ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರ ನಿರ್ಮಾಣ: ತೀರ್ಪಿಗೆ ಕಾಯುವುದೊಂದೇ ನೇರ ದಾರಿ

Last Updated 30 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಅಯೋಧ್ಯೆಯ ರಾಮಮಂದಿರ- ಬಾಬರಿ ಮಸೀದಿ ವಿವಾದದ ಜಾಗ ಯಾರಿಗೆ ಸೇರುತ್ತದೆಂಬ ವ್ಯಾಜ್ಯದ ವಿಚಾರಣೆ ತ್ವರಿತವಾಗಿ ನಡೆದು ಲೋಕಸಭಾ ಚುನಾವಣೆಗೆ ಮುನ್ನವೇ ತೀರ್ಪು ಹೊರಬೀಳುವ ನಿರೀಕ್ಷೆ ಬಿಜೆಪಿ- ಸಂಘಪರಿವಾರದಲ್ಲಿ ಕಳೆದ ತಿಂಗಳು ಮೂಡಿತ್ತು. ವಿಚಾರಣೆ ಆರಂಭಿಸುವ ಅಂಶವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ನಿಗದಿಯಾಗಿದ್ದಂತೆ ಸೋಮವಾರ (ಅ.29) ಪರಿಗಣಿಸಿತು.

ಹೊಸ ನ್ಯಾಯಪೀಠವು 2019ರ ಜನವರಿ ಮೊದಲ ವಾರ ಈ ಸಂಬಂಧ ತೀರ್ಮಾನಿಸುತ್ತದೆ ಎಂದು ಸಾರಿತು. ನ್ಯಾಯಾಲಯದ ಈ ಆದೇಶವು ಬಿಜೆಪಿ ಮತ್ತು ಸಂಘಪರಿವಾರವನ್ನು ತೀವ್ರ ಅಸಮಾಧಾನ ಮತ್ತು ನಿರಾಶೆಗೆ ನೂಕಿದೆ. ಎರಡೂ ಸಂಘಟನೆಗಳ ಕೆಲ ಕಟ್ಟರ್‌ವಾದಿಗಳು ಉಗ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಗತ್ಯಬಿದ್ದರೆ ಮೋದಿ ನೇತೃತ್ವದ ಸರ್ಕಾರ ವಿಶೇಷ ಕಾನೂನು ತರಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ಆಗ್ರಹಪಡಿಸಿದ್ದರು.

ಸೋಮವಾರ ನ್ಯಾಯಾಲಯದ ಆದೇಶ ಹೊರಬಿದ್ದ ನಂತರ ವಿಶೇಷ ಕಾನೂನಿನ ಬೇಡಿಕೆಯ ಕೂಗು ತಾರಕಕ್ಕೆ ಏರತೊಡಗಿದೆ. ನ್ಯಾಯಾಲಯದ ತೀರ್ಪಿಗೆ ಕಾಯಲು ತಯಾರಿಲ್ಲ ಎಂಬುದೇ ಈ ಆಗ್ರಹದ ಹಿಂದಿನ ದನಿಯಾಗಿದೆ. ಬಾಬರಿ ಮಸೀದಿಯನ್ನು ಕರಸೇವಕರಿಂದ ಕಾಪಾಡುವುದಾಗಿ ಸುಪ್ರೀಂ ಕೋರ್ಟ್‌ಗೆ ಬರೆದುಕೊಟ್ಟಿದ್ದ ಮುಚ್ಚಳಿಕೆಯನ್ನು ಅಂದಿನ ಉತ್ತರಪ್ರದೇಶ ಬಿಜೆಪಿ ಸರ್ಕಾರ ಉಲ್ಲಂಘಿಸಿ ಸಾಂವಿಧಾನಿಕ ಸಂಸ್ಥೆಗೆ ಅಪಚಾರ ಎಸಗಿತ್ತು. ಇದೀಗ ಅತ್ಯುಚ್ಚ ನ್ಯಾಯಾಲಯದ ತೀರ್ಪನ್ನು ನಿರಸ್ತಗೊಳಿಸಲು ಸುಗ್ರೀವಾಜ್ಞೆ ತರುವ ಮಾತುಗಳು ನಡೆದಿವೆ. ಸಂವಿಧಾನವನ್ನು ಸುತ್ತು ಬಳಸಿನ ದಾರಿಗಳಿಂದ ಭಂಗಗೊಳಿಸುವ ಇಂತಹ ಕೃತ್ಯಗಳು ಖಂಡನೀಯ.

ಬಿಜೆಪಿ, 2019ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಪುನಃ ಸರ್ಕಾರ ರಚಿಸುವುದೇ ಅಲ್ಲದೆ ಮುಂದಿನ 50 ವರ್ಷಗಳ ಕಾಲ ಅಧಿಕಾರ ನಡೆಸುವ ಆತ್ಮವಿಶ್ವಾಸವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವ್ಯಕ್ತಪಡಿಸಿದ್ದಾರೆ. ಮೋದಿಯವರು ತಾವು ನೀಡಿದ್ದ ಭರವಸೆಗಳ ಈಡೇರಿಕೆಯ ಗಡುವುಗಳನ್ನು ಮುಂದಿನ ಅಧಿಕಾರಾವಧಿಗೆ ವಿಸ್ತರಿಸಿದ್ದಾರೆ. ಲೋಕಸಭಾ ಚುನಾವಣೆಗಳು ಕೇವಲ ಆರು ತಿಂಗಳು ದೂರದಲ್ಲಿವೆ. ಅಧಿಕಾರಕ್ಕೆ ಮರಳುವ ಅಚಲ ಆತ್ಮವಿಶ್ವಾಸ ಉಳ್ಳವರಿಗೆ ಆರು ತಿಂಗಳು ಕಾಯುವುದು ಕಷ್ಟ ಆಗಬಾರದು.

ಇಲ್ಲವೇ ಆರೇ ತಿಂಗಳು ಕಾಯಲು ಇಷ್ಟು ಚಡಪಡಿಕೆ, ಅಸಹನೆ, ಆಕ್ರೋಶ ಯಾಕೆಂದು ಜನಸಮುದಾಯಗಳಿಗೆ ಮನವರಿಕೆ ಮಾಡಿಸಬೇಕು. ಈ ಹಿಂದೆ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮಿತ್ರಪಕ್ಷಗಳ ಊರುಗೋಲಿನ ಅಗತ್ಯವಿತ್ತು. ಸ್ವಂತ ಬಹುಮತ ಇಲ್ಲದ ಕಾರಣ ರಾಮಮಂದಿರ ಸೇರಿದಂತೆ, ಏಕರೂಪ ನಾಗರಿಕ ಸಂಹಿತೆ ಹಾಗೂ ಕಾಶ್ಮೀರಕ್ಕೆ ಸಾಂವಿಧಾನಿಕ ವಿಶೇಷ ಸ್ಥಾನಮಾನ ರದ್ದು ವಿಷಯಗಳನ್ನು ಬಿಜೆಪಿ ತನ್ನ ಕಾರ್ಯಸೂಚಿಯಿಂದ ಹಂಗಾಮಿಯಾಗಿ ಹಿಂದಕ್ಕೆ ಸರಿಸಿತ್ತು. 2014ರಲ್ಲಿ ಮೋದಿಯವರಿಗೆ ಬಲಿಷ್ಠ ಜನಾದೇಶ ದೊರೆಯಿತು.

ಬಿಜೆಪಿಗೆ ಸರಳ ಬಹುಮತವೂ ಕೈಗೂಡಿತು. ಆದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿಶೇಷ ಕಾಯ್ದೆ- ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಮಾತುಗಳು ಕೇಳಿಬರದೆ ಇದ್ದುದು ಆಶ್ಚರ್ಯ. ಚುನಾವಣೆಗಳು ಕದ ಬಡಿದಿರುವಾಗ ಮಂದಿರದ ವಿಷಯಕ್ಕೆ ತಿದಿ ಒತ್ತತೊಡಗಿರುವುದು ಕೇವಲ ಕಾಕತಾಳೀಯ ಇರಲಾರದು. ಅಭಿವೃದ್ಧಿಯೇ ನಮ್ಮ ಕಾರ್ಯಸೂಚಿ, ಅದರ ಬಲದಿಂದಲೇ ಗೆದ್ದು ಬರುತ್ತೇವೆ ಎನ್ನುತ್ತಿದ್ದವರು ಕೋಮು ಧ್ರುವೀಕರಣದ ಅಡ್ದದಾರಿ ಹಿಡಿಯುವುದು ಸಲ್ಲದು. ಸುಗ್ರೀವಾಜ್ಞೆ ತರುವುದೂ ಸುಲಭಸಾಧ್ಯ ಅಲ್ಲ. ಸುಪ್ರೀಂ ಕೋರ್ಟಿನ ಕಾನೂನು ಪರೀಕ್ಷೆ ಎದುರಿಸಬೇಕಾದೀತು ಎಂಬ ವಾಸ್ತವ ಮೋದಿ ನೇತೃತ್ವದ ಸರ್ಕಾರ ಮತ್ತು ಸಂಘಪರಿವಾರ ಅರಿಯದ ಸಂಗತಿಯೇನೂ ಅಲ್ಲ. ಸುಗ್ರೀವಾಜ್ಞೆಗೆ ಸಂಯುಕ್ತ ಜನತಾದಳ ಮತ್ತಿತರೆ ಬಿಜೆಪಿ ಮಿತ್ರಪಕ್ಷಗಳ ಸಮ್ಮತಿ ಅಷ್ಟು ಸಲೀಸಲ್ಲ.

2019ರ ಚುನಾವಣೆಗಳ ನಂತರದ ಸನ್ನಿವೇಶದಲ್ಲಿ ಸರ್ಕಾರ ರಚನೆಗೆ ಬಿಜೆಪಿಯ ಕೈಹಿಡಿಯಬಲ್ಲ ಬಿಜು ಜನತಾದಳ, ತೆಲಂಗಾಣ ರಾಷ್ಟ್ರ ಸಮಿತಿ, ಹಾಗೂ ದ್ರಾವಿಡ ಪಕ್ಷಗಳನ್ನು ಸುಗ್ರೀವಾಜ್ಞೆಯ ನಡೆ, ದೂರ ಸರಿಸುವ ಸಾಧ್ಯತೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಗೆ ಕೈ ಹಾಕುವ ಮುನ್ನ ಮೋದಿ ನೇತೃತ್ವದ ಸರ್ಕಾರ ನೂರು ಬಾರಿ ಯೋಚಿಸುವುದು ಅನಿವಾರ್ಯ. ನ್ಯಾಯಾಲಯದ ತೀರ್ಪಿಗೆ ಕಾದು ಅದನ್ನು ಗೌರವಿಸುವುದೇ ಜನತಂತ್ರದ ನೇರ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT