ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ-ಸ್ವತಂತ್ರವಾಗಿ ಕೆಲಸ ಮಾಡಲು ಆದೀತೇ?

Last Updated 19 ಅಕ್ಟೋಬರ್ 2022, 22:45 IST
ಅಕ್ಷರ ಗಾತ್ರ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಏನಿರುತ್ತದೆ ಎಂಬುದು ರಾಜಕೀಯದಲ್ಲಿ ಆಸಕ್ತಿ ಇರುವವರಿಗೆ ಮೊದಲೇ ಗೊತ್ತಿತ್ತು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲು ಅಣಿಯಾದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆ ಗೆದ್ದುಬಿಟ್ಟಿದ್ದರು, ಎದುರಾಳಿ ಶಶಿ ತರೂರ್ ಅವರು ಸೋಲು ಕಂಡಿದ್ದರು. ಹಾಗೆಂದ ಮಾತ್ರಕ್ಕೆ, ಚುನಾವಣೆಯು ಪಕ್ಷದ ಪಾಲಿಗೆ ಏನೂ ಅಲ್ಲ ಎಂಬುದು ಇದರ ಅರ್ಥವಲ್ಲ. ಎರಡು ದಶಕಗಳಿಗೂ ಹೆಚ್ಚಿನ ಅವಧಿಯ ನಂತರ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷದಲ್ಲಿ ಚುನಾವಣೆ ನಡೆದಿದೆ.

ಅಲ್ಲದೆ, ಈ ಚುನಾವಣೆಯು ಸಾಂಕೇತಿಕ ಎಂಬಷ್ಟಕ್ಕೆ ಸೀಮಿತವಾಗಲಿಲ್ಲ. ತರೂರ್ ಅವರು ಒಟ್ಟು 1,072 ಮತಗಳನ್ನು ಪಡೆದಿದ್ದಾರೆ. ಇದು ಒಟ್ಟು ಮತಗಳ ಪೈಕಿ ಶೇಕಡ 12ರಷ್ಟು. ಖರ್ಗೆ ಅವರು 7,897 ಮತಗಳನ್ನು ಪಡೆದಿದ್ದಾರೆ. ಅಂದರೆ ಖರ್ಗೆ ಅವರಿಗೆ ಬಹಳ ದೊಡ್ಡ ಪ್ರಮಾಣದ ಬೆಂಬಲ ಇದೆ ಎಂದು ಅರ್ಥ. ಖರ್ಗೆ ಅವರನ್ನು ನೆಹರೂ– ಗಾಂಧಿ ಕುಟುಂಬದ ಬೆಂಬಲ ಇರುವ, ಯಥಾಸ್ಥಿತಿ ವಾದದ ಪರವಿರುವ ಅಭ್ಯರ್ಥಿಯಂತೆ ಕಾಣಲಾಗಿತ್ತು. ಆದರೆ, ಪಕ್ಷದ ಒಳಗೆ ಬದಲಾವಣೆ ತರುವುದಾಗಿ ತರೂರ್ ಅವರು ಹೇಳಿದ್ದರು. ಅವರಿಗೆ ಸಿಕ್ಕಿರುವ ಮತಗಳ ಪ್ರಮಾಣವನ್ನು ಗಮನಿಸಿದರೆ, ಬದಲಾವಣೆ ಬಯಸಿದವರ ಪ್ರಮಾಣ ತೀರಾ ಕಡಿಮೆಯೇನೂ ಅಲ್ಲ ಎಂಬುದು ಗೊತ್ತಾಗುತ್ತದೆ.

ಪಕ್ಷದ ಪಾಲಿಗೆ ಇಬ್ಬರೂ ಅಭ್ಯರ್ಥಿಗಳು ಸಮಾನರು. ಹೀಗಿದ್ದರೂ, ಖರ್ಗೆ ಅವರು ತರೂರ್‌ ಅವರಿಗಿಂತ ಹೆಚ್ಚು ಸಮಾನರಾಗಿದ್ದರು ಎಂಬುದು ಪಕ್ಷದ ಒಳಗನ್ನು ಬಲ್ಲವರಿಗೆ ಗೊತ್ತಿತ್ತು. ಚುನಾವಣೆಯಲ್ಲಿ ಸ್ಪರ್ಧಿಸದೆ, ಅಭ್ಯರ್ಥಿಗಳ ಪೈಕಿ ತನ್ನ ಒಲವು ಯಾರ ಕಡೆಗಿದೆ ಎಂಬುದನ್ನು ಬಹಿರಂಗವಾಗಿ ಹೇಳದೆ ನೆಹರೂ– ಗಾಂಧಿ ಕುಟುಂಬವು ಸರಿಯಾದ ಹೆಜ್ಜೆ ಇರಿಸಿತು. ಪಕ್ಷದ ಮೇಲೆ ಈ ಕುಟುಂಬ ಹೊಂದಿರುವ ಹಿಡಿತವು ಈಗಲೂ ಭದ್ರವಾಗಿಯೇ ಇದೆ. ಅಲ್ಲದೆ, ಕುಟುಂಬವು ಖರ್ಗೆ ಅವರ ಪರ ಇತ್ತು ಎಂಬ ಭಾವನೆಯು ಖರ್ಗೆ ಅವರಿಗೆ ಪೂರಕವಾಗಿ ಕೆಲಸ ಮಾಡಿದೆ ಎಂಬುದರಲ್ಲಿ ಅನುಮಾನ ಇಲ್ಲ.

ಖರ್ಗೆ ಅವರು ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ ಸಂದರ್ಭವೇ, ಅವರಿಗೆ ಬೆಂಬಲವಾಗಿ ನೆಹರೂ– ಗಾಂಧಿ ಕುಟುಂಬ ಇದ್ದಿರಬಹುದು ಎಂಬ ನಂಬಿಕೆಗೆ ಪುಷ್ಟಿ ನೀಡುವಂತಿತ್ತು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಪಕ್ಷದ ಅಧ್ಯಕ್ಷರಾಗಲಿ ಎಂಬ ಬಯಕೆ ಸೋನಿಯಾ ಗಾಂಧಿ ಅವರಲ್ಲಿ ಇತ್ತು. ಆದರೆ, ರಾಜಸ್ಥಾನದ ಕಾಂಗ್ರೆಸ್ ಘಟಕದಲ್ಲಿ ನಡೆದ ಅನಿರೀಕ್ಷಿತ ಬಂಡಾಯವು ಖರ್ಗೆ ಅವರು ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡಿತು. ರಾಜಸ್ಥಾನ
ದಲ್ಲಿನ ಬೆಳವಣಿಗೆಗಳು ಪಕ್ಷದ ಮೇಲೆ ನೆಹರೂ– ಗಾಂಧಿ ಕುಟುಂಬದ ಹಿಡಿತ ತುಸು ಸಡಿಲವಾಗುವಂತೆ ಮಾಡಿದವು ಎಂಬ ಮಾತು ಇದೆಯಾದರೂ, ಪಕ್ಷದ ಬಹುತೇಕ ಕಾರ್ಯಕರ್ತರು ಈ ಕುಟುಂಬದ ಜೊತೆ ಭಾವನಾತ್ಮಕ ಬೆಸುಗೆ ಹೊಂದಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ತಾವು ನೆಹರೂ– ಗಾಂಧಿ ಕುಟುಂಬದ ಮಾರ್ಗದರ್ಶನ ಪಡೆಯುವುದಾಗಿ ಖರ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.

ಅವರ ಮಾತಿನ ಅರ್ಥ ಪಕ್ಷದ ಸಂಘಟನೆಯ ವಿಚಾರವಾಗಿ ಎಲ್ಲದಕ್ಕೂ ಈ ಕುಟುಂಬದ ಕಡೆ ಮುಖ ಮಾಡುವುದು ಅಥವಾ ಕುಟುಂಬದ ಜೊತೆ ಸಮಾಲೋಚನೆ ನಡೆಸುವುದು ಎಂದಾದರೆ ಚುನಾವಣೆ ನಡೆಸಿದ್ದು ವ್ಯರ್ಥವಾಗುತ್ತದೆ. ಹೊಸ ಅಧ್ಯಕ್ಷರು ಮುಕ್ತವಾಗಿ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಈ ಕುಟುಂಬವು ಅವಕಾಶ ಮಾಡಿಕೊಡಬೇಕು. ಹೊಸ ಅಧ್ಯಕ್ಷರೇ ಪಕ್ಷದ ಮುಖವಾಣಿ ಆಗಿರಬೇಕು.

ಖರ್ಗೆ ಅವರು ನುರಿತ ರಾಜಕಾರಣಿ. ಅವರು ಪಕ್ಷದಲ್ಲಿ ಹಲವು ಹುದ್ದೆಗಳನ್ನು ಕಂಡವರು. ಸಚಿವರಾಗಿ ರಾಜ್ಯ ಸರ್ಕಾರದಲ್ಲಿ ಹಾಗೂ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಿದವರು. ಯಾವತ್ತೂ ಅವರು ಹೆಸರಿಗೆ ಕಳಂಕ ಅಂಟಿಸಿಕೊಂಡವರಲ್ಲ. ದಲಿತ ಅಸ್ಮಿತೆಯೂ ಅವರಿಗೆ ಇದೆ. ಆದರೆ ಈಗ ಅವರ ಎದುರು ಇರುವ ಸವಾಲುಗಳು ಬೆಟ್ಟದಷ್ಟು ದೊಡ್ಡದಾಗಿವೆ. ಚುನಾವಣೆಗಳಲ್ಲಿ ಒಂದಾದ ನಂತರ ಒಂದರಂತೆ ಸೋಲು ಕಾಣುತ್ತಿರುವ, ನಾಯಕರನ್ನು ಕಳೆದುಕೊಂಡಿರುವ ಹಾಗೂ ನೀತಿ ಮತ್ತು ಕಾರ್ಯತಂತ್ರಗಳ ವಿಚಾರದಲ್ಲಿ ಎಡವುತ್ತಿರುವ ಪಕ್ಷಕ್ಕೆ ಅವರು ಶಕ್ತಿ ತುಂಬಬೇಕಿದೆ.

ತಕ್ಷಣಕ್ಕೆ ಅವರು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಎದುರಿಸಲು ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ರಾಜಸ್ಥಾನದಲ್ಲಿನ ಆಂತರಿಕ ಸಮಸ್ಯೆಗಳನ್ನು ನಿವಾರಿಸಬೇಕಿದೆ. ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಬೇಕಿದೆ. ಮುಂದಿನ ವರ್ಷದಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆಗಳು ಇವೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇವೆಲ್ಲವುಗಳಿಗೆ ಪಕ್ಷವನ್ನು ಸನ್ನದ್ಧವಾಗಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT