ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌: ನೇಮಕಾತಿಯಲ್ಲಿ ಕನ್ನಡದ ನಿರ್ಲಕ್ಷ್ಯ ಖಂಡನೀಯ

Last Updated 14 ಸೆಪ್ಟೆಂಬರ್ 2019, 3:08 IST
ಅಕ್ಷರ ಗಾತ್ರ

ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ಮಾಡಿಕೊಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನೀಡಿದ್ದ ಭರವಸೆ ಹುಸಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ಇದೀಗ ಅರ್ಜಿಗಳನ್ನು ಆಹ್ವಾನಿಸಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯುವ ಕನ್ನಡಿಗರ ಕನಸು ಈ ವರ್ಷವೂ ನನಸಾಗಿಲ್ಲ.ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಈಗ ಅವಕಾಶ ಇರುವುದರಿಂದ ಈ ಭಾಷೆಗಳ ಮೇಲೆ ಹಿಡಿತ ಇರುವವರಷ್ಟೇ ಬ್ಯಾಂಕ್‌ ಉದ್ಯೋಗ ಪಡೆಯುತ್ತಾರೆ. ರಾಜ್ಯದಲ್ಲಿನ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 953 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೂ ಸಹಜವಾಗಿಯೇ ಹಿಂದಿ ಅಥವಾ ಇಂಗ್ಲಿಷ್‌ ಚೆನ್ನಾಗಿ ಬಲ್ಲವರು ಮಾತ್ರ ಆಯ್ಕೆಯಾಗುತ್ತಾರೆ. ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕೊಡಬೇಕೆಂದು ಹಲವು ವರ್ಷಗಳಿಂದ ಕೇಂದ್ರ ಸರ್ಕಾರದ ಮೇಲೆ ಕನ್ನಡಿಗರು ಒತ್ತಡ ಹೇರುತ್ತಿದ್ದಾರೆ. ರಾಜ್ಯದ ಸಂಸದರ ನಿಯೋಗವೊಂದು ನಿರ್ಮಲಾ ಅವರನ್ನು ಇತ್ತೀಚೆಗೆ ಭೇಟಿಯಾಗಿ ಈ ಬಗ್ಗೆ ಒತ್ತಾಯಿಸಿದಾಗ, ‘ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡ ಸಹಿತ 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದ್ದರು. ಅದರಂತೆ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಯ ಮುಖ್ಯ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಇತರ ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ನೇಮಕಾತಿಯ ಭಾಷಾ ನಿಯಮವನ್ನು ಬದಲಿಸಿಲ್ಲ. ಬ್ಯಾಂಕಿಂಗ್‌ ಸೇವೆಗಳುಜನರಿಗೆ ಪರಿಣಾಮಕಾರಿಯಾಗಿ ತಲುಪಬೇಕಿದ್ದರೆ ಆಯಾ ರಾಜ್ಯದ ಆಡಳಿತ ಭಾಷೆಯಲ್ಲಿ ವ್ಯವಹಾರ ನಡೆಯಬೇಕು ಎನ್ನುವುದು ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ಕೇಂದ್ರ ಸರ್ಕಾರವು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯನ್ನು ಹಿಂಬಾಗಿಲ ಮೂಲಕ ನಡೆಸುತ್ತಿದೆ ಎನ್ನುವುದಕ್ಕೆ ಬ್ಯಾಂಕಿಂಗ್‌ ಪರೀಕ್ಷೆಗಳ ಈ ನೀತಿ ಸ್ಪಷ್ಟ ನಿದರ್ಶನವಾಗಿದೆ.ಹಿಂದಿಯನ್ನು ಹೇರುವ ಪ್ರಯತ್ನವನ್ನು ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಬಂದಂದಿನಿಂದಲೂ ಮಾಡುತ್ತಲೇ ಬಂದಿದೆ. ಅದರಿಂದ ದೇಶದಲ್ಲಿ ಭಾವೈಕ್ಯ ಹೆಚ್ಚಲಿದೆ ಎನ್ನುವ ತಪ್ಪು ಧೋರಣೆಯೊಂದು ಕೇಂದ್ರ ಸರ್ಕಾರಕ್ಕೆ ಇರುವಂತಿದೆ. ದಕ್ಷಿಣದ ಬಹುತೇಕ ರಾಜ್ಯಗಳಿಗೆ ಈ ಎರಡೂ ಭಾಷೆಗಳು ಪರಕೀಯವೇ.

ಬ್ಯಾಂಕುಗಳ ರಾಷ್ಟ್ರೀಕರಣ ಆಗುವುದಕ್ಕೆ ಮುಂಚೆಯೇ ಬ್ಯಾಂಕುಗಳಲ್ಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದರು. ಆದರೆ, ಅವರಲ್ಲಿ ಗಣನೀಯ ಸಂಖ್ಯೆಯ ಉದ್ಯೋಗಿಗಳು ಈಗ ನಿವೃತ್ತರಾಗಿದ್ದಾರೆ. ಬ್ಯಾಂಕ್‌ಗಳಲ್ಲಿ ಕನ್ನಡಿಗರ ಸಂಖ್ಯೆ ಇಳಿಕೆಯಾಗಿದೆ. ಈಗ ಹೊಸ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಅವಕಾಶ ಸಿಗದಿದ್ದರೆ ಮುಂದೆ ರಾಜ್ಯದಲ್ಲಿ ಬ್ಯಾಂಕ್‌ಗಳು ಮತ್ತು ಜನರ ನಡುವೆ ದೊಡ್ಡ ಕಂದರ ಉಂಟಾಗಬಹುದು. ಕರ್ನಾಟಕದ ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ಕನ್ನಡೇತರರು, ಕನ್ನಡವನ್ನು ಕಲಿಯುವುದಕ್ಕೂ ಉತ್ಸಾಹ ತೋರಿಸುತ್ತಿಲ್ಲ. ಹೊಸದಾಗಿ ಇನ್ನಷ್ಟು ಕನ್ನಡೇತರರು ಆಯ್ಕೆಯಾಗಿ ಬಂದರೆ ಬ್ಯಾಂಕುಗಳಲ್ಲಿ ಉಳಿದಿರುವ ಕನ್ನಡವೂ ಮಾಯವಾಗುವ ಸಾಧ್ಯತೆ ಇದೆ.ರಾಜ್ಯದಲ್ಲಿ ಖಾಲಿ ಇರುವ ಬ್ಯಾಂಕಿಂಗ್‌ ಹುದ್ದೆಗಳಿಗೆ ಪರೀಕ್ಷೆ ಬರೆಯುವವರಿಗೆ ಕನ್ನಡ ಗೊತ್ತಿರಬೇಕು ಎನ್ನುವ ಸೂಚನೆಯೇನೋ ಇದೆ. ಆದರೆ ನಿಜಕ್ಕೂ ಅವರಿಗೆ ಕನ್ನಡ ಗೊತ್ತಿದೆಯೇ ಎನ್ನುವುದನ್ನು ಅರಿಯಲು ಮಾನದಂಡ ಇಲ್ಲ. ಬ್ಯಾಂಕುಗಳಲ್ಲಿ ಉದ್ಯೋಗ ಪಡೆದು, ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರಿಗೆ ಕನ್ನಡ ಕಲಿಕೆ ಕಡ್ಡಾಯ ಎನ್ನುವ ನಿಯಮ ಇಲ್ಲ. ಭಾರತೀಯ ರಿಸರ್ವ್‌ ಬ್ಯಾಂಕಿನ ನಿಯಮಗಳು ಕೂಡ ಇಂಗ್ಲಿಷ್‌ ಮತ್ತು ಹಿಂದಿ ಬಳಕೆಗೇ ಪ್ರೋತ್ಸಾಹ ನೀಡುತ್ತಿವೆ. ತ್ರಿಭಾಷಾ ಸೂತ್ರದನ್ವಯ ರಿಸರ್ವ್‌ ಬ್ಯಾಂಕ್‌ ಹಲವು ನಿಯಮಗಳನ್ನು ರೂಪಿಸಿದ್ದರೂ ಅವುಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳು ಪಾಲಿಸುತ್ತಿಲ್ಲ. ಮಮತಾ ಬ್ಯಾನರ್ಜಿಯವರು ರೈಲ್ವೆ ಸಚಿವೆಯಾಗಿದ್ದಾಗ, ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಆಯಾ ರಾಜ್ಯದ ಆಡಳಿತ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿದ್ದರು. ಇದರಿಂದ ರೈಲ್ವೆ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿದೆಯೇ ಹೊರತು ದೇಶದ ಭಾವೈಕ್ಯಕ್ಕೆ ಯಾವ ಕುಂದೂ ಉಂಟಾಗಿಲ್ಲ. ಬ್ಯಾಂಕಿಂಗ್‌ ಪರೀಕ್ಷೆಗಳಿಗೂ ಈ ಮಾದರಿಯನ್ನು ಅನ್ವಯಿಸುವುದು ವಿಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT