ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆಯಲ್ಲಿ ಹಿಂದೆಬಿದ್ದ ಬಿಬಿಎಂಪಿ: ಕಾರ್ಮಿಕರಿಗೆ ಸಂಬಳ ಪಾವತಿಸಿ

Last Updated 18 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಈ ಸಮಯದಲ್ಲಿ ಹಗಲು–ರಾತ್ರಿ ಎನ್ನದೆ ಅಂತ್ಯಕ್ರಿಯೆಗೆ ನೆರವಾಗುತ್ತಿರುವ ಸ್ಮಶಾನ ಮತ್ತು ಚಿತಾಗಾರಗಳ ಕಾರ್ಮಿಕರಿಗೆ ಹಲವು ತಿಂಗಳಿಂದ ಸಂಬಳವನ್ನೇ ನೀಡದಿರುವುದು ಅಮಾನವೀಯ. ಕೋವಿಡ್‌ನಿಂದ ಸಾವಿಗೆ ಈಡಾಗುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಚಿತಾಗಾರಗಳ ಮುಂದೆ ಶವ ವಾಹನಗಳ ಸಾಲು ಸಾಲೇ ಕಂಡು ಬರುತ್ತಿದೆ. ಸಂಕಷ್ಟದ ಈ ಸಂದರ್ಭದಲ್ಲಿ ಕೆಚ್ಚೆದೆಯಿಂದ ಮುಂದೆ ನಿಂತು ನೆರವಿನಹಸ್ತ ಚಾಚುತ್ತಿರುವವರಿಗೆ ಪ್ರೋತ್ಸಾಹ ತುಂಬುವ ಕೆಲಸ ಮಾಡಬೇಕಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಅವರಿಗೆ ಸಂಬಳವನ್ನೇ ನೀಡದೆ ಸತಾಯಿಸಿ ಹೊಣೆಗೇಡಿತನ ತೋರಿದೆ. ಕನಿಷ್ಠ ವೇತನವನ್ನು ಹೆಚ್ಚಿಸಬೇಕೆಂಬ ಈ ಕಾರ್ಮಿಕರ ಬೇಡಿಕೆ ಕೂಡ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗ ಕೊಡುವ ಸಂಬಳದಲ್ಲೂ ಬಾಕಿ ಉಳಿಸಿಕೊಂಡರೆ ಅವರು ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದು ಹೇಗೆ ಎಂಬ ಪ್ರಶ್ನೆ ಅಧಿಕಾರಿಗಳ ತಲೆಗೆ ಏಕೆ ಹೋಗಲಿಲ್ಲ? ಅಪಾಯ ಲೆಕ್ಕಿಸದೆ ಕಾರ್ಯನಿರ್ವಹಿಸುವವರಿಗೆ ಪ್ರತೀ ಅಂತ್ಯಕ್ರಿಯೆಗೆ ತಲಾ ₹ 500 ಪ್ರೋತ್ಸಾಹಧನ ನೀಡಲಾಗುವುದು ಎಂಬ ಘೋಷಣೆ ಇನ್ನೂ ಅನುಷ್ಠಾನಗೊಂಡಿಲ್ಲ. ಅಂತ್ಯಕ್ರಿಯೆ ನಡೆಸುವ ವೇಳೆ ಧರಿಸಲು ಕಾರ್ಮಿಕರಿಗೆ ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ ಕಿಟ್‌) ಕೊರತೆಯೂ ಎದುರಾಗಿದೆ. ಹಾಗೆಯೇ ಕರ್ತವ್ಯನಿರತ ಕಾರ್ಮಿಕರು ಸೋಂಕುಪೀಡಿತರಾದರೆ ಅವರಿಗೆ ಸರಿಯಾದ ಚಿಕಿತ್ಸೆ ಸೌಲಭ್ಯವೂ ಸಿಗುತ್ತಿಲ್ಲ ಎಂಬ ವರದಿಗಳಿವೆ. ಮೃತರ ಅಂತ್ಯಸಂಸ್ಕಾರವನ್ನು ಘನತೆಯಿಂದ ನಡೆಸಲು ನೆರವಾಗುವ ಕಾರ್ಮಿಕರು ಘನತೆಯಿಂದ ಬದುಕುವಂತೆ ನೋಡಿಕೊಳ್ಳುವುದು ಬಿಬಿಎಂಪಿಯ ಹೊಣೆ. ಆ ಜವಾಬ್ದಾರಿಯಿಂದ ಅದು ನುಣುಚಿ ಕೊಳ್ಳುವಂತಿಲ್ಲ.

ಸ್ಮಶಾನ ಮತ್ತು ಚಿತಾಗಾರಗಳ ಕಾರ್ಮಿಕರ ವಿಷಯದಲ್ಲಿ ಅಷ್ಟೇ ಅಲ್ಲ, ಕೋವಿಡ್‌ನ ಎರಡನೇ ಅಲೆಯನ್ನು ಎದುರಿಸಲು ಸನ್ನದ್ಧವಾಗುವ ವಿಷಯದಲ್ಲೂ ಬಿಬಿಎಂಪಿ ಎಡವಿದೆ. ಸೋಂಕುಪೀಡಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಸ್ಥಿತಿ ಮತ್ತೆ ಎದುರಾಗಿದೆ. ಕಳೆದ ವರ್ಷ ಸಾರ್ವಜನಿಕರು ಪರದಾಡಿದ್ದ ಕಹಿ ನೆನಪು ಇದ್ದರೂ ಸೋಂಕುಪೀಡಿತರ ಆರೈಕೆಗೆ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ದಿಸೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಕಾಯಿಲೆಪೀಡಿತರು ಈಗಲೂ ಆಸ್ಪತ್ರೆಯಲ್ಲಿ ಸುಲಭವಾಗಿ ದಾಖಲಾಗಲು ಸಾಧ್ಯವಾಗುತ್ತಿಲ್ಲ. ಪ್ರಭಾವಿಗಳೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಹ ಸನ್ನಿವೇಶ ಇರುವಾಗ ಇನ್ನು ಜನಸಾಮಾನ್ಯರ ಪಾಡೇನು? ಕೋವಿಡ್‌ ಪರೀಕ್ಷಾ ವರದಿ ಅನಾರೋಗ್ಯಪೀಡಿತರ ಕೈಗೆಬೇಗ ಸೇರದಿರುವುದು ಕೂಡ ಚಿಕಿತ್ಸೆ ಪಡೆಯುವುದನ್ನು ವಿಳಂಬಗೊಳಿಸಿದೆ. ಸೋಂಕುಪೀಡಿತರ ಆರೈಕೆಗೆ ಬಹುಮುಖ್ಯವಾಗಿ ಬೇಕಾಗಿರುವ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಇದೆ ಎಂಬ ವರದಿಗಳಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕೆ.ಸುಧಾಕರ್‌, ‘ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ಆಮ್ಲಜನಕ ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಆಮ್ಲಜನಕದ ಉತ್ಪಾದನೆಯಾದರಷ್ಟೇ ಸಾಲದು, ಎಲ್ಲೆಲ್ಲಿ ಬೇಡಿಕೆ ಇದೆಯೋ ಅಲ್ಲಿಗೆ ಪೂರೈಸುವ ಕೆಲಸವೂ ಆಗಬೇಕಲ್ಲ? ಕೋವಿಡ್‌ ನಿಯಂತ್ರಣಕ್ಕೆ ಮಾರ್ಗಸೂಚಿಯನ್ನು ಇನ್ನಷ್ಟು ಬಿಗಿಗೊಳಿಸಿರುವ ಸರ್ಕಾರ, ಮದುವೆಯಂತಹ ಸಮಾರಂಭಗಳಿಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಗೊಳಿಸಿದೆ. ಅತಿಥಿಗಳ ಸಂಖ್ಯೆಯ ಮೇಲೆ ನಿರ್ಬಂಧ ವಿಧಿಸಲು ಪಾಸ್‌ ನೀಡಲಾಗುತ್ತದೆ ಎಂದೂ ತಿಳಿಸಲಾಗಿದೆ. ಇಂತಹ ನಿಯಮ ಕಾರ್ಯಸಾಧುವೇ ಎಂಬುದನ್ನು ಸರ್ಕಾರ ಮರುಪರಿಶೀಲನೆ ನಡೆಸಬೇಕು. ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಸಾರ್ವಜನಿಕರು ಜವಾಬ್ದಾರಿಯಿಂದ ನಡೆದು ಕೊಳ್ಳಬೇಕು ಎನ್ನುವಲ್ಲಿ ಎರಡು ಮಾತಿಲ್ಲ. ಆದರೆ, ಸರ್ಕಾರ ಕೇವಲ ಮಾರ್ಗಸೂಚಿ ರೂಪಿಸುತ್ತಾ ಕಾಲ ಕಳೆದರೆ ಸಾಲದು. ಚಿತಾಗಾರದ ಕಾರ್ಮಿಕರೂ ಸೇರಿದಂತೆ ಕೋವಿಡ್‌ ಸೇನಾನಿಗಳಿಗೆ ಸಮರ್ಪಕ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು. ಆದ್ಯತೆಯ ಮೇರೆಗೆ ಸಂಬಳ ಬಿಡುಗಡೆ ಮಾಡಬೇಕು. ಆಮ್ಲಜನಕದ ಸಿಲಿಂಡರ್‌ಗಳು ಎಲ್ಲೆಡೆ ಸಿಗುವಂತೆ ನೋಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸೋಂಕುಪೀಡಿತರು ಆಸ್ಪತ್ರೆಗೆ ದಾಖಲಾಗಲು ಪರದಾಡುವುದನ್ನು ತಪ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT