ಶುಕ್ರವಾರ, ನವೆಂಬರ್ 22, 2019
27 °C

ಪ್ರಜಾಪ್ರಭುತ್ವ ಸಾಕಾಯಿತೇ ಅಮಿತ್‌ ಶಾ

Published:
Updated:
Prajavani

ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಬಹುಪಕ್ಷ ವ್ಯವಸ್ಥೆಯ ಪ್ರಜಾಪ್ರಭುತ್ವದ ಬಗ್ಗೆ ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೆಲ ಪ್ರಶ್ನೆಗಳನ್ನು ಎತ್ತಿದ್ದರು. ‘ಡೆಕ್ಕನ್ ಹೆರಾಲ್ಡ್‌’ ದಿನಪತ್ರಿಕೆಯಲ್ಲಿ ಇಂದು ಪ್ರಕಟವಾಗಿರುವ ಸಂಪಾದಕೀಯ An undisguised call to end democracy ಗೃಹ ಸಚಿವರ ಪ್ರಶ್ನೆಯ ಹಲವು ಮುಖಗಳನ್ನು ವಿಶ್ಲೇಷಿಸಿದೆ.

–––

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸ್ತಿತ್ವದಲ್ಲಿರುವ ಆಡಳಿತ ವ್ಯವಸ್ಥೆಯನ್ನು ಮತ್ತು ಅದರ ಪ್ರಕ್ರಿಯೆಗಳನ್ನು ಒಂದಾದ ಮೇಲೆ ಒಂದರಂತೆ ಪ್ರಶ್ನಿಸುತ್ತಿದ್ದಾರೆ. ಇದನ್ನು ಕೇವಲ ಆಕಸ್ಮಿಕವೆಂತಲೋ, ಕಾಕತಾಳೀಯವೆಂತಲೋ ತಳ್ಳಿ ಹಾಕಲು ಆಗುವುದಿಲ್ಲ.

ದೇಶವನ್ನು ಒಂದುಗೂಡಿಸಬಲ್ಲ ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಆಗಬೇಕು ಎಂದು ಪ್ರತಿಪಾದಿಸಿದ ಕೆಲವೇ ದಿನಗಳ ನಂತರ ಬಹುಪಕ್ಷ ಪದ್ಧತಿಯ ಅಗತ್ಯ, ಉಪಯೋಗ ಮತ್ತು ಔಚಿತ್ಯವನ್ನು ಅಮಿತ್‌ ಶಾ ಪ್ರಶ್ನಿಸಿದ್ದಾರೆ.

ಏಕಭಾಷಾ ಸೂತ್ರದ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆಗೆ ಹಿಂದಿಯೇತರ ರಾಜ್ಯಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಯಿತು. ನಂತರ ‘ಇತರ ಭಾಷೆಗಳು ಹಿಂದಿಗಿಂತ ಕಡಿಮೆ ಎನ್ನುವುದು ನನ್ನ ಮಾತಿನ ಅರ್ಥವಾಗಿರಲಿಲ್ಲ’ ಎಂದು ಸ್ಪಷ್ಟನೆ ಕೊಟ್ಟರು. ಶಾ ಹೇಳಿಕೆ ಹುಟ್ಟುಹಾಕಿದ ಎಲ್ಲ ಪ್ರಶ್ನೆಗಳಿಗೆ ಈ ಸ್ಪಷ್ಟನೆ ಉತ್ತರವನ್ನೇನೂ ಕೊಡಲಿಲ್ಲ. ಅಮಿತ್ ಶಾ ಅವರಂಥ ಪ್ರಭಾವಿ ವ್ಯಕ್ತಿ ಒಂದು ವಿಚಾರವನ್ನು ಪ್ರತಿಪಾದಿಸಿದ ನಂತರ ಅದನ್ನು ‘ಹಿಂಪಡೆದೆ’ ಎಂದು ಹೇಳಬಹುದು ಅಥವಾ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ ಎಂದು ಸ್ಪಷ್ಟನೆ ಕೊಡಬಹುದು. ಆದರೆ ಇಂಥ ಹಿಂಪಡೆಯುವಿಕೆ ಮತ್ತು ಸ್ಪಷ್ಟನೆಗಳು ಆ ವಿಚಾರದ ಪ್ರಭಾವವನ್ನೇನೂ ಕಡಿಮೆ ಮಾಡಲಾರವು.

ಇಂಥ ವಿಚಾರಗಳನ್ನು ಪ್ರತಿಪಾದಿಸುವುದರ ಉದ್ದೇಶವೂ ಈಗ ಸ್ಪಷ್ಟವಾಗಿಯೇ ಇದೆ. ಜನರಿಗೆ ಪಕ್ಷ, ಸರ್ಕಾರದ ಮುಂದಿನ ಯೋಜನೆಗಳ ಸುಳಿವನ್ನು ಇಂಥ ಹೇಳಿಕೆಗಳು ನೀಡುತ್ತವೆ. ಜನರ ನಡುವೆ ಈ ವಿಚಾರಗಳನ್ನು ಚರ್ಚೆಯ ವಿಷಯವಾಗಿಸುವುದು ಸಹ ಇಂಥ ಹೇಳಿಕೆಗಳ ಉದ್ದೇಶ ಆಗಿರುತ್ತವೆ. ತಮ್ಮ ವಿಚಾರವನ್ನು ಸಮಾಜಕ್ಕೆ ನಾಜೂಕಾಗಿ ದಾಟಿಸಿ, ಅದಕ್ಕೆ ಬರಬಹುದಾದ ಪ್ರತಿಕ್ರಿಯೆಯನ್ನು ಅಂದಾಜಿಸಿ ಮುಂದಿನ ದಿನಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುವ ಉದ್ದೇಶವೂ ಇರುತ್ತದೆ. ಹೀಗೆ ಮಾಡುವುದರಿಂದ ನೀತಿ ನಿರೂಪಣೆ ಹಂತದಲ್ಲಿ ಮುಂದೆಂದೋ ಮಾಡುವ ಗಮನಾರ್ಹ ಬದಲಾವಣೆಗೆ ಜನರ ಪ್ರತಿರೋಧವೂ ಕಡಿಮೆ ಆಗಿರುತ್ತದೆ ಎನ್ನುವ ನಿರೀಕ್ಷೆಯನ್ನು ಅನೇಕ ಸಂದರ್ಭಗಳಲ್ಲಿ ಅಧಿಕಾರದಲ್ಲಿರುವವರು ಹೊಂದಿರುತ್ತಾರೆ.

ಬಹುಪಕ್ಷ ವ್ಯವಸ್ಥೆ ಕುರಿತು ಅಮಿತ್ ಶಾ ನೀಡಿರುವ ಹೇಳಿಕೆಯು ದೇಶದ ಒಗ್ಗಟ್ಟಿಗೆ ಹಿಂದಿ ಭಾಷೆ ಪೂರಕ ಎನ್ನುವ ಹೇಳಿಕೆಗಿಂತಲೂ ಹೆಚ್ಚು ಅಪಾಯಕಾರಿ. ಹಲವು ವಿಚಾರಗಳನ್ನು ಪ್ರತಿಪಾದಿಸುವ ರಾಜಕೀಯ ಪಕ್ಷಗಳನ್ನು ಆಧರಿಸಿ ರೂಪುಗೊಂಡ, ಬಹುತ್ವವನ್ನು ಒಪ್ಪಿಕೊಂಡ ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯವನ್ನೇ ಅಮಿತ್ ಶಾ ಅವರ ಈ ಹೇಳಿಕೆ ಪ್ರಶ್ನಿಸುವಂತಿದೆ.

‘ಬಹುಪಕ್ಷದ ಪ್ರಜಾಪ್ರಭುತ್ವದಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುವುದೇ’ ಎಂದು ಅಮಿತ್‌ ಶಾ ‘ನ್ಯೂ ಇಂಡಿಯಾ, ಗ್ರೇಟ್ ಇಂಡಿಯಾ’ ಸಮಾವೇಶದಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದರು. ‘ದೇಶದ ನಿರ್ಮಾತೃಗಳ ಆಶಯಗಳನ್ನು ಈಡೇರಿಸಲು ಸಾಧ್ಯವಾಗಿದೆಯೇ’ ಎಂಬ ಅನುಮಾನವನ್ನೂ ಹಂಚಿಕೊಂಡಿದ್ದರು.

ದೇಶದ ನಿರ್ಮಾತೃಗಳ ಬಗ್ಗೆ ಅಮಿತ್‌ ಶಾ ಉದಾರ ಧೋರಣೆ ತೋರಲು ಕಾರಣವಿದೆ. ಒಮ್ಮೆಲೆ ಎಲ್ಲ ಹಿರಿಯರನ್ನು ಸಾರಾಸಗಟಾಗಿ ಟೀಕಿಸುವುದು ಅಥವಾ ಹೀಗಳೆಯುವುದು ಈ ಹಂತದಲ್ಲಿ ತಮಗೆ ಅಷ್ಟು ಪೂರಕವಲ್ಲ ಎಂದು ಅವರಿಗೆ ಈಗ ಅರ್ಥವಾಗಿದೆ.

ಭಾರತಂಥ ವೈವಿಧ್ಯಮಯ ಸಂಸ್ಕೃತಿ ಇರುವ ದೇಶಕ್ಕೆ ಬಹುಪಕ್ಷೀಯ ವ್ಯವಸ್ಥೆ ಅನಿವಾರ್ಯ ಎಂದು ದೇಶದ ನಿರ್ಮಾತೃಗಳು ನಿರ್ಧರಿಸಿದ್ದರು. ಅಮಿತ್ ಶಾ ಇದೀಗ ಪಟ್ಟಿ ಮಾಡುತ್ತಿರುವ ಭ್ರಷ್ಟಾಚಾರ, ಭದ್ರತೆಯ ಸಮಸ್ಯೆಗಳು, ನೀತಿ ನಿರೂಪಣೆಯ ಗೊಂದಲಗಳು, ದೃಷ್ಟಿಕೋನದ ಸಮಸ್ಯೆಗಳಿಗೆ ಅಥವಾ ಅವೆಲ್ಲಕ್ಕೂ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ದೇಶ ಒಪ್ಪಿಕೊಂಡಿದ್ದು ಕಾರಣವಾಗಿರಲಾರದು. ಬಹುಪಕ್ಷ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದು ತಪ್ಪು ಎನ್ನಲು ಇದು ನೆಪವೂ ಆಗಲಾರದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳಿವೆ. ಆದರೂ ನಮ್ಮ ಕಾಲದ ಮಟ್ಟಿಗೆ ಇದನ್ನು ಅತ್ಯುತ್ತಮ ಆಡಳಿತ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಇದು ಅತ್ಯಂತ ಪರಿಣಾಮಕಾರಿ ವ್ಯವಸ್ಥೆ ಆಗದಿರಬಹುದು. ಆದರೆ ಇದು ಬಹುತೇಕರನ್ನೂ ಒಳಗೊಳ್ಳುವ ಮತ್ತು ಬಹುತೇಕರನ್ನು ಪ್ರತಿನಿಧಿಸುವ ವ್ಯವಸ್ಥೆ ಆಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಎದುರಾಗಿ ಏಕಪಕ್ಷೀಯ ವ್ಯವಸ್ಥೆ ಜಾರಿಗೆ ಬರಬಹುದು. ಆಗಲೂ ಅಮಿತ್‌ ಶಾ ಅವರು ಪಟ್ಟಿ ಮಾಡಿರುವ ಎಲ್ಲ ಸಮಸ್ಯೆ ಮತ್ತು ಗೊಂದಲಗಳು ಇನ್ನಷ್ಟು ದೊಡ್ಡದಾಗಿ ಕಾಣಿಸಿಕೊಳ್ಳಬಹುದು. ಏಕಪಕ್ಷ ವ್ಯವಸ್ಥೆಯ ಸರ್ಕಾರಗಳು ಅಧಿಕಾರಕ್ಕೆ ಬಂದರೆ ಅವು ಸಹಜವಾಗಿಯೇ ನಿರಂಕುಶ ಧೋರಣೆಯನ್ನು ಪ್ರದರ್ಶಿಸುತ್ತವೆ. ಜನರಿಗೆ ಸರ್ಕಾರ ಬದಲಾಯಿಸಲು ಅವಕಾಶವನ್ನೇ ನೀಡದಂತೆ, ಸದಾ ಅಧಿಕಾರದಲ್ಲಿ ಉಳಿದುಕೊಳ್ಳಲು ಸಲ್ಲದ ಮಾರ್ಗಗಳನ್ನು ಅನುಸರಿಸುವ ಅಪಾಯವೂ ಇಲ್ಲದಿಲ್ಲ. ಅಮಿತ್‌ ಶಾ ಈಗ ಪ್ರತಿಪಾದಿಸುತ್ತಿರುವ ಈ ವಿಚಾರವು ಬಿಜೆಪಿಯ ಈವರೆಗಿನ ‘ಕಾಂಗ್ರೆಸ್ ಮುಕ್ತ ಭಾರತ’ ಹೇಳಿಕೆಯನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದು ‘ವಿರೋಧವೇ ಇಲ್ಲದ ಭಾರತ’ವನ್ನು ಪ್ರತಿಪಾದಿಸುವ ಪ್ರಯತ್ನದಂತೆ ಕಾಣಿಸುತ್ತದೆ.

ಇದರ ಇನ್ನೊಂದು ಅರ್ಥ, ಇದು ಸ್ಪಷ್ಟವಾಗಿ ಪ್ರಜಾಪ್ರಭುತ್ವ ಇಲ್ಲದ ಭಾರತಕ್ಕೆ ಅಮಿತ್‌ ಶಾ ಮಾಡಿದ ಶಿಫಾರಸು.

ಪ್ರತಿಕ್ರಿಯಿಸಿ (+)