ಕಟ್ಟಡ ಕುಸಿತ: ನಿಯಮ ಉಲ್ಲಂಘನೆಗೆ ಬೇಕು ಕಡಿವಾಣ

ಮಂಗಳವಾರ, ಏಪ್ರಿಲ್ 23, 2019
31 °C

ಕಟ್ಟಡ ಕುಸಿತ: ನಿಯಮ ಉಲ್ಲಂಘನೆಗೆ ಬೇಕು ಕಡಿವಾಣ

Published:
Updated:
Prajavani

ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಏಕಾಏಕಿ ಕುಸಿದುಬಿದ್ದು ಏಳು ಅಮಾಯಕರನ್ನು ಬಲಿ ಪಡೆದಿದೆ. ನಿರ್ಮಾಣ ಹಂತದ ಕಟ್ಟಡ ಕುಸಿಯುತ್ತಿರುವುದು ರಾಜ್ಯದಲ್ಲಿ ಇದೇ ಮೊದಲೇನಲ್ಲ. ಬೆಂಗಳೂರಿನಲ್ಲಂತೂ ಇಂತಹ ದುರಂತಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಹೀಗೆ ಅನಾಹುತ ಸಂಭವಿಸಿದಾಗ ಪ್ರಕರಣವೊಂದನ್ನು ದಾಖಲಿಸಿಕೊಂಡು ಕೈ ತೊಳೆದುಕೊಳ್ಳುವ ನಮ್ಮ ಆಡಳಿತ ವ್ಯವಸ್ಥೆ, ಮತ್ತೆ ಕುಂಭಕರ್ಣ ನಿದ್ರೆಗೆ ಜಾರಿಬಿಡುತ್ತದೆ. ಪುನಃ ಅದಕ್ಕೆ ಎಚ್ಚರವಾಗುವುದು ಮುಂದೆ ಎಂದಾದರೂ ಇಂತಹ ದುರಂತ ಘಟಿಸಿದಾಗಲೇ. ನಕ್ಷೆ ಮಂಜೂರು ಮಾಡಿದ ಬಳಿಕ ನಿರ್ಮಾಣದ ಪ್ರತೀ ಹಂತದಲ್ಲಿ ನಿಗಾ ವಹಿಸಬೇಕಿದ್ದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ವಿನ್ಯಾಸ ರೂಪಿಸಿ, ನಿರ್ಮಾಣದ ಹೊಣೆ ಹೊತ್ತಿದ್ದ ಎಂಜಿನಿಯರ್‌ಗಳು ಹಾಗೂ ಮಾಲೀಕರ ನಿರ್ಲಕ್ಷ್ಯವೇ ಕಟ್ಟಡ ಕುಸಿತ ಪ್ರಕರಣಗಳಿಗೆ ಕಾರಣ. ಆದರೆ, ಈ ನಿರ್ಲಕ್ಷ್ಯದಿಂದ ಸಂಭವಿಸುವ ದುರಂತಗಳಿಗೆ ಬಲಿ ಆಗುವವವರು ಮಾತ್ರ ಅಮಾಯಕರು. ಇಂತಹ ದುರಂತ ಘಟನೆಗಳನ್ನು ಅವಲೋಕಿಸಿದರೆ, ಹೊಟ್ಟೆ ಹೊರೆಯಲು ಬರುವ ಬಡಪಾಯಿಗಳ ಜೀವಕ್ಕೆ ಬೆಲೆಯೇ ಇಲ್ಲವೇನೋ ಎಂಬ ಅನುಮಾನ ಬರುತ್ತದೆ. ನಿಯಮಗಳ ಉಲ್ಲಂಘನೆ ಆಗುತ್ತಿದ್ದರೂ ಗುಣಮಟ್ಟ ಕಾಪಾಡುತ್ತಿಲ್ಲ ಎಂಬುದು ಗೊತ್ತಿದ್ದರೂ ಸಾವುಗಳ ನರ್ತನ ನಡೆದಿದ್ದರೂ ಕುರುಡು ಕಾಂಚಾಣದ ಆಸೆಗಾಗಿ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ನಿಯಮಗಳ ಉಲ್ಲಂಘನೆಗೆ ಕುಮ್ಮಕ್ಕು ನೀಡುವ ಅಧಿಕಾರಸ್ಥ ಜನಪ್ರತಿನಿಧಿಗಳೂ ಈ ಪಾಪದ ಹೊರೆಯನ್ನು ಹೊರಬೇಕು.

ಮಣ್ಣಿನ ಸುರಕ್ಷಿತ ಧಾರಣಾ ಸಾಮರ್ಥ್ಯದ (ಎಸ್‌ಬಿಸಿ) ಪರೀಕ್ಷೆ ಮಾಡದಿರುವುದು, ಫಿಲ್ಟರ್‌ ಮರಳು ಬಳಸುವುದು, ಪಾಯ ಹಾಕಿದ ಮೇಲೆ ಮೂಲ ವಿನ್ಯಾಸದಲ್ಲಿ ಮಾರ್ಪಾಡು ಮಾಡುವುದು, ಪಿಲ್ಲರ್‌ ಹಾಕುವಾಗ ನಿಗದಿಗಿಂತ ಕಡಿಮೆ ಗುಣಮಟ್ಟದ ಕಬ್ಬಿಣ ಬಳಸುವುದು ಹಾಗೂ ಮೇಲಿನ ಮಹಡಿಗಳಲ್ಲಿ ಭಾರಿ ಪ್ರಮಾಣದ ನಿರ್ಮಾಣ ಸಾಮಗ್ರಿಯನ್ನು ಸಂಗ್ರಹ ಮಾಡುವುದು- ಈ ಹಿಂದಿನ ಬಹುತೇಕ ಕಟ್ಟಡ ಕುಸಿತದ ಘಟನೆಗಳಿಗೆ ಕಾರಣ. ಇತ್ತೀಚಿನ ದಿನಗಳಲ್ಲಿ ನಿರ್ಮಾಣ ಕಾಮಗಾರಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು, ನೈಸರ್ಗಿಕ ಮರಳಿನ ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ ಫಿಲ್ಟರ್‌ ಮರಳನ್ನೇ ಹೇರಳವಾಗಿ ಬಳಕೆ ಮಾಡಲಾಗುತ್ತಿದೆ. ಅನಾಹುತಗಳಿಗೆ ಕಾರಣವಾಗುವ ಇಂತಹವುಗಳ ಮೇಲೆ ಕಣ್ಗಾವಲು ಇಡುವುದು ಅತ್ಯಗತ್ಯ. ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್ ಅಂತರವಿರಬೇಕು, ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗವಿರಬೇಕು, ವಾಹನ ನಿಲುಗಡೆಗೆ ಮಾತ್ರ ನೆಲ ಅಂತಸ್ತು ಬಳಕೆಯಾಗಬೇಕು ಎನ್ನುತ್ತದೆ ರಾಷ್ಟ್ರೀಯ ಕಟ್ಟಡ ನೀತಿ. ಈ ನೀತಿ ಕೂಡ ಕಾಗದಕ್ಕೆ ಸೀಮಿತವಾಗಿದೆ. ಕಟ್ಟಡ ಕುಸಿತದಲ್ಲಿ ಪ್ರಾಣ ಕಳೆದುಕೊಂಡ ಬಡಪಾಯಿಗಳು ಅವರವರ ಕುಟುಂಬಗಳಿಗೆ ಆಸರೆಯಾಗಿದ್ದವರು. ಎಷ್ಟು ಪರಿಹಾರ ನೀಡಿದರೂ ಮೂರಾಬಟ್ಟೆಯಾದ ಅವರ ಕುಟುಂಬಗಳ ಬದುಕನ್ನು ಮತ್ತೆ ಮೊದಲಿನಂತೆ ಕಟ್ಟಲು ಸಾಧ್ಯವಿಲ್ಲ. ಅನಾಹುತ ಆಗದಂತೆ ನೋಡಿಕೊಳ್ಳುವುದೊಂದೇ ಮುಂದಿರುವ ಸರಿಯಾದ ಮಾರ್ಗ. ಅದಕ್ಕೆ ಸದ್ಯ ಬೇಕಿರುವುದು ಸ್ವಲ್ಪ ಮುಂದಾಲೋಚನೆ, ಕಾನೂನಿನ ಕಟ್ಟುನಿಟ್ಟು ಪಾಲನೆ ಅಷ್ಟೆ. ಅಮಾಯಕರ ಬಲಿಯನ್ನು ತಡೆಯಲು ಮೊದಲು ಅಧಿಕಾರಿಗಳು ಹಾಗೂ ರಿಯಲ್‌ ಎಸ್ಟೇಟ್‌ ಕುಳಗಳ ನಡುವಿನ ಧನದಾಹಿ ಅಪವಿತ್ರ ಮೈತ್ರಿಯನ್ನು ಮುರಿಯಬೇಕು. ಬೆಂಗಳೂರು, ಹುಬ್ಬಳ್ಳಿ–ಧಾರವಾಡ ಪಾಲಿಕೆಗಳಂತಹ ಸ್ಥಳೀಯ ಸಂಸ್ಥೆಗಳ ನಗರ ಯೋಜನಾ ವಿಭಾಗದಲ್ಲಿ ಬೇರೂರಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !