ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಉಲ್ಬಣಿಸುತ್ತಿರುವ ಕೊರೊನಾ ಸೋಂಕು– ಲಾಕ್‌ಡೌನ್‌ ಕೊನೆಯ ಅಸ್ತ್ರವಾಗಿರಲಿ

Last Updated 3 ಜನವರಿ 2022, 19:30 IST
ಅಕ್ಷರ ಗಾತ್ರ

ಕೊರೊನಾದ ಮೂರನೇ ಅಲೆ ಬೂದಿ ಮುಚ್ಚಿದ ಕೆಂಡದಂತೆ ಕಾಣಿಸುತ್ತಿರುವ ಸಂದರ್ಭದಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಶುರುವಾಗಿವೆ. ತೀವ್ರಗೊಳ್ಳುತ್ತಿರುವ ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯವಾದ ಕ್ರಮಗಳನ್ನು ಜಾರಿಗೊಳಿಸುವುದು ಹಾಗೂ ವೈದ್ಯಕೀಯ ವ್ಯವಸ್ಥೆಯನ್ನು ಬಲಗೊಳಿಸುವುದು ಸದ್ಯಕ್ಕೆ ಸರ್ಕಾರದ ಆದ್ಯತೆಯಾಗಬೇಕು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಲಾಕ್‌ಡೌನ್‌ ಎನ್ನುವುದು ಹೋರಾಟದ ಕೊನೆಯ ಅಸ್ತ್ರ ಆಗಬೇಕೇ ಹೊರತು ಮೊದಲ ನಡೆಯಲ್ಲ. ಸೋಂಕಿನ ಅಲೆ ಕಾಣಿಸಿಕೊಂಡಾಗಲೆಲ್ಲ ಲಾಕ್‌ಡೌನ್‌ ಹೇರುವುದು ಅಥವಾ ಹೇರಬೇಕೆಂದು ಬಯಸುವುದು ವಿವೇಕದ ನಡೆಯಲ್ಲ. ಕಳೆದ ಎರಡು ವರ್ಷಗಳಲ್ಲಿ ಜಾರಿ ಗೊಂಡಿದ್ದ ಲಾಕ್‌ಡೌನ್‌ಗಳಿಂದಾಗಿ ದೇಶದಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳು ಕುಂಟತೊಡಗಿ, ಜನಸಾಮಾನ್ಯರ ಬದುಕು ದುಸ್ತರವಾಗಿತ್ತು. ಈ ಅವಧಿಯಲ್ಲಿ ಕೊರೊನಾದಿಂದ ಉಂಟಾದ ಸಾವುನೋವಿನ ನಿಖರ ಅಂದಾಜು ಈವರೆಗೂ ಸಿಕ್ಕಿಲ್ಲ. ಆ ಕಹಿನೆನಪುಗಳು ಮರುಕಳಿಸುವುದನ್ನು ಯಾರೂ ಬಯಸಲಾರರು. ಲಾಕ್‌ಡೌನ್‌ ಬಗೆಗಿನ ಚರ್ಚೆಗಳು ಜನಸಾಮಾನ್ಯರನ್ನು ಆತಂಕಕ್ಕೆ ಈಡುಮಾಡುವುದರ ಜೊತೆಗೆ, ಕೊರೊನಾ ವಿರುದ್ಧದ ಹೋರಾಟದ ಬಲಗುಂದಿಸುತ್ತವೆ. ಕೋವಿಡ್‌ನ ಮೂರನೇ ಅಲೆಯನ್ನು ಎದುರಿಸಲು ಅಗತ್ಯವಾದ ಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವುದರ ಬಗ್ಗೆ ಯೋಚಿಸುವುದು ಮತ್ತು ಪ್ರಯತ್ನಿಸುವುದು ಸದ್ಯದ ನಮ್ಮ ಆದ್ಯತೆಯಾಗಬೇಕೇ ಹೊರತು, ಲಾಕ್‌ಡೌನ್‌ ಜಾರಿಯ ಚಿಂತನೆಯಲ್ಲ.

‘ಕೋವಿಡ್‌ ಹರಡದಂತೆ ಜನರೇ ಸ್ವಯಂ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಮಾಸ್ಕ್‌ ಧರಿಸಬೇಕು, ಭೌತಿಕ ಅಂತರ ಕಾಪಾಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿ ದ್ದಾರೆ. ಕೋವಿಡ್‌ನಿಂದ ರಕ್ಷಣೆ ಪಡೆದುಕೊಳ್ಳಲು ಇವಲ್ಲದೆ ಬೇರೆ ದಾರಿಗಳೇ ಇಲ್ಲ ಎಂಬುದು ನಮ್ಮ ಗಮನದಲ್ಲಿ ಇರಬೇಕು. ಕೊರೊನಾ ವಿರುದ್ಧಈಗ ನಡೆಯಬೇಕಾದ ಹೋರಾಟದ ನೇತೃತ್ವವನ್ನು ಜನರೇ ವಹಿಸಿಕೊಳ್ಳಬೇಕು ಹಾಗೂ ಆ ಹೋರಾಟಕ್ಕೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಸರ್ಕಾರ ಒದಗಿಸಬೇಕು. ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ಕೆಲವು ದೇವಸ್ಥಾನಗಳಲ್ಲಿ ಕಾಣಿಸಿಕೊಂಡ ನೂಕುನುಗ್ಗಲು ಆತಂಕ ಮೂಡಿಸುವಂತಹದ್ದು. ಸೋಂಕಿನ ಆತಂಕದ ಸಂದರ್ಭದಲ್ಲೂ ಚುನಾವಣಾ ರ‍್ಯಾಲಿಗಳು, ರಾಜಕಾರಣಿಗಳ ಸಾರ್ವ ಜನಿಕ ಪ್ರಹಸನಗಳು ಎಗ್ಗಿಲ್ಲದೆ ನಡೆಯುತ್ತವೆ. ಇಂಥ ಬೇಜವಾಬ್ದಾರಿ ನಡವಳಿಕೆಗಳ ವಿರುದ್ಧ ಸಾರ್ವಜನಿಕ ಪ್ರತಿರೋಧ ರೂಪುಗೊಳ್ಳಬೇಕು. ಅದಕ್ಕೆ ಮೊದಲು ಸ್ವಯಂ ನಿಯಂತ್ರಣ ಕ್ರಮಗಳಿಗೆ ಸಮಾಜ ಬದ್ಧವಾಗಬೇಕು. ಸಾರ್ವಜನಿಕರು ಮಾಸ್ಕ್‌ ಧರಿಸುವುದಕ್ಕೆ ಹಾಗೂ ಭೌತಿಕ ಅಂತರ ಪಾಲಿಸಲಿಕ್ಕೆ ಸ್ವಯಂಪ್ರೇರಣೆ ಕಾರಣವಾಗಬೇಕೇ ವಿನಾ ಕಾನೂನು ನಿರ್ಬಂಧಗಳಲ್ಲ. ಜನಸಾಮಾನ್ಯರ ಬದುಕು ಮರಳಿ ಹಳಿ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಮತ್ತೆ ಆರಂಭಗೊಂಡಿವೆ. ಇಂಥ ಸಂದಿಗ್ಧದ ಸನ್ನಿವೇಶ ಲಾಕ್‌ಡೌನ್‌ ಮೂಲಕ ಮತ್ತೆ ವಿಷಮಿಸುವ ಅವಕಾಶವನ್ನು ಸಮಾಜ ತಂದುಕೊಳ್ಳಬಾರದು.

ಕೋವಿಡ್‌ ಹೊಸ ಅಲೆ ಈಗಾಗಲೇ ಆರಂಭಗೊಂಡಿದ್ದು, ಫೆಬ್ರುವರಿ ಕೊನೆ ಅಥವಾ ಮಾರ್ಚ್‌ ವೇಳೆಗೆ ತೀವ್ರವಾಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಕೋವಿಡ್‌ ಹೊಸ ಪ್ರಕರಣಗಳ ದೃಢ ಪ್ರಮಾಣದ ಆಧಾರದಲ್ಲಿ ವಲಯವಾರು ನಿರ್ಬಂಧಗಳ ಜಾರಿಗೆ ರಾಜ್ಯ ಮಟ್ಟದ ‘ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ’ (ಟಿಎಸಿ) ಸರ್ಕಾರಕ್ಕೆ ಸಲಹೆ ನೀಡಿದೆ. ಒಂದು ವಾರದ ಅವಧಿಯಲ್ಲಿ ಕೋವಿಡ್‌ ದೃಢ ಪ್ರಮಾಣದ ದರ ಶೇಕಡ 5 ದಾಟುವ ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಆಮ್ಲಜನಕ ಸಹಿತ ಅಥವಾ ಐಸಿಯು ಹಾಸಿಗೆಗಳಲ್ಲಿ ಶೇ 40ರಷ್ಟು ಭರ್ತಿಯಾದರೂ ಲಾಕ್‌ಡೌನ್‌ ಜಾರಿಗೊಳಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಸೋಂಕಿನ ಪ್ರಮಾಣಕ್ಕೆ ಅನುಸಾರವಾಗಿ ವಿವಿಧ ವಲಯಗಳಲ್ಲಿ ಜಾರಿಗೆ ತರಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಲಾಗಿದೆ. ಕೊರೊನಾದ ಮೂರನೇ ಅಲೆ ಹಾಗೂ ಓಮೈಕ್ರಾನ್‌ ಬಗೆಗಿನ ಹೇಳಿಕೆ–ಅಭಿಪ್ರಾಯಗಳು ಏನೇ ಇರಲಿ, ಕೊರೊನಾ ವಿರುದ್ಧದ ಈ ಬಾರಿಯ ಹೋರಾಟ ಹಿಂದೆಂದಿಗಿಂತಲೂ ಹೆಚ್ಚು ಸಶಕ್ತವಾದುದು. ಕೊರೊನಾದ ಎರಡು ಅಲೆಗಳ ಅನುಭವ ನಮ್ಮೊಂದಿಗಿದೆ. ಹಿರಿಯ ನಾಗರಿಕರು ಹಾಗೂ ದುಡಿಯುವ ವರ್ಗದ ಬಹುತೇಕರು ಲಸಿಕೆ ಪಡೆದಿರುವುದು ಕೂಡ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ರಾಜ್ಯದಲ್ಲಿ 15ರಿಂದ 18 ವರ್ಷದ ವಯೋಮಿತಿಯ 31.75 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಈ ತಿಂಗಳ 3ರಿಂದ ಆರಂಭವಾಗಿದ್ದು, ಈ ಅಭಿ ಯಾನ ಕೂಡ ಕೊರೊನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಲಿದೆ. ಈ ಸಕಾರಾತ್ಮಕ ಅಂಶಗಳ ಕಾರಣದಿಂದಾಗಿ ಕೊರೊನಾ ಮೂರನೇ ಅಲೆಯ ವಿರುದ್ಧದ ಹೋರಾಟ ಭಯಮುಕ್ತವಾಗಿರಬೇಕು. ಜನರಲ್ಲಿ ಧೈರ್ಯ–ಭರವಸೆ ತುಂಬಲು ಸರ್ಕಾರ ಹಾಗೂ ಮಾಧ್ಯಮಗಳು ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT