ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ದಿನಗಳ ಸಾಧನೆಗೆ ಆರ್ಥಿಕ ಹಿಂಜರಿತದ ಏಟು

Last Updated 11 ಸೆಪ್ಟೆಂಬರ್ 2019, 4:18 IST
ಅಕ್ಷರ ಗಾತ್ರ

ಐದು ವರ್ಷ ಆಳಲು ಆಯ್ಕೆಯಾದ ಸರ್ಕಾರದ ಸಾಧನೆಯನ್ನು ಮೊದಲ ನೂರು ದಿನಗಳ ಕಾರ್ಯವೈಖರಿ ಮೂಲಕ ಅಳೆಯಲಾಗದು. ಆಡಳಿತಾತ್ಮಕವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ನೂರು ದಿನಗಳು ಎಂಬುದು ಒಂದು ಘಟ್ಟವೂ ಅಲ್ಲ. ಆದರೆ, ನೀತಿ ನಿರೂಪಣೆಯಲ್ಲಿ ಸರ್ಕಾರದ ದಿಕ್ಕು ದೆಸೆ ಏನು ಎಂಬುದನ್ನು ಮೊದಲ ದಿನಗಳ ತೀರ್ಮಾನಗಳು ಸೂಚಿಸುತ್ತವೆ. ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರಕ್ಕೆ ಈಗ ನೂರು ದಿನಗಳು ತುಂಬಿವೆ. ‘ಅಭಿವೃದ್ಧಿ, ದೊಡ್ಡ ಬದಲಾವಣೆಗಳು ಮತ್ತು ವಿಶ್ವಾಸ’ ಎಂದು ಈ ಅವಧಿಯನ್ನು ಪ್ರಧಾನಿ ಬಣ್ಣಿಸಿದ್ದಾರೆ. ಪ್ರಧಾನಿ ಬಳಿಕ ಅತಿ ಪ್ರಭಾವಿ ನಾಯಕ ಎಂದುಈ ಅವಧಿಯಲ್ಲಿ ‍ ಬಿಂಬಿತವಾಗಿರುವ ಗೃಹ ಸಚಿವ ಅಮಿತ್‌ ಶಾ ಅವರು ‘ರಾಷ್ಟ್ರೀಯ ಭದ್ರತೆ, ವಿಕಾಸ ಮತ್ತು ಬಡವರ ಅಭಿವೃದ್ಧಿ’ಗೆ ಈ ಸರ್ಕಾರವು ಪರ್ಯಾಯ ಪದವೇ ಆಗಿದೆ ಎಂದಿದ್ದಾರೆ. ‘ನಿರಂಕುಶಾಧಿಪತ್ಯ, ಗೊಂದಲ ಮತ್ತು ಅರಾಜಕತೆ’ಯೇ ಈ ಸರ್ಕಾರದ ಸಾಧನೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಹಂಗಿಸಿದೆ. ಶಾಸನ ರಚನೆಯನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು ಮೊದಲ ನೂರು ದಿನಗಳಲ್ಲಿ ಅಪಾರ ಸಾಧನೆ ಮಾಡಲಾಗಿದೆ ಎಂದು ಆಡಳಿತ ನಡೆಸುತ್ತಿರುವವರು ಹೇಳುತ್ತಿದ್ದಾರೆ ಅನ್ನಿಸುತ್ತಿದೆ. ಆದರೆ, ಸರ್ಕಾರದ ಕೆಲಸವನ್ನು ಶಾಸನ ರಚನೆ ಮತ್ತು ಆಡಳಿತ ವೈಖರಿ ಎಂದು ಎರಡು ಭಾಗಗಳಾಗಿ ನೋಡಬೇಕಾಗುತ್ತದೆ. ಶಾಸನ ರಚನೆಯಲ್ಲಿ ಸರ್ಕಾರ ಬಿರುಸಿನಿಂದಲೇ ಸಾಗಿದೆ: ಜಮ್ಮು–ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರವನ್ನು ರದ್ದುಪಡಿಸಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ; ತ್ರಿವಳಿ ತಲಾಖ್‌ ನಿಷೇಧ ಮಸೂದೆ ಅಂಗೀಕಾರವಾಗಿದೆ; ಕಾನೂನುಬಾಹಿರ ಚಟುವಟಿಕೆ (ತಿದ್ದುಪಡಿ) ತಡೆ ಕಾಯ್ದೆ ಜಾರಿ ಮಾಡಿ ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವ ಅಧಿಕಾರವನ್ನು ಸರ್ಕಾರ ಪಡೆದುಕೊಂಡಿದೆ; ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಇವೆಲ್ಲವೂ ದೊಡ್ಡ ನಿರ್ಧಾರಗಳು ಎಂಬುದರಲ್ಲಿ ಅನುಮಾನ ಇಲ್ಲ. ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಧಾರವು ದೂರಗಾಮಿ ಪರಿಣಾಮಗಳನ್ನು ಒಳಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಇದು ಎಷ್ಟು ಪರಿಣಾಮಕಾರಿ ಎಂಬುದನ್ನು ಮುಂದಿನ ದಿನಗಳಷ್ಟೇ ಹೇಳಬಲ್ಲವು. ಉಳಿದ ಶಾಸನಗಳ ಬಗ್ಗೆ ಹಲವು ತಕರಾರುಗಳು ಇವೆ. ಶಾಸನ ರಚನೆ ಹಿಂದೆ ಬಹುಸಂಖ್ಯಾತರ ಓಲೈಕೆಯೇ ಮುಖ್ಯವಾಗಿ ಕೆಲಸ ಮಾಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ.

ಆಡಳಿತದ ವಿಚಾರಕ್ಕೆ ಬಂದಾಗ ಅಧಿಕಾರಸ್ಥರ ಹೇಳಿಕೆಗಳು ಮತ್ತು ವಾಸ್ತವದ ನಡುವೆ ತಾಳಮೇಳವೇ ಇಲ್ಲ. ಅರ್ಥ ವ್ಯವಸ್ಥೆಯ ಆರೋಗ್ಯ ಹದಗೆಟ್ಟಿದೆ ಎಂದು ಹೇಳುವುದಕ್ಕೆ ನುರಿತ ಅರ್ಥಶಾಸ್ತ್ರಜ್ಞರೇ ಬೇಕೆಂದಿಲ್ಲ. ವಾಹನ ಮಾರಾಟ ಸತತ ಮೂರು ತಿಂಗಳಿನಿಂದ ಕುಸಿಯುತ್ತಲೇ ಸಾಗಿದೆ. ವಾಹನಗಳ ಮಾರಾಟವು ಜುಲೈನಲ್ಲಿ 19 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು, ಆಗಸ್ಟ್‌ನಲ್ಲಿ ಅದು ಸಾರ್ವಕಾಲಿಕ ತಳಮಟ್ಟಕ್ಕೆ ಇಳಿದಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟವು ಹೇಳಿದೆ. ಈ ಕ್ಷೇತ್ರವನ್ನು ಅವಲಂಬಿಸಿದ್ದ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರ ಶೇ 5ಕ್ಕೆ ಕುಸಿದು, ಆರು ವರ್ಷಗಳ ಹಿಂದಿನ ಸ್ಥಿತಿಗೆ ಜಾರಿದೆ. ಬಜೆಟ್‌ನಲ್ಲಿ ಮತ್ತು ನಂತರದ ದಿನಗಳಲ್ಲಿ ಸರ್ಕಾರ ಪ್ರಕಟಿಸಿದ ಕೆಲವು ಕ್ರಮಗಳು ಕೂಡ ಅರ್ಥ ವ್ಯವಸ್ಥೆಯ ಚೇತರಿಕೆಗೆ ನೆರವನ್ನೇನೂ ನೀಡಿಲ್ಲ. ಷೇರುಪೇಟೆಯ ಹೂಡಿಕೆದಾರರು ನೂರು ದಿನಗಳಲ್ಲಿ ಕಳೆದುಕೊಂಡ ಮೊತ್ತ ಸುಮಾರು ₹ 14 ಲಕ್ಷ ಕೋಟಿ ಎಂಬುದು ಸರ್ಕಾರ ಮತ್ತು ಜನರಲ್ಲಿ ನಡುಕ ಹುಟ್ಟಿಸುವಂತಹದು. ವಿರೋಧ ಪಕ್ಷಗಳ ವಿಚಾರದಲ್ಲಿ ಆಡಳಿತ ಪಕ್ಷವು ಹೆಚ್ಚು ಆಕ್ರಮಣಕಾರಿಯಾದದ್ದು ಈ ಅವಧಿಯ ಇನ್ನೊಂದು ವಿದ್ಯಮಾನ. ವಿರೋಧ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲ ಎನ್ನುವ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಸುದ್ದಿ ಅಲ್ಲವೇ ಅಲ್ಲ. ವಿರೋಧ ಪಕ್ಷಗಳ ಮುಖಂಡರ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮೂಲಕ ನಡೆಯುತ್ತಿರುವ ತನಿಖೆ, ಬಂಧನದ ಹಿಂದಿರುವುದು ದ್ವೇಷ ರಾಜಕಾರಣ ಎಂದು ಆರೋ‍ಪಿಸಲಾಗುತ್ತಿದೆ. ಅತ್ಯಂತ ಪ್ರಬಲ ಸರ್ಕಾರವೊಂದು ಇಂತಹ ಆ‍ಪಾದನೆಗಳಿಗೆ ಎಡೆ ಇಲ್ಲದಂತೆ ಕೆಲಸ ಮಾಡಬೇಕಲ್ಲವೇ? ಕ್ಷುಲ್ಲಕವಾದ ವಿವಿಧ ವಿಚಾರಗಳನ್ನು ಇರಿಸಿಕೊಂಡು ನಡೆದ ಗುಂಪು ಹಲ್ಲೆ, ಹತ್ಯೆ ಪ್ರಕರಣಗಳು ದೇಶದಲ್ಲಿ ಕಹಿ ವಾತಾವರಣವನ್ನು ಮೂಡಿಸಿವೆ. ಆರ್ಥಿಕ ಹಿನ್ನಡೆಗೆ ಈ ಸಾಮಾಜಿಕ ಅನಿಷ್ಟವೂ ಜತೆಯಾಗಿರುವುದು ಆಳುವವರಲ್ಲಿ ಚಿಂತೆ ಮೂಡಿಸಬೇಕಿತ್ತು. ಹಾಗಾಗಿ, ನೂರು ದಿನಗಳ ಸಾಧನೆ ಬಗ್ಗೆ ಎದೆತಟ್ಟಿಕೊಳ್ಳುವುದನ್ನು ಬದಿಗಿರಿಸಿ, ತುರ್ತು ಗಮನಹರಿಸಬೇಕಾದ ಗಂಭೀರ ವಿಚಾರಗಳನ್ನು ಗುರುತಿಸಿ, ನ್ಯೂನತೆಗಳನ್ನು ಸರಿಪಡಿಸಬೇಕಿದೆ. ಮೊದಲ ನೂರು ದಿನಗಳಲ್ಲಿ ಕಂಡುಬಂದ ಲೋಪಗಳು ಮರುಕಳಿಸದಂತೆ ಎಚ್ಚರ ವಹಿಸುವ ಗುರುತರ ಜವಾಬ್ದಾರಿ ಸರ್ಕಾರಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT