ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಹಿಳೆಯರಿಗೆ ಆಸ್ತಿಯ ಹಕ್ಕುಕೋರ್ಟ್‌ನಿಂದ ಪ್ರಗತಿಪರ ತೀರ್ಪು

Last Updated 27 ಜನವರಿ 2022, 19:30 IST
ಅಕ್ಷರ ಗಾತ್ರ

ಪುರುಷನೊಬ್ಬ ತನ್ನ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಉಯಿಲು ಬರೆಯದೆ ಮೃತಪಟ್ಟ ಸಂದರ್ಭದಲ್ಲಿ, ಆ ಆಸ್ತಿಯು ಆತನ ಹೆಣ್ಣು ಮಕ್ಕಳಿಗೆ ಆನುವಂಶಿಕವಾಗಿ ವರ್ಗಾವಣೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ಮಹಿಳೆಯರು ಆಸ್ತಿಯ ಮೇಲೆ ಹೊಂದಿರುವ ಹಕ್ಕುಗಳನ್ನು ಗುರುತಿಸುವ ದಿಸೆಯಲ್ಲಿ ಇನ್ನೊಂದು ಹೆಜ್ಜೆ. ಉಯಿಲು ಇಲ್ಲದ ಸಂದರ್ಭದಲ್ಲಿ, ಆಸ್ತಿಯು ಕುಟುಂಬದ ಇತರ ಸದಸ್ಯರಂತೆ ಹೆಣ್ಣು ಮಕ್ಕಳಿಗೆ ಆನುವಂಶಿಕವಾಗಿ ವರ್ಗಾವಣೆ ಆಗುತ್ತದೆ ಎಂದು ಕೋರ್ಟ್ ಹೇಳಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆ–1956 ಜಾರಿಗೆ ಬಂದ ಸಂದರ್ಭಕ್ಕಿಂತ ಮೊದಲಿನಿಂದಲೂ,ಹೆಣ್ಣು ಮಕ್ಕಳಿಗೆ ಅವರ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕುಗಳು ಇರುತ್ತವೆ ಎಂದು ಕೂಡ ಕೋರ್ಟ್‌ಸ್ಪಷ್ಟಪಡಿಸಿದೆ. ಉಯಿಲು ಬರೆಯದೆ ಮೃತಪಟ್ಟ ವ್ಯಕ್ತಿಯ ಆಸ್ತಿಯ ಮೇಲೆ ಕುಟುಂಬದ ಪುರುಷ ಸದಸ್ಯರು ಹಕ್ಕು ಸಾಧಿಸಿದ ಹಾಗೂ ಆ ಆಸ್ತಿಯನ್ನು ಪಡೆದುಕೊಂಡ ನಿದರ್ಶನಗಳು ಬಹಳಷ್ಟು ಇವೆ. 1956ಕ್ಕಿಂತ ಮೊದಲಿನ ಸಂದರ್ಭಕ್ಕೆ ಅನ್ವಯವಾಗುವಂತೆ ಆಸ್ತಿಯ ಆನುವಂಶಿಕ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಈ ತೀರ್ಪು ಸ್ಪಷ್ಟ ಉತ್ತರವನ್ನು ನೀಡಿದೆ. 1956ಕ್ಕಿಂತ ಮೊದಲು ಉಯಿಲು ಬರೆಯದೆ ಮೃತಪಟ್ಟಿದ್ದ ತಂದೆಯ ಹೆಣ್ಣು ಮಗಳು ಆತನ ಆಸ್ತಿಯ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರವಾಗಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಆಸ್ತಿಯ ಮೇಲೆ ತನಗೆ ಹಕ್ಕು ಇದೆ ಎಂದು ಮಹಿಳೆ ಮಂಡಿಸಿದ್ದ ವಾದವನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು.

ಕುಟುಂಬದ ಆಸ್ತಿಗಳ ವಿಚಾರವಾಗಿ ಮಹಿಳೆಯರಿಗೆ ಅವರ ನ್ಯಾಯಬದ್ಧ ಹಕ್ಕುಗಳ ನಿರಾಕರಣೆ ಆಗಬಾರದು ಎಂಬುದನ್ನು ಖಾತರಿಪಡಿಸಲು ಕೋರ್ಟ್‌ ‍ಪ್ರಗತಿ ಪರವಾಗಿ ಕಾನೂನುಗಳನ್ನು ವ್ಯಾಖ್ಯಾನಿಸುತ್ತಿದೆ. ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಹಾಗೂ ಕುಟುಂಬದ ಆಸ್ತಿಯಲ್ಲಿ ಹೊಂದಿರುವ ಪಾಲಿನಲ್ಲಿ ‍ಪತ್ನಿ ಮತ್ತು ಹೆಣ್ಣು ಮಕ್ಕಳು, ಗಂಡು ಮಕ್ಕಳಿಗೆ ಸಮಾನವಾದ ಆಸ್ತಿ ಹಕ್ಕನ್ನು 1956ಕ್ಕೂ ಮೊದಲು ಕೂಡ ಹೊಂದಿದ್ದರು ಎಂಬುದನ್ನು ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಹೇಳಿದೆ. ಈ ಮಾತು ಹೇಳುವಾಗ ಕೋರ್ಟ್‌, ಹಿಂದಿನ ತೀರ್ಪುಗಳು ಹಾಗೂ ಹಿಂದೂ ಶಾಸ್ತ್ರಗಳಲ್ಲಿನ ನಿಯಮಗಳನ್ನು ಉಲ್ಲೇಖಿಸಿದೆ. ಕುಟುಂಬದ ಇತರ ‍ಪುರುಷ ಸದಸ್ಯರು ಆಸ್ತಿಯಲ್ಲಿ ಪಾಲು ಕೇಳುವುದಕ್ಕಿಂತಲೂ ಈ ಹಕ್ಕುಗಳು ಹೆಚ್ಚಿನ ಮಾನ್ಯತೆ ಹೊಂದಿವೆ. ಸಮಾಜದಲ್ಲಿ ವ್ಯಾಪಕವಾಗಿರುವ ಪುರುಷ ಪ್ರಧಾನ ಧೋರಣೆಗಳ ಕಾರಣದಿಂದಾಗಿ ಮಹಿಳೆಯರಿಗೆ ಅವರ ಹಕ್ಕುಗಳನ್ನು ನಿರಾಕರಿಸುತ್ತ ಬರಲಾಗಿದೆ.

ಕಾನೂನುಗಳನ್ನು ಪ್ರಗತಿಪರ ನೆಲೆಯಲ್ಲಿ ವ್ಯಾಖ್ಯಾನ ಮಾಡಿ, ತಮ್ಮ ಮುಂದೆ ಬಂದ ಪ್ರಕರಣಗಳನ್ನು ಕೋರ್ಟ್‌ಗಳು ನ್ಯಾಯೋಚಿತವಾಗಿ ಇತ್ಯರ್ಥಪಡಿಸುತ್ತಿವೆ. ಆದರೆ, ತಳಮಟ್ಟದಲ್ಲಿನ ಪರಿಸ್ಥಿತಿಯುಮಹಿಳೆಯರಿಗೆ ಆಸ್ತಿ ಹಕ್ಕುಗಳ ವಿಚಾರದಲ್ಲಿ ನ್ಯಾಯಸಮ್ಮತವಾಗಿ ಇಲ್ಲ. ಆಸ್ತಿ ಹಕ್ಕುಗಳ ವಿಚಾರ ಮಾತ್ರವೇ ಅಲ್ಲ, ಮಹಿಳೆಯರು ಬೇರೆ ಬೇರೆ ರೀತಿಯಲ್ಲಿಯೂ ಅನ್ಯಾಯ ಎದುರಿಸುತ್ತಿದ್ದಾರೆ ಎಂಬುದು ನಿಜ. ಆಸ್ತಿ ಹಕ್ಕು ಹಾಗೂ ಆಸ್ತಿಯ ಮಾಲೀಕತ್ವವು ಸಾಮಾಜಿಕ ಸ್ಥಾನಮಾನ ಮತ್ತು ಸಾಮಾಜಿಕ ಅಧಿಕಾರದ ಒಂದು ಸೂಚಕವೂ ಹೌದು. ಆದರೆ, ದೇಶದಲ್ಲಿ ‍ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮಾಲೀಕತ್ವದಲ್ಲಿ ಇರುವ ಆಸ್ತಿಯ ಪ್ರಮಾಣ ಬಹಳ ಕಡಿಮೆ. ಕೆಲವೆಡೆ ಮಹಿಳೆಯರು ಆಸ್ತಿಯ ಮಾಲೀಕತ್ವ ಹೊಂದಿದ್ದರೂ, ಆ ಆಸ್ತಿಯ ಮೇಲೆ ಅವರಿಗೆ ಪೂರ್ಣ ನಿಯಂತ್ರಣ ಇರುವುದಿಲ್ಲ. ಆಸ್ತಿಯನ್ನು ಮಹಿಳೆಯರ ಹೆಸರಿಗೆ ನೋಂದಣಿ ಮಾಡಿಸುವುದಕ್ಕೆ ಸಮಾಜದಲ್ಲಿ ಹಲವರು ಹಿಂದೇಟು ಹಾಕುವುದು ಇದೆ. ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾದ ರೀತಿಯಲ್ಲಿ ಆನುವಂಶಿಕ ಆಸ್ತಿ ಹಕ್ಕುಗಳ ಕಾನೂನುಗಳು ಇವೆ. ಮದುವೆ ಆಗಿರುವ ಹೆಣ್ಣು ಮಕ್ಕಳು ತಂದೆಯ ಆಸ್ತಿಗೆ ಕಾನೂನುಬದ್ಧ ವಾರಸುದಾರರು ಎಂಬುದನ್ನು ಒಪ್ಪಿಕೊಳ್ಳಲು ಸಮಾಜದಲ್ಲಿ ಹಲವರು ಈಗಲೂ ಸಿದ್ಧರಿಲ್ಲ. ಮದುವೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ವರದಕ್ಷಿಣೆ ಕೊಟ್ಟಾಗಿದೆ, ಹಾಗಾಗಿ ಅವರು ಆಸ್ತಿಯಲ್ಲಿ ಪಾಲು ಕೇಳುವಂತೆ ಇಲ್ಲ ಎಂಬ ಧೋರಣೆ ಹೊಂದಿರುವವರೂ ಇದ್ದಾರೆ. ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು. ಆಸ್ತಿಯಲ್ಲಿ ಸಮಾನ ಹಕ್ಕುಗಳ ಬಗ್ಗೆ ನ್ಯಾಯಾಲಯಗಳು ನೀಡಿರುವ ಆದೇಶ, ತೀರ್ಪುಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT