ಬೆಂಗಳೂರಿನ ಏದುಬ್ಬಸಕ್ಕೆ ಕಾರಣವಾಗುವಂತಿರುವ ನಗರ ಯೋಜನೆಯ ದುರವಸ್ಥೆ ಮತ್ತು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿನ ಅಧಿಕಾರಿಗಳ ವೈಫಲ್ಯವು ಬುಧವಾರ (ಏಪ್ರಿಲ್ 29) ಸಂಜೆ ಸುರಿದ ಮಳೆಯಿಂದಾಗಿ ಮತ್ತೊಮ್ಮೆ ಬಹಿರಂಗಗೊಂಡಿದೆ. ಬೇಸಿಗೆಯ ತೀವ್ರತೆಯಿಂದ ಕಂಗೆಟ್ಟಿದ್ದ ರಾಜಧಾನಿಯ ನಾಗರಿಕರಿಗೆ ಅನಿರೀಕ್ಷಿತ ಮಳೆ ಸಂತಸ ತಂದಿತಾದರೂ, ಆ ಸಂಭ್ರಮವನ್ನು ಹತ್ತು ನಾಗರಿಕರ ಸಾವಿನ ಸುದ್ದಿಯ ಸಂಕಟ ಹಿಂಬಾಲಿಸಿತು. ಶಿವಾಜಿನಗರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಜನರು ಜೀವ ಕಳೆದುಕೊಂಡಿದ್ದಾರೆ. ಯಾರಬ್ ನಗರ ಹಾಗೂ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಬಳಿ ಮಳೆಯ ಸಮಯದಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಇಬ್ಬರು ಮೃತಪಟ್ಟಿದ್ದಾರೆ. ಚಾಮರಾಜಪೇಟೆಯಲ್ಲಿ ಮತ್ತೊಬ್ಬರು ಮಳೆಯ ಅವಘಡಕ್ಕೆ ಬಲಿಯಾಗಿದ್ದಾರೆ. ಕೆಲವೇ ಸಮಯದ ಮಳೆಗೆ ಜೀವಹಾನಿ ಸಂಭವಿಸುವುದು, ರಸ್ತೆಗಳು ಹೊಳೆಗಳ ಸ್ವರೂಪ ಪಡೆದುಕೊಳ್ಳುವುದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವುದು, ಗೋಡೆಗಳು ಕುಸಿಯುವುದು, ಮನೆ–ಮಳಿಗೆಗಳಿಗೆ ನೀರು ನುಗ್ಗುವುದು ಬೆಂಗಳೂರಿನಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಈ ಪರಿಸ್ಥಿತಿ ಬಹುತೇಕ ಸಂದರ್ಭಗಳಲ್ಲಿ ಮಳೆಯ ರೌದ್ರರೂಪದ ಪರಿಣಾಮವಾಗಿರದೆ, ಆಡಳಿತದ ಹೊಣೆಗೇಡಿ ತನದ ಫಲಶ್ರುತಿ ಆಗಿರುವುದೇ ಹೆಚ್ಚು. ಮಳೆಯನ್ನು ಸಂತೋಷದಿಂದ ಅನುಭವಿಸಬೇಕಾದ ನಾಗರಿಕರು, ಮಳೆಯ ಬಗ್ಗೆ ಆತಂಕಪಡುವ ಸ್ಥಿತಿ ಉಂಟಾಗಿರುವುದರ ಹಿಂದೆ ಸರ್ಕಾರದ ಹೊಣೆಗೇಡಿತನ ಹಾಗೂ ಅಧಿಕಾರಿಗಳ ಭ್ರಷ್ಟತೆ, ನಿರ್ಲಕ್ಷ್ಯ ಎದ್ದುಕಾಣುವಂತಿದೆ.
.ಸಂಪಾದಕೀಯ Podcast: ಶುಕ್ರವಾರ, 01 ಮೇ 2026.
ಬೆಂಗಳೂರು ಮಹಾನಗರ ಪಾಲಿಕೆ ಹೆಸರನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಎಂದು ಕಳೆದ ವರ್ಷ ಬದಲಿಸಲಾಗಿತ್ತು. ‘ಜಿಬಿಎ’ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ನಡೆದಿ ರುವ ದುರಂತ, ಹೆಸರು ಬದಲಾದ ಮಾತ್ರಕ್ಕೆ ನಗರದ ಸ್ವರೂಪ ಬದಲಾಗದು ಎನ್ನುವುದನ್ನು ಸೂಚಿಸುವಂತಿದೆ. ಜಾಗತಿಕ ಐಟಿ ಕೇಂದ್ರಗಳಲ್ಲೊಂದು ಎಂದು ಬೀಗುವ ನಗರದಲ್ಲಿ ಮಳೆನೀರು ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡು ಸಂಗತಿ. ನಗರಾಭಿವೃದ್ಧಿಯ ಫಲಾನುಭವಿಗಳು ಶ್ರೀಮಂತರಾಗಿದ್ದು, ಅಡ್ಡ ಪರಿಣಾಮಗಳಿಗೆ ಜನಸಾಮಾನ್ಯರು ತಲೆ ಕೊಡಬೇಕಾದ ವಿರೋಧಾಭಾಸ ಇಲ್ಲಿಯದು. ಮಳೆಯಿಂದ ಸಂಭವಿಸುವ ಅನಾಹುತಗಳಲ್ಲಿ ಜೀವ ಕಳೆದುಕೊಳ್ಳುವ ನತದೃಷ್ಟರು ಬಹುತೇಕ ಸಂದರ್ಭಗಳಲ್ಲಿ ಬಡವರು, ಕೂಲಿ ಕಾರ್ಮಿಕರು ಆಗಿರುತ್ತಾರೆ ಎನ್ನುವುದಕ್ಕೆ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿತದಿಂದ ಸಂಭವಿಸಿದ ದುರಂತ ಹೊಸ ನಿದರ್ಶನದಂತಿದೆ. ಆಸ್ಪತ್ರೆಯ ಕಾಂಪೌಂಡ್ ಬಿದ್ದು ಸಂಭವಿಸಿರುವ ದುರಂತದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಪೌಂಡ್ ಶಿಥಿಲಗೊಂಡಿದ್ದರೂ ಅದನ್ನು ಏಕೆ ತೆರವುಗೊಳಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಹಾರ ಕಾರ್ಯಗಳಿಗೆ ವೇಗ ಕಲ್ಪಿಸುವ ಮೂಲಕ ಮುಖ್ಯಮಂತ್ರಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಆದರೆ, ನಗರದ ನಾಗರಿಕ ಸಮಸ್ಯೆಗಳು ಉಲ್ಬಣಗೊಂಡಿರುವುದರಲ್ಲಿ ಸರ್ಕಾರದ ಪಾತ್ರವೂ ಇದೆ. ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ ನಡೆಸುವುದನ್ನು ಮುಂದಕ್ಕೆ ಹಾಕುತ್ತಲೇ ಬರುವ ಮೂಲಕ, ನಾಗರಿಕರ ತಕ್ಷಣದ ಸಮಸ್ಯೆಗಳಿಗೆ ಸ್ಪಂದಿಸುವ ಸ್ಥಳೀಯ ಜನಪ್ರತಿನಿಧಿಗಳೇ ಇಲ್ಲದಂತಾಗಿದೆ. ಸಂಕಷ್ಟದ ಸಮಯದಲ್ಲಿ ಜನರ ಕೈಗೆಟಕುವಂತೆ ಇರುತ್ತಿದ್ದ ಹಾಗೂ ಬಿಕ್ಕಟ್ಟನ್ನು ನಿರ್ವಹಿಸುವ ಉತ್ತರದಾಯಿತ್ವ ಹೊಂದಿರುತ್ತಿದ್ದ ಕಾರ್ಪೊರೇಟರ್ಗಳು ಇಲ್ಲದಿರುವ ವ್ಯವಸ್ಥೆಯನ್ನು ಸೃಷ್ಟಿಸಿರುವ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯಗಳನ್ನು ಗಾಳಿಗೆ ತೂರಿದೆ.

ಜೀವ ಕಳೆದುಕೊಂಡವರಿಗೆ ಹಾಗೂ ಗಾಯಾಳುಗಳಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಅಲ್ಲಿಗೆ ಸರ್ಕಾರದ ಹೊಣೆಗಾರಿಕೆ ಮುಗಿದುಹೋಗಬಾರದು. ಜೀವಕ್ಕೆ ಸುರಕ್ಷಿತವಾದ ವ್ಯವಸ್ಥೆ ಕಲ್ಪಿಸುವುದೇ ನಿಜವಾದ ಹೊಣೆಗಾರಿಕೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರಿನ ಎಲ್ಲ ಹಳೆಯ ಕಟ್ಟಡಗಳ ಸುರಕ್ಷತೆಯ ಪರೀಕ್ಷೆ ನಡೆಯಬೇಕಾಗಿದೆ. ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಆಯಾ ಕಟ್ಟಡಗಳನ್ನು ನಿರ್ವಹಿಸುವ ಮುಖ್ಯಸ್ಥರನ್ನು ಹೊಣೆಯಾಗಿಸಬೇಕಾಗಿದೆ. ಮಳೆಗಾಲದ ಆಗಮನಕ್ಕೆ ಮೊದಲೇ ರಾಜಕಾಲುವೆ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಮಳೆ ನೀರು ಹರಿಯುವ ಮಾರ್ಗಗಳನ್ನು ಮುಕ್ತಗೊಳಿಸುವುದು, ರಸ್ತೆ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಜಿಬಿಎ ಹೊಣೆಗಾರಿಕೆ. ಈ ಜವಾಬ್ದಾರಿ ನಿರ್ವಹಿಸಲು ವಿಫಲರಾದ ಅಧಿಕಾರಿಗಳನ್ನು ಗುರ್ತಿಸಿ, ಕಠಿಣ ಕ್ರಮ ಕೈಗೊಳ್ಳದೆ ಹೋದರೆ, ಮಳೆಯೊಂದಿಗೆ ದುರಂತವೂ ಖಚಿತ ಎನ್ನುವುದನ್ನು ಸರ್ಕಾರವೇ ಅಧಿಕೃತಗೊಳಿಸಿದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.