ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ವಹಿವಾಟಿನಲ್ಲಿ ಪಾರದರ್ಶಕತೆ: ಆರ್‌ಬಿಐ ಧೋರಣೆ ಬದಲಾಗಲಿ

Last Updated 28 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬ್ಯಾಂಕಿಂಗ್‌ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ. ‘ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ವಾರ್ಷಿಕ ತಪಾಸಣಾ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇದು ಕೊನೆಯ ಎಚ್ಚರಿಕೆಯಾಗಿದೆ’ ಎಂದೂ ಕೋರ್ಟ್‌ ಹೇಳಿರುವುದು ಬ್ಯಾಂಕಿಂಗ್‌ ವಹಿವಾಟಿನ ಪಾರದರ್ಶಕತೆಗೆ ಸಂಬಂಧಿಸಿದಂತೆ ಮಹತ್ವದ ವಿದ್ಯಮಾನವಾಗಿದೆ. ದೇಶದ ಆರ್ಥಿಕ ಹಿತಾಸಕ್ತಿಗೆ ಮಾರಕವಾಗುವ ಮಾಹಿತಿಯನ್ನು ಗೋಪ್ಯವಾಗಿಡಬಹುದು. ಆದರೆ ಸುಸ್ತಿದಾರರ ಪಟ್ಟಿ, ಬ್ಯಾಂಕ್‌ಗಳ ವಸೂಲಾಗದ ಸಾಲ (ಎನ್‌ಪಿಎ) ಸೇರಿದಂತೆ ಉಳಿದೆಲ್ಲ ವಿವರಗಳನ್ನು ಬಹಿರಂಗಪಡಿಸುವುದು ಆರ್‌ಬಿಐನ ಕರ್ತವ್ಯವಾಗಿದೆ ಎಂದು ಕೋರ್ಟ್‌ ಮತ್ತೆ ನೆನಪಿಸಿದೆ. ಅವ್ಯವಹಾರಗಳಿಗೆ ಅವಕಾಶ ಕೊಡುವಂತಹ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸುಸ್ತಿದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದಾಗ ಅದನ್ನು ನಿರಾಕರಿಸುವಂತಿಲ್ಲ ಎಂದು ಕೋರ್ಟ್‌ 2015ರಲ್ಲಿಯೇ ತಿಳಿಸಿತ್ತು. ಈ ತೀರ್ಪು ಬಂದು ಮೂರು ವರ್ಷಗಳಾದರೂ ಈ ನಿಟ್ಟಿನಲ್ಲಿ ಆರ್‌ಬಿಐ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ಸಮರ್ಥನೀಯವಲ್ಲ. ಕೋರ್ಟ್‌ ನಿರ್ದೇಶನದ ಹೊರತಾಗಿಯೂ ಮಾಹಿತಿ ಬಹಿರಂಗಪಡಿಸಬೇಕಿಲ್ಲ ಎಂಬ ಹೊಸ ನೀತಿಯನ್ನು ಆರ್‌ಬಿಐ ರೂಪಿಸಿ, ಬಳಿಕ ಅದನ್ನು ಕೈಬಿಟ್ಟ ಧೋರಣೆಯು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಜನರು ಹೊಂದಿರುವ ವಿಶ್ವಾಸಕ್ಕೂ ಧಕ್ಕೆ ಉಂಟುಮಾಡಿದೆ. ಬ್ಯಾಂಕಿಂಗ್‌ ವಹಿವಾಟಿನ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಬ್ಯಾಂಕ್‌ಗಳ ಜತೆಗಿನ ಸಂಬಂಧದಲ್ಲಿ ಬಿರುಕು ಮೂಡಬಹುದು ಎಂಬುದು ಆರ್‌ಬಿಐನ ವಾದವಾಗಿತ್ತು. ಈ ವಾದವನ್ನು ಮಾನ್ಯ ಮಾಡದ ನ್ಯಾಯಾಲಯವು ಸಾರ್ವಜನಿಕರು ಕೇಳುವ ಮಾಹಿತಿ ಒದಗಿಸುವುದು ಆರ್‌ಬಿಐನ ಕರ್ತವ್ಯವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ರಾಷ್ಟ್ರದ ಆರ್ಥಿಕ ಹಿತಾಸಕ್ತಿ ಅಥವಾವಿದೇಶಗಳ ಜತೆಗಿನ ಬಾಂಧವ್ಯಕ್ಕೆ ಧಕ್ಕೆ ತರುವಂತಹ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ. ಆದರೆ, ಆರ್ಥಿಕವಾಗಿ ಸೂಕ್ಷ್ಮವಲ್ಲದ ಮಾಹಿತಿಗಳನ್ನು ಸಾರ್ವಜನಿಕರ ಜತೆ ಹಂಚಿಕೊಳ್ಳುವುದರಲ್ಲಿ ಯಾವುದೇ ಅಪಾಯ ಇಲ್ಲ ಎನ್ನುವುದು ಕೋರ್ಟ್‌ ತಳೆದಿರುವ ನಿಲುವಿನಿಂದ ಸ್ಪಷ್ಟಗೊಳ್ಳುತ್ತದೆ.₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ಪಡೆದ ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಕೂಡ ಆರ್‌ಬಿಐಗೆ ಸೂಚಿಸಿತ್ತು. ಅದನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿಹಿಡಿದಿತ್ತು. ಈ ವಿಷಯದಲ್ಲಿಯೂ ಕೋರ್ಟ್‌ನ ಆದೇಶ ಗೌರವಿಸಿಲ್ಲ ಎಂಬುದು ವಿಷಾದದ ಸಂಗತಿ. ಸಾಲ ಮರುಪಾವತಿಸದವರ ಹೆಸರು ಬಹಿರಂಗಪಡಿಸುವುದರಿಂದ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಗಂಡಾಂತರವೇನೂ ಒದಗುವುದಿಲ್ಲ. ಈ ವಿಚಾರವನ್ನು ಆರ್‌ಬಿಐ, ಪ್ರತಿಷ್ಠೆಯ ವಿಚಾರ ಮಾಡಿಕೊಳ್ಳಬೇಕಾಗಿಲ್ಲ. ದೇಶಿ ಬ್ಯಾಂಕಿಂಗ್‌ ವ್ಯವಸ್ಥೆ ನಿಯಂತ್ರಿಸುವ ಆರ್‌ಬಿಐನ ವರ್ಚಸ್ಸಿಗೆ ಈ ಎಲ್ಲ ಬೆಳವಣಿಗೆಗಳು ಕುಂದು ತರುವಂತಹವು. ಈ ಸಂಬಂಧದ ಟೀಕೆಗಳಿಂದ ಹೊರಬರಲು ಆರ್‌ಬಿಐ ತನ್ನ ನಿಲುವು ಬದಲಾಯಿಸಿಕೊಳ್ಳಬೇಕಾಗಿದೆ. ಆರ್‌ಟಿಐ ಕಾಯ್ದೆಯಡಿ ಬಹಿರಂಗಪಡಿಸಬೇಕಾದ ಸಂಗತಿಗಳನ್ನು ಒದಗಿಸಿ ಆ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ವಿಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT