ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವೈದ್ಯಕೀಯ ಗರ್ಭಪಾತಕ್ಕೆ ಅವಕಾಶಮಹಿಳೆಯರ ಹಕ್ಕುಗಳಿಗೆ ಜಯ

Last Updated 27 ಜುಲೈ 2022, 19:04 IST
ಅಕ್ಷರ ಗಾತ್ರ

ಒಬ್ಬ ಮಹಿಳೆಯು ವಿವಾಹಿತೆಯಲ್ಲ ಎಂಬ ಒಂದೇ ಕಾರಣಕ್ಕೆ ಆಕೆಗೆ ವೈದ್ಯಕೀಯ ಗರ್ಭಪಾತದ ಸೌಲಭ್ಯ ವನ್ನು ನಿರಾಕರಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ. ಈ ಮೂಲಕ ಕೋರ್ಟ್‌, ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನಿನ ನಿಜವಾದ ಆಶಯವನ್ನು, ಉದ್ದೇಶವನ್ನು ಗಟ್ಟಿಯಾಗಿ ಸಾರಿದೆ. ಇದು ಸ್ವಾಗತಾರ್ಹ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, 25 ವರ್ಷ ವಯಸ್ಸಿನ ಒಬ್ಬ ಮಹಿಳೆಗೆ 24 ವಾರಗಳ ಭ್ರೂಣವನ್ನು ತೆಗೆಸಲು ಅವಕಾಶ ಕಲ್ಪಿಸಿದೆ, ದೆಹಲಿ ಹೈಕೋರ್ಟ್‌ ಆದೇಶವನ್ನು ಅಸಿಂಧುಗೊಳಿಸಿದೆ. ಗರ್ಭಪಾತ ಮಾಡುವುದು ಮಗುವನ್ನು ಕೊಲ್ಲುವುದಕ್ಕೆ ಸಮ ಎಂದು ಹೇಳಿದ್ದ ಹೈಕೋರ್ಟ್‌, ಆ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸಮ್ಮತಿಯ ಸಂಬಂಧದ ಕಾರಣದಿಂದಾಗಿಯೇ ತಾನು ಗರ್ಭ ಧರಿಸಿದ್ದು, ಜೊತೆಗಾರನು ತನ್ನನ್ನು ಮದುವೆಯಾಗಲು ನಿರಾಕರಿಸಿರುವ ಕಾರಣ ಗರ್ಭ ಪಾತ ಮಾಡಿಸಿಕೊಳ್ಳಲು ಬಯಸಿರುವುದಾಗಿ ಆ ಮಹಿಳೆ ಹೇಳಿದ್ದರು. ಮದುವೆಯಾಗದೆ ಇರುವ ಕಾರಣಕ್ಕಾಗಿ ತಾನು ಸಮಾಜದಲ್ಲಿ ಇತರರಿಂದ ನಿಂದನೆಗೆ ಗುರಿಯಾಗುವ ಭಯ ಕಾಡುತ್ತಿದೆ ಎಂದೂ ಅವರು ಹೇಳಿದ್ದರು. ಆದರೆ, ಭ್ರೂಣದ ವಯಸ್ಸು 20–24 ವಾರಗಳ ನಡುವೆ ಇದ್ದಾಗ, ಅವಿವಾಹಿತ ಮಹಿಳೆಗೆ ಗರ್ಭಪಾತಕ್ಕೆ ಅವಕಾಶ ಕೊಡಲಾಗದು. ಅದರಲ್ಲೂ, ಆಕೆ ಮತ್ತು ಜೊತೆಗಾರನ ನಡುವಿನ ಸಂಬಂಧದ ಸ್ವರೂಪ ಬದಲಾಗಿದೆ ಎಂಬ ಕಾರಣಕ್ಕೆ ಗರ್ಭಪಾತಕ್ಕೆ ಅವಕಾಶ ಕೊಡಲು ಆಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಇಂತಹ ಪರಿಸ್ಥಿತಿಯಲ್ಲಿ ಗರ್ಭಪಾತಕ್ಕೆ ಅವಕಾಶ ಮಾಡಿ ಕೊಡುವುದು ಕಾನೂನಿಗೆ ಮೀರಿದ ಕೆಲಸವಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿತ್ತು.

ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆ– 1971ರ ಆಶಯಗಳಿಗೂ, ಮಹಿಳೆಯು ವಿವಾಹಿತೆಯೋ ಅಲ್ಲವೋ ಎಂಬುದಕ್ಕೂ ಸಂಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ಈಗ ಸ್ಪಷ್ಟವಾಗಿ ಸಾರಿದೆ. ಜನ್ಮನೀಡುವ ಹಕ್ಕುಗಳ ವಿಚಾರವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರವು ಮಹಿಳೆಗೆ ಇರುತ್ತದೆ ಎಂಬ ನೆಲೆಯಲ್ಲಿಯೇ ಈ ಕಾಯ್ದೆಯನ್ನು ಅರ್ಥೈಸಿಕೊಳ್ಳಬೇಕು ಎಂಬುದು ಸರಿಯಾದ ನಿಲುವು. ಮಹಿಳೆಯು ತಾನು ವಿವಾಹಿತೆಯೋ ಅಲ್ಲವೋ ಎಂಬುದನ್ನು ಆಧರಿಸಿ ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಬೇಕು ಎನ್ನುವುದು ಈ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ನಿಲುವಾಗುತ್ತದೆ. ಆದರೆ, ಈ ಕಾಯ್ದೆಯು ಮಹಿಳೆಗೆ ನೀಡಿರುವ ಸ್ವಾಯತ್ತೆಯನ್ನು ದೆಹಲಿ ಹೈಕೋರ್ಟ್‌ ಪೂರ್ಣ ಪ್ರಮಾಣದಲ್ಲಿ ಗುರುತಿಸಲಿಲ್ಲ. ಅದು ಪುರುಷ ಪ್ರಧಾನ ನೆಲೆಯಲ್ಲಿ ಮಹಿಳೆಯರ ಹಕ್ಕುಗಳನ್ನು ಗ್ರಹಿಸಿತು. ಮಗು ಜನಿಸಿದ ನಂತರ ಅದನ್ನು ದತ್ತು ನೀಡಲು ಅವಕಾಶ ಕಲ್ಪಿಸುವ ಆಯ್ಕೆಯನ್ನು ಮಹಿಳೆಗೆ ನೀಡಬಹುದು ಎಂದು ಕೋರ್ಟ್‌ ಹೇಳಿದ್ದನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಮಗು ಬೇಕೇ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಕಾನೂನು ಮಹಿಳೆಗೆ ನೀಡಿದೆ ಎಂಬುದನ್ನು ಹೈಕೋರ್ಟ್‌ ಗಮನಿಸಲಿಲ್ಲ.

ವೈದ್ಯಕೀಯ ಗರ್ಭಪಾತ ಕಾಯ್ದೆಯನ್ನು ಹಲವು ವಿಧಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಜನಸಂಖ್ಯಾ ಹೆಚ್ಚಳದ ವಿರುದ್ಧದ ಹೋರಾಟದಲ್ಲಿ ಇದು ಒಂದು ಅಸ್ತ್ರ ಎಂಬಂತೆ ಕಾಣಲಾಗಿದೆ. ಜೀವ ಪರ ಹಾಗೂ ಜೀವ ವಿರೋಧಿ ಎಂಬ ನೆಲೆಗಳಲ್ಲಿಯೂ ಈ ಕಾಯ್ದೆಯನ್ನು ವ್ಯಾಖ್ಯಾನಿಸಲಾಗಿದೆ. ಅಲ್ಲದೆ, ಇದು ದುರ್ಬಳಕೆಗೆ ಅವಕಾಶ ಮಾಡಿಕೊಡುವ ಕಾನೂನು ಎಂದು ಕೂಡ ಕೆಲವರು ಹೇಳಿದ್ದಾರೆ. ಆದರೆ, ಈ ಕಾಯ್ದೆಯ ಹಾಗೂ ಇದಕ್ಕೆ 2021ರಲ್ಲಿ ತರಲಾಗಿರುವ ತಿದ್ದುಪಡಿಯ ನಿಜವಾದ ಗುರಿ ಇರುವುದು ಮಹಿಳೆಗೆ ಆಕೆಯ ದೇಹ ಮತ್ತು ಆರೋಗ್ಯದ ಮೇಲೆ ಹೆಚ್ಚಿನ ಅಧಿಕಾರ ನೀಡುವುದು. ಕಾಯ್ದೆಯ ವ್ಯಾಪ್ತಿಯನ್ನು 2021ರ ತಿದ್ದುಪಡಿಯ ಮೂಲಕ ಹಿಗ್ಗಿಸಲಾಗಿದೆ. ಭಾರತದಲ್ಲಿ ಇಂಥದ್ದೊಂದು ಕಾನೂನು ಜಾರಿಯಲ್ಲಿ ಇದೆ ಎಂಬುದು ಹೆಮ್ಮೆಯ ವಿಷಯ. ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಈ ಮಾದರಿಯ ಕಾನೂನು ಇಲ್ಲ ಎಂಬುದು ಕೂಡ ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT