ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣದ ಮೂಲಕ ಪ್ರಭಾವ ಗ್ರಾಹಕರ ರಕ್ಷಣೆಗೆ ಅಗತ್ಯವಾಗಿದ್ದ ಮಾರ್ಗಸೂಚಿ

Last Updated 4 ಫೆಬ್ರುವರಿ 2023, 4:54 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಮೇಲೆ ಪ್ರಭಾವ ಬೀರುವವರು ಪಾಲಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಉತ್ಪನ್ನಗಳು, ಸೇವೆಗಳು, ಯೋಜನೆಗಳ ಬಗ್ಗೆ ಸಾರ್ವಜನಿಕವಾಗಿ ಅಭಿಪ್ರಾಯ ಹೇಳುವ, ಅವುಗಳನ್ನು ಪಡೆದುಕೊಳ್ಳಿ ಎಂದು ಸಾರ್ವಜನಿಕರಿಗೆ ಕರೆ ನೀಡುವ ಇಂಥವರು ಈ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ್ರಚಾರಕ್ಕಾಗಿ ನಡೆಯುವ ಅಭಿಯಾನಗಳ ಸಂದರ್ಭದಲ್ಲಿ ಗ್ರಾಹಕರು ಮೋಸಹೋಗುವ ಸಾಧ್ಯತೆಗಳು ಇರುತ್ತವೆ. ಈ ಮಾರ್ಗಸೂಚಿಗಳು ಗ್ರಾಹಕರ ಹಿತವನ್ನು ಒಂದಿಷ್ಟುಮಟ್ಟಿಗೆ ಕಾಯುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವ ವ್ಯಕ್ತಿಗಳು ತಾವು ಪ್ರಚಾರ ಮಾಡುವ ಉತ್ಪನ್ನ ಅಥವಾ ಸೇವೆಗಳಿಗೆ ಪ್ರತಿಯಾಗಿ ಪಡೆದುಕೊಳ್ಳುತ್ತಿರುವುದು ಏನನ್ನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಪ್ರಚಾರ ಮಾಡಿದ್ದಕ್ಕೆ ಪ್ರತಿಫಲವಾಗಿ ಉಡುಗೊರೆಗಳು, ಹೋಟೆಲ್ ವಸತಿ, ಷೇರುಗಳು, ರಿಯಾಯಿತಿ
ಗಳನ್ನು ಪಡೆದುಕೊಳ್ಳುತ್ತಿದ್ದರೆ ಅವುಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಕು. ಖ್ಯಾತ ವ್ಯಕ್ತಿಗಳು ಮತ್ತು ಪ್ರಭಾವ ಬೀರುವ ಶಕ್ತಿ ಇರುವವರು ಸಾಮಾಜಿಕ ಜಾಲತಾಣಗಳ ಮೂಲಕ ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಪ್ರಚಾರ ಮಾಡಿದಾಗ ಅದಕ್ಕೆ ಪ್ರತಿಯಾಗಿ ಜಾಹೀರಾತುದಾರರಿಂದ ಹಣ ಪಡೆದುಕೊಳ್ಳುವುದಿದೆ. ಅವರು ಅದನ್ನು ಇನ್ನು ಮುಂದೆ ತಮ್ಮ ಕಾರ್ಯಕ್ರಮಗಳಲ್ಲಿ ಸ್ಪಷ್ಟವಾಗಿ ಹೇಳಬೇಕಾಗುತ್ತದೆ. ಈ ಮಾರ್ಗಸೂಚಿ ಉಲ್ಲಂಘಿಸಿದರೆ ದಂಡ ಪಾವತಿಸಬೇಕಾಗುತ್ತದೆ, ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ತಾವು ಉಡುಗೊರೆಯಾಗಿ ಪಡೆದಿರುವುದನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ಹೇಳಬೇಕಾಗುತ್ತದೆ, ಉತ್ಪನ್ನ
ವನ್ನು ಅನುಮೋದಿಸುವ ಸಂದರ್ಭದಲ್ಲಿಯೇ ಇದನ್ನೂ ತಿಳಿಸಬೇಕಾಗುತ್ತದೆ.

ಸಾಮಾಜಿಕ ಜಾಲತಾಣಗಳ ವ್ಯಾಪ್ತಿಯು ಕಳೆದ ಕೆಲವು ವರ್ಷಗಳಲ್ಲಿ ಬಹಳ ಹಿಗ್ಗಿದೆ. ಅದು ಇನ್ನಷ್ಟು ವಿಸ್ತರಿಸಲಿದೆ ಎಂಬುದೂ ನಿಜ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದಾರೆ. ಕೆಲವರಿಗೆ ಇದು ಜೀವನದ ಅವಿಭಾಜ್ಯ ಚಟುವಟಿಕೆಯೂ ಹೌದು. ಎಲ್ಲ ವಯೋಮಾನ ಹಾಗೂ ಎಲ್ಲ ಬಗೆಯ ಸಾಮಾಜಿಕ ಹಿನ್ನೆಲೆಗಳ ಜನರಿಗೂ ಈ ಮಾತು ಅನ್ವಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಬೆಂಬಲಿಗರನ್ನು ಪಡೆದಿರುವ, ಬೇರೆಯವರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವಿರುವವರನ್ನು ಬಳಸಿಕೊಳ್ಳುವ ಕಂಪನಿಗಳು, ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಸಮಯದ ಲಾಭವನ್ನು ತಾವು ಪಡೆದುಕೊಳ್ಳಲು ಯತ್ನಿಸುತ್ತವೆ. ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿರುವ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರಬಲ್ಲ ಒಂದು ಲಕ್ಷಕ್ಕೂ ಹೆಚ್ಚಿನ ಜನ ಇದ್ದಾರೆ ಎಂಬ ಅಂದಾಜು ಇದೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವವರು ನಡೆಸುವ ಒಟ್ಟು ವಹಿವಾಟಿನ ಮೊತ್ತವು 2022ರಲ್ಲಿ ₹ 1,275 ಕೋಟಿ ಆಗಿತ್ತು, ಇದು 2025ರ ವೇಳೆಗೆ ₹ 2,800 ಕೋಟಿಗೆ ಹೆಚ್ಚಾಗುತ್ತದೆ ಎಂಬ ಅಂದಾಜು ಇದೆ. ಡಿಜಿಟಲ್ ವೇದಿಕೆಗಳ ಮೂಲಕ ಉತ್ಪನ್ನಗಳು ಹಾಗೂ ಸೇವೆಗಳ ಪ್ರಚಾರಕ್ಕೆ ಮಾಡುವ ವೆಚ್ಚವು ಹೆಚ್ಚಾಗುತ್ತಿದೆ. ಹೀಗಾಗಿ, ಈ ವೇದಿಕೆಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಗ್ರಾಹಕರು ವಂಚನೆಗೆ ಗುರಿಯಾಗದಂತೆ ನೋಡಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ.

ಇಲ್ಲಿ ಸೇವೆಗಳು ಹಾಗೂ ಉತ್ಪನ್ನಗಳನ್ನು ಬಳಕೆಗೆ ಅನುಮೋದಿಸುವವರ ವಿಶ್ವಾಸಾರ್ಹತೆಯು ಮಹತ್ವದ್ದಾಗುತ್ತದೆ. ತಾವು ಅನುಕರಣೀಯ ವ್ಯಕ್ತಿ ಎಂದು ಭಾವಿಸಿರುವವರು, ವಸ್ತು ಹಾಗೂ ಸೇವೆಗಳನ್ನು ಅನುಮೋದಿಸಿದ್ದಕ್ಕೆ ಎಷ್ಟು ಮೊತ್ತ ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಹಕ್ಕು ಗ್ರಾಹಕರಿಗೆ ಇದೆ. ಮಾಹಿತಿ ಇದ್ದಾಗ ಅವರು ತೆಗೆದುಕೊಳ್ಳುವ ತೀರ್ಮಾನಗಳು ಹೆಚ್ಚು ಪ್ರಬುದ್ಧವಾಗಿರುತ್ತವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಈ ರೀತಿಯ ಮಾಹಿತಿ ಇರಬೇಕಾದುದು ಒಳ್ಳೆಯದು. ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಬರುತ್ತವೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಪ್ರಚಾರ ಚಟುವಟಿಕೆಗಳಲ್ಲಿ ನ್ಯಾಯಸಮ್ಮತವಲ್ಲದ ಯಾವುದೇ ಕೃತ್ಯಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವವರು ಉತ್ಪನ್ನ, ಸೇವೆಗಳನ್ನು ಅನುಮೋದಿಸುವಾಗ ಅದಕ್ಕೆ ಹಣ ಪಡೆಯಲಾಗಿತ್ತೇ ಎಂಬುದನ್ನು ತಿಳಿಸಬೇಕು ಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಯು 2021ರಲ್ಲಿ ನಿಯಮ ರೂಪಿಸಿತ್ತು. ಆದರೆ ಇದನ್ನು ಹಲವರು ಪಾಲಿಸಲಿಲ್ಲ. ಆದರೆ, ಸರ್ಕಾರ ಈಗ ರೂಪಿಸಿರುವ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬಹುದು ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT