ಬೋಧಕೇತರ ಹುದ್ದೆಗಳಿಗೆ ಶಿಕ್ಷಕರ ನಿಯೋಜನೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಸರ್ಕಾರದ ನಿರ್ಧಾರ ಸಮಯೋಚಿತವಾದುದು ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಸಕ್ರಿಯ ಗೊಳಿಸುವ ದೃಷ್ಟಿಯಿಂದ ಅಗತ್ಯವಾಗಿರುವ ಕ್ರಮ. ಅನೇಕ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ. ಖಾಸಗಿ ಶಾಲೆಗಳ ತೀವ್ರ ಸ್ಪರ್ಧೆಯಿಂದ ಕಳಾಹೀನವಾಗಿರುವ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಶಿಕ್ಷಕರ ಕೊರತೆಯೂ ಒಂದಾಗಿದೆ. ಬೋಧಕೇತರ ಹುದ್ದೆಗಳಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದು ಕೂಡ, ಶಾಲೆಗಳಲ್ಲಿನ ಶಿಕ್ಷಕರ ಕೊರತೆಗೆ ಕಾರಣಗಳಲ್ಲೊಂದಾಗಿದೆ. ಶಿಕ್ಷಕರನ್ನು ಶಾಲೆಗಳಲ್ಲಿಯೇ ಉಳಿಸುವುದ ರಿಂದಾಗಿ ಸರ್ಕಾರಿ ಶಾಲೆಗಳಲ್ಲಿನ ಬೋಧಕರ ಕೊರತೆ ಸ್ವಲ್ಪಮಟ್ಟಿಗಾದರೂ ಕಡಿಮೆ ಆಗಲಿದೆ, ಅದರಿಂದ ಮಕ್ಕಳಿಗೆ ಅನುಕೂಲ ಆಗಲಿದೆ. ಮಕ್ಕಳಿಗೆ ಪಾಠ ಮಾಡುವುದಕ್ಕಾಗಿ ನೇಮಕಗೊಂಡ ಶಿಕ್ಷಕರನ್ನು ಬೋಧನಾ ಚಟುವಟಿಕೆಗಳಲ್ಲಿ ಉಳಿಸುವುದು ನ್ಯಾಯ ಸಮ್ಮತವೂ ಹೌದು. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸುವುದರ ಜೊತೆಗೆ, ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದೂ ಸೇರಿದಂತೆ ಹಲವು ಸುಧಾರಣೆಗಳನ್ನು ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆ ಒಳಗೊಂಡ ‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆ–2026’ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಈ ಉದ್ದೇಶಿತ ಸುಧಾರಣೆ
ಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿನ ಗಮನಾರ್ಹ ಹೆಜ್ಜೆಗಳಾಗಿವೆ.

ಶಿಕ್ಷಕರನ್ನು ಬೋಧಕೇತರ ಹುದ್ದೆ ಗಳಿಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಿದ ಮಾತ್ರಕ್ಕೆ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯ ಸಮಸ್ಯೆ ಬಗೆಹರಿಯುತ್ತದೆಂದು ನಿರೀಕ್ಷಿಸು ವಂತಿಲ್ಲ. ಶಾಲೆಗಳಲ್ಲಿ ಬೋಧಿಸುವುದರ ಬದಲು, ಅನ್ಯಕಾರ್ಯ ನಿಮಿತ್ತ ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಿಗೆ ನಿಯೋಜನೆಗೊಳ್ಳುವ ಶಿಕ್ಷಕರ ಸಂಖ್ಯೆ ಸಣ್ಣ ಪ್ರಮಾಣದ್ದು. ಹಾಗಾಗಿ, ಇವರನ್ನು ಮತ್ತೆ ತರಗತಿಗಳಿಗೆ ಕರೆತರುವುದರಿಂದ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುವ ಅನುಕೂಲದ ಪ್ರಮಾಣ ಸೀಮಿತ ಆದುದು. ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಸರ್ಕಾರಕ್ಕೆ ನೈಜ ಕಾಳಜಿ ಇದ್ದಲ್ಲಿ, ಲಭ್ಯವಿರುವ ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬೋಧನೆಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ವರ್ಷವೊಂದರಲ್ಲಿ ಶಿಕ್ಷಕನೊಬ್ಬ ಕನಿಷ್ಠ 220 ದಿನಗಳ ಕಾಲವಾದರೂ ಮಕ್ಕಳಿಗೆ ಕಲಿಸಬೇಕಾಗಿದೆ. ಆದರೆ, ಈಗಿನ ಶೈಕ್ಷಣಿಕ ಕ್ರಮದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ 100 ದಿನಗಳ ಸಮಯವನ್ನು ನೀಡುವುದೂ ಕಷ್ಟ ಎನ್ನುವಂತಾಗಿದೆ. ಜನಗಣತಿ, ವಿಕೋಪ ಸಂದರ್ಭ, ಚುನಾವಣೆ ಹೊರತುಪಡಿಸಿ ಬೇರೆ ಯಾವುದೇ ಕೆಲಸಗಳಿಗೆ ಶಿಕ್ಷಕರನ್ನು ಬಳಸುವಂತಿಲ್ಲ ಎಂದು ‘ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) 2009’ರ 27ನೇ ವಿಧಿ ಸ್ಪಷ್ಟವಾಗಿ ಹೇಳುತ್ತದೆ. ಶಿಕ್ಷಕರ ಹೆಚ್ಚಿನ ಸಮಯ ತರಗತಿಗಳಲ್ಲಿನ ಬೋಧನೆಗೆ ದೊರೆಯುವಂತೆ ಮಾಡುವುದು ಈ ನಿಯಮದ ಉದ್ದೇಶ. ಆದರೆ, ಈ ಕರ್ತವ್ಯಗಳ ಹೊರತಾಗಿಯೂ ಶಿಕ್ಷಕರನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಚುನಾವಣಾ ಕಾರ್ಯ ಎನ್ನುವುದು ಮತದಾನ ದಿನದ ಕರ್ತವ್ಯಕ್ಕೆ ಸೀಮಿತವಾಗಿರುವುದರ ಬದಲು, ಮತದಾರರ ಪಟ್ಟಿ ತಯಾರಿಕೆ, ಪರಿಷ್ಕರಣೆಗೂ ವಿಸ್ತರಿಸಿಕೊಂಡಿರುವುದರಿಂದ ಶಿಕ್ಷಕರು ವರ್ಷದ ಬಹುತೇಕ ಸಮಯ ಅನ್ಯ ಇಲಾಖೆಗಳ ಸೇವೆಯಲ್ಲಿಯೇ ಹೆಚ್ಚಿನ ಸಮಯ ಕಳೆಯು ವಂತಾಗಿದೆ. ಇದು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಗೆ ವಿರುದ್ಧವಾದುದು.

ಮಕ್ಕಳಿಗೆ ಕಲಿಸುವ ಚಟುವಟಿಕೆಗಳಲ್ಲಿ ಶಿಕ್ಷಕರ ಸಂಪೂರ್ಣ ಸಾಮರ್ಥ್ಯ ವಿನಿಯೋಗ ಆಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಬೋಧನೆಗಷ್ಟೇ ಸೀಮಿತಗೊಳ್ಳುವುದರಿಂದ ಶಿಕ್ಷಕರು ತಮ್ಮ ವೃತ್ತಿ ಕೌಶಲಗಳನ್ನು ಹೆಚ್ಚಿಸಿಕೊಳ್ಳುವುದೂ ಸಾಧ್ಯವಾಗುತ್ತದೆ. ಅನ್ಯ ಕಾರ್ಯಗಳ ಒತ್ತಡ ಇಲ್ಲದೆ ಹೋದಾಗ ಶಿಕ್ಷಕರು ಮುಕ್ತ ಮನಸ್ಸಿನಿಂದ ಬೋಧನೆಯಲ್ಲಿ ತೊಡಗಿಕೊಳ್ಳಬಹುದಾಗಿದೆ. ಶಿಕ್ಷಣ ಇಲಾಖೆಯ ಸಬಲೀಕರಣಕ್ಕಾಗಿ ಹೊಸ ಕಾನೂನುಗಳನ್ನು ತರುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ, ಅನುಷ್ಠಾನದಲ್ಲಿ ಇಚ್ಛಾಶಕ್ತಿ ತೋರದಿರುವುದರ ಮೂಲಕ ಪರಿಣಾಮಕಾರಿ ಕಾನೂನುಗಳನ್ನೂ ದುರ್ಬಲಗೊಳಿಸುವುದರಲ್ಲಿ ನಮ್ಮ ಆಡಳಿತಯಂತ್ರ ಪಳಗಿದೆ. ರಾಜಕೀಯ ಒತ್ತಡ, ಆಡಳಿತದ ಅನುಕೂಲಕ್ಕಾಗಿ ವಿನಾಯಿತಿಗಳು ಮತ್ತು ಅಸಮರ್ಪಕ ಮೇಲ್ವಿಚಾರಣೆಯಿಂದಾಗಿ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಪರಿಣಾಮಕಾರಿ ಕಾನೂನುಗಳ ಜೊತೆಗೆ, ರಾಜಕೀಯ ಇಚ್ಛಾಶಕ್ತಿಯೂ ಇದ್ದಾಗಷ್ಟೇ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.