ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ 420 ಪ್ರಕರಣ ದಾಖಲಿಸಿ

ಸಂವಾದ ಕಾರ್ಯಕ್ರಮ; ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ
Last Updated 28 ಏಪ್ರಿಲ್ 2018, 6:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಹಾಕುತ್ತೇನೆ, 2ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ವಂಚಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರತಿ ಜಿಲ್ಲೆಯಲ್ಲೂ 420 ಪ್ರಕರಣ ದಾಖಲಿಸಬೇಕು’ ಎಂದು ಗುಜರಾತ್‌ನ ವಡ್‌ಗಾಂ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸಂವಿಧಾನ ರಕ್ಷಣೆಗಾಗಿ ಕರ್ನಾಟಕ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘₹15 ಲಕ್ಷದ ಪೈಕಿ15 ಪೈಸೆಯೂ ಯಾರ ಖಾತೆಗೂ ಜಮೆಯಾಗಿಲ್ಲ. ಈ ಬಗ್ಗೆ ಮೋದಿ ಮೌನ ವಹಿಸಿದ್ದು ಏಕೆ ಎಂದು ಪ್ರಶ್ನಿಸಬೇಕು. ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದರೆ ಅವರಿಗೆ ಘೇರಾವ್ ಹಾಕಬೇಕು. ಗೋ ಬ್ಯಾಕ್ ಘೋಷಣೆ ಕೂಗಬೇಕು, ಕಪ್ಪು ಬಟ್ಟೆ ಪ್ರದರ್ಶಿಸಬೇಕು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ದಲಿತರು, ಆದಿವಾಸಿಗಳ ವಿರೋಧಿಯಾಗಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಸಂವಿಧಾನ ಸಂಕಷ್ಟದಲ್ಲಿದೆ. ಆದ್ದರಿಂದ ಮೋದಿ ಮತ್ತು ಬಿಜೆಪಿ ವಿರುದ್ಧ ಎಲ್ಲರೂ ತೀವ್ರ ಹೋರಾಟ ನಡೆಸಬೇಕು. ಕರ್ನಾಟಕ ಚುನಾವಣೆಗೆ ಇನ್ನು 15ದಿನ ಬಾಕಿ ಇದೆ. ಶೇ 90ರಷ್ಟು ಮತಗಳು ಬಿಜೆಪಿ ವಿರುದ್ಧ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕು. ಆ ಮೂಲಕ ಬಿಜೆಪಿಯ ದಕ್ಷಿಣ ಭಾರತ ಪ್ರವೇಶಕ್ಕೆ ತಡೆಯೊಡ್ಡಬೇಕು’ ಎಂದು ತಿಳಿಸಿದರು.

ಚಿಂತಕ ನೂರ್ ಶ್ರೀಧರ ಮಾತನಾಡಿ, ‘ದೇಶದಲ್ಲಿ ಚಳವಳಿ, ಒಗ್ಗಟ್ಟು ದುರ್ಬಲಗೊಂಡಿವೆ. ಪರ್ಯಾಯ ಪಕ್ಷಗಳ ಕೊರತೆ ಇದೆ. ಇದರ ಲಾಭ ಪಡೆದುಕೊಂಡು ಮತಾಂಧ ಶಕ್ತಿಗಳು ಮತ್ತು ಕಾರ್ಪೋರೇಟ್ ಕಂಪನಿಗಳು ದೇಶದ ಭವಿಷ್ಯವನ್ನು ನುಂಗಲು ಹೊರಟಿವೆ. ಸಮಾನತೆ, ಸಹಬಾಳ್ವೆ, ಸಾಮಾಜಿಕ ನೀತಿ ಮತ್ತು ಮೀಸಲಾತಿಯನ್ನು ವಿರೋಧಿಸುವವರಿಗೆ ತಕ್ಕ ಪಾಠ ಕಲಿಸಬೇಕು. ಮೋದಿ ಅವರನ್ನು ಸೋಲಿ ಸುವ ಮೂಲಕ ಸಂವಿಧಾನ ರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದರು.

‘ಪರಂಪರಾಗತ ಪಕ್ಷಗಳು ಪರ್ಯಾಯವೂ ಅಲ್ಲ, ಪರಿಹಾರವೂ ಅಲ್ಲ. ಈ ಕಾರಣಕ್ಕಾಗಿಯೇ ಜನಾಂದೋಲಗಳ ಮಹಾಮೈತ್ರಿ ಬೆಂಬಲದೊಂದಿಗೆ 20 ಅಭ್ಯರ್ಥಿಗಳನ್ನು ಈ ಬಾರಿ ವಿಧಾನಸಭೆ ಚುನಾವಣೆ ಕಣಕ್ಕೆ ಇಳಿಸಲಾಗಿದೆ. ಇವರಲ್ಲಿ ಕನಿಷ್ಠ 5–6 ಜನರು ಆಯ್ಕೆಯಾಗಿ ವಿಧಾನಸಭೆಗೆ ಹೋಗಬೇಕು ಎಂಬುದು ನಮ್ಮ ಆಶಯವಾಗಿದೆ’ ಎಂದರು.

ಸಾಮಾಜಿಕ ಹೋರಾಟಗಾರ ಇರ್ಶಾದ್ ಅಹ್ಮದ್ ದೇಸಾಯಿ ಮಾತನಾಡಿ, ‘ವಿಜಯ ಮಲ್ಯ, ನೀರವ್ ಮೋದಿ, ಲಲಿತ್ ಮೋದಿ ಅವರು ಕೋಟ್ಯಂತರ ರೂಪಾಯಿ ಲೂಟಿ ಮಾಡಿಕೊಂಡು ದೇಶ ಬಿಟ್ಟು ಹೋದರೂ ಚೌಕಿದಾರರು ಏನೂ ಮಾಡಿಲ್ಲ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುವ ಸರ್ಕಾರದಲ್ಲೇ ಅತ್ಯಾಚಾರಗಳು ಹೆಚ್ಚಾಗಿವೆ. ಆದ್ದರಿಂದ ಬಿಜೆಪಿಯನ್ನು ಸೋಲಿಸಬೇಕು’ ಎಂದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಎನ್.ವೆಂಕಟೇಶ, ಕಾರ್ಯಕ್ರಮದ ಸಂಚಾಲಕರಾದ ಮಹ್ಮದ್ ಮುಕಾದ್ದಮ್ ಇದ್ದರು.

**
2018ರ ಕರ್ನಾಟಕ ಚುನಾವಣೆಯಲ್ಲೇ ಬಿಜೆಪಿಯನ್ನು ಕಟ್ಟಿ ಹಾಕಬೇಕು. ಆ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸದಂತೆ ಮಾಡಬೇಕು.
– ಜಿಗ್ನೇಶ್ ಮೇವಾನಿ, ಶಾಸಕ, ಗುಜರಾತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT