಂತಹ ಧಾರ್ಷ್ಟ್ಯ ತೋರಬಾರದು. ಮಾರ್ಗಸೂಚಿ ಉಲ್ಲಂಘಿಸಿ ದವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲು ಯಾರದೂ ತಕರಾರಿಲ್ಲ.

ರಸ್ತೆಗಳಲ್ಲಿ ಓಡಾಡಿದ ಜನರನ್ನು ಪೊಲೀಸರು ಮನಬಂದಂತೆ ಥಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಮಾರ್ಗಸೂಚಿ ಪಾಲನೆ ಆಗುವಂತೆ ಪೊಲೀಸರು ನೋಡಿಕೊಳ್ಳುತ್ತಿರುವ ಈ ಪರಿ ಭಯಾನಕವಾಗಿದೆ.

‘ಇವರೇನು ಮನುಷ್ಯರೇ, ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಹೊಣೆ ಇಂಥವರ ಮೇಲಿದೆಯೇ’ ಎಂಬ ಉದ್ಗಾರ ಎತ್ತುವಂತೆಯೂ ಮಾಡುತ್ತವೆ. ಕೆಲವೊಂದು ಕಡೆ ಪೊಲೀಸರು ಜನರ ಕಣ್ಣೀರು ಒರೆಸಿ ಮಾನವೀಯತೆ ಮೆರೆದಿದ್ದೂ ಇದೆ. ಆದರೆ, ಎಲ್ಲ ಬಣ್ಣಗಳನ್ನೂ ಮಸಿ ನುಂಗಿತು ಎನ್ನುವಂತೆ ಲಾಠಿ ಪ್ರಹಾರದ ಘಟನೆಗಳು ಪೊಲೀಸ್‌ ವ್ಯವಸ್ಥೆಗೆ ಕೆಟ್ಟಹೆಸರು ತರುತ್ತವೆ. ಹಿರಿಯ ಪೊಲೀಸ್‌
ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕೆಳಹಂತದ ತಮ್ಮ ಸಿಬ್ಬಂದಿಯ ಕಿವಿ ಹಿಂಡಬೇಕು. ತಾವು ಜನರ ಒಳಿತಿಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡವರೇ ವಿನಾ ಜನರ ಮೇಲೆ ದೌರ್ಜನ್ಯ ನಡೆಸುವು ದಕ್ಕಲ್ಲ ಎನ್ನುವುದನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮವನ್ನೂ ಕೈಗೊಳ್ಳಬೇಕು. ಅಂತಹ ಕ್ರಮಗಳು, ಕೈ ತುರಿಕೆಗೆ ಲಾಠಿ ಬೀಸುವಂತಹ ಇತರ ಸಿಬ್ಬಂದಿಗೂ ಪಾಠವಾಗಬೇಕು. ಜನರೂ ಅಷ್ಟೆ. ಇದು ತುಂಬಾ ಅಸಾಧಾರಣವಾದ ಸಂದರ್ಭ.

ಆಸ್ಪತ್ರೆಗಳಲ್ಲಿ, ಹಾದಿ–ಬೀದಿಗಳಲ್ಲಿ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಬಹುತೇಕರಿಗೆ ಗೊತ್ತಿದೆ. ಹೀಗಾಗಿ, ಅನಿವಾರ್ಯ ಸಂದರ್ಭ ಹೊರತುಪಡಿಸಿ, ಜನ ಮನೆಯಲ್ಲೇ ಇರಬೇಕು. ಕೋವಿಡ್‌ನ ತೀವ್ರತೆಯನ್ನು ಕಡಿಮೆ ಮಾಡಲು ಸರ್ಕಾರ ನಡೆಸಿರುವ ಯತ್ನಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಬೇಕು. ಸರ್ಕಾರದ ಉದ್ದೇಶವನ್ನು ಜನ ಅರ್ಥಮಾಡಿಕೊಳ್ಳಬೇಕು. ಹಾಗೆಯೇ  ಜನರ ಸಮಸ್ಯೆಗಳನ್ನು ಸರ್ಕಾರವೂ ಅರ್ಥಮಾಡಿಕೊಳ್ಳಬೇಕು. ಅವರ ಮೇಲಿನ ಪೊಲೀಸ್‌ ದಬ್ಬಾಳಿಕೆಯನ್ನು ಕೂಡಲೇ ತಡೆಗಟ್ಟಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು