ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್ಇ) ಹನ್ನೆರಡನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ಅವ್ಯವಸ್ಥೆ ಹಾಗೂ ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ (ಎನ್ಟಿಎ) ನಡೆಸಿದ ‘ನೀಟ್’ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆಯ ಘಟನೆಗಳು, ಪ್ರಮುಖ ಪರೀಕ್ಷೆಗಳನ್ನು ನಿರ್ವಹಿಸುವ ಸಂಸ್ಥೆಗಳ ಸಾಮರ್ಥ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ ಈ ಹಿಂದಿನ ಪದ್ಧತಿಗಿಂತಲೂ ಹೆಚ್ಚು ಪರಿಣಾಮಕಾರಿ ಹಾಗೂ ಪಾರದರ್ಶಕ ಎಂದು ಬಿಂಬಿಸಲಾಗಿದ್ದ, ಡಿಜಿಟಲ್ ಮೌಲ್ಯಮಾಪನದ ಭಾಗವಾದ ‘ಆನ್ಸ್ಕ್ರೀನ್ ಮ್ಯಾಪಿಂಗ್’ (ಒಎಸ್ಎಂ) ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಈ ವೈಫಲ್ಯ ಸುಮಾರು 18 ಲಕ್ಷ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿರುವುದರ ಜೊತೆಗೆ, ಅನಿಶ್ಚಿತ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಸಿಬಿಎಸ್ಇ ಪರೀಕ್ಷೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಉತ್ತೀರ್ಣತೆಯ ಪ್ರಮಾಣ ದಾಖಲಾಗುತ್ತಿದೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಬಯಸಿ, ತಮ್ಮ ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆದಾಗ, ಮೌಲ್ಯಮಾಪನ ವ್ಯವಸ್ಥೆಯ ಲೋಪದೋಷಗಳು ಬೆಳಕಿಗೆ ಬಂದಿವೆ. ಸ್ಕ್ಯಾನಿಂಗ್ ಸಮರ್ಪಕವಾಗಿ ನಡೆಯದೆ ಇರುವುದರಿಂದ ಉತ್ತರ ಪತ್ರಿಕೆಗಳು ಮಸುಕಾಗಿವೆ. ಕೆಲವು ಉತ್ತರ ಪತ್ರಿಕೆಗಳು ಒಂದರೊಳಗೊಂದು ಸೇರಿಕೊಂಡು, ಮೌಲ್ಯಮಾಪನಕ್ಕೆ ಒಳಪಡದೆ ಉಳಿದಿದ್ದರೆ, ಸರಿಯಾದ ಉತ್ತರಗಳಿಗೆ ಅಂಕಗಳನ್ನು ನೀಡದಿರುವ ಉದಾಹರಣೆಗಳೂ ಬೆಳಕಿಗೆ ಬಂದಿವೆ.

ಮೌಲ್ಯಮಾಪನದ ಅವ್ಯವಸ್ಥೆ ಬಹಿರಂಗಗೊಂಡಾಗ ಅದನ್ನು ಸರಿಪಡಿಸುವ ಬದಲು, ಮುಚ್ಚಿಹಾಕುವ ಪ್ರಯತ್ನವನ್ನು ಸಿಬಿಎಸ್ಇ ನಡೆಸಿತು. ಸಮಸ್ಯೆಯನ್ನು ಮೊದಲ ಬಾರಿಗೆ ಸಾರ್ವಜನಿಕಗೊಳಿಸಿದ ವಿದ್ಯಾರ್ಥಿಯು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮತ್ತು ನಿಂದನೆಗೆ ಗುರಿಯಾಗಬೇಕಾಯಿತು. ಹನ್ನೆರಡನೇ ತರಗತಿಯ ಫಲಿತಾಂಶವು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ನಿರ್ಣಾಯಕವಾದುದು. ಸಿಬಿಎಸ್ಇ ಅದಕ್ಷತೆಯಿಂದಾಗಿ ಪ್ರಸ್ತುತ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಮತ್ತು ಅಂಕಗಳ ಕುರಿತು ಗೊಂದಲಕ್ಕೊಳಗಾಗಿದ್ದಾರೆ. ವರದಿಗಳ ಪ್ರಕಾರ, ನಾಲ್ಕು ಲಕ್ಷ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಒಎಸ್ಎಂ ವ್ಯವಸ್ಥೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾದ ಸಂಸ್ಥೆಗೆ ಅಗತ್ಯವಾದ ಅರ್ಹತೆಗಳು ಇಲ್ಲದಿರುವುದು ಹಾಗೂ ಆ ಸಂಸ್ಥೆ ಈ ಹಿಂದೆಯೂ ವಿವಾದಗಳಲ್ಲಿ ಸಿಲುಕಿದ್ದುದು ಈಗ ಬೆಳಕಿಗೆ ಬಂದಿದೆ. ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು ಸಿಬಿಎಸ್ಇ ಸಮರ್ಪಕ ಸಿದ್ಧತೆ ನಡೆಸಿಲ್ಲ ಹಾಗೂ ಶಿಕ್ಷಕರಿಗೆ ಅಗತ್ಯವಾದ ತರಬೇತಿಯನ್ನೂ ನೀಡಿಲ್ಲ. ಹೊಸ ವ್ಯವಸ್ಥೆಯನ್ನು ಅವಸರದಲ್ಲಿ ಜಾರಿಗೊಳಿಸುವುದು ಬೇಡ ಎಂದು ಶಿಕ್ಷಕರು ಹಾಗೂ ತಜ್ಞರು ನೀಡಿದ್ದ ಎಚ್ಚರಿಕೆಗಳನ್ನೂ ಸಿಬಿಎಸ್ಇ ನಿರ್ಲಕ್ಷಿಸಿದೆ. ಈಗ, ಇಡೀ ಪ್ರಕ್ರಿಯೆ ನಗೆಪಾಟಲಿಗೀಡಾದ ಸಂದರ್ಭದಲ್ಲೂ ತನ್ನ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈಗಿನ ವ್ಯವಸ್ಥೆಯನ್ನು ಬೆಂಬಲಿಸುವ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಂತೆ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸಹಿರಹಿತ ಸಂದೇಶಗಳನ್ನು ಸಿಬಿಎಸ್ಇ ಕಳುಹಿಸಿರುವುದಾಗಿ ವರದಿಯಾಗಿದೆ.

ಒಎಸ್ಎಂ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಹೊಣೆಗಾರಿಕೆಯನ್ನು ‘ಐಐಟಿ ಮದ್ರಾಸ್’ಗೆ ವಹಿಸಲಾಗಿದೆ. ಅವ್ಯವಸ್ಥೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆನ್ನುವ ಒತ್ತಡಗಳು ವ್ಯಕ್ತವಾಗಿದ್ದು, ಆ ಒತ್ತಡಕ್ಕೆ ಪೂರಕ ಕಾರಣಗಳೂ ಇವೆ. ಕಳೆದ ವಾರ ನಡೆದ ‘ಕಾಮನ್ ಯುನಿವರ್ಸಿಟಿ ಎಂಟ್ರನ್ಸ್ ಟೆಸ್ಟ್ ಯುಜಿ 2026’ ರಾಷ್ಟ್ರೀಯ ಪರೀಕ್ಷೆಯ ಸಂದರ್ಭದಲ್ಲೂ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದೆ. ಮಹತ್ವದ ಪರೀಕ್ಷೆಗಳ ಸಂದರ್ಭದಲ್ಲಿ ಎದುರಾಗುತ್ತಿರುವ ವೈಫಲ್ಯಗಳು ಪರೀಕ್ಷಾ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳು ಹಾಗೂ ಪೋಷಕರು ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತವೆ. ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ಪ್ರಕರಣದ ಹೊಣೆಗಾರಿಕೆಯನ್ನು ನಿಶ್ಚಯಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ವಿಷಯದ ಮೇಲ್ವಿಚಾರಣೆಯನ್ನು ಸ್ವತಃ ಪ್ರಧಾನಮಂತ್ರಿಯವರೇ ನಡೆಸುತ್ತಿದ್ದಾರೆ ಎಂದು ಸರ್ಕಾರ ಕೋರ್ಟ್ಗೆ ತಿಳಿಸಿತ್ತು. ಹಾಗಾದರೆ, ಇಲ್ಲಿಯವರೆಗೂ ಪರಿಣಾಮಕಾರಿ ಮೇಲ್ವಿಚಾರಣೆಯ ಕೊರತೆಯನ್ನು ‘ನೀಟ್’ ಪರೀಕ್ಷಾ ಪ್ರಕ್ರಿಯೆ ಎದುರಿಸುತ್ತಿತ್ತೇ? ಪರೀಕ್ಷಾ ವ್ಯವಸ್ಥೆಯ ಉನ್ನತ ಹೊಣೆಗಾರಿಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಸಾದ್ ಅವರದ್ದಾಗಿದೆ. ವೈಫಲ್ಯಗಳ ಸರಣಿಯ ಹೊಣೆಗಾರಿಕೆಯನ್ನು ಹೊರುವುದಾಗಿ ಅವರು ಹೇಳಿದ್ದರೂ, ಹುದ್ದೆಯಲ್ಲಿಯೇ ಮುಂದುವರಿದಿರುವುದು ದುರದೃಷ್ಟಕರ. ಪ್ರಜಾಪ್ರಭುತ್ವದಲ್ಲಿ ಹೊಣೆಗಾರಿಕೆ ಎನ್ನುವುದು ಕಾರ್ಯದಲ್ಲಿ ವ್ಯಕ್ತಗೊಳ್ಳಬೇಕೇ ಹೊರತು, ಮಾತುಗಳಲ್ಲಿ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.