ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬಿ–ಖಾತಾ ಸಮಸ್ಯೆಗಳಿಗೆ ಮುಕ್ತಿ ಎಚ್ಚರಿಕೆಯ ನಡೆ ಅಗತ್ಯ

Last Updated 7 ಮೇ 2022, 0:59 IST
ಅಕ್ಷರ ಗಾತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಭೂಪರಿವರ್ತನೆ ಮಾಡದೆಯೇ ನಿರ್ಮಿಸಿದ ಕಂದಾಯ ಬಡಾವಣೆಗಳು ಸಾವಿರಾರು ಸಂಖ್ಯೆಯಲ್ಲಿವೆ. ಇಂತಹ ಬಡಾವಣೆಗಳಲ್ಲಿ ನಿವೇಶನ ಹೊಂದಿರುವವರು ಮನೆ ನಿರ್ಮಿಸಲು ಮುಂದಾದರೆ, ಬಿಬಿಎಂಪಿಯಿಂದ ಕಟ್ಟಡ ಯೋಜನೆಗೆ ಮಂಜೂರಾತಿ ನೀಡಲು ಈಗಿನ ನಿಯಮಗಳಲ್ಲಿ ಅವಕಾಶ ಇಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅವರಿಗೆ ಸಾಲವೂ ಸಿಗದು. ವಸ್ತುಸ್ಥಿತಿ ಹೀಗಿದ್ದರೂ ಇಂತಹ ಬಡಾವಣೆಗಳಲ್ಲಿ ಕಟ್ಟಡಗಳ ನಿರ್ಮಾಣ ದಶಕಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇಂತಹ ಸ್ವತ್ತುಗಳ ಮಾಲೀಕರು ನಾಗರಿಕ ಸೌಕರ್ಯಗಳನ್ನುಬಳಸುತ್ತಿರುವುದರಿಂದ ಅವರಿಂದಲೂ ಆಸ್ತಿ ತೆರಿಗೆ ಸಂಗ್ರಹ ಮಾಡಬೇಕು ಎಂಬ ಉದ್ದೇಶದಿಂದ ಬಿಬಿಎಂಪಿಯು ಬೆಂಗಳೂರು ನಗರಕ್ಕೆ ಸೀಮಿತವಾಗಿ ‘ಬಿ’ ವಹಿಯನ್ನು ನಿರ್ವಹಿಸುವ ಪದ್ಧತಿಯನ್ನು ಪಾಲಿಸುತ್ತಿದೆ. 2009ರ ಬಿಬಿಎಂಪಿ ಆಸ್ತಿ ತೆರಿಗೆ ನಿಯಮಗಳ ಪ್ರಕಾರ ಸ್ವತ್ತಿನ ಮೌಲ್ಯಮಾಪನ ನಡೆಸಿ, ಅದರ ಮಾಲೀಕರಿಂದ ಸಂಗ್ರಹಿಸುವ ತೆರಿಗೆ ವಿವರಗಳನ್ನು ನಮೂನೆ ‘ಎ’ನಲ್ಲಿ ಹಾಗೂ ತೆರಿಗೆ ಮೌಲ್ಯಮಾಪನ ನಡೆಸಲು ಸಾಧ್ಯವಿಲ್ಲದ ಸ್ವತ್ತಿನ ತೆರಿಗೆ ವಿವರಗಳನ್ನು ನಮೂನೆ ‘ಬಿ’ನಲ್ಲಿ ನಮೂದಿಸಬೇಕು.

‘ಬಿ’ ವಹಿಯಲ್ಲಿ ದಾಖಲಾಗುವ ಸ್ವತ್ತುಗಳ ದಾಖಲೆಯನ್ನು ಬಿ–ಖಾತಾ ಎಂದು ಕರೆಯಲಾಗುತ್ತಿದೆ. 2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 144 (6)ರ ಅಡಿ ಕಟ್ಟಡಗಳಿಂದ ಹಾಗೂ ಖಾಲಿ ನಿವೇಶನಗಳಿಂದ ಆಸ್ತಿ ತೆರಿಗೆ ಸಂಗ್ರಹ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅವು ಅಧಿಕೃತ ಇರಬಹುದು ಅಥವಾ ಅನಧಿಕೃತವೇ ಇರಬಹುದು. ಅನಧಿಕೃತ ಸ್ವತ್ತುಗಳಿಂದ ತೆರಿಗೆ ಪಡೆದ ಮಾತ್ರಕ್ಕೆ ಅವು ಅಧಿಕೃತ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬಿ– ಖಾತಾ ಹೊಂದಿರುವ ಸ್ವತ್ತುಗಳ ಮಾಲೀಕರು ಆಸ್ತಿ ತೆರಿಗೆ ಪಾವತಿಸುತ್ತಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ನಿವೇಶನಗಳಲ್ಲಿ ಕಟ್ಟಡ ಯೋಜನೆಗೆ ಮಂಜೂರಾತಿ ಪಡೆಯದೇ ನಿರ್ಮಿಸಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರವೂ ಸಿಗುವುದಿಲ್ಲ. ಇವುಗಳಿಗೆ ಸ್ವತ್ತಿನ ಸಂಖ್ಯೆಯನ್ನೂ ಬಿಬಿಎಂಪಿ ನೀಡುತ್ತಿಲ್ಲ. ಇಂತಹ ಕಟ್ಟಡಗಳನ್ನು ಅಡಮಾನ ಇಟ್ಟು ಸಾಲ ಪಡೆಯುವುದಕ್ಕೂ ಸಾಧ್ಯವಾಗುವುದಿಲ್ಲ. ನಗರದಲ್ಲಿ ಈ ರೀತಿ ತ್ರಿಶಂಕು ಸ್ಥಿತಿಯಲ್ಲಿರುವ 6 ಲಕ್ಷಕ್ಕೂ ಅಧಿಕ ಸ್ವತ್ತುಗಳಿವೆ ಎಂದು ಬಿಬಿಎಂಪಿ ಅಂದಾಜಿಸಿದೆ. ಬಿ–ಖಾತಾ ಹೊಂದಿರುವ ಸ್ವತ್ತುಗಳಿಗೆ ದಂಡ ವಿಧಿಸಿ ಅವುಗಳನ್ನು ಕ್ರಮಬದ್ಧಗೊಳಿಸಬೇಕು ಎಂಬುದು ದಶಕಗಳ ಬೇಡಿಕೆ. ಇದಕ್ಕೆ ಸ್ಪಂದಿಸಿರುವ ಸರ್ಕಾರ, ಭೂಪರಿವರ್ತನೆ ಆಗದ ಬಡಾವಣೆಗಳಲ್ಲಿ 2007ಕ್ಕೂ ಹಿಂದೆ ರಚನೆಗೊಂಡಿರುವ ನಿವೇಶನಗಳಿಗೆ, ಸುಧಾರಣಾ ವೆಚ್ಚವನ್ನು ಪಾವತಿಸಿಕೊಂಡು ಖಾತಾ ಅಥವಾ ಸ್ವತ್ತಿನ ಗುರುತು ಸಂಖ್ಯೆ ನೀಡಲು ಮುಂದಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರವು ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಿದ ಬಳಿಕವಷ್ಟೇ ಈ ನಿರ್ಧಾರ ಜಾರಿಗೆ ಬರಲಿದೆ. ಬಿ–ಖಾತಾ ಸ್ವತ್ತಿನ ಮಾಲೀಕರು ಅನುಭವಿಸುತ್ತಿರುವ ತಲ್ಲಣಗಳಿಗೆ ಇತಿಶ್ರೀ ಹಾಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಈ ವಿಚಾರದಲ್ಲಿ ಕೆಲವು ಕಾನೂನು ತೊಡಕುಗಳೂ ಇವೆ ಎಂಬುದು ಗಮನಾರ್ಹ.

ಸ್ಥಳೀಯ ಯೋಜನಾ ಪ್ರದೇಶದಲ್ಲಿ ಕೆಲ ಬಗೆಯ ಅನಧಿಕೃತ ನಿರ್ಮಾಣವನ್ನು ಸಕ್ರಮಗೊಳಿಸಲು ಮತ್ತು ಭೂಬಳಕೆ ಬದಲಾವಣೆಗೆ ಅವಕಾಶ ಕಲ್ಪಿಸಲು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಸೆಕ್ಷನ್ 76 ಎಫ್‌ಎಫ್‌ ಅಡಿ ಅನುವು ಮಾಡಿಕೊಡಲಾಯಿತು. ಇದನ್ನು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. 2017ರ ಜುಲೈನಲ್ಲಿ ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌, ಕಾಯ್ದೆಯ ಈ ಅಂಶವನ್ನು ಜಾರಿಗೊಳಿಸುವುದಕ್ಕೆ ತಡೆಯಾಜ್ಞೆ ನೀಡಿತ್ತು. ಸುಪ್ರೀಂ ಕೋರ್ಟ್‌ನಿಂದ ಈ ಕುರಿತು ಅಂತಿಮ ಆದೇಶ ಬರುವವರೆಗೂ ಅನಧಿಕೃತ ನಿರ್ಮಾಣವನ್ನು ಸಕ್ರಮಗೊಳಿಸುವುದು ಸಾಧ್ಯವಿಲ್ಲ. ಬಿ–ಖಾತಾ ಇರುವ ಆಸ್ತಿಗಳಿಗೆ ಎ– ಖಾತಾ ನೀಡುವ ವಿಚಾರದಲ್ಲೂ ಇಂತಹದ್ದೇ ಪರಿಸ್ಥಿತಿ ಎದುರಾಗದಂತೆ ಎಚ್ಚರಿಕೆಯ ನಡೆಯನ್ನು ಸರ್ಕಾರ ಇಡಬೇಕು.

ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 144 (20) ಪ್ರಕಾರ ಆಸ್ತಿ ತೆರಿಗೆ ಪಾವತಿ ಮಾಡುವ ಪ್ರತೀ ವ್ಯಕ್ತಿಗೂ ಸ್ವೀಕೃತಿ ಅಥವಾ ಖಾತಾ ನೀಡಬೇಕು. ಅದು ಕಾನೂನುಬದ್ಧ ಹಾಗೂ ಕಾನೂನುಬದ್ಧವಲ್ಲದ ಕಟ್ಟಡಗಳಿಗೆ ಬೇರೆ ಬೇರೆ ಆಗಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಹಾಗಾಗಿ ಪ್ರಸ್ತುತ ಬಿ– ಖಾತಾ ಹೊಂದಿರುವ ಸ್ವತ್ತುಗಳಿಗೆ ಎ– ಖಾತಾ ನೀಡುವ ಪ್ರಕ್ರಿಯೆಯು ಗೊಂದಲಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಾದರೆ ಈ ನಿರ್ಧಾರವು ಇನ್ನಷ್ಟು ಕಾನೂನಿನ ಪರಾಮರ್ಶೆಗೆ ಒಳಪಡಬೇಕಾಗುತ್ತದೆ. ಬಿ–ಖಾತಾ ಹೊಂದಿದವರಿಗೆ ಎ– ಖಾತಾ ನೀಡುವಾಗ ಸಂಗ್ರಹಿಸುವ ಸುಧಾರಣಾ ವೆಚ್ಚದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 1 ಸಾವಿರ ಕೋಟಿ ಸಂಗ್ರಹಿಸುವ ಉದ್ದೇಶ ಬಿಬಿಎಂಪಿಯದು. ಬಿ– ಖಾತಾ ಹೊಂದಿರುವ ಸ್ವತ್ತಿನ ಮಾಲೀಕರ ಬವಣೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಕಳಕಳಿ ಪ್ರಧಾನವಾಗಬೇಕೇ ಹೊರತುಸಂಪನ್ಮೂಲ ಸಂಗ್ರಹಿಸುವ ಉದ್ದೇಶವಲ್ಲ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ನಿಯಮಗಳಲ್ಲಿ ಇದುವರೆಗೆ ಅವಕಾಶ ಇಲ್ಲದೇ ಹೋದರೂ, ಅನಧಿಕೃತ ಸ್ವತ್ತುಗಳ ಮಾಲೀಕರು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ಕೈಚಳಕದಿಂದ ಎ– ಖಾತಾ ಮಾಡಿಸಿಕೊಂಡಿರುವ ಸಾವಿರಾರು ಉದಾಹರಣೆಗಳು ಇವೆ. ಈ ರೀತಿ ಅಕ್ರಮವಾಗಿ ಎ–ಖಾತಾ ಮಾಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸರ್ಕಾರ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಸ್ವತ್ತುಗಳಿಗೆ ಅನಧಿಕೃತವಾಗಿ ಎ–ಖಾತಾ ಮಾಡಿಸಿಕೊಂಡ ಮಾಲೀಕರಿಂದ ಸುಧಾರಣಾ ವೆಚ್ಚ ಹಾಗೂ ದಂಡ ಸಂಗ್ರಹಿಸುವ ಅವಕಾಶವನ್ನೇ ಬಿಬಿಎಂಪಿ ಕಳೆದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT