ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಾಜೀವ್‌ ಹಂತಕರ ಕ್ಷಮಾದಾನ; ಇನ್ನಾದರೂ ತೀರ್ಮಾನ ಕೈಗೊಳ್ಳಿ

Last Updated 28 ಮೇ 2021, 19:30 IST
ಅಕ್ಷರ ಗಾತ್ರ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಗಿ 30 ವರ್ಷಗಳೇ ಕಳೆದಿವೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಮಂದಿಗೂ ಕ್ಷಮಾದಾನ ನೀಡಬೇಕೆಂಬ ತಮಿಳುನಾಡು ಸರ್ಕಾರದ ಮನವಿಗೆ ರಾಜ್ಯಪಾಲರು ಇನ್ನೂ ಸಮ್ಮತಿಯನ್ನು ವ್ಯಕ್ತಪಡಿಸಿಲ್ಲ. 30 ವರ್ಷಗಳಿಂದ ಜೈಲಿನಲ್ಲಿರುವವರ ಕ್ಷಮಾದಾನ ಅರ್ಜಿಯು ಕೋರ್ಟ್, ರಾಷ್ಟ್ರಪತಿ ಕಚೇರಿ ಮತ್ತು ರಾಜ್ಯಪಾಲರ ಕಚೇರಿಯ ಮಧ್ಯೆ ಅಲೆದಾಡುತ್ತಲೇ ದೀರ್ಘ ಅವಧಿ ದಾಟಿ ಹೋಗಿದೆ.

ಹತ್ಯೆಯ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ನಳಿನಿ, ಆಕೆಯ ಗಂಡ ಮುರುಗನ್, ಪೇರ್‌ಅರಿವಳನ್‌ ಮತ್ತು ಇತರ ನಾಲ್ವರಿಗೆ ಕ್ಷಮಾದಾನ ನೀಡಬೇಕೆಂದು ರಾಜ್ಯಪಾಲರಿಗೆ ತಮಿಳುನಾಡು ಸರ್ಕಾರ ಶಿಫಾರಸು ಮಾಡಿ ಎರಡೂವರೆ ವರ್ಷಗಳು ದಾಟಿವೆ. ಇವರಲ್ಲಿ ಪೇರ್‌ಅರಿವಳನ್‌ ಸಲ್ಲಿಸಿದ ಕ್ಷಮಾದಾನ ಅರ್ಜಿಯು ಸುಪ್ರೀಂ ಕೋರ್ಟಿನ ಮುಂದೆ ಈ ವರ್ಷದ ಆರಂಭದಲ್ಲಿ ವಿಚಾರಣೆಗೆ ಬಂದಿತ್ತು. ಕ್ಷಮಾದಾನದ ವಿಷಯದಲ್ಲಿ ರಾಜ್ಯಪಾಲರು ನಿರ್ಧಾರ ಪ್ರಕಟಿಸಲು ತೀರಾ ವಿಳಂಬ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ಅಭಿಪ್ರಾಯಪಟ್ಟಿದ್ದರು. ರಾಜ್ಯಪಾಲರು ಈ ವಿಷಯದಲ್ಲಿ ನಿರ್ಧಾರವೊಂದನ್ನು ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ 2018ರಲ್ಲೇ ಸೂಚಿಸಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂಬ ಕಾರಣದಿಂದಲೋ ಏನೋ ರಾಜ್ಯಪಾಲರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಕಚೇರಿಯು ಅರ್ಜಿ ಕುರಿತ ತೀರ್ಮಾನವನ್ನು ಮುಂದೂಡುತ್ತಲೇ ಇವೆ. 2015ರಲ್ಲಿ ಕ್ಷಮಾದಾನ ಕುರಿತ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ, ‘ಕ್ಷಮಾದಾನ ನೀಡುವ ಅಧಿಕಾರ ರಾಷ್ಟ್ರಪತಿ ಮತ್ತು ರಾಜ್ಯಪಾಲ ಇಬ್ಬರಿಗೂ ಇದೆ. ಇವರಲ್ಲಿ ಯಾರಾದರೂ ಒಬ್ಬರು ತೀರ್ಮಾನ ತೆಗೆದುಕೊಂಡರೂ ಆಗುತ್ತದೆ’ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಆದರೆ ಈ ಸಂಬಂಧ ಹಲವೆಡೆ, ಹಲವು ರೀತಿಯ ಕಾನೂನು ತಕರಾರುಗಳನ್ನು ಎತ್ತಲಾಯಿತು. ಜನವರಿಯಲ್ಲಿ ಸುಪ್ರೀಂ ಕೋರ್ಟಿಗೆ ಕೇಂದ್ರ ಸರ್ಕಾರ ನೀಡಿದ ಉತ್ತರದಲ್ಲಿ ‘ಕ್ಷಮಾದಾನದ ಕುರಿತು ರಾಜ್ಯಪಾಲರು ನಾಲ್ಕೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದಿತ್ತು. ಆದರೆ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳ ಕ್ಷಮಾದಾನದ ಅರ್ಜಿ ಇತ್ಯರ್ಥ ಆಗಲೇ ಇಲ್ಲ.

ಕಾನೂನಿನ ಅಡ್ಡಿ ಆತಂಕಗಳನ್ನು ಮುಂದೊಡ್ಡಿ ಈ ಅಪರಾಧಿಗಳ ಜೈಲುವಾಸದ ಅವಧಿಯನ್ನು ಮುಂದೂಡುವುದರಲ್ಲಿ ಅರ್ಥವಿಲ್ಲ. ಕಳೆದ 30 ವರ್ಷಗಳಿಂದ ಅಪರಾಧಿಗಳು ಜೈಲಿನಲ್ಲೇ ಇರುವುದರಿಂದ ಅವರು ಎಸಗಿದ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಿದೆ. ಮಾತ್ರವಲ್ಲ, ಈ ಸುದೀರ್ಘ ಅವಧಿಯಲ್ಲಿ ಅವರೆಲ್ಲ ಬಹಳಷ್ಟು ಮಾನಸಿಕ ಕ್ಷೋಭೆಯನ್ನೂ ಅನುಭವಿಸಿದ್ದಾರೆ. ಕ್ಷಮಾದಾನ ನೀಡಲು ಕೇಂದ್ರ ಸರ್ಕಾರಕ್ಕೆ ಮನಸ್ಸಿಲ್ಲ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗಿದೆ. ಆ ಕಾರಣದಿಂದಲೇ ರಾಜ್ಯಪಾಲರು ಅರ್ಜಿಯ ವಿಲೇವಾರಿಗೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸುತ್ತಿರಬಹುದು ಎಂಬ ಅನುಮಾನ ಮೂಡುತ್ತದೆ. ಈಗ ರಾಷ್ಟ್ರಪತಿಯವರು ಈ ಅರ್ಜಿಯನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರದ ಶಿಫಾರಸನ್ನು ಒಪ್ಪಿಕೊಳ್ಳಬೇಕು.

ತಮಗಿರುವ ಸಂವಿಧಾನದತ್ತ ವಿವೇಚನಾ ಅಧಿಕಾರ ಬಳಸಿ ಅಪರಾಧಿಗಳಿಗೆ ಬಿಡುಗಡೆಯ ಭಾಗ್ಯ ಒದಗಿಸಬೇಕು. ಸ್ವತಃ ರಾಜೀವ್ ಗಾಂಧಿಯವರ ಕುಟುಂಬದ ಸದಸ್ಯರೇ ಆ ಅಪರಾಧಿಗಳನ್ನು ಕ್ಷಮಿಸಿದ್ದಾರೆ. ಹಾಗಿರುವಾಗ ರಾಜ್ಯಪಾಲರು ಕ್ಷಮೆಯ ಕುರಿತ ತೀರ್ಮಾನವನ್ನು ಮುಂದೂಡುವುದರಲ್ಲಿ ಅರ್ಥವಿಲ್ಲ. ನ್ಯಾಯದಾನದ ಉದ್ದೇಶ ಪ್ರತೀಕಾರ ತೀರಿಸುವುದಲ್ಲ. ನ್ಯಾಯದಾನಕ್ಕೊಂದು ಮಾನವೀಯ ಮುಖವೂ ಇದೆ. ಶಿಕ್ಷೆ ವಿಧಿಸುವುದು ಮನುಷ್ಯನ ಮಾನಸಿಕ ಪರಿವರ್ತನೆಗೇ ಹೊರತು ಆತನನ್ನು ಮಾನಸಿಕವಾಗಿ ಕುಗ್ಗಿಸುವುದಕ್ಕಲ್ಲ. ಈ ರೀತಿಯ ವಿಳಂಬದಿಂದಾಗಿ ಸರ್ಕಾರಕ್ಕಷ್ಟೇ ಕೆಟ್ಟ ಹೆಸರು ಬರುವುದಿಲ್ಲ, ಒಟ್ಟು ಸಮಾಜದ ಮಾನವೀಯ ಮತ್ತು ನೈತಿಕ ನಿಲುವಿನ ಸ್ವಭಾವಕ್ಕೂ ಕಳಂಕ ಮೆತ್ತಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT