ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಗಳಿಗೆ ಬೇಕಿದೆ ಆರ್ಥಿಕ ಶಿಸ್ತು, ಬಿಬಿಎಂಪಿ ಆಯುಕ್ತರ ಕ್ರಮ ಸಕಾಲಿಕ

Last Updated 3 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ವಾಸ್ತವಕ್ಕೆ ಹತ್ತಿರವಲ್ಲದಂತಹ ಲೆಕ್ಕಾಚಾರಗಳ ಬಜೆಟ್‌ ಮಂಡಿಸುವುದು, ಬಜೆಟ್‌ನಲ್ಲಿ ಹಾಕಿಕೊಂಡ ಗುರಿಯನ್ನು ತಲುಪುವ ದಾರಿಯಲ್ಲಿ ಅರ್ಧದಲ್ಲೇ ಮುಗ್ಗರಿಸುವುದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಲಾಗಾಯ್ತಿನಿಂದಲೂ ಅಂಟಿರುವ ರೋಗ. ಅದರ ಪರಿಣಾಮವಾಗಿ ಆರ್ಥಿಕ ಸಂಕಷ್ಟ ಕೂಡ ಅದರ ಹೆಗಲೇರಿ, ಅಲ್ಲಿಯೇ ಠಿಕಾಣಿಯನ್ನೂ ಹೂಡಿಬಿಟ್ಟಿದೆ. ಹೆಚ್ಚುತ್ತಿರುವ ಸಾಲದ ಹೊರೆ, ಬೆಟ್ಟದಂತೆ ಬೆಳೆಯುತ್ತಿರುವ ಗುತ್ತಿಗೆದಾರರ ಬಾಕಿ, ಕಾರ್ಯಾದೇಶ ನೀಡಿದರೂ ಆರಂಭವಾಗದ ಯೋಜನೆ, ನಿಗದಿತ ಅವಧಿಯಲ್ಲಿ ಮುಗಿಯಬೇಕಿದ್ದರೂ ವರ್ಷದಿಂದ ವರ್ಷಕ್ಕೆ ಮುಂದುವರಿಯುತ್ತಲೇ ಇರುವ ಕಾಮಗಾರಿ, ವೇತನಕ್ಕಾಗಿ ಮೇಲಿಂದ ಮೇಲೆ ನಡೆಯುವ ಪೌರಕಾರ್ಮಿಕರ ಪ್ರತಿಭಟನೆ– ಇವುಗಳೆಲ್ಲ ಬಿಬಿಎಂಪಿಗೆ ಅಂಟಿಕೊಂಡಿರುವ ಆರ್ಥಿಕ ಅಶಿಸ್ತಿನ ಜಾಡ್ಯದ ಲಕ್ಷಣಗಳು.

ಹಣಕಾಸಿನ ಮುಗ್ಗಟ್ಟನ್ನು ಎದುರಿಸಲಾಗದೆ ತನ್ನ ಒಡೆತನದ ಪಾರಂಪರಿಕ ಕಟ್ಟಡಗಳನ್ನೇ ಅಡಮಾನ ಇಟ್ಟ ಕುಖ್ಯಾತಿ ಈ ಪಾಲಿಕೆಗಿದೆ. ಹೀಗಿದ್ದೂ ತನ್ನ ಹಳೆಯ ಚಾಳಿಯನ್ನು ಅದು ಬಿಟ್ಟಿಲ್ಲ. ವರಮಾನದ ಮಿತಿ ಗೊತ್ತಿದ್ದರೂ ಕಪೋಲಕಲ್ಪಿತ ಲೆಕ್ಕಾಚಾರಗಳ ಮೂಲಕ ಬಜೆಟ್‌ ಗಾತ್ರವನ್ನು ಈ ಸಲವೂ ವಿನಾಕಾರಣ ಹಿಗ್ಗಿಸಿದೆ ಕಾಂಗ್ರೆಸ್‌–ಜೆಡಿಎಸ್‌ನ ಮೈತ್ರಿ ಆಡಳಿತ. ಅಧಿಕಾರಿಗಳು ನೀಡಿದ ಎಚ್ಚರಿಕೆ ನಡುವೆಯೂ ಅವಾಸ್ತವಿಕ ಬಜೆಟ್‌ ಮಂಡಿಸಿರುವುದು ಹೊಣೆಗೇಡಿತನದ ಕ್ರಮವಲ್ಲದೆ ಬೇರೇನಲ್ಲ. ಮೊದಲು ₹ 10,691 ಕೋಟಿ ಗಾತ್ರದ ಬಜೆಟ್‌ ಮಂಡಿಸಲಾಗಿತ್ತು. ಕೌನ್ಸಿಲ್‌ನಲ್ಲಿ ಚರ್ಚೆ ನಡೆದಾಗ ತಗಾದೆ ತೆಗೆದಿದ್ದ ಸದಸ್ಯರನ್ನು ತೃಪ್ತಿಪಡಿಸಲು ಆ ಗಾತ್ರವನ್ನು ₹ 12,961 ಕೋಟಿಗೆ ಹೆಚ್ಚಿಸಿ, ಅದನ್ನೇ ರಾಜ್ಯ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಯಿತು. ಲೆಕ್ಕಾಚಾರ ತಪ್ಪಿದ ಬಜೆಟ್‌ ಇದಾಗಿದ್ದು, ಇದರ ಗಾತ್ರವನ್ನು ₹ 9,000 ಕೋಟಿಗೆ ತಗ್ಗಿಸಬೇಕು ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಆಯುಕ್ತರು ಪತ್ರ ಬರೆದಿರುವ ಕ್ರಮ ಸರಿಯಾಗಿಯೇ ಇದೆ.

ಬಿಬಿಎಂಪಿ ರಚನೆಯಾದ ಅವಧಿಯಿಂದಲೂ ಮಂಡಿಸುತ್ತಾ ಬರಲಾಗಿರುವ ಬಜೆಟ್‌ಗಳಲ್ಲಿ ಹಾಕಿಕೊಂಡ ಗುರಿಯನ್ನು ಅರ್ಧದಷ್ಟೂ ತಲುಪಲು ಸಾಧ್ಯವಾಗಿರಲಿಲ್ಲ. ರಾಜ್ಯ ಸರ್ಕಾರದ ಈಗಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಹಿಂದೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದಾಗ ಬಜೆಟ್‌ ಸಿದ್ಧಪಡಿಸಲು ವೈಜ್ಞಾನಿಕ ಲೆಕ್ಕಾಚಾರದ ಮಾದರಿಯೊಂದನ್ನು ಪರಿಚಯಿಸಿದ್ದರು. ಪ್ರತಿಯೊಂದು ಇಲಾಖೆ ಹಾಗೂ ವಲಯದ ವ್ಯಾಪ್ತಿಯಲ್ಲಿ ಎಷ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ, ಕಾರ್ಯದ ಆದೇಶ ನೀಡಿದ ಕಾಮಗಾರಿಗಳ ಸಂಖ್ಯೆ ಎಷ್ಟು, ಬಾಕಿ ಉಳಿದಿರುವ ಬಿಲ್‌ ಎಷ್ಟು, ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಣೆ ಮಾಡದ ಗುತ್ತಿಗೆದಾರರಿಂದ ಮುಟ್ಟುಗೋಲು ಹಾಕಿಕೊಂಡ ಠೇವಣಿ ಎಷ್ಟು ಎಂಬ ವಿವರಗಳನ್ನು ಪಡೆದುಕೊಂಡಿದ್ದರು. ವಲಯವಾರು ವರಮಾನ ಸಂಗ್ರಹದ ನಿಖರ ಮಾಹಿತಿಯನ್ನೂ ಕಲೆ ಹಾಕಿದ್ದರು. ವಾಸ್ತವಿಕ ಲೆಕ್ಕಾಚಾರದಿಂದ ತಯಾರಿಸಲಾಗಿದ್ದ 2015–16ರ ಬಜೆಟ್‌ ಶೇ 96ರಷ್ಟು ಗುರಿ ಸಾಧಿಸಿತ್ತು. ಅಂತಹ ಉತ್ತಮ ಮಾದರಿ ಕಣ್ಮುಂದೆ ಇದ್ದರೂ ಬಿಬಿಎಂಪಿ ಆಡಳಿತ ಮತ್ತೆ ದಿಕ್ಕು ತಪ್ಪಿದೆ.

ಇದು ರಾಜಧಾನಿಯ ಸ್ಥಳೀಯ ಆಡಳಿತದ ಸಮಸ್ಯೆಯೊಂದೇ ಅಲ್ಲ; ಎಲ್ಲ ನಗರಗಳ ಪಾಲಿಕೆಗಳೂ ಹಣಕಾಸಿನ ವಿಷಯದಲ್ಲಿ ಹೀಗೇ ಹಾದಿ ತಪ್ಪಿವೆ. ಪಾಲಿಕೆಗಳ ವರಮಾನಕ್ಕೆ ಇರುವುದು ಮೂರು ಮುಖ್ಯ ಮೂಲಗಳು ಮಾತ್ರ. ಅವುಗಳೆಂದರೆ ಆಸ್ತಿ ತೆರಿಗೆ, ತೆರಿಗೆಯೇತರ ಆದಾಯ (ಮಾರುಕಟ್ಟೆ ಬಾಡಿಗೆ, ಒಎಫ್‌ಸಿ ಶುಲ್ಕ ಇತ್ಯಾದಿ) ಮತ್ತು ರಾಜ್ಯ ಸರ್ಕಾರದ ಅನುದಾನ. ಮುಖ್ಯ ಮೂಲವಾದ ಆಸ್ತಿ ತೆರಿಗೆಯು ಸ್ಥಳೀಯ ಆಡಳಿತಗಳ ಸಾಮರ್ಥ್ಯಕ್ಕೆ ತಕ್ಕಂತೆ ಸಂಗ್ರಹವಾಗುತ್ತಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ತೆರಿಗೆ ಜಾಲವನ್ನು ಹಿಗ್ಗಿಸುವಲ್ಲಿ, ತೆರಿಗೆ ವಂಚಕರನ್ನು ಮಟ್ಟ ಹಾಕುವಲ್ಲಿ ಕಾರ್ಯಕ್ಷಮತೆ ಹೆಚ್ಚಬೇಕು. ಸಾರ್ವಜನಿಕರ ಪ್ರತೀ ಪೈಸೆಯನ್ನು ಖರ್ಚು ಮಾಡುವಾಗಲೂ ಎರಡೆರಡು ಸಲ ಯೋಚಿಸಬೇಕು. ಆ ನಿಟ್ಟಿನಲ್ಲಿ ವೃತ್ತಿಪರತೆಯನ್ನು ತರಲು, ಗಳಿಕೆ–ವೆಚ್ಚದ ಗಾಲಿಗಳ ಹಣಕಾಸಿನ ಬಂಡಿ ಮುಗ್ಗರಿಸದಂತೆ ಓಡುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಆಡಳಿತದಲ್ಲೂ ‘ವಿತ್ತೀಯ ಹೊಣೆಗಾರಿಕೆ’ ಕಾನೂನು ಜಾರಿಗೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT