ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ: ಎದ್ದು ಕಾಣುತ್ತಿರುವ ಪ್ರಾದೇಶಿಕ ಅಸಮತೋಲನ

Last Updated 21 ಆಗಸ್ಟ್ 2019, 2:13 IST
ಅಕ್ಷರ ಗಾತ್ರ

ಮೂರು ವಾರಗಳಿಂದ ಏಕಾಂಗಿಯಾಗಿ ಆಡಳಿತವನ್ನು ನಿಭಾಯಿಸಿದ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೊನೆಗೂ ಸಚಿವ ಸಂಪುಟ ವಿಸ್ತರಿಸಲು ಸಾಧ್ಯವಾಗಿದೆ. ಅಳೆದೂ ಸುರಿದೂ 17 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪಕ್ಷದ ವರಿಷ್ಠರು ಅನುಮತಿ ನೀಡಿದ್ದಾರೆ. ಚುನಾವಣೆಯಲ್ಲಿ ಪರಾಭವಗೊಂಡ ಒಬ್ಬರು ಮತ್ತು ಒಬ್ಬ ವಿಧಾನಪರಿಷತ್‌ ಸದಸ್ಯರು ಈ ಪಟ್ಟಿಯಲ್ಲಿ ಸೇರಿದ್ದು, ಎಲ್ಲರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊದಲ ಬಾರಿ ಶಾಸಕರಾದ ಎಚ್.ನಾಗೇಶ್‌ ಅವರನ್ನು ಹೊರತುಪಡಿಸಿದರೆ, ಸಚಿವರಾದ ಉಳಿದವರೆಲ್ಲರೂ ಶಾಸಕರಾಗಿ ಅನುಭವ ಹೊಂದಿದವರು. ಈ ಹಿನ್ನೆಲೆಯಲ್ಲಿ ನೋಡಿದರೆ ಇದೊಂದು ಅನುಭವಿ ಸಂಪುಟ. ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ಜನರು ಮನೆಮಾರು, ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಚನೆಯಾಗಿರುವ ಈ ಸಚಿವ ಸಂಪುಟವು ತಕ್ಷಣ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳುವತ್ತ ಗಮನ ಹರಿಸಬೇಕು. ನೆರೆ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಉಂಟಾಗಿರುವ ತೊಂದರೆ ನಿವಾರಿಸುವುದನ್ನು ಆದ್ಯತೆಯಾಗಿ ಪರಿಗಣಿಸಬೇಕು. ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲು ಮತ್ತು ಪರಿಹಾರ ಮೊತ್ತವನ್ನು ವಿತರಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು.

ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದೆ ಹಲವು ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನುವ ವರದಿಗಳಿವೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಲವು ಪ್ರಮುಖರು ಭಾಗವಹಿಸದೇ ಇರುವುದು ಇದನ್ನೇ ಸೂಚಿಸುವಂತಿದೆ. ಕೆಲವು ಶಾಸಕರು ನೇರವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಸುಳ್ಯ ಮೀಸಲು ಕ್ಷೇತ್ರದಿಂದ ಆರನೇ ಸಲ ಶಾಸಕರಾಗಿರುವ ಎಸ್.ಅಂಗಾರ ‘ಪಕ್ಷದಲ್ಲಿ ತತ್ವನಿಷ್ಠರಿಗೆ ಅವಕಾಶವಿಲ್ಲ’ ಎಂದು ನೇರವಾಗಿಯೇ ದೂರಿದ್ದಾರೆ. ಗೂಳಿಹಟ್ಟಿ ಶೇಖರ್‌ ‘ಬಿಜೆಪಿಗೆ ಸೇರಿ ತಪ್ಪು ಮಾಡಿದ್ದೇನೆ ಅನ್ನಿಸುತ್ತಿದೆ’ ಎಂದಿದ್ದಾರೆ. ಚಿತ್ರದುರ್ಗದಲ್ಲಿ ಹಿರಿಯ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮತ್ತು ಹುಕ್ಕೇರಿಯಲ್ಲಿ ಉಮೇಶ ಕತ್ತಿ ಅವರ ಬೆಂಬಲಿಗರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರಿನಲ್ಲಿ ಕೆಲವು ಶಾಸಕರು ಸೇರಿ, ಸಂಪುಟ ರಚನೆಯಲ್ಲಿ ಆದ ಅನ್ಯಾಯದ ಬಗ್ಗೆ ಚರ್ಚಿಸಲಿದ್ದೇವೆ’ ಎಂದು ತಿಪ್ಪಾರೆಡ್ಡಿ ಹೇಳಿರುವುದನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಈ ಅಸಮಾಧಾನ ಅತೃಪ್ತ ಚಟುವಟಿಕೆಗಳಿಗೆ ಕಾರಣವಾಗಲೂ ಬಹುದು. ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸ್ಪೀಕರ್‌ ಆಗಿ ಅಪಾರ ಅನುಭವ ಹೊಂದಿರುವ ಜಗದೀಶ ಶೆಟ್ಟರ್‌ ಅವರೂ ಸಚಿವರಾಗಿ ಸಂಪುಟ ಸೇರಿರುವುದು ಅಚ್ಚರಿಯ ವಿದ್ಯಮಾನ. ಸಾಮಾನ್ಯವಾಗಿ ಯಾವುದೇ ಮುಖ್ಯಮಂತ್ರಿ ತನ್ನ ಸಂಪುಟವನ್ನು ರಚಿಸುವಾಗ ಪ್ರಾದೇಶಿಕ ಮತ್ತು ವಿವಿಧ ಸಮುದಾಯಗಳ ಪ್ರಾತಿನಿಧ್ಯಕ್ಕೆ ಒತ್ತು ಕೊಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನೂ ಒಳಗೊಂಡು ಅಭಿವೃದ್ಧಿಯ ಸಮತೋಲನ ಸಾಧಿಸುವ ದೃಷ್ಟಿಯಿಂದ ಈ ಕ್ರಮ ಬಹಳ ಮಹತ್ವದ್ದು. ಆದರೆ ಈಗಿನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ,ಒಟ್ಟು ಎಂಟು ಮಂದಿ ಲಿಂಗಾಯತರು ಸ್ಥಾನ ಪಡೆದಿದ್ದು, ಸಮತೋಲನದ ದೃಷ್ಟಿಯಿಂದ ಒಳ್ಳೆಯ ಕ್ರಮ ಅಲ್ಲ. ಈ ಹಿಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಂಪುಟದಲ್ಲಿ ಒಕ್ಕಲಿಗರು ಸಿಂಹಪಾಲು ಪಡೆದಿದ್ದರು. ಯಡಿಯೂರಪ್ಪ ಅವರೂ ಅದೇ ಜಾಡು ಹಿಡಿದಂತೆ ಕಾಣುತ್ತಿದೆ. ಸಚಿವ ಸಂಪುಟದಲ್ಲಿ ಹಳೇ ಮೈಸೂರಿನ ಹಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಉಡುಪಿ ಬಿಟ್ಟರೆ, ಕರಾವಳಿಯ ಉಳಿದ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಿಲ್ಲ. ಬೀದರ್‌ ಜಿಲ್ಲೆಯ ಒಬ್ಬರನ್ನು ಬಿಟ್ಟರೆ ಹೈದರಾಬಾದ್‌ ಕರ್ನಾಟಕದ ಉಳಿದ ಜಿಲ್ಲೆಗಳಿಗೂ ಸಚಿವರಿಲ್ಲ. ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಸ್ಥಾನ ಲಭಿಸಿದೆ. ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧರಾದಿಯಾಗಿ ಯಾವ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರೂ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಸಚಿವರ ಪ್ರಾತಿನಿಧ್ಯ ಇಲ್ಲದ ಜಿಲ್ಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್ಚು ಗಮನಹರಿಸಬೇಕು. ‘ಒಂದು ಮತ ಎರಡು ಸರ್ಕಾರ’ ಎಂಬ ಘೋಷಣೆಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 25 ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿದ ಬಿಜೆಪಿ ಮಹದಾಸೆ ಕೈಗೂಡಿದೆ. ಅಭಿವೃದ್ಧಿ ಚಟುವಟಿಕೆಗಳಲ್ಲಿ ಅದು ಪ್ರತಿಫಲಿಸುವ ರೀತಿಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಭರವಸೆಯನ್ನು ಈಡೇರಿಸುವ ಇಚ್ಛಾಶಕ್ತಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT