ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ರದ್ದು ಬಿಸಿಸಿಐ ನಿರ್ಧಾರ ಅಸಮಂಜಸ

Last Updated 31 ಜನವರಿ 2021, 19:31 IST
ಅಕ್ಷರ ಗಾತ್ರ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯೆಂದರೆ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಕನಸುಗಳನ್ನು ಉತ್ಪಾದಿಸುವ ಕಾರ್ಖಾನೆ ಇದ್ದಂತೆ. ದೇಶಿ ಕ್ರಿಕೆಟ್‌ನಲ್ಲಿ ಸಾರ್ವಭೌಮ ತಂಡವನ್ನು ನಿರ್ಧರಿಸಲು ಇರುವ ವೇದಿಕೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಚಿಮ್ಮುಹಲಗೆ. ಇದರಲ್ಲಿ ಆಡಿ ಭಾರತ ತಂಡದ ಆಯ್ಕೆಗಾರರ ಗಮನ ಸೆಳೆಯುವ ಕನಸು ಆಟಗಾರರಿಗೆ ಇರುತ್ತದೆ. ಆಟದ ಸೊಬಗು ಸವಿಯುವ ಮತ್ತು ಭವಿಷ್ಯದ ತಾರೆಗಳ ಆಟವನ್ನು ಮನತುಂಬಿಕೊಳ್ಳುವ ನಿರೀಕ್ಷೆ ಅಭಿಮಾನಿಗಳಿಗಿರುತ್ತದೆ. ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಧಾರದಿಂದಾಗಿ 2020–21ನೇ ಸಾಲಿನಲ್ಲಿ ಈ ಅವಕಾಶ ತಪ್ಪಿಹೋಯಿತು. 87 ವರ್ಷಗಳ ಇತಿಹಾಸವಿರುವ ಟೂರ್ನಿಯನ್ನು ಇದೇ ಮೊದಲ ಬಾರಿಗೆ ರದ್ದು ಮಾಡಲಾಗಿದೆ. ಕೋವಿಡ್–19 ಕಾರಣದಿಂದ ಹೋದ ವರ್ಷದ ನವೆಂಬರ್‌ನಲ್ಲಿ ಟೂರ್ನಿ ಆರಂಭಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಇದೊಂದೇ ವರ್ಷದಲ್ಲಿ ಎರಡು ರಣಜಿ ಟೂರ್ನಿಗಳನ್ನು ನಡೆಸುವುದು ತರವಲ್ಲ ಎಂದು ಬಿಸಿಸಿಐ ಹೇಳಿದೆ. ಸುಮಾರು ಎರಡು ತಿಂಗಳುಗಳ ಕಾಲ 38 ತಂಡಗಳನ್ನು ಕೋವಿಡ್ ತಡೆ ಮಾರ್ಗಸೂಚಿಯನ್ವಯ ಬಯೋಬಬಲ್‌ನಲ್ಲಿ ಆಡುವಂತೆ ವ್ಯವಸ್ಥೆ ಮಾಡುವುದು ಕಠಿಣ ಎಂದು ಮಂಡಳಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಕಾರಣಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗದು. ದೊಡ್ಡ ಪರಂಪರೆ ಇರುವ ಟೂರ್ನಿಯನ್ನು ಕೈಬಿಟ್ಟಿರುವುದು ಸೂಕ್ತ ನಿರ್ಧಾರವಲ್ಲ. ಹಣದ ಹೊಳೆಯನ್ನೇ ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆಯೋಜನೆಗೆ ತೋರುವ ಆಸಕ್ತಿಯನ್ನು ದೇಶಿ ಕ್ರಿಕೆಟ್‌ಗೆ ತೋರುತ್ತಿಲ್ಲವೇನೋ ಎಂಬ ಸಂಶಯವೂ ಇದರಿಂದ ಕಾಡುತ್ತಿದೆ. ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುವ ಐಪಿಎಲ್‌ ಅನ್ನು ತಪ್ಪದೇ ನಡೆಸುವ ಗಟ್ಟಿತನ ಬಿಸಿಸಿಐಗೆ ಇದೆ. ಹೋದ ವರ್ಷದ ಮಾರ್ಚ್‌–ಏಪ್ರಿಲ್‌ನಲ್ಲಿ ದೇಶದಲ್ಲಿ ಕೋವಿಡ್‌ ಪ್ರಸರಣ ತಡೆಗೆ ಲಾಕ್‌ಡೌನ್ ಇತ್ತು. ಆಗ ಮುಂದೂಡಿದ್ದ ಟೂರ್ನಿಯನ್ನು ಅಕ್ಟೋಬರ್–ನವೆಂಬರ್‌ನಲ್ಲಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಯಿತು. ಪ್ರಾಯೋಜಕತ್ವ, ಪ್ರಯಾಣ, ಬಯೋಬಬಲ್ ಇತ್ಯಾದಿ ಸಮಸ್ಯೆಗಳ ನಡುವೆಯೂ ಟೂರ್ನಿ ಯಶಸ್ವಿಯಾಯಿತು. ಮಾರ್ಚ್‌ನಲ್ಲಿ ಭಾರತದಲ್ಲಿಯೇ ಐಪಿಎಲ್ 14ನೇ ಆವೃತ್ತಿಯನ್ನು ಆಯೋಜಿಸುವತ್ತ ಬಿಸಿಸಿಐ ಚಿತ್ತ ಹರಿಸಿದೆ. ಅದಕ್ಕಾಗಿ ಕ್ರಿಕೆಟಿಗರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು ಎಂದು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.

ಸದ್ಯ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿವೆ. ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಪ್ರಯಾಣ ಸೌಲಭ್ಯಗಳೂ ಹೆಚ್ಚಿವೆ. ಈ ಸಂದರ್ಭವನ್ನು ಮಂಡಳಿಯು ಬಳಸಿಕೊಳ್ಳಬೇಕಿತ್ತು. ಪೂರ್ಣಪ್ರಮಾಣದ ಟೂರ್ನಿ ಅಲ್ಲದಿದ್ದರೂ ಅಂತರವಲಯ ಮಟ್ಟದಲ್ಲಿ ಅಥವಾ ನಾಕೌಟ್‌ ಮಾದರಿಯಲ್ಲಿ ಟೂರ್ನಿ ನಡೆಸಬಹುದಿತ್ತು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಗಳನ್ನು ಕೈಬಿಡಬಹುದಿತ್ತು. ಅದೇ ಅವಧಿ ಮತ್ತು ಸಂಪನ್ಮೂಲವನ್ನು ಇಲ್ಲಿ ವಿನಿಯೋಗಿಸಿದ್ದರೆ ಸೂಕ್ತವಾಗುತ್ತಿತ್ತು. ಹೋದ ಡಿಸೆಂಬರ್‌ನಲ್ಲಿ ರಣಜಿ ಟೂರ್ನಿ ಆರಂಭಕ್ಕೆ ಒತ್ತುಕೊಡಬಹುದಿತ್ತು. ದೇಶದ ಬಹಳಷ್ಟು ಪ್ರಮುಖ ನಗರಗಳಲ್ಲಿ ಮೂರಕ್ಕಿಂತ ಹೆಚ್ಚು ಕ್ರೀಡಾಂಗಣಗಳು ಇವೆ. ಮೂಲಸೌಲಭ್ಯಗಳಿಗೂ ಕೊರತೆ ಇಲ್ಲ. ಅವುಗಳನ್ನು ಬಳಸಿಕೊಳ್ಳಬಹುದಿತ್ತು. ಇದರಿಂದಾಗಿ, ಆಯೋಜನೆ ಮಾಡುವ ಸ್ಥಳೀಯ ಸಂಸ್ಥೆಗಳು, ಸಿಬ್ಬಂದಿಗೆ ಆದಾಯವೂ ಲಭಿಸುತ್ತಿತ್ತು. ಅಲ್ಲದೆ ದೇಶದ ಎಲ್ಲ ರಾಜ್ಯಗಳ ಆಟಗಾರರಿಗೂ ತಮ್ಮ ಪ್ರತಿಭೆ ತೋರಿಸುವ ಅವಕಾಶ ಒದಗುತ್ತಿತ್ತು. ಪ್ರತಿಷ್ಠಿತ ಟೂರ್ನಿಯೂ ನಡೆದ ದಾಖಲೆಯಾಗುತ್ತಿತ್ತು. 1934ರಲ್ಲಿ ಟೂರ್ನಿ ಶುರುವಾದಾಗಿನಿಂದ ಇಲ್ಲಿಯವರೆಗೂ ಈ ಟೂರ್ನಿಯು ಬೆಳೆದ ರೀತಿ ಅಗಾಧವಾದದ್ದು. ರಾಜಮನೆತನಗಳ ಕ್ರಿಕೆಟ್ ಪ್ರೀತಿಯಿಂದಾಗಿ ಆರಂಭವಾದ ಈ ಟೂರ್ನಿಯು ಇವತ್ತು ದೇಶದ ಎಲ್ಲ ವರ್ಗಗಳ ಪ್ರತಿಭೆಗಳಿಗೂ ವೇದಿಕೆಯಾಗಿದೆ. ಯುವ ಆಟಗಾರರ ದಂಡು ಈಚೆಗೆ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯ ದಾಖಲಿಸಿತ್ತು. ಟ್ವೆಂಟಿ–20 ಕ್ರಿಕೆಟ್ ಭರಾಟೆಯಲ್ಲಿಯೂ ಟೆಸ್ಟ್‌ ಕ್ರಿಕೆಟ್‌ ಮಹತ್ವ ಸಾರಿತ್ತು. ಅವರೆಲ್ಲರೂ ರಣಜಿ ಟೂರ್ನಿಯಲ್ಲಿ ಆಡಿ ಗಮನ ಸೆಳೆದವರು. ದೀರ್ಘ ಮಾದರಿಯ ಕ್ರಿಕೆಟ್ ಉಳಿವಿಗೆ ಐಸಿಸಿಯೇ ಮೊದಲ ಬಾರಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಆರಂಭಿಸಿದೆ. ಆದರೆ, ಬಿಸಿಸಿಐ ತನ್ನ ಪ್ರತಿಷ್ಠಿತ ಟೂರ್ನಿಯನ್ನು ಕೋವಿಡ್ ನೆಪದಲ್ಲಿ ಕೈಬಿಟ್ಟಿರುವುದು ವಿಪರ್ಯಾಸ. ಮನರಂಜನೆಯ ಮೂಲವಾದ ಐಪಿಎಲ್ ಆಯೋಜನೆಗೆ ಯಾರ ತಕರಾರೂ ಇಲ್ಲ. ಅದರೆ ದುಡ್ಡೇ ದೊಡ್ಡಪ್ಪನಾಗಬಾರದು. ಪ್ರಥಮ ದರ್ಜೆ ಕ್ರಿಕೆಟ್‌ನ ಸೌಂದರ್ಯ ಮತ್ತು ಗ್ರಾಮಾಂತರ ಪ್ರತಿಭೆಗಳ ಪೈಪೋಟಿಯ ಸೊಬಗು ಉಣಬಡಿಸುವ ರಣಜಿ ಟೂರ್ನಿಯನ್ನು ಕೈಬಿಡಬಾರದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT