ಶುಕ್ರವಾರ, ಅಕ್ಟೋಬರ್ 23, 2020
21 °C

ಸಂಪಾದಕೀಯ: ಬಿಬಿಎಂಪಿ; ಚುನಾವಣೆ ಬಂದಾಗಲೇ ಮರುವಿಂಗಡಣೆ ಚರ್ಚೆ ಏಕೆ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಚುನಾವಣೆಯೇ ಪ್ರಜಾಪ್ರಭುತ್ವದ ಆಧಾರಸ್ತಂಭ. ಆದರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಮುಂದೂಡುವ ಚಾಳಿಯು ಈ ಬಾರಿಯೂ ಮರುಕಳಿಸುವಂತೆ ಕಾಣಿಸುತ್ತಿದೆ. ಇಂತಹ ಹುನ್ನಾರ ನಡೆಯುತ್ತಿದೆಯೇನೋ ಎಂಬ ಅನುಮಾನ ಬರುವಂತಹ ಬೆಳವಣಿಗೆಗಳಾಗಿವೆ.

ಸಂಪಾದಕೀಯ ಕೇಳಿ: ಬಿಬಿಎಂಪಿ ಚುನಾವಣೆ ಬಂದಾಗಲೇ ಮರುವಿಂಗಡಣೆ ಚರ್ಚೆ ಏಕೆ?

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 250ಕ್ಕೆ ಹೆಚ್ಚಿಸಬೇಕು ಎಂಬ ವಿಧಾನ ಮಂಡಲದ ಜಂಟಿ ಸಲಹಾ ಸಮಿತಿಯ ಶಿಫಾರಸು ಕೂಡ ಇದಕ್ಕೆ ಬಳಕೆಯಾಗುವಂತೆ ಕಾಣಿಸುತ್ತಿದೆ. ವಾರ್ಡ್‌ ಸಂಖ್ಯೆ ಹೆಚ್ಚಳ ಕುರಿತ ವರದಿಯನ್ನು ಸಮಿತಿಯ ಅಧ್ಯಕ್ಷ ಎಸ್‌.ರಘು ಅವರು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದ್ದಾರೆ. ಆದರೆ, ಇಂತಹ ಪ್ರಸ್ತಾವಗಳೆಲ್ಲವೂ ಬಿಬಿಎಂಪಿ ಚುನಾವಣೆ ನಡೆಯಬೇಕಾದ ಸಂದರ್ಭದಲ್ಲೇ ಧುತ್ತೆಂದು ಎದುರಾಗುವುದೇಕೆ ಎಂಬುದು ಯಕ್ಷಪ್ರಶ್ನೆ. ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಉದ್ದೇಶದಿಂದ ಸಂವಿಧಾನಕ್ಕೆ 74ನೇ ತಿದ್ದುಪಡಿ ಮಾಡಲಾಗಿದೆ.

ಈ ತಿದ್ದುಪಡಿ ಜಾರಿಯಾದ ಬಳಿಕ ಬೆಂಗಳೂರು ಮಹಾನಗರ ಪಾಲಿಕೆಗೆ ನಾಲ್ಕು ಚುನಾವಣೆಗಳು ನಡೆದಿವೆ. 2001ರಲ್ಲಿ ನಿಗದಿತ ಸಮಯಕ್ಕೆ ಚುನಾವಣೆ ನಡೆಯಿತು. 2006ರಲ್ಲಿ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವಷ್ಟರಲ್ಲಿ ಸರ್ಕಾರವು ಪಾಲಿಕೆಯನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಿಸಿತು. ಬೆಂಗಳೂರಿನ ಏಳು ನಗರಸಭೆಗಳು, ಒಂದು ಪಟ್ಟಣ ಪಂಚಾಯಿತಿ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿಯನ್ನು 2007ರ ಏಪ್ರಿಲ್‌ನಲ್ಲಿ ರಚಿಸಲಾಯಿತು. ಇದಾದ ತಕ್ಷಣವೇ ಚುನಾವಣೆ ನಡೆಸಬೇಕಿತ್ತು. ಆದರೆ, 2010ರ ಮಾರ್ಚ್‌ವರೆಗೆ ಅದು ನಡೆಯಲೇ ಇಲ್ಲ. ಬಿಬಿಎಂಪಿಯಲ್ಲಿ ಮೂರು ವರ್ಷ ಚುನಾಯಿತ ಕೌನ್ಸಿಲ್‌ ಇರಲೇ ಇಲ್ಲ. ಹೈಕೋರ್ಟ್‌ ಆದೇಶ ಮಾಡಿದ ಬಳಿಕವಷ್ಟೇ ಚುನಾವಣೆ ನಡೆಯಿತು.

2015ರಲ್ಲೂ ಚುನಾಯಿತ ಸದಸ್ಯರ ಅವಧಿ ಮುಗಿಯಲು ಇನ್ನೇನು ಮೂರು ದಿನಗಳಿವೆ ಎನ್ನುವಾಗ ಸರ್ಕಾರವು ಬಿಬಿಎಂಪಿಯನ್ನು ಮೂರು ವಿಭಜನೆ ಮಾಡುವ ನೆಪ ಹೇಳಿ ಕೌನ್ಸಿಲ್‌ ಅನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಿಸಿತು. ಆ ವರ್ಷವೂ ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕವೇ ಚುನಾವಣೆ ನಡೆಯಿತು. ಈ ಸಲವೂ ನಿಯಮದ ಪ್ರಕಾರ ಬಿಬಿಎಂಪಿಗೆ ಇದೇ ತಿಂಗಳ 10ರ ಒಳಗೆ ಚುನಾವಣೆ ನಡೆಯಬೇಕಿತ್ತು. ರಾಜ್ಯದಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ ಬಿಬಿಎಂಪಿ ಚುನಾವಣೆ ಮುಂದೂಡುವ ಚಾಳಿ ತಪ್ಪಿಲ್ಲ.

ಈ ಬಾರಿಯ ಪರಿಸ್ಥಿತಿ ಇನ್ನೂ ವಿಚಿತ್ರವಾಗಿದೆ. ಪಾಲಿಕೆಯ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯಲು ಇನ್ನೇನು ಆರು ತಿಂಗಳು ಬಾಕಿ ಇದೆ ಎನ್ನುವಾಗ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರಚಿಸಲು ಸರ್ಕಾರ ಮುಂದಾಯಿತು. ಈ ಸಲುವಾಗಿ ವಿಧಾನಸಭೆಯಲ್ಲಿ ಈ ವರ್ಷದ ಮಾರ್ಚ್‌ 20ರಂದು ಬಿಬಿಎಂಪಿ ಮಸೂದೆಯನ್ನು ಮಂಡಿಸಲಾಯಿತು. ಇನ್ನೊಂದೆಡೆ ಸರ್ಕಾರವು 2011ರ ಜನಸಂಖ್ಯೆ ಆಧಾರದಲ್ಲಿ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಮಾಡಿ, ಜೂನ್‌ 23ರಂದು ಅಂತಿಮ ಅಧಿಸೂಚನೆಯನ್ನೂ ಪ್ರಕಟಿಸಿದೆ.

ಇದಾಗಿ ಮೂರು ತಿಂಗಳಷ್ಟೇ ಆಗಿದೆ. ಬಿಬಿಎಂಪಿ ಮಸೂದೆಯ ಪರಿಶೀಲನೆಗಾಗಿ ರಚಿಸಿರುವ ಜಂಟಿ ಸಲಹಾ ಸಮಿತಿಯು ಈಗ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಜನರಿಗೆ ಅನುಕೂಲ ಕಲ್ಪಿಸಲು ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ನಿಜವಾದ ಕಾಳಜಿ ಸರ್ಕಾರಕ್ಕೆ ಇದ್ದಿದ್ದೇ ಆದರೆ 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಅಥವಾ ಬಿಬಿಎಂಪಿ ಕಾಯ್ದೆ ರಚಿಸಲು ಚುನಾವಣೆ ಬಾಗಿಲು ಬಡಿಯುವುದಕ್ಕೆ ಮೊದಲೇ ಕ್ರಮ ವಹಿಸಬಹುದಿತ್ತು. ಹಾಗೆ ಮಾಡದೇ ಇರುವುದರಿಂದ ಸರ್ಕಾರದ ಈಗಿನ ನಡೆಗಳು, ಚುನಾವಣೆ ಮುಂದೂಡುವುದಕ್ಕೆ ಮಾಡುತ್ತಿರುವ ಹುನ್ನಾರದಂತೆಯೇ ಕಾಣಿಸುತ್ತವೆ.

ಈ ಬಾರಿ ರಾಜ್ಯ ಚುನಾವಣಾ ಆಯೋಗವೇ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದೆ. ಚುನಾವಣೆಗೆ ಸಹಕರಿಸದ ಬಗ್ಗೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕವಷ್ಟೇ ಸರ್ಕಾರವು ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆ ಮುಗಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸಿದೆ. ನ್ಯಾಯಾಲಯದ ಆದೇಶದ ಬಳಿಕವೇ ಚುನಾವಣೆ ನಡೆಸುವ ಪರಿಸ್ಥಿತಿಯು ಮರುಕಳಿಸುವುದಕ್ಕೆ ಅವಕಾಶ ನೀಡಬಾರದು. ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಅಸ್ತಿತ್ವಕ್ಕೆ ತರಲು ಕ್ರಮ ಕೈಗೊಳ್ಳಬೇಕು. ಸಂವಿಧಾನದ 74ನೇ ತಿದ್ದುಪಡಿಯ ಆಶಯವನ್ನು ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು