ಮಂಗಳವಾರ, ಜನವರಿ 31, 2023
27 °C

ಸಂಪಾದಕೀಯ: ನಗರದ ಧಮನಿಗಳಲ್ಲಿ ಕಿಲುಬು ಶೇಖರಣೆ ಸರಹದ್ದಿನಾಚೆಗೂ ವಿಷವರ್ತುಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಜಾಗತಿಕ ಹೂಡಿಕೆದಾರರ ಸಮ್ಮೇಳನದ ಯಶಸ್ಸನ್ನು ಸರ್ಕಾರಿ ವಕ್ತಾರರು ಹಾಡಿಹೊಗಳುತ್ತಿರುವ ಸಂದರ್ಭದಲ್ಲೇ ಪ್ರಜೆಗಳ ಬದುಕಿನ ಗುಣಮಟ್ಟದ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿರುವ ಸಂಗತಿಗಳು ಒಂದರಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ನಗರ ಮಾಲಿನ್ಯ ನಿಯಂತ್ರಣಕ್ಕೆಂದೇ ಕಳೆದ ವರ್ಷ (2020-21ರಲ್ಲಿ) ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ₹ 279 ಕೋಟಿ ಮೊತ್ತ ಬಳಕೆಯಾಗದೇ ಉಳಿದಿದೆ.

ಕಸ ವಿಲೇವಾರಿಗೆ, ಕಟ್ಟಡ ಅವಶೇಷಗಳ ತೆರವಿಗೆ ಮತ್ತು ವಾಯುಮಾಲಿನ್ಯ ನಿವಾರಣೆಗೆಂದೇ ಅನುದಾನ ಲಭ್ಯವಾಗುತ್ತಿದ್ದರೂ ಇಂಥ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬೇಕಾದ ಹೊಸ ಯೋಜನೆಗಳೇ ಅನುಷ್ಠಾನವಾಗಿಲ್ಲ. ಸಾಲದ್ದಕ್ಕೆ, ಈಗಿನ ಹಣಕಾಸು ವರ್ಷದಲ್ಲಿ ಮತ್ತೆ ₹ 140 ಕೋಟಿ ಅನುದಾನವನ್ನು ರಾಜ್ಯ ಪಡೆದಿದೆ. ಈ ಮೊತ್ತವನ್ನು ವಿನಿಯೋಗಿಸುವ ಹೊಣೆ ಬಿಬಿಎಂಪಿ ಮತ್ತು ಬಿಎಂಟಿಸಿಗಳ ಮೇಲಿದ್ದು, ನಗರಮಾಲಿನ್ಯದ ಗಂಭೀರ ಸಮಸ್ಯೆಯ ಬಿಸಿ ಅವಕ್ಕೆ ತಟ್ಟಿದಂತಿಲ್ಲ. ದೇಶದ ಅತ್ಯಂತ ಹತ್ತು ಕೊಳಕು ನಗರಗಳಲ್ಲಿ ಬೆಂಗಳೂರೂ ಒಂದೆಂಬ ಕುಖ್ಯಾತಿ ಯನ್ನು ತೊಡೆದು ಹಾಕಬೇಕೆಂಬ ಯಾವ ವಿಶೇಷ ಆಸಕ್ತಿಯೂ ನಗರಾಡಳಿತಕ್ಕೆ ಇದ್ದಂತಿಲ್ಲ. ಹೊಗೆ ಕಕ್ಕದ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ರಸ್ತೆಗೆ ಇಳಿಸಿದೆ ನಿಜ.

ಇನ್ನೊಂದು ವರ್ಷದಲ್ಲಿ ಅಂಥ ಇನ್ನೂ 1,222 ಬಸ್‌ಗಳನ್ನು ಓಡಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದ ವಾಹನ ದಟ್ಟಣೆಯನ್ನು ಗಮನಿಸಿದರೆ ಈ ಸಂಖ್ಯೆ ಅದೆಷ್ಟು ಅಲ್ಪವೆಂಬುದು ಗೊತ್ತಾಗುತ್ತದೆ. ಸುಮಾರು 5,600 ಬಸ್‌ಗಳನ್ನು ಬಿಎಂಟಿಸಿ ಓಡಿಸುತ್ತಿದ್ದು, ‘ನಗರದ ಸಮಗ್ರ ಸಂಚಾರ ಯೋಜನೆ’ಯ ಪ್ರಕಾರ ಇವುಗಳ ಸಂಖ್ಯೆ ಈಗಾಗಲೇ 12,000 ಇರಬೇಕಿತ್ತು. ಸಮೂಹ ಸಾರಿಗೆಯು ಸಮರ್ಪಕವಾಗಿ ಇಲ್ಲದಿರುವ ಕಾರಣದಿಂದ ಖಾಸಗಿ ದ್ವಿಚಕ್ರ ವಾಹನಗಳು, ಕಾರುಗಳ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದೆ. ದಾಖಲೆಗಳ ಪ್ರಕಾರ, ಇದುವರೆಗೆ 22 ಲಕ್ಷ ಕಾರುಗಳು ಮತ್ತು 69 ಲಕ್ಷ ದ್ವಿಚಕ್ರ ವಾಹನಗಳು ನೋಂದಣಿಗೊಂಡಿವೆ. ಇಷ್ಟೊಂದು ವಾಹನಗಳು ನಗರದಲ್ಲಿ ಡೀಸೆಲ್‌, ಪೆಟ್ರೋಲ್‌ ಹೊಗೆ ಹೊಮ್ಮಿಸುತ್ತಿರುವಾಗ ಕೆಲವೇ ನೂರು ವಿದ್ಯುತ್‌ಚಾಲಿತ ಬಸ್‌ಗಳು ಮತ್ತು ಖಾಸಗಿ ವಾಹನಗಳು ಗಾಳಿಯ ಶುದ್ಧೀಕರಣಕ್ಕೆ ಯಾವ ಗಮನಾರ್ಹ ಕೊಡುಗೆಯನ್ನೂ ಕೊಡಲಾರವು. ಇಷ್ಟಕ್ಕೂ ರಸ್ತೆಯಿಂದ ಹೊಮ್ಮುವ ಕಣಮಾಲಿನ್ಯಕ್ಕೆ ವಾಹನದ ಹೊಗೆಗಿಂತ ಹೆಚ್ಚಿನ ಕೊಡುಗೆ ರಸ್ತೆಯ ದೂಳಿನಿಂದಲೇ ಬರುತ್ತದೆ. ರಸ್ತೆಗಳ ಗುಣಮಟ್ಟ ಕಳಪೆ ಇದ್ದಷ್ಟೂ ಟಯರ್‌ ಸವೆತದಿಂದ ಹೊಮ್ಮುವ ವಿಷಕಣಗಳ ದಟ್ಟಣೆ ಹೆಚ್ಚಾಗಿರುತ್ತದೆ. ಜಗತ್ತಿನ ಅತ್ಯಂತ ಕೊಳಕು ಗಾಳಿಯ ನಗರವೆಂದು ಕುಖ್ಯಾತಿ ಪಡೆದ ದೆಹಲಿಯಲ್ಲಿ ರಸ್ತೆದೂಳಿನ ನಿವಾರಣೆಗೆಂದು ದಿನವೂ ನೀರಿನ ತುಂತುರು ಸಿಂಪಡಣೆ ಮಾಡುವ ದೃಶ್ಯವನ್ನು ನಾವು ನೋಡುತ್ತಿದ್ದೇವೆ.

ದೂಳುಮಾಲಿನ್ಯವನ್ನು ಕಡಿಮೆ ಮಾಡುವ ದಿಸೆಯಲ್ಲಿ ಬಿಎಂಟಿಸಿಯಷ್ಟೇ ಬಿಬಿಎಂಪಿಯ ಹೊಣೆಗಾರಿಕೆಯೂ ಹೆಚ್ಚಿನದಾಗಿ ಇರಬೇಕಾಗುತ್ತದೆ. ಕಸ ವಿಲೇವಾರಿ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕೆಂದು ಕೇಂದ್ರದಿಂದ ಮಂಜೂರಾದ ಹಣವನ್ನೂ ವಿನಿಯೋಗಿಸಲಾರದಷ್ಟು ಜಡತ್ವವನ್ನು ಈ ಸಂಸ್ಥೆಗಳು ಪ್ರದರ್ಶಿಸುತ್ತಿವೆ ಎಂದರೆ ಅದಕ್ಕೇನು ಹೇಳೋಣ? ಇದೇ ಪ್ರಮಾಣದ ನಿಷ್ಕ್ರಿಯತೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಪ್ರದರ್ಶಿಸಿದೆ.

ರಸ್ತೆಯಲ್ಲಿ ಸವಕಳಿಗೊಂಡು ಬಿಸಾಕಿದ ಟಯರ್‌ಗಳ ಸಂಸ್ಕರಣೆಯಲ್ಲೂ ಕರ್ನಾಟಕ ಅಸೀಮ ನಿರ್ಲಕ್ಷ್ಯ ವನ್ನು ತೋರುತ್ತಿದೆಯೆಂದು ದಿಲ್ಲಿಯಿಂದ ಬಂದ ವರದಿಗಳು ಹೇಳುತ್ತಿವೆ. ಬಿಸಾಕಿದ ಟಯರ್‌ಗಳನ್ನು ಕರಗಿಸಿ ತೈಲವನ್ನು ಬಸಿದು ಮಾರುವ ಕಾರ್ಖಾನೆಗಳು ಅಪಾರ ಪ್ರಮಾಣದಲ್ಲಿ ವಿಷಗಾಳಿಯನ್ನು ಹೊರಕ್ಕೆಲ್ಲ ಹಬ್ಬಿಸುತ್ತಿದ್ದು, ಅವನ್ನೆಲ್ಲ ಮುಚ್ಚಿಸಬೇಕೆಂದು ಮೂರು ವರ್ಷಗಳ ಹಿಂದೆಯೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ನೀಡಿದೆ. ಆದರೂ ಕರ್ನಾಟಕದಲ್ಲಿ ಈಗಲೂ ಇಂಥ 19 ಘಟಕ ಗಳು ಗಾಳಿಗೆ ಕೊಳೆಯನ್ನು ಸೇರಿಸುತ್ತಲೇ ಇವೆ. ಟಯರ್‌ ಕರಗಿಸುವ ಉದ್ಯಮ ‘ಅತಿ ಅಪಾಯಕಾರಿ’ (ಕೆಂಪು) ಗುಂಪಿಗೆ ಸೇರಿದ್ದು, ಅದರಿಂದ ಹೊರಹೊಮ್ಮುವ ಗಾಳಿಯಲ್ಲಿ ಫ್ಯೂರಾನ್‌ ಮತ್ತು ಡಯಾಕ್ಸಿನ್‌ ನಂತಹ ತೀವ್ರ ವಿಷಕಣಗಳಿರುತ್ತವೆ. ಅವುಗಳ ಉಸಿರಾಟದಿಂದ ಶ್ವಾಸಕೋಶ ಭಗ್ನ, ಬಂಜೆತನ, ಮೂತ್ರ ಪಿಂಡ ವೈಫಲ್ಯದಂತಹ ಗಂಭೀರ ಕಾಯಿಲೆಗಳು ಬರುತ್ತವೆ ಎಂಬುದು ಎಂದೋ ಸಾಬೀತಾಗಿದೆ.

ಟಯರ್‌ಗಳನ್ನು ಕರಗಿಸುವ ಅಂಥ ಘಟಕಗಳನ್ನು ಬೆಂಗಳೂರಿನಿಂದಾಚೆ ದೂರದ ಜಿಲ್ಲೆಗಳಲ್ಲಿ ಸ್ಥಾಪಿಸಿ, ಅದರತ್ತ ಕಣ್ಣೆತ್ತಿ ನೋಡಲಾಗುತ್ತಿಲ್ಲವೆಂದರೆ ಅದು ಮಾಲಿನ್ಯತಜ್ಞರ ನೈತಿಕ ಕುಸಿತದ ಲಕ್ಷಣವೂ ಹೌದು. ನಮ್ಮಲ್ಲಿ ಜಾಸ್ತಿ ಹೊಗೆ ಕಕ್ಕುವ ಹಳೆಯ ವಾಹನಗಳನ್ನೂ ಚಿಕ್ಕಪುಟ್ಟ ಪಟ್ಟಣಗಳಿಗೆ ಸಾಗಹಾಕುತ್ತೇವೆ. ಹಳೆ ಟಯರ್‌ಗಳ ಸಂಸ್ಕರಣಾ ಘಟಕಗಳನ್ನೂ ತಳ್ಳುತ್ತೇವೆ. ಕೊಳಕು ಚರಂಡಿ ನೀರನ್ನೂ ಅತ್ತ ಹರಿಯ ಬಿಡುತ್ತೇವೆ. ಶುದ್ಧ ನೀರು, ಲಕಲಕ ಹೊಳೆಯುವ ಆಸ್ಪತ್ರೆಗಳು ಮಾತ್ರ ದೊಡ್ಡ ನಗರಗಳಿಗೇ ಲಭ್ಯವಾಗು ವಂತೆ ನೋಡಿಕೊಳ್ಳುತ್ತೇವೆ. ನಾವು ಕಟ್ಟಿಕೊಳ್ಳುತ್ತಿರುವ‌ ಸ್ವಸ್ಥ, ಸಮಸಮಾಜದ ವೈಖರಿ ಇದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು